ಸುಪ್ರೀಂಕೋರ್ಟಿನ ಹಲವು ವಕೀಲರು ಸಾಮಾಜಿಕ ಕಾರ್ಯಕರ್ತರು ಹಾಗೂ ಪತ್ರಕರ್ತ ಶ್ಯಾಮ್ ಮೀರಾ ಸಿಂಗ್ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ (ಯುಎಪಿಎ) ಅಡಿ ತ್ರಿಪುರ ಪೊಲೀಸರು ಪ್ರಕರಣ ದಾಖಲಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಗುರುವಾರ ಒಪ್ಪಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್ ವಿ ರಮಣ ಅವರ ಪೀಠದ ಎದುರು ಇಂದು ಬೆಳಿಗ್ಗೆ ವಕೀಲ ಪ್ರಶಾಂತ್ ಭೂಷಣ್ ಮನವಿ ಕುರಿತು ಪ್ರಸ್ತಾಪಿಸಿದರು.
ಸಂಬಂಧಪಟ್ಟ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಸಿಜೆಐ ಸೂಚಿಸಿದಾಗ, ಇದನ್ನು ತುರ್ತು ಪ್ರಕರಣವಾಗಿ ಪರಿಗಣಿಸಿ ವಿಚಾರಣೆ ನಡೆಸುವಂತೆ ಪ್ರಶಾಂತ್ ಭೂಷಣ್ ಪೀಠವನ್ನು ಕೋರಿದರು. ಮನವಿಗೆ ಸ್ಪಂದಿಸಿದ ಸಿಜೆಐ ವಿಚಾರಣೆಗೆ ಪ್ರಕರಣವನ್ನು ಪಟ್ಟಿ ಮಾಡಲು ಒಪ್ಪಿದರು.
ಪತ್ರಕರ್ತ ಶ್ಯಾಮ್ ಮೀರಾ ಸಿಂಗ್, ಸುಪ್ರೀಂಕೋರ್ಟ್‌ನ ವಕೀಲರು ಹಾಗೂ ನೂರಕ್ಕೂ ಹೆಚ್ಚು ಸಾಮಾಜಿಕ ಮಾಧ್ಯಮ ಬಳಕೆದಾರರು, ಹೋರಾಟಗಾರರ ವಿರುದ್ಧ ಇತ್ತೀಚೆಗೆ ತ್ರಿಪುರ ಪೊಲೀಸರು ಯುಎಪಿಎ ಕಾಯಿದೆಯಡಿ ನೋಟಿಸ್ ಕಳುಹಿಸಿದ್ದರು.
ʼತ್ರಿಪುರ ಹೊತ್ತಿ ಉರಿಯುತ್ತಿದೆʼ ಎಂದು ಟ್ವೀಟ್ ಮಾಡಿದ್ದಕ್ಕಾಗಿ ರಾಜ್ಯ ಬಿಜೆಪಿ ಸರ್ಕಾರ ತಮ್ಮ ವಿರುದ್ಧ ಯುಎಪಿಎ ಕಾಯಿದೆಯಡಿ ಎಫ್‌ಐಆರ್ ದಾಖಲಿಸಿದ್ದು ಅದನ್ನು ರದ್ದುಗೊಳಿಸುವಂತೆ ಕೋರಿ ಸಿಂಗ್ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಇಂತಹುದೇ ಪ್ರಚೋದನಕಾರಿ ಪೋಸ್ಟ್‌ಗಳನ್ನು ಮಾಡಿದ್ದಕ್ಕಾಗಿ ಸುಪ್ರೀಂಕೋರ್ಟ್ ವಕೀಲರಾದ ಎಹ್ತೇಶಾಮ್ ಹಶ್ಮಿ, ಅಮಿತ್ ಶ್ರೀವಾಸ್ತವ, ಅನ್ಸಾರ್ ಇಂದೋರಿ ಮತ್ತು ಮುಖೇಶ್ ಕುಮಾರ್ ಅವರಿಗೂ ಯುಎಪಿಎ ಅಡಿ ನೋಟಿಸ್ ಕಳುಹಿಸಲಾಗಿದೆ. ಈ ನಾಲ್ವರು ವಕೀಲರು ರಾಜ್ಯದಲ್ಲಿ ನಡೆದ ಕೋಮುಗಲಭೆಗೆ ಸಂಬಂಧಿಸಿದಂತೆ ಕೈಗೊಂಡ ಸತ್ಯಶೋಧನೆಯ ವರದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದರು.
ಅಲ್ಲದೆ ನೂರಕ್ಕೂ ಹೆಚ್ಚು ಸಾಮಾಜಿಕ ಮಾಧ್ಯಮ ಬಳಕೆದಾರರ ವಿರುದ್ಧ ಯುಎಪಿಎ, ಕ್ರಿಮಿನಲ್ ಪಿತೂರಿ ಮತ್ತು ಫೋರ್ಜರಿ ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ ಅವರ ