ಕೇಂದ್ರ ಸರ್ಕಾರ ತನ್ನ ಅನುಕೂಲಕ್ಕೆ ತಕ್ಕಂತೆ ನ್ಯಾಯಮಂಡಳಿಗಳಿಗೆ ನೇಮಕಾತಿ ಆಯ್ಕೆ ಮಾಡುತ್ತಿದೆ: ಸುಪ್ರೀಂ ಕೋರ್ಟ್ ಖಂಡನೆ

ಸರ್ಕಾರ ತನ್ನ ಲಾಭಕ್ಕೆ ತಕ್ಕಂತೆ ಆಯ್ಕೆ ಮಾಡಿ ಉಳಿದವರ ನೇಮಕಾತಿ ತಡೆ ಹಿಡಿದಿದ್ದು, ಶೋಧ ಮತ್ತು ಆಯ್ಕೆ ಸಮಿತಿಗಳ ಶಿಫಾರಸುಗಳನ್ನು ಅತೃಪ್ತಿಕರ ರೀತಿಯಲ್ಲಿ ಪರಿಗಣಿಸಿದೆ ಎಂದು ನ್ಯಾಯಾಲಯ ಹೇಳಿದೆ.
ಕೇಂದ್ರ ಸರ್ಕಾರ ತನ್ನ ಅನುಕೂಲಕ್ಕೆ ತಕ್ಕಂತೆ ನ್ಯಾಯಮಂಡಳಿಗಳಿಗೆ ನೇಮಕಾತಿ ಆಯ್ಕೆ ಮಾಡುತ್ತಿದೆ: ಸುಪ್ರೀಂ ಕೋರ್ಟ್ ಖಂಡನೆ

ವಿವಿಧ ನ್ಯಾಯಮಂಡಳಿ, ನ್ಯಾಯಾಧಿಕರಣಗಳ ನೇಮಕಾತಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಇತ್ತೀಚಿಗೆ ಅನುಸರಿಸಿದ ವಿಧಾನಕ್ಕೆ ಸುಪ್ರೀಂಕೋರ್ಟ್‌ ಬುಧವಾರ ಆಕ್ಷೇಪ ವ್ಯಕ್ತಪಡಿಸಿದೆ. ಸರ್ಕಾರ ತನ್ನ ಅನುಕೂಲಕ್ಕೆ ತಕ್ಕಂತೆ ಆಯ್ಕೆ ಮಾಡಿ ಉಳಿದವರ ನೇಮಕಾತಿ ತಡೆ ಹಿಡಿದಿದ್ದು, ಶೋಧ ಮತ್ತು ಆಯ್ಕೆ ಸಮಿತಿಗಳು (ಎಸ್‌ಸಿಎಸ್‌ಸಿ) ಮಾಡಿದ ಶಿಫಾರಸುಗಳನ್ನು ಅತೃಪ್ತಿಕರ ರೀತಿಯಲ್ಲಿ ಪರಿಗಣಿಸಿದೆ ಎಂದು ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ನೇತೃತ್ವದ ವಿಶೇಷ ಪೀಠ ಕಿಡಿ ಕಾರಿತು.

“ಎಸ್‌ಸಿಎಸ್‌ಸಿ ಒಂಬತ್ತು ನ್ಯಾಯಾಂಗ ಸದಸ್ಯರನ್ನು ಮತ್ತು ಹತ್ತು ತಾಂತ್ರಿಕ ಸದಸ್ಯರನ್ನು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಗೆ (NCLT) ಶಿಫಾರಸು ಮಾಡಿದೆ. ಕೆಲ ಸದಸ್ಯರನ್ನು ಲಾಭಕ್ಕೆ ತಕ್ಕಂತೆ ಆಯ್ಕೆ ಮಾಡಲಾಗಿದ್ದು ಉಳಿದವರನ್ನು ಕಾಯಿಸುವ ರೀತಿಯಲ್ಲಿ ನೇಮಕಾತಿ ಪತ್ರ ನೀಡಲಾಗಿದೆ. ನಾವು ಆಯ್ಕೆ ಮಾಡಿದ ಅಭ್ಯರ್ಥಿಗಳ ಬಗ್ಗೆ ನಿರ್ಲಕ್ಷಿಸಿ ನಿರೀಕ್ಷಣಾ ಪಟ್ಟಿಗೆ ಹೋಗಲು ಸಾಧ್ಯವಿಲ್ಲ. ಇದು ಯಾವ ರೀತಿಯ ಆಯ್ಕೆ ಮತ್ತು ನೇಮಕಾತಿ?” ಎಂದು ಸಿಜೆಐ ಕೇಳಿದರು. ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧಿಕರಣ (ಐಟಿಎಟಿ) ನೇಮಕಾತಿಯಲ್ಲೂ ಇದೇ ಘಟನೆ ನಡೆದಿದೆ ಎಂದು ಅವರು ಹೇಳಿದರು.

ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಎಸ್‌ಸಿಎಸ್‌ಸಿ ರಚನೆಯಾಗಿದ್ದು ನ್ಯಾಯಮೂರ್ತಿಗಳು ನೇಮಕಾತಿಗಾಗಿ ಅಂತಿಮ ಪಟ್ಟಿ ತಯಾರಿಸುತ್ತಾರೆ. ನಂತರ ಅನುಮೋದನೆಗಾಗಿ ಆ ಪಟ್ಟಿಯನ್ನು ಸರ್ಕಾರಕ್ಕೆ ಕಳುಹಿಸುತ್ತಾರೆ.

ನ್ಯಾಯಾಧಿಕರಣ ಸುಧಾರಣಾ ಕಾಯಿದೆ 2021ರ ಸಾಂವಿಧಾನಿಕ ಸಿಂಧುತ್ವ ಮತ್ತು ದೇಶದ ವಿವಿಧ ನ್ಯಾಯಾಧಿಕರಣಗಳಲ್ಲಿ ಖಾಲಿ ಇರುವ ಹುದ್ದೆಗಳ ಕುರಿತು ಪ್ರಸ್ತಾಪಿಸಿರುವ ಕೆಲ ಅರ್ಜಿಗಳ ವಿಚಾರಣೆಯನ್ನು ತ್ರಿಸದಸ್ಯ ಪೀಠ ನಡೆಸಿತು.

ನ್ಯಾಯಮಂಡಳಿಗಳಲ್ಲಿನ ಖಾಲಿ ಹುದ್ದೆ ಭರ್ತಿ ಮಾಡುವಲ್ಲಿ ಕೇಂದ್ರ ಸರ್ಕಾರದ ನಿಷ್ಕ್ರಿಯತೆ ಮತ್ತು ತನ್ನ ತೀರ್ಪು ಉಲ್ಲಂಘಿಸಿ 2021ರ ನ್ಯಾಯಾಧಿಕರಣ ಸುಧಾರಣಾ ಕಾಯಿದೆಯನ್ನು ಜಾರಿಗೊಳಿಸಿದ್ದಕ್ಕಾಗಿ ಪೀಠ ಕೇಂದ್ರ ಸರ್ಕಾರದ ವಿರುದ್ಧ ಸೆಪ್ಟೆಂಬರ್ 6ರಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಎಸ್‌ಸಿಎಸ್‌ಸಿ ಶಿಫಾರಸುಗಳನ್ನು ಪಾಲಿಸಬೇಕು ಇಲ್ಲವೇ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಎದುರಿಸಬೇಕು ಎಂದು ನ್ಯಾಯಾಲಯ ತಾಕೀತು ಮಾಡಿತ್ತು.

ಬಳಿಕ ಎನ್‌ಸಿಎಲ್‌ಟಿ, ಎಎಫ್‌ಟಿ ಮತ್ತು ಐಟಿಎಟಿ ನೇಮಕಾತಿಗಳಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿತ್ತು. ಎಸ್‌ಸಿಎಸ್‌ಸಿ ಶಿಫಾರಸಿನ ಮೇರೆಗೆ ಎಲ್ಲಾ ನೇಮಕಾತಿ ನಡೆದಿದೆ ಎಂದು ಮಂಗಳವಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ, ಕೇಂದ್ರ ಸರ್ಕಾರ ತಿಳಿಸಿತ್ತು. ಆದರೆ ಇದರಿಂದ ನ್ಯಾಯಾಲಯ ತೃಪ್ತಿ ಹೊಂದಿರಲಿಲ್ಲ.

