ಒಮ್ಮೆ ಕ್ರಿಮಿನಲ್ ನ್ಯಾಯಾಲಯವು ಅಪಘಾತ ಪ್ರಕರಣಗಳಲ್ಲಿ ಅಜಾಗರೂಕತೆ ಮತ್ತು ನಿರ್ಲಕ್ಷ್ಯದಿಂದ ವಾಹನ ಚಾಲನೆ ಮಾಡಿರುವ ವ್ಯಕ್ತಿಯನ್ನು (ಚಾಲಕ) ತಪ್ಪಿತಸ್ಥ ಎಂದು ತೀರ್ಮಾನಿಸಿದ ಬಳಿಕ, ಆ ಚಾಲಕ ಅಪಘಾತದಲ್ಲಿ ಭಾಗಿಯಾಗಿಲ್ಲ ಎಂದು ಹೇಳಲು ಮೋಟಾರು ಅಪಘಾತ ಪರಿಹಾರ ನ್ಯಾಯ ಮಂಡಳಿಗೆ ಅವಕಾಶವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಆದೇಶಿಸಿದೆ.
ಅಪಘಾತ ಪ್ರಕರಣದಲ್ಲಿ ಮೃತಪಟ್ಟ ಹಾಗೂ ಗಾಯಗೊಂಡ ಸಂತ್ರಸ್ತರ ಎಂಎಲ್‌ಸಿ (ಮೆಡಿಕೋ ಲೀಗಲ್ ಕೇಸ್) ಹಾಗೂ ಗಾಯದ ಪ್ರಮಾಣ ಪತ್ರದಲ್ಲಿ ಚಾಲಕನ ಹೆಸರು ಬೇರೆ ಇದೆ ಎಂಬ ಕಾರಣಕ್ಕೆ, ವಿಮಾ ಕಂಪೆನಿ ಬದಲಿಗೆ ವಾಹನದ ಮಾಲೀಕನಿಗೆ ಪರಿಹಾರ ಪಾವತಿ ಹೊಣೆ ಹೊರಿಸಿದ ನ್ಯಾಯ ಮಂಡಳಿಯ ಆದೇಶವನ್ನು ನ್ಯಾಯಮೂರ್ತಿ ಎನ್ ಎಸ್ ಸಂಜಯಗೌಡ ನೇತೃತ್ವದ ಏಕಸದಸ್ಯ ಪೀಠವು ರದ್ದುಪಡಿಸಿದೆ.
ಸಂತ್ರಸ್ತರಿಗೆ ಪರಿಹಾರ ಪಾವತಿಸುವಂತೆ ವಿಮಾ ಕಂಪೆನಿಗೆ ಆದೇಶಿಸಿರುವ ನ್ಯಾಯಾಲಯವು ನ್ಯಾಯ ಮಂಡಳಿಯು ನಿಗದಿಪಡಿಸಿದ 4,43,000 ರೂಪಾಯಿ ಪರಿಹಾರದ ಮೊತ್ತವನ್ನು 9,48,200 ರೂಪಾಯಿಗೆ ಹೆಚ್ಚಿಸಿದೆ. ಆ ಮೊತ್ತವನ್ನು ವಾರ್ಷಿಕ ಶೇ 6ರಷ್ಟು ಬಡ್ಡಿದರಲ್ಲಿ ಪಾವತಿಸುವಂತೆ ಸೂಚಿಸಿದೆ.
ನ್ಯಾಯ ಮಂಡಳಿ ಆದೇಶ ರದ್ದು ಕೋರಿ ಅಘಘಾತಕ್ಕೆ ಕಾರಣವಾಗಿದ್ದ ಕಾರಿನ ಮಾಲೀಕ ಪ್ರಭಾಕರ್ ಮತ್ತು ನ್ಯಾಯ ಮಂಡಳಿ ನಿಗದಿಪಡಿಸಿದ ಪರಿಹಾರ ಮೊತ್ತವನ್ನು ಹೆಚ್ಚಿಸುವಂತೆ ಕೋರಿ ಪ್ರಕರಣದಲ್ಲಿ ಮೃತಪಟ್ಟ ವ್ಯಕ್ತಿಯ ಪತ್ನಿ ಸಲ್ಲಿಸಿದ್ದ ಪ್ರತ್ಯೇಕ ಮೇಲ್ಮನವಿಗಳ ವಿಚಾರಣೆಯನ್ನು ನ್ಯಾಯಾಲಯ ನಡೆಸಿತು.
