ನ್ಯಾಯಮಂಡಳಿಗಳ ಹುದ್ದೆ ಖಾಲಿ: ತೀವ್ರ ಅಸಮಾಧಾನ ಹೊರಹಾಕಿದ ಸುಪ್ರೀಂಕೋರ್ಟ್

ನ್ಯಾಯಮಂಡಳಿ ಸುಧಾರಣಾ ಕಾಯಿದೆ ಜಾರಿಗೆ ಸಂಬಂಧಿಸಿದಂತೆಯೂ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದ್ದು ಸಂಸತ್ತು ತನ್ನ ತೀರ್ಪುಗಳನ್ನು ಅನೂರ್ಜಿತಗೊಳಿಸಿತ್ತಾ ಹೋದಂತೆ ತಾನು ತೀರ್ಪುಗಳನ್ನು ನೀಡುತ್ತಾ ಮುಂದುವರೆಯಲು ಸಾಧ್ಯವಿಲ್ಲ ಎಂದು ಹೇಳಿತು.
CJI NV Ramana, Justice L Nageswara Rao, Justice D Y Chandrachud
CJI NV Ramana, Justice L Nageswara Rao, Justice D Y Chandrachud

ನ್ಯಾಯಮಂಡಳಿಗಳಲ್ಲಿನ ಖಾಲಿ ಹುದ್ದೆ ಭರ್ತಿ ಮಾಡುವಲ್ಲಿ ಕೇಂದ್ರ ಸರ್ಕಾರದ ನಿಷ್ಕ್ರಿಯತೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೋಮವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೆ ತನ್ನ ತೀರ್ಪು ಉಲ್ಲಂಘಿಸಿ 2021ರ ನ್ಯಾಯಾಧಿಕರಣ ಸುಧಾರಣಾ ಕಾಯಿದೆಯನ್ನು ಜಾರಿಗೊಳಿಸಿದ್ದಕ್ಕಾಗಿ ಅದು ಬೇಸರ ವ್ಯಕ್ತಪಡಿಸಿದೆ.

ಕೇಂದ್ರ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳುವುದು ಇಲ್ಲವೇ ನ್ಯಾಯಾಧಿಕರಣಗಳನ್ನು ಮುಚ್ಚುವುದನ್ನು ಹೊರತುಪಡಿಸಿ ಅನ್ಯಮಾರ್ಗ ಉಳಿದಿಲ್ಲ ಎಂದು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ, ನೇತೃತ್ವದ ತ್ರಿಸದಸ್ಯ ಪೀಠ ಒಂದು ಹಂತದಲ್ಲಿ ತನ್ನ ಬೇಸರ ಹೊರಹಾಕಿತು.

"ನೀವು ಈ ನ್ಯಾಯಾಲಯದ ತೀರ್ಪುಗಳನ್ನು ಗೌರವಿಸಲು ಬಯಸುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ನಮಗೀಗ ನ್ಯಾಯಮಂಡಳಿ ಸುಧಾರಣಾ ಕಾಯಿದೆಯನ್ನು ತಡೆಹಿಡಿಯುವುದು ಅಥವಾ ನ್ಯಾಯಮಂಡಳಿಗಳನ್ನು ಮುಚ್ಚುವುದು ಇಲ್ಲವೇ ನಾವೇ ಜನರನ್ನು ನೇಮಿಸುವುದು ಅಥವಾ ನ್ಯಾಯಾಂಗ ನಿಂದನೆ ಕ್ರಮ ಜರುಗಿಸುವ ‌ 3 ಆಯ್ಕೆಗಳಿವೆ,” ಎಂದು ಅದು ಖಾರವಾಗಿ ಪ್ರತಿಕ್ರಿಯಿಸಿತು.

Also Read
ರಾಜ್ಯ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗಗಳ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು 8 ವಾರಗಳಲ್ಲಿ ಭರ್ತಿ ಮಾಡಿ: ಸುಪ್ರೀಂ

ನ್ಯಾಯಾಲಯ ಸರ್ಕಾರದೊಂದಿಗೆ ಘರ್ಷಣೆಗೆ ಇಳಿಯಲು ಬಯಸುವುದಿಲ್ಲ. ಸುಪ್ರೀಂ ಕೋರ್ಟ್‌ಗೆ ಒಂಬತ್ತು ನ್ಯಾಯಾಧೀಶರನ್ನು ನೇಮಿಸಲು ಕೊಲಿಜಿಯಂ ಮಾಡಿದ ಶಿಫಾರಸುಗಳನ್ನು ಸರ್ಕಾರವು ಅಂಗೀಕರಿಸಿದ ಬಗ್ಗೆ ಸಂತಸ ಇದೆ. ಆದರೂ ಖಾಲಿ ಹುದ್ದೆಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ನ್ಯಾಯಮಂಡಳಿಗಳ ಪತನವಾಗುತ್ತಿದೆ ಎಂದು ಪೀಠ ಹೇಳಿತು. ಇದೇ ವೇಳೆ ನ್ಯಾಯಮೂರ್ತಿ ಎಲ್ ನಾಗೇಶ್ವರ ರಾವ್ ಅವರು ʼಸರ್ಕಾರ ಖಾಲಿ ಹುದ್ದೆಗಳನ್ನು ಭರ್ತಿ ಮಾಡದೆ ನ್ಯಾಯಮಂಡಳಿಗಳನ್ನು ದುರ್ಬಲಗೊಳಿಸುತ್ತಿದೆʼ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ "ನ್ಯಾಯಮಂಡಳಿಗಳನ್ನು ಮುಚ್ಚುವ ಯಾವುದೇ ಸಣ್ಣ ಉದ್ದೇಶವೂ ಸರ್ಕಾರಕ್ಕಿಲ್ಲ. ನ್ಯಾಯಾಧಿಕರಣ ಸುಧಾರಣಾ ಕಾಯಿದೆ ಸಂಬಂಧ ಈಗ ಅಧಿಸೂಚನೆ ಹೊರಡಿಸಲಾಗಿದ್ದು ನಿಯಮಗಳನ್ನು ಅಂತಿಮಗೊಳಿಸಲಾಗುತ್ತಿದೆ. ಈ ಹೊಸ ಕಾನೂನು ಖಾಲಿ ಹುದ್ದೆಗಳ ಭರ್ತಿಗೆ ಅವಕಾಶ ಮಾಡಿಕೊಡುತ್ತದೆ. ಶೋಧ ಮತ್ತು ಆಯ್ಕೆ ಸಮಿತಿಯು ಇದಾಗಲೇ ಹೆಸರುಗಳನ್ನು ಶಿಫಾರಸು ಮಾಡಿರುವ ಪ್ರಕರಣಗಳಲ್ಲಿ ಕೇಂದ್ರವು ಪರಿಗಣಿಸಲಿದೆ" ಎಂದರು.

