ವಿಚಾರಣಾ ನ್ಯಾಯಾಲಯಗಳು ವಕೀಲರಿಗೆ ವಿಡಿಯೋ ಕಾನ್ಫರೆನ್ಸ್ ಸೌಲಭ್ಯ ನಿರಾಕರಿಸುವಂತಿಲ್ಲ: ಮದ್ರಾಸ್ ಹೈಕೋರ್ಟ್

"ಹೈಕೋರ್ಟ್ ನಿಯಮದಂತೆ ವಿಡಿಯೋ ಸೌಲಭ್ಯ ನೀಡಬೇಕಿದ್ದು ಅದನ್ನು ಯಾವುದೇ ನ್ಯಾಯಾಲಯ ನಿರಾಕರಿಸುವಂತಿಲ್ಲ" ಎಂದು ನ್ಯಾಯಾಲಯ ಹೇಳಿದೆ.
Madras High Court
Madras High Court
Published on

ವಕೀಲರು ಮತ್ತು ದಾವೆ ಹೂಡುವವರು ವರ್ಚುವಲ್‌ ವಿಧಾನದಲ್ಲಿ ವಿಚಾರಣೆಗೆ ಹಾಜರಾಗಲು ಅನುವು ಮಾಡಿಕೊಡುವ ವಿಡಿಯೋ ಕಾನ್ಫರೆನ್ಸ್ ಸೌಲಭ್ಯಗಳನ್ನು ವಿಚಾರಣಾ ನ್ಯಾಯಾಲಯಗಳು ನಿರಾಕರಿಸುವಂತಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ತಿಳಿಸಿದೆ.

2013ರಲ್ಲಿ ನಡೆದಿದ್ದ ವಿವಿಧ ಬಾಂಬ್ ಸ್ಫೋಟ ಪ್ರಕರಣಗಳಿಗೆ ಸಂಬಂಧಿಸಿದಂತೆ 11 ವರ್ಷಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದ ಫಕ್ರುದ್ದೀನ್ ಎಂಬ ರಿಮಾಂಡ್ ಕೈದಿ ತನಗೆ ಏಕಾಂತ ಸೆರೆವಾಸ ಮುಂದುವರೆಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಎಸ್ ಎಂ ಸುಬ್ರಮಣಿಯಂ ಮತ್ತು ಎಂ ಜೋತಿರಾಮನ್ ಅವರಿದ್ದ ಪೀಠ ಈ ವಿಚಾರ ತಿಳಿಸಿತು.

Also Read
ವಿಡಿಯೊ ಕಾನ್ಫರೆನ್ಸ್‌ , ಲೈವ್‌ ಸ್ಟ್ರೀಮಿಂಗ್‌ ಸೌಲಭ್ಯ ಅನುಷ್ಠಾನಕ್ಕೆ ಪೂರಕವಾಗಿ ಇಒಐ ಆಹ್ವಾನಿಸಿದ ಹೈಕೋರ್ಟ್‌

ಪೂನಮಲ್ಲಿಯ ವಿಚಾರಣಾ ನ್ಯಾಯಾಲಯ ದೂರದಲ್ಲಿದ್ದು  ವಕೀಲರು ಅಲ್ಲಿಗೆ ಭೌತಿಕವಾಗಿ ತೆರಳಲು ಅನಾನುಕೂಲವಾಗಿರುವುದರಿಂದ ವಕೀಲರನ್ನು ನೇಮಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಕೈದಿ ನ್ಯಾಯಾಲಯಕ್ಕೆ ತಿಳಿಸಿದ್ದ.

ನ್ಯಾಯಾಲಯದಲ್ಲಿ ಶೌಚಾಲಯ, ಕುಡಿಯುವ ನೀರಿನ ಕೊರತೆ ಹಾಗೂ ವಿಡಿಯೊ ಕಾನ್ಫರೆನ್ಸ್ ಮೂಲಕ ವಕೀಲರಿಗೆ ಹಾಜರಾಗಲು ಅವಕಾಶ ನೀಡದಿರುವುದು ಸೇರಿದಂತೆ ಮೂಲಸೌಕರ್ಯಗಳ ಕೊರತೆಯ ಬಗ್ಗೆ ಅನೇಕ ವಕೀಲರು ಪ್ರಸ್ತಾಪಿಸಿದರು. ಈ ದೂರುಗಳಲ್ಲಿರುವ ಸಮಸ್ಯೆ ಪರಿಹರಿಸುವಂತೆ ನ್ಯಾಯಾಲಯ ಇದೇ ವೇಳೆ ನಿರ್ದೇಶಿಸಿತು.