“ನಿರ್ಲಕ್ಷ್ಯ ಮತ್ತು ಅಜಾಗರೂಕತೆಯಿಂದ ಅತಾವುಲ್ಲಾ ಖಾನ್ ಕಾರು ಚಾಲನೆ ಮಾಡಿ ಅಪಘಾತ ಮಾಡಿದ್ದಾರೆ ಎಂಬ ತೀರ್ಮಾನಕ್ಕೆ ಬಂದಿದ್ದ ಕ್ರಿಮಿನಲ್ ಕೋರ್ಟ್ ಆತನನ್ನು ದೋಷಿಯಾಗಿ ತೀರ್ಮಾನಿಸಿದೆ. ಹೀಗಿರುವಾಗ ಅಪಘಾತಕ್ಕೆ ಕಾರಣವಾದ ಕಾರನ್ನು ಅತಾವುಲ್ಲಾ ಖಾನ್ ಬದಲು ಬೇರೊಬ್ಬ ವ್ಯಕ್ತಿ ಚಾಲನೆ ಮಾಡುತ್ತಿದ್ದ ಎಂಬುದಾಗಿ ಸಾರುವ ಅಧಿಕಾರ ನ್ಯಾಯ ಮಂಡಳಿಗೆ ಇಲ್ಲ. ಅತಾವುಲ್ಲಾ ಖಾನ್ ಕಾರು ಚಾಲನೆ ಮಾಡುತ್ತಿದ್ದ ಬಗ್ಗೆ ವೈದ್ಯಕೀಯ ಸಾಕ್ಷ್ಯ ಮತ್ತು ಸಾಕ್ಷಿಗಳ ಹೇಳಿಕೆಯಿಂದ ದೃಢಪಟ್ಟಿದೆ. ಆದ್ದರಿಂದ, ಪ್ರಕರಣದಲ್ಲಿ ಕಾರಿಗೆ ವಿಮಾ ಸೌಲಭ್ಯ ಕಲ್ಪಿಸಿದ್ದ ವಿಮಾ ಕಂಪೆನಿಯೇ ಸಂತ್ರಸ್ತರ ಕುಟುಂಬಕ್ಕೆ ಪರಿಹಾರ ನೀಡಬೇಕು” ಎಂದು ಆದೇಶಿಸಿದೆ.
ಪ್ರಕರಣದ ಹಿನ್ನೆಲೆ: ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ 2015ರಲ್ಲಿ ಶುಕ್ರು ಸಾಬ್ ಮತ್ತು ಅವರ ಮೊಮ್ಮಗಳು ಬಸ್‌ಗಾಗಿ ನಿಲ್ದಾಣದಲ್ಲಿ ಕಾದು ನಿಂತಿರುವಾಗ ಕಾರೊಂದು ಬಂದು ಢಿಕ್ಕಿ ಹೊಡೆದಿತ್ತು. ಇದರಿಂದ ಶುಕ್ರು ಸಾಬ್ ಸಾವನ್ನಪ್ಪಿದರೆ, ಮೊಮ್ಮಗಳು ಗಾಯಗೊಂಡಿದ್ದರು. ಅತಾವುಲ್ಲಾ ಖಾನ್ ಎಂಬಾತ ಕಾರು ಚಾಲಕನಾಗಿದ್ದ. ಪ್ರಕರಣದಲ್ಲಿ ಪರಿಹಾರ ಕೋರಿ ಮೃತನ ಪತ್ನಿ ಮೋಟಾರು ಅಪಘಾತ ಪರಿಹಾರ ನ್ಯಾಯ ಮಂಡಳಿ ಅರ್ಜಿ ಸಲ್ಲಿಸಿದ್ದರು.
ವಿಮಾ ಕಂಪೆನಿ ಪರ ವಕೀಲರು, ಪ್ರಕರಣದ ವೈದ್ಯಕೀಯ ದಾಖಲೆಗಳಲ್ಲಿ (ಎಂಎಲ್‌ಸಿ) ಕಾರು ಚಾಲಕನ ಹೆಸರು ಅತಾವುಲ್ಲಾ ಖಾನ್ ಬದಲಾಗಿ ಅಖ್ತರ್ ಎಂದು ತೋರಿಸಲಾಗಿದೆ. ಅಖ್ತರ್ ಕಾರು ಚಾಲನೆ ಪರವಾನಗಿ ಹೊಂದಿರಲಿಲ್ಲ. ಇದರಿಂದ ಪೊಲೀಸರು ಅತಾವುಲ್ಲಾ ಎಂಬಾತನನ್ನು ಪ್ರಕರಣದಲ್ಲಿ ಸಿಲುಕಿಸಿ ಆರೋಪ ಪಟ್ಟಿ ಸಲ್ಲಿಸಿದ್ದರು. ಆದ್ದರಿಂದ, ಪರಿಹಾರ ಕೊಡಲು ಸಾಧ್ಯವಿಲ್ಲ ಎಂದು ಹೇಳಿತ್ತು.
ಈ ವಾದ ಪುರಸ್ಕರಿಸಿದ ನ್ಯಾಯ ಮಂಡಳಿಯು ಪರಿಹಾರ ಪಾವತಿ ಹೊಣೆಗಾರಿಕೆಯನ್ನು ವಿಮಾ ಕಂಪೆನಿಯ ಬದಲಾಗಿ ಕಾರು ಮಾಲೀಕ ಪ್ರಭಾಕರ್ ಮೇಲೆ ಹೊರಿಸಿತ್ತು. ಸಂತ್ರಸ್ತರಿಗೆ ವಾರ್ಷಿಕ ಶೇ.6ರಷ್ಟು ಬಡ್ಡಿ ದರಲ್ಲಿ 4,43,000 ರೂಪಾಯಿ ಪಾವತಿಸುವಂತೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು.