ಅಪರಾಧಿಗಳು ಎಂದು ಘೋಷಿಸುವಾಗ ಊಹಾತ್ಮಕ ಪ್ರವೃತ್ತಿಯಿಂದ ವಿಚಾರಣಾಧೀನ ನ್ಯಾಯಾಲಯ ವರ್ತಿಸಲಾಗದು: ಹೈಕೋರ್ಟ್‌

ಸಂತ್ರಸ್ತೆಯ ವಯಸ್ಸಿಗೆ ಸಂಬಂಧಿಸಿದಂತೆ ವೈದ್ಯರೇ ಎರಡು ರೀತಿಯ ಅಭಿಪ್ರಾಯ ನೀಡಿರುವುದರಿಂದ ಸಂತ್ರಸ್ತೆಯ ನಿರ್ದಿಷ್ಟ ವಯಸ್ಸನ್ನು ರುಜುವಾತುಪಡಿಸಲು, ಆ ಮೂಲಕ ಆಕೆ ಅಪ್ರಾಪ್ತೆ ಎಂದು ಸಾಬೀತುಪಡಿಸಲು ಪ್ರಾಸಿಕ್ಯೂಷನ್‌ ವಿಫಲ ಎಂದಿರುವ ನ್ಯಾಯಾಲಯ.
Karnataka HC (Dharwad Bench) & Justice Rajesh Rai K
Karnataka HC (Dharwad Bench) & Justice Rajesh Rai K
Published on

“ಆರೋಪಿಗಳನ್ನು ಅಪರಾಧಿಗಳು ಎಂದು ಘೋಷಿಸುವಾಗ ಊಹಾತ್ಮಕ ಪ್ರವೃತ್ತಿ ಮತ್ತು ಅಸಮರ್ಪಕ ಮಾಹಿತಿಯ ಆಧಾರದಲ್ಲಿ ವಿಚಾರಣಾಧೀನ ನ್ಯಾಯಾಲಯ ವರ್ತಿಸಲಾಗದು. ಸಾಕ್ಷ್ಯ ಪರಿಗಣನೆಯ ವೇಳೆ ಅದರಲ್ಲಿರುವ ವಿರೋಧಾಭಾಸ, ಅಸಂಗತತೆ, ಉತ್ಪ್ರೇಕ್ಷೆ ಇವುಗಳನ್ನು ಗಮನಿಸಬೇಕು” ಎಂದಿರುವ ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ಈಚೆಗೆ ಅಪ್ರಾಪ್ತತೆಯ ನಾಪತ್ತೆ ಮತ್ತು ಅಕ್ರಮ ಒತ್ತೆ ಪ್ರಕರಣದಲ್ಲಿನ ಇಬ್ಬರು ಆರೋಪಿಗಳನ್ನು ಖುಲಾಸೆಗೊಳಿಸಿದೆ [ರಮೇಶ್‌ ಈರಪ್ಪ ಮುತ್ಯನಟ್ಟಿ ವರ್ಸಸ್‌ ಕರ್ನಾಟಕ ರಾಜ್ಯ].

ಬೆಳಗಾವಿಯ ತೀರ್ಥಕುಂಡೆಯ ರಮೇಶ್‌ ಈರಪ್ಪ ಮುತ್ಯನಟ್ಟಿ ಮತ್ತು ಚನ್ನಪ್ಪ ಈರಪ್ಪ ಜಂಬೋಟಿ ಸಲ್ಲಿಸಿದ್ದ ಕ್ರಿಮಿನಲ್‌ ಮೇಲ್ಮನವಿಯನ್ನು ನ್ಯಾಯಮೂರ್ತಿ ರಾಜೇಶ್‌ ರೈ ಕೆ ಅವರ ನೇತೃತ್ವದ ಏಕಸದಸ್ಯ ಪೀಠವು ಮಾನ್ಯ ಮಾಡಿದೆ.

“ಐಪಿಸಿ ಸೆಕ್ಷನ್‌ 366 (ಮೋಸದಿಂದ ಕರೆದುಕೊಂಡು ಹೋಗುವುದು), 344 (ಹತ್ತಕ್ಕಿಂತ ಹೆಚ್ಚುದಿನ ಅಕ್ರಮವಾಗಿ ಒತ್ತೆಯಿಟ್ಟುಕೊಳ್ಳುವುದು) ಜೊತೆಗೆ ಸೆಕ್ಷನ್‌ 34ರ ಅಡಿಯ ಆರೋಪಕ್ಕಾಗಿ ಏಳು ವರ್ಷ ಜೈಲು ಶಿಕ್ಷೆ ಮತ್ತು 30 ಸಾವಿರ ರೂಪಾಯಿ ದಂಡಕ್ಕೆ ಗುರಿಯಾಗಿದ್ದ ಮೇಲ್ಮನವಿದಾರರ ವಿರುದ್ಧದ ಆದೇಶವನ್ನು ಬದಿಗೆ ಸರಿಸಲಾಗಿದೆ. 1ರಿಂದ 6 ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

“ಮೊದಲನೇ ಆರೋಪಿಯು ನಾಪತ್ತೆ ಮತ್ತು ಬಲವಂತವಾಗಿ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪವನ್ನು ಸಂತ್ರಸ್ತೆ, ಆಕೆಯ ತಂದೆ, ತಾಯಿಯು ಅಲ್ಲಗಳೆದಿದ್ದು, ಪ್ರಾಸಿಕ್ಯೂಷನ್‌ಗೆ ಪ್ರತಿಕೂಲವಾಗಿ ಪರಿಣಮಿಸಿದ್ದಾರೆ. ವಿಚಾರಣಾಧೀನ ನ್ಯಾಯಾಲಯದ ನ್ಯಾಯಾಧೀಶರು ಅನುಮಾನರಹಿತವಾಗಿ ಆರೋಪಿಗಳ ವಿರುದ್ಧದ ಆರೋಪ ರುಜುವಾತಾಗಿದೆ ಎಂದು ತಪ್ಪಾಗಿ ಅರ್ಥೈಸಿದ್ದಾರೆ. ಅನುಮಾನ ಅಥವಾ ಎರಡು ರೀತಿಯ ಅಭಿಪ್ರಾಯಗಳ ಸಾಧ್ಯತೆಯಿದ್ದಾಗ ನ್ಯಾಯಾಲಯವು ಆರೋಪಿ ಮುಗ್ಧ ಎಂದು ಭಾವಿಸಬೇಕು” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

“ಪೊಲೀಸ್‌ ಅಧಿಕಾರಿಗಳು ಮತ್ತು ಸಂತ್ರಸ್ತೆಯ ಪರೀಕ್ಷೆ ನಡೆಸಿದ ವೈದ್ಯರ ಸಾಕ್ಷಿಯನ್ನು ಪರಿಗಣಿಸಿ ವಿಚಾರಣಾಧೀನ ನ್ಯಾಯಾಲಯವು ಆರೋಪಿಗಳನ್ನು ದೋಷಿಗಳು ಎಂದಿದೆ. ಪಾಟೀ ಸವಾಲಿನ ಸಂದರ್ಭದಲ್ಲಿ ದಂತ ವೈದ್ಯರು ಸಂತ್ರಸ್ತೆಯ ವಯಸ್ಸು 12ರಿಂದ 15 ವರ್ಷ ಎಂದಿದ್ದಾರೆ. ರೇಡಿಯಾಲಜಿಸ್ಟ್‌ ಅವರು ಸಂತ್ರಸ್ತೆಯ ವಯಸ್ಸು 16ರಿಂದ 18 ವರ್ಷಗಳು ಎಂದಿದ್ದಾರೆ. ಸಂತ್ರಸ್ತೆಯ ವಯಸ್ಸು ಸಾಬೀತುಪಡಿಸಲು ಪ್ರಾಸಿಕ್ಯೂಷನ್‌ ಯಾವುದೇ ದಾಖಲೆ ಮುಂದಿಟ್ಟಿಲ್ಲ. ವಯಸ್ಸಿಗೆ ಸಂಬಂಧಿಸಿದಂತೆ ವೈದ್ಯರೇ ಎರಡು ರೀತಿಯ ಅಭಿಪ್ರಾಯ ನೀಡಿರುವುದರಿಂದ ಸಂತ್ರಸ್ತೆಯ ನಿರ್ದಿಷ್ಟ ವಯಸ್ಸನ್ನು ರುಜುವಾತುಪಡಿಸಲು, ಆ ಮೂಲಕ ಆಕೆ ಅಪ್ರಾಪ್ತೆ ಎಂದು ಸಾಬೀತುಪಡಿಸಲು ಪ್ರಾಸಿಕ್ಯೂಷನ್‌ ವಿಫಲವಾಗಿದೆ” ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣದ ಹಿನ್ನೆಲೆ: 2011ರ ಮಾರ್ಚ್‌ 18ರಂದು ಶಾಂತಿಬಸ್ತವಾಡ್‌ ಗ್ರಾಮದ ರಮೇಶ್‌ ಇತರೆ ಐವರೊಂದಿಗೆ ಸೇರಿ ಸಂತ್ರಸ್ತೆಯನ್ನು ವಿವಾಹವಾಗುವ ಇಚ್ಛೆಯಿಂದ ಅಪಹರಿಸಿ, 18 ದಿನ ಅಕ್ರಮವಾಗಿ ಒತ್ತೆ ಇಟ್ಟುಕೊಂಡಿದ್ದಾರೆ. ಬಳಿಕ ವಿವಿಧ ಸ್ಥಳಗಳಿಗೆ ಆಕೆಯನ್ನು ಕರೆದುಕೊಂಡು ಹೋಗಿ ಅಕ್ರಮವಾಗಿ ಸಂಭೋಗ ನಡೆಸಲಾಗಿದೆ ಎಂದು ಸಂತ್ರಸ್ತೆಯ ತಂದೆ ದುರ್ಗಪ್ಪ ನಾಯಕ್‌ ಬೆಳಗಾವಿಯ ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದರು. ಇದರ ಅನ್ವಯ ಐಪಿಸಿ ಸೆಕ್ಷನ್‌ 376, 366, 344, 109 ಜೊತೆಗೆ 34ರ ಅಡಿ ಆರು ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಸಾಕ್ಷ್ಯ ಕೊರತೆಯ ಹಿನ್ನೆಲೆಯಲ್ಲಿ ಬೆಳಗಾವಿಯ 8ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 2 ರಿಂದ 5ನೇ ಆರೋಪಿಗಳನ್ನು ಖುಲಾಸೆಗೊಳಿಸಿ, ಐಪಿಸಿ ಸೆಕ್ಷನ್‌ಗಳಾದ 366, 344 ಜೊತೆಗೆ 34ರ ಅಡಿ ಒಂದು ಮತ್ತು ಆರನೇ ಆರೋಪಿಗಳು ಅಪರಾಧಿಗಳು ಎಂದು ತಲಾ 30 ಸಾವಿರ ರೂಪಾಯಿ ದಂಡ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್‌ ಮಾನ್ಯ ಮಾಡಿದೆ.

Attachment
PDF
Ramesh Irappa Mutyanatti and other Vs State of Karnataka.pdf
Preview
Kannada Bar & Bench
kannada.barandbench.com