ಆಗ ನ್ಯಾಯಮಂಡಳಿ ಸುಧಾರಣಾ ಕಾಯಿದೆಯನ್ನು ಜಾರಿಗೊಳಿಸುವುದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು. ಸಂಸತ್ತು ತನ್ನ ತೀರ್ಪುಗಳನ್ನು ಅನೂರ್ಜಿತಗೊಳಿಸಿತ್ತಾ ಹೋದಂತೆ ತಾನು ತೀರ್ಪುಗಳನ್ನು ನೀಡುತ್ತಾ ಮುಂದುವರೆಯಲು ಸಾಧ್ಯವಿಲ್ಲ ಎಂದು ಹೇಳಿತು.

" ನ್ಯಾಯಮಂಡಳಿ ಸುಧಾರಣಾ ಕಾಯಿದೆಯು ಮದ್ರಾಸ್ ವಕೀಲರ ಸಂಘ ​​ಪ್ರಕರಣದಲ್ಲಿ ರದ್ದುಪಡಿಸಲಾದ ನಿಬಂಧನೆಗಳ ಪ್ರತಿರೂಪವಾಗಿದೆ. ನಾವು ಸಂಘದ 1,2,3,4,5 (ನಿಬಂಧನೆಗಳನ್ನು) ಹೊಂದಲು ಸಾಧ್ಯವಿಲ್ಲ .... ಇದು ಹೀಗೆ ಮುಂದುವರೆಯಲಿದ್ದು, ಹಿಂದಿನದರ ನಕಲಿನಂತಿರುವ ಕಾಯಿದೆಯನ್ನು ಅನುಮೋದಿಸಲಾಗುತ್ತದೆ. ಇದಾಗಲೇ ಅನುಮೋದಿಸಲಾಗಿರುವ ನೇಮಕಾತಿಗಳನ್ನು ಹಾಗೂ ಈ ಪ್ರಕ್ರಿಯೆಯಲ್ಲಿರುವ ನೇಮಕಾತಿಗಳನ್ನು ನೀವು ಅಂತಿಮಗೊಳಿಸಿ ಜಾರಿಗೊಳಿಸಬೇಕಿದೆ" ಎಂದು ನ್ಯಾ. ಡಿ ವೈ ಚಂದ್ರಚೂಡ್‌ ಹೇಳಿದರು.

ಒಂದು ವೇಳೆ ನೇಮಕಾತಿ ಮಾಡದಿದ್ದರೆ, ನ್ಯಾಯಾಲಯ ಆದೇಶ ನೀಡಬೇಕಾಗುತ್ತದೆ ಎಂದು ತಿಳಿಸಿ ನ್ಯಾಯಾಲಯ ಪ್ರಕರಣವನ್ನು ಸೋಮವಾರಕ್ಕೆ ಮುಂದೂಡಿತು.

ಇದೇ ಸಂದರ್ಭದಲ್ಲಿ ಎಸ್‌ ಜಿ ಮೆಹ್ತಾ ಅವರನ್ನು ಉದ್ದೇಶಿಸಿ ನ್ಯಾಯಾಲಯ "ನಿಮ್ಮ ಬಗ್ಗೆ ನಮಗೆ ವಿಶ್ವಾಸ ಮತ್ತು ಗೌರವವಿದೆ. ಇಂತಹ ಕಾನೂನನ್ನು ತರಲು ನೀವು ಕೇಂದ್ರಕ್ಕೆ ಸಲಹೆ ನೀಡುತ್ತಿಲ್ಲ ಎಂದು ಖಂಡಿತವಾಗಿಯೂ ತಿಳಿದಿದೆ. ಈ ಕೆಲಸ ಅಧಿಕಾರಶಾಹಿಯದ್ದಾಗಿರಬಹುದು ಮತ್ತು ಅಧಿಕಾರಶಾಹಿಯ ಕಾರ್ಯ ನಿರ್ವಹಣೆಯೇ ಹೀಗೆ. ನಮಗೆ ತೀವ್ರ ಅಸಮಾಧಾನವಾಗಿದೆ. ನಾವು ನಿಮಗೆ ಮೂರು ನಾಲ್ಕು ದಿನಗಳ ಕಾಲಾವಕಾಶ ನೀಡುತ್ತೇವೆ" ಎಂದಿತು.

Related Stories

No stories found.
Kannada Bar & Bench
kannada.barandbench.com