ನ್ಯಾಯಾಧೀಶರಿಂದ ತೀರ್ಪಿನಲ್ಲಿ ಶ್ಲೋಕ, ಗಜಲ್‌ ಉಲ್ಲೇಖ; ನ್ಯಾಯಾಂಗ ಅಕಾಡೆಮಿಯಲ್ಲಿ ತರಬೇತಿಗೆ ಸೂಚಿಸಿದ ಹೈಕೋರ್ಟ್‌

“ಕಾನೂನು ತತ್ವಗಳ ಜ್ಞಾನದ ಕೊರತೆಯು ನ್ಯಾಯದಾನವನ್ನು ಭಂಗ ಮಾಡುವ ಸಾಧ್ಯತೆ ಇರುತ್ತದೆ. ಇದರಿಂದ ಪಕ್ಷಕಾರರಿಗೆ ಅನವಶ್ಯಕ ಕಿರುಕುಳ ಉಂಟಾಗಲಿದೆ” ಎಂದು ಪೀಠ ಹೇಳಿದೆ.
Patna High Court
Patna High Court
Published on

ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯಿದೆ (ಪೋಕ್ಸೊ) ಅಡಿ ವ್ಯಕ್ತಿಯೊಬ್ಬರನ್ನು ಅಪರಾಧಿ ಎಂದು ಘೋಷಿಸುವಾಗ ವಿಚಾರಣಾಧೀನ ನ್ಯಾಯಾಲಯದ ನ್ಯಾಯಾಧೀಶರು ಸಂಸ್ಕೃತ ಶ್ಲೋಕಗಳು ಮತ್ತು ಗಜಲ್‌ಗಳನ್ನು ಉಲ್ಲೇಖಿಸಿರುವುದಕ್ಕೆ ಪಾಟ್ನಾ ಹೈಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿದೆ.

ತೀರ್ಪಿನ ಗುಣಾತ್ಮಕತೆಯ ಬಗ್ಗೆ ಆತಂಕ ವ್ಯಕ್ತಪಡಿಸುವುದರ ಜೊತೆಗೆ ನ್ಯಾಯಾಧೀಶರಿಗೆ ಕಾನೂನು ತತ್ವಗಳ ಸರಿಯಾದ ಜ್ಞಾನದ ಬಗ್ಗೆ ತಿಳಿದಿರಬೇಕು ಎಂಬುದರ ಮಹತ್ವವನ್ನು ನ್ಯಾಯಮೂರ್ತಿ ಬೀರೇಂದ್ರ ಕುಮಾರ್‌ ಅವರಿದ್ದ ಏಕಸದಸ್ಯ ಪೀಠವು ಹೇಳಿದೆ.

“ಮೇಲ್ಮನವಿದಾರರ ವಿರುದ್ಧ ಶಿಕ್ಷೆ ಪ್ರಕಟಿಸುವಾಗ ವಿಚಾರಣಾಧೀನ ನ್ಯಾಯಾಧೀಶರು ದಿವಂಗತ ಜಗ್‌ಜೀತ್‌ ಸಿಂಗ್‌ ಅವರ ಸಂಸ್ಕೃತ ಶ್ಲೋಕ ಮತ್ತು ಗಜಲ್‌ ಪ್ರಸ್ತಾಪಿಸಿದ್ದಾರೆ. ವಿಚಾರಣಾಧೀನ ನ್ಯಾಯಾಧೀಶರು, ವಿಶೇಷವಾಗಿ ಮರಣದಂಡನೆ ವಿಧಿಸುವ ಅಧಿಕಾರ ಹೊಂದಿರುವ ನ್ಯಾಯಾಧೀಶರಿಗೆ ಕಾನೂನು ತತ್ವಗಳ ಜ್ಞಾನದ ಜೊತೆಗೆ ತಮ್ಮ ಮುಂದಿರುವ ವ್ಯಕ್ತಿಯ ಬದುಕು ಮತ್ತು ಸ್ವಾತಂತ್ರ್ಯದ ಬಗ್ಗೆ ನಿರ್ಧಾರ ಕೈಗೊಳ್ಳುವ ಮಹತ್ವದ ಜವಾಬ್ದಾರಿ ಇದೆ. ಇದನ್ನು ನಿರ್ಧರಿಸುವಾಗ ಕಾನೂನು ಜ್ಞಾನದ ಬಳಕೆ ಮಹತ್ವವಾಗಿರುತ್ತದೆ” ಎಂದು ಹೈಕೋರ್ಟ್‌ ಹೇಳಿದೆ.

“ಕಾನೂನು ತತ್ವಗಳ ಜ್ಞಾನದ ಕೊರತೆಯು ನ್ಯಾಯದಾನವನ್ನು ತಪ್ಪಾಗಿ ಮಾಡುವ ಸಾಧ್ಯತೆ ಇರುತ್ತದೆ. ಇದರಿಂದ ಪಕ್ಷಕಾರರಿಗೆ ಅನವಶ್ಯಕ ಕಿರುಕುಳ ಉಂಟು ಮಾಡಲಿದೆ” ಎಂದು ಪೀಠ ಹೇಳಿದೆ.