"ವಿಶೇಷ ನ್ಯಾಯಾಲಯವು ವಕೀಲರು ವೀಡಿಯೊ ಕಾನ್ಫರೆನ್ಸ್ ಮೂಲಕ ಹಾಜರಾಗಲು ಅವಕಾಶ ನೀಡುತ್ತಿಲ್ಲ ಎಂಬುದು ಒಂದು ದೂರು. ಪ್ರಸ್ತುತ ಹೈಕೋರ್ಟ್‌ ನಿಯಮದಂತೆ ವೀಡಿಯೊ ಕಾನ್ಫರೆನ್ಸ್‌ ಸೌಲಭ್ಯವನ್ನು ಯಾವುದೇ ನ್ಯಾಯಾಲಯ (ದಾವೆದಾರರಿಗೆ, ವಕೀಲರಿಗೆ) ನಿರಾಕರಿಸಲಾಗುವುದಿಲ್ಲ" ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಯಾವುದೇ ನ್ಯಾಯಾಲಯವು ವೀಡಿಯೊ ಕಾನ್ಫರೆನ್ಸಿಂಗ್ ಸೌಲಭ್ಯವನ್ನು ನಿರಾಕರಿಸುವಂತಿಲ್ಲ.
ಮದ್ರಾಸ್ ಹೈಕೋರ್ಟ್

ವಿಚಾರಣಾ ನ್ಯಾಯಾಲಯದಲ್ಲಿ ವಕೀಲರನ್ನು ಸೌಜನ್ಯದಿಂದ ನಡೆಸಿಕೊಳ್ಳುವುದಿಲ್ಲ.  ತಮ್ಮ ಪ್ರಕರಣದ ವಿಚಾರಣೆಗಾಗಿ ಗಂಟೆಗಟ್ಟಲೆ ಕಾಯುವಾಗ ನೀರು ಕುಡಿಯಲು ಸಹ ಅವಕಾಶ ನೀಡುವುದಿಲ್ಲ ಎಂಬ ಆರೋಪವನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿತು.

ಇದೇ ವೇಳೆ ಕೈದಿ, ತಾನು ಈಗ ಬಿಎ ರಾಜ್ಯಶಾಸ್ತ್ರದಲ್ಲಿ ಎರಡನೇ ವರ್ಷ ಓದುತ್ತಿದ್ದೇನೆ, ಆದರೆ ಜೈಲು ಅಧಿಕಾರಿಗಳು ಶಿಕ್ಷಣ ಮುಂದುವರಿಸಲು ಪುಸ್ತಕಗಳನ್ನು ಒದಗಿಸುತ್ತಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ.

ಆಗ ನ್ಯಾಯಾಲಯವು ಕೈದಿಗಳಿಗೆ ಶಿಕ್ಷಣ ನೀಡುವುದು ಭರವಸೆ ಮತ್ತು ಆಕಾಂಕ್ಷೆಯ ಸೆಲೆಯಾಗಿ ಕೆಲಸ ಮಾಡುತ್ತದೆ ಎಂದಿತು.

ಕೈದಿಗಳಿಗೆ ಶಿಕ್ಷಣ ನೀಡುವುದು ಭರವಸೆ ಮತ್ತು ಆಕಾಂಕ್ಷೆಯ ಸೆಲೆಯಾಗಿ ಕೆಲಸ ಮಾಡುತ್ತದೆ
ಮದ್ರಾಸ್‌ ಹೈಕೋರ್ಟ್

ಅನಗತ್ಯ ಏಕಾಂತ ಬಂಧನ ಮತ್ತು ಅಮಾನವೀಯ ವರ್ತನೆಗೆ ಒಳಗಾದ ಫಕ್ರುದೀನ್ ಅವರ ಆರೋಪಗಳನ್ನು ಪರಿಶೀಲಿಸುವಂತೆ ನ್ಯಾಯಾಲಯ ಉನ್ನತ ಜೈಲು ಅಧಿಕಾರಿಗಳಿಗೆ ಸೂಚಿಸಿತು. ಅಲ್ಲದೆ ಅಧಿಕಾರಿಗಳಿಗೆ ತೊಂದರೆ ನೀಡದೆ ಸಹಕರಿಸುವಂತೆ ಕೈದಿಗೂ ನ್ಯಾಯಾಲಯ ಬುದ್ಧಿವಾದ ಹೇಳಿತು.

ಪೂನಮಲ್ಲಿ ವಿಚಾರಣಾ ನ್ಯಾಯಾಲಯದಲ್ಲಿ ವಿಚಾರಣೆಗಾಗಿ ತನ್ನ ವಕೀಲರನ್ನು ನೇಮಿಸಿಕೊಳ್ಳಲು ಆರೋಪಿ ಫಕ್ರುದ್ದೀನ್‌ಗೆ ನ್ಯಾಯಾಲಯ ಅನುಕೂಲ ಮಾಡಿಕೊಟ್ಟಿತು.

[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Attachment
PDF
Fakrudeen_v_DIG_of_Prisons
Preview
Kannada Bar & Bench
kannada.barandbench.com