ನಿತ್ಯ ನೂರಾರು ಪ್ರಕರಣಗಳ ಒತ್ತಡ: ವಿಚಾರಣಾ ನ್ಯಾಯಾಧೀಶರ ತಪ್ಪು ಸದಾ ಸಂದೇಹಾಸ್ಪದವಲ್ಲ ಎಂದ ಅಲಾಹಾಬಾದ್ ಹೈಕೋರ್ಟ್

ಲಖನೌನ ಸಿಜೆಎಂ ಆದೇಶದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಕ್ಕೆ ಸಂಬಂಧಿಸಿದ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
Judge
Judge

ಜಿಲ್ಲಾ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರ ಮುಂದೆ ನೂರಾರು ಪ್ರಕರಣಗಳನ್ನು ಪಟ್ಟಿ ಮಾಡಲಾಗುತ್ತಿದ್ದು ನ್ಯಾಯಾಂಗ ಪ್ರಕ್ರಿಯೆಯಲ್ಲಿನ ಪ್ರತಿಯೊಂದು ತಪ್ಪುಗಳು ಸದಾ ದುರದ್ದೇಶದಿಂದ ಉಂಟಾಗಿರುವುದಿಲ್ಲ ಎಂದು ಅಲಾಹಾಬಾದ್ ಹೈಕೋರ್ಟ್ ಇತ್ತೀಚೆಗೆ ಹೇಳಿದೆ [ಪವನ್‌ ಗಾರ್ಮೆಂಟ್ಸ್‌ ಮತ್ತು ಇತರ ಇಬ್ಬರು ಹಾಗೂ ಉತ್ತರ ಪ್ರದೇಶ ಸರ್ಕಾರ ನಡುವಣ ಪ್ರಕರಣ].

ಆಸ್ತಿ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಲಖನೌದಲ್ಲಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (ಸಿಜೆಎಂ) ನೀಡಿದ ಆದೇಶದಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ವಿಚಾರಣೆ ವೇಳೆ ನ್ಯಾಯಮೂರ್ತಿ ಮೊಹಮದ್‌ ಫೈಜ್ ಆಲಂ ಖಾನ್  ಈ ಪ್ರತಿಕ್ರಿಯೆ ನೀಡಿದ್ದಾರೆ.

ಯಾರೋ ಕಿಡಿಗೇಡಿಗಳು ದುರುದ್ದೇಶದಿಂದ ಆರ್ಡರ್ ಶೀಟ್‌ ದುರ್ಬಳಕೆ ಮಾಡಿರಬಹುದು ಎಂದು ಶಂಕೆ ವ್ಯಕ್ತವಾಗಿದ್ದು, ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಪ್ರಕರಣ ಕುರಿತು ಈಗಾಗಲೇ ತನಿಖೆ ಆರಂಭಿಸಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು. ಆದರೆ ನ್ಯಾಯಮೂರ್ತಿ ಖಾನ್ ಬೇರೆಯದೇ ಅಭಿಪ್ರಾಯ ವ್ಯಕ್ತಪಡಿಸಿದರು.

ವಿಚಾರಣೆ ವೇಳೆ ವಿಚಾರಣಾ ನ್ಯಾಯಾಲಯ ಮಾಡಿದ ಪ್ರತಿಯೊಂದು ತಪ್ಪನ್ನೂ ದುರದ್ದೇಶದಿಂದ ಮಾಡಲಾಗಿದೆ ಎನ್ನಲಾಗದು. ಜೊತೆಗೆ ಹಾಗೆ ಅನುಮಾನದಿಂದ ನೋಡಬಾರದು. ಜಿಲ್ಲಾ ನ್ಯಾಯಾಲಯಗಳಲ್ಲಿ, ಅದರಲ್ಲಿಯೂ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ, ಪ್ರತಿದಿನ ನೂರಾರು ಪ್ರಕರಣಗಳನ್ನು ಪಟ್ಟಿ ಮಾಡಲಾಗುತ್ತದೆ ಮತ್ತು ಈ ಕಾರಣದಿಂದ ಕೆಲವೊಮ್ಮೆ ನ್ಯಾಯಾಂಗ ಅಧಿಕಾರಿಗೆ ನ್ಯಾಯಾಲಯದ ಪ್ರತಿಯೊಂದು ಪ್ರಕರಣದ ಮೇಲೆ ನಿಗಾ ಇಡುವುದು ಅಸಾಧ್ಯವಾಗಿ ಕಚೇರಿಯ ಗುಮಾಸ್ತರನ್ನು ಅವಲಂಬಿಸಬೇಕಾಗುತ್ತದೆ ಎಂಬುದು ವಿಚಾರಣಾ ನ್ಯಾಯಾಲಯದ ವ್ಯವಹಾರಗಳನ್ನು ತಿಳಿದಿರುವವರಿಗೆ ಗೊತ್ತಿರುತ್ತದೆ ಎಂದು ನ್ಯಾಯಮೂರ್ತಿಗಳು ತಿಳಿಸಿದರು.

ಪ್ರಸ್ತುತ ಪ್ರಕರಣಕ್ಕೆ, ವಿಚಾರಣಾ ನ್ಯಾಯಾಲಯ ಮೊದಲು ಏಪ್ರಿಲ್ 8ಕ್ಕೆ ವಿಚಾರಣಾ ದಿನಾಂಕ ನಿಗದಿಪಡಿಸಿತ್ತು ಆದರೆ ನಂತರ ತಪ್ಪಾಗಿ ಏಪ್ರಿಲ್ 3 ಕ್ಕೆ ಬದಲಿಸಲಾಯಿತು. ಅರ್ಜಿದಾರರನ್ನು ಪ್ರತಿನಿಧಿಸುವ ವಕೀಲರಿಗೆ ಯಾವುದೇ ಮಾಹಿತಿ ನೀಡದೆ ದಿನಾಂಕವನ್ನು ಮುಂದೂಡಲಾಗಿದ್ದು ಏಪ್ರಿಲ್ 3ರ ಆದೇಶವನ್ನು ವಕೀಲರ ಅನುಪಸ್ಥಿತಿಯಲ್ಲಿ ಅಂಗೀಕರಿಸಲಾಗಿದೆ ಎಂದು ಹೈಕೋರ್ಟ್‌ಗೆ ದೂರು ನೀಡಲಾಗಿತ್ತು.

ನಡೆದಿದೆ ಎನ್ನಲಾದ ಈ ಲೋಪದ ಕುರಿತು ವರದಿ ಸಲ್ಲಿಸುವಂತೆ ಮೇ 13 ರಂದು ಸಿಜೆಎಂಗೆ ತಿಳಿಸಿದ ನ್ಯಾಯಾಲಯ ಪ್ರಕರಣಕ್ಕೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿತ್ತು. ಆದರೂ, ತನಿಖೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರಕರಣದಲ್ಲಿ ಮಧ್ಯಪ್ರವೇಶಿಸದಿರಲು ಅದು ನಿರ್ಧರಿಸಿತು.

Kannada Bar & Bench
kannada.barandbench.com