“ಪಕ್ಷಪಾತ ಮತ್ತು ಪೂರ್ವಾಗ್ರಹಗಳು, ಉಹಾಪೋಹಗಳು ಮತ್ತು ವೈಯಕ್ತಿಕ ದೃಷ್ಟಿಕೋನಗಳು ನ್ಯಾಯಾಲಯದಲ್ಲಿ ಯಾವುದೇ ಸ್ಥಾನವನ್ನು ಹೊಂದಿರುವುದಿಲ್ಲ” ಎಂದು ನ್ಯಾಯಾಲಯ ಹೇಳಿದೆ.

ಹೀಗೆ ಹೇಳುವ ಮೂಲಕ ಹೈಕೋರ್ಟ್‌ ಆದೇಶವನ್ನು ಬದಿಗೆ ಸರಿಸುವುದಷ್ಟೇ ಅಲ್ಲದೇ ವಿಚಾರಣಾಧೀನ ನ್ಯಾಯಾಲಯದ ನ್ಯಾಯಾಧೀಶರು ನ್ಯಾಯಾಂಗ ಅಕಾಡೆಮಿಯಲ್ಲಿ ವಿಶೇಷ ತರಬೇತಿ ಪಡೆಯಬೇಕು ಎಂದು ಹೇಳಿದೆ.

“ನನ್ನ ದೃಷ್ಟಿಯಲ್ಲಿ, ಈ ತೀರ್ಪು ಮತ್ತು ವಿಚಾರಣಾ ನ್ಯಾಯಾಧೀಶರ ತೀರ್ಪನ್ನು ಬಿಹಾರ ನ್ಯಾಯಾಂಗ ಅಕಾಡೆಮಿಯ ನಿರ್ದೇಶಕರಿಗೆ ರವಾನಿಸಬೇಕಾಗಿದ್ದು, ನ್ಯಾಯಾಂಗ ಅಧಿಕಾರಿಗಳಿಗೆ ಸರಿಯಾದ ಕಾನೂನು ಪ್ರತಿಪಾದನೆಯೊಂದಿಗೆ ಸಂವಾದಿಯಾಗಿಸುವ ಜೊತೆಗೆ ಸರಿಯಾದ ಶೈಕ್ಷಣಿಕ ತರಬೇತಿ ಖಾತರಿಪಡಿಸಿಬೇಕು” ಎಂದಿದೆ.

Also Read
ಮಕ್ಕಳು ದೇಶದ ಸಂಪತ್ತು:ಮಧ್ಯಾಹ್ನದ ಬಿಸಿಯೂಟ, ಡಿಜಿಟಲ್ ಉಪನ್ಯಾಸ ನೀಡುವಂತೆ ಬಿಹಾರ ಸರ್ಕಾರಕ್ಕೆ ಪಟ್ನಾ ಹೈಕೋರ್ಟ್ ಆದೇಶ

ಗೌರವಾನ್ವಿತ ಮುಖ್ಯ ನ್ಯಾಯಾಧೀಶರು ಆಕ್ಷೇಪಾರ್ಹ ತೀರ್ಪನ್ನು ನೀಡಿರುವ ವಿಚಾರಣಾ ನ್ಯಾಯಾಧೀಶರಿಗೆ ನ್ಯಾಯಾಂಗ ಅಕಾಡೆಮಿಯಲ್ಲಿ ವಿಶೇಷ ತರಬೇತಿ ಅಗತ್ಯವೆಂದು ಪರಿಗಣಿಸಬಹುದು. ಆದ್ದರಿಂದ ಅಗತ್ಯ ಕ್ರಮಕ್ಕಾಗಿ ಈ ತೀರ್ಪಿನ ಪ್ರತಿಯನ್ನು ವಿಚಾರಣಾ ನ್ಯಾಯಾಲಯದ ತೀರ್ಪಿನೊಂದಿಗೆ ಗೌರವಾನ್ವಿತ ಮುಖ್ಯ ನ್ಯಾಯಾಧೀಶರ ಮುಂದೆ ಮಂಡಿಸಬೇಕು” ಎಂದು ಏಕಸದಸ್ಯ ಪೀಠ ಹೇಳಿದೆ.

ಲೈಂಗಿಕ ದೌರ್ಜನ್ಯ ಅಪರಾಧಕ್ಕಾಗಿ ಪೊಕ್ಸೊ ಕಾಯಿದೆಯ ಸೆಕ್ಷನ್‌ 18ರ ಅಡಿ ಅಪರಾಧಿ ಎಂದು ಘೋಷಿತನಾಗಿ 10 ವರ್ಷ ಶಿಕ್ಷೆಗೆ ಗುರಿಯಾಗಿದ್ದ ದೀಪಕ್‌ ಮಹ್ತೊ ಎಂಬಾತ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ಪೀಠ ನಡೆಸಿತು. ಉಭಯ ವಾದಗಳನ್ನು ಆಲಿಸಿದ ಹೈಕೋರ್ಟ್‌, ವಿಚಾರಣಾಧೀನ ನ್ಯಾಯಾಲಯವು ತೀರ್ಪು ನೀಡುವಾಗ ವಿವೇಚನೆ ಬಳಸಿಲ್ಲ ಮತ್ತು ಕಾನೂನು ತತ್ವಗಳನ್ನು ಪಾಲಿಸಿಲ್ಲ ಎಂದಿದ್ದು, ವಿಚಾರಣಾಧೀನ ನ್ಯಾಯಾಲಯದ ತೀರ್ಪನ್ನು ಬದಿಗೆ ಸರಿಸಿದೆ.

Kannada Bar & Bench
kannada.barandbench.com