ಅರ್ಜಿದಾರರೊಬ್ಬರ ಪರವಾಗಿ ಹಾಜರಾದ ಹಿರಿಯ ವಕೀಲ ಅರವಿಂದ ದಾತಾರ್, ಐಟಿಎಟಿಗೆ ಕೇವಲ 13 ಸದಸ್ಯರನ್ನು ನೇಮಿಸಲಾಗಿದೆ ಎಂದು ಹೇಳಿದರು. ಯಾವ ಆಧಾರದ ಮೇಲೆ ನೇಮಕಾತಿ ನಡೆದಿದೆ ಎಂದು ಅವರು ಪ್ರಶ್ನಿಸಿದರು ಆಗ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುತ್ತಿರುವ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್, ಎಸ್‌ಸಿಎಸ್‌ಸಿಯ ಶಿಫಾರಸುಗಳನ್ನು ಸ್ವೀಕರಿಸದಿರುವ ಅಧಿಕಾರ ಸರ್ಕಾರಕ್ಕೆ ಇದೆ ಎಂದು ಸಮರ್ಥಿಸಿಕೊಂಡರು. ಅಲ್ಲದೆ, ಮುಖ್ಯಪಟ್ಟಿಯಲ್ಲಿರುವ ಹೆಸರುಗಳನ್ನು ಪೂರ್ಣವಾಗಿ ಪರಿಗಣಿಸಿದ ನಂತರವೇ ಸರ್ಕಾರವು ನಿರೀಕ್ಷಣಾ ಪಟ್ಟಿಯಲ್ಲಿರುವ ಹೆಸರುಗಳೆಡೆಗೆ ಮುಖಮಾಡಿರುವುದಾಗಿಯೂ ತಿಳಿಸಿದರು. ಹಾಗಾಗಿ, ಆರು ನ್ಯಾಯಮಂಡಳಿಗಳಿಗೆ ಯಾವುದೇ ಶಿಫಾರಸ್ಸುಗಳು ಬಾಕಿ ಉಳಿದಿಲ್ಲ ಎಂದು ಹೇಳಿದರು. ಈ ಹೇಳಿಕೆಗೆ ತೃಪ್ತಿಯಾಗದ ಸಿಜೆಐ, ಶಿಫಾರಸುಗಳ ಕುರಿತಾಗಿ ಕೇಂದ್ರವು ನಡೆದುಕೊಳ್ಳುತ್ತಿರುವ ರೀತಿಯ ಬಗ್ಗೆ ತಮಗೆ ತೃಪ್ತಿ ಇಲ್ಲ ಎಂದು ತಿಳಿಸಿದರು. ಟಿಡಿಎಸ್‌ಎಟಿ, ಎನ್‌ಸಿಡಿಆರ್‌ಸಿ ನೇಮಕಾತಿಗಳ ಬಗ್ಗೆಯೂ ನ್ಯಾಯಾಲಯ ಆಕ್ಷೇಪಿಸಿತು.

ನಂತರ ಅಟಾರ್ನಿ ಜನರಲ್ ಪ್ರಕರಣವನ್ನು ಒಂದು ವಾರ ಮುಂದೂಡುವಂತೆ ಕೋರಿದರು. ಒಪ್ಪಿಕೊಳ್ಳದೆ ಇರುವ ಪಟ್ಟಿಯನ್ನು ನಾವು ಮರುಪರಿಗಣಿಸಲಿದ್ದೇವೆ ಎಂದು ಅವರು ಭರವಸೆ ನೀಡಿದರು. ಆದರೆ, ಇದೇ ವೇಳೆ ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವವರನ್ನು ಪರಿಗಣಿಸುವುದಿಲ್ಲ ಎಂದು ಪುನರುಚ್ಚರಿಸಿದರು. ನ್ಯಾಯಾಲಯವು ಇದಕ್ಕೆ ಸಮ್ಮತಿಸಿ, ಪ್ರಕರಣವನ್ನು ಒಂದು ವಾರ ಮುಂದೂಡಿತು.

ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮಂಡಳಿ ಸುಧಾರಣಾ ಕಾಯ್ದೆ-2021 ರ ಸಿಂಧುತ್ವ ಪ್ರಶ್ನಿಸಿ ಮದ್ರಾಸ್ ವಕೀಲರ ಸಂಘ ಸಲ್ಲಿಸಿದ್ದ ಮನವಿ ಆಧರಿಸಿ ನ್ಯಾಯಾಲಯವು ಕೆಂದ್ರಕ್ಕೆ ನೋಟಿಸ್‌ ನೀಡಿತು.

Related Stories

No stories found.
Kannada Bar & Bench
kannada.barandbench.com