ಪವಿತ್ರಾ ಗೌಡ, ನಾಗರಾಜ್‌, ಲಕ್ಷ್ಮಣ್‌ಗೆ ಮನೆ ಊಟಕ್ಕೆ ಅನುಮತಿಸಿದ್ದ ವಿಚಾರಣಾಧೀನ ನ್ಯಾಯಾಲಯದ ಆದೇಶ ವಜಾ

“ಜೈಲಿನ ದ್ವಾರಗಳ ಬಾಗಿಲುಗಳಲ್ಲಿ ಮಾನವ ಘನತೆಯ ರಕ್ಷಣೆ ನಿಲ್ಲುತ್ತದೆ. ಕಾನೂನಿನ ಅನ್ವಯ ಕೈದಿಗಳಿಗೆ ಸ್ವಾತಂತ್ರ್ಯವಿಲ್ಲದಿದ್ದರೂ ಮೂಲಸೌಕರ್ಯಗಳಿಗೆ ಅರ್ಹರಾಗಿರುತ್ತಾರೆ” ಎಂದು ನ್ಯಾಯಾಲಯ ಹೇಳಿದೆ.
Pavitra Gowda, Darshan & Karnataka HC
Pavitra Gowda, Darshan & Karnataka HC
Published on

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಜೈಲಿನಲ್ಲಿರುವ ಆರೋಪಿಗಳಾದ ಪವಿತ್ರಾ ಗೌಡ, ನಾಗರಾಜ್‌ ಮತ್ತು ಲಕ್ಷ್ಮಣ್‌ಗೆ ವಾರಕೊಮ್ಮೆ ಮನೆಯಿಂದ ಊಟ ತರಿಸಿಕೊಳ್ಳಲು ಅನುಮತಿಸಿದ್ದ ಬೆಂಗಳೂರಿನ ವಿಚಾರಣಾಧೀನ ನ್ಯಾಯಾಲಯದ ಆದೇಶವನ್ನು ಕರ್ನಾಟಕ ಹೈಕೋರ್ಟ್‌ ಬುಧವಾರ ವಜಾಗೊಳಿಸಿದೆ.

ಬೆಂಗಳೂರಿನ ಸತ್ರ ನ್ಯಾಯಾಲಯದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.

“ಜೈಲಿನ ದ್ವಾರಗಳ ಬಾಗಿಲುಗಳಲ್ಲಿ ಮಾನವ ಘನತೆಯ ರಕ್ಷಣೆ ನಿಲ್ಲುತ್ತದೆ. ಕಾನೂನಿನ ಅನ್ವಯ ಕೈದಿಗಳಿಗೆ ಸ್ವಾತಂತ್ರ್ಯವಿಲ್ಲದಿದ್ದರೂ ಮೂಲಸೌಕರ್ಯಗಳಿಗೆ ಅರ್ಹರಾಗಿರುತ್ತಾರೆ” ಎಂದು ನ್ಯಾಯಾಲಯ ಹೇಳಿದೆ.

“ವಿಚಾರಣಾಧೀನ ಕೈದಿಗಳಿಗೆ ಮನೆ ಊಟ ನೀಡದಿರಲು ನಿಷೇಧವಿಲ್ಲ. ಆದರೆ, ಜೈಲು ನಿಯಮಗಳು ಮತ್ತು ಪ್ರಕ್ರಿಯೆ ಅನುಸಾರ ಮನೆ ಊಟ ಪೂರೈಸಬಹುದಾಗಿದೆ. ಇದಕ್ಕೆ ವೈದ್ಯಕೀಯ ವರದಿ ಅತ್ಯಗತ್ಯ. ಕೋರಿಕೆಯನ್ನು ಆಧರಿಸಿ ಮನೆ ಊಟ ತರಿಸಿಕೊಳ್ಳಲು ಅನುಮತಿಸಲಾಗದು” ಎಂದೂ ನ್ಯಾಯಾಲಯ ಸ್ಪಷ್ಟಪಡಿಸಿದೆ.

“ವೈದ್ಯಕೀಯ ಪರಿಶೀಲನೆ ಅಥವಾ ಶಿಫಾರಸ್ಸನ್ನು ಆಧರಿಸದೆ ಮನೆ ಊಟ ಪಡೆಯಲು ಅನುಮತಿಸಿರುವುದರಿಂದ ವಿಚಾರಣಾಧೀನ ನ್ಯಾಯಾಲಯದ ಆದೇಶ ನಿಲ್ಲುವುದಿಲ್ಲ. ತಾರತಮ್ಯದಿಂದ ಕೂಡಿದ ಇಂಥ ವಿನಾಯಿತಿಯನ್ನು ನೀಡುವುದರಿಂದ ಜೈಲು ನಿರ್ವಹಣೆಯಲ್ಲಿ ಗೊಂದಲಕ್ಕೆ ನಾಂದಿಯಾಗಲಿದ್ದು, ಇತರೆ ಕೈದಿಗಳೂ ಇದೇ ವಿನಾಯಿತಿಗೆ ಅರ್ಹರಾಗುತ್ತಾರೆ. ಜೈಲಿನಲ್ಲಿ ವಿತರಿಸಲಾಗುವ ಊಟದ ಲಭ್ಯತೆ ಮತ್ತು ಗುಣಮಟ್ಟವು ಕಾಳಜಿಯ ವಿಚಾರವಾಗಿದ್ದು, ಪ್ರತಿನಿತ್ಯ ನಾಲ್ಕು ಊಟಕ್ಕೆ 125 ರೂಪಾಯಿ ನಿಗದಿಪಡಿಸಿರುವುದು ಪೌಷ್ಠಿಕಾಂಶಯುಕ್ತ ಆಹಾರದ ಬಗೆಗಿನ ಮಹತ್ವದ ಪ್ರಶ್ನೆ ಉದ್ಭವಕ್ಕೆ ಕಾರಣವಾಗಿದೆ. ಕೈದಿಗಳ ಹಕ್ಕುಗಳನ್ನು ರಕ್ಷಿಸುವ ದೃಷ್ಟಿಯಿಂದ ಸಾರ್ವಜನಿಕ ಸ್ಥಳಗಳಲ್ಲಿ ಜನರಿಗೆ ಕಾಣುವಂತೆ ಕೈದಿಗಳ ಆಹಾರದ ಪಟ್ಟಿಯನ್ನು ಡಿಜಿಟಲ್‌ ರೂಪದಲ್ಲಿ ಪ್ರಕಟಿಸಬೇಕು. ಆಹಾರದ ಬಗ್ಗೆ ಅಹವಾಲು/ದೂರು ದಾಖಲಿಸಲು ವ್ಯವಸ್ಥೆ ಇಲ್ಲದಿದ್ದರೆ ಅದನ್ನು ಜಾರಿಗೊಳಿಸಬೇಕು. ಕೈದಿಗಳಿಗೆ ತಯಾರಿಸುವ ಆಹಾರದ ಗುಣಮಟ್ಟದ ಕುರಿತು ಮೇಲಿಂದ ಮೇಲೆ ನಿಗದಿತ ವೈದ್ಯಾಧಿಕಾರಿಯು ದಾಖಲೆ ಸಲ್ಲಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.

Also Read
ರೇಣುಕಾಸ್ವಾಮಿ ಕೊಲೆ: ಕಾಮಾಕ್ಷಿಪಾಳ್ಯ ಹಿಂದಿನ ಇನ್‌ಸ್ಪೆಕ್ಟರ್‌ ಗಿರೀಶ್‌ ನಾಯ್ಕ್‌ ಆರೋಪಿಯಾಗಿಸಲು ಸರ್ಕಾರ ಆಕ್ಷೇಪ

ಈ ನಿರ್ದೇಶನಗಳನ್ನು ಅನೂಚನವಾಗಿ ಪಾಲಿಸುವ ಸಂಬಂಧ ರಾಜ್ಯ ಸರ್ಕಾರವು ಸುತ್ತೋಲೆ ಹೊರಡಿಸಬೇಕು. ವಿಚಾರಣಾಧೀನ ನ್ಯಾಯಾಲಯ ಆದೇಶವನ್ನು ಬದಿಗೆ ಸರಿಸಿದರೂ ಅರ್ಜಿದಾರರು ಪೂರಕ ವೈದ್ಯಕೀಯ ದಾಖಲೆಗಳನ್ನು ಇಟ್ಟುಕೊಂಡು ಜೈಲು ನಿಯಮಗಳ ಅನ್ವಯ ಮನೆ ಊಟ ಪೂರೈಕೆಗೆ ಮನವಿ ಮಾಡುವ ಸ್ವಾತಂತ್ರ್ಯ ಹೊಂದಿದ್ದಾರೆ. ಅಲ್ಲದೇ, ಪವಿತ್ರಾ ಗೌಡ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದಿರುವ ನ್ಯಾಯಾಲಯವು ರಾಜ್ಯ ಸರ್ಕಾರದ ಅರ್ಜಿಯನ್ನು ಪುರಸ್ಕರಿಸಿದೆ.

Kannada Bar & Bench
kannada.barandbench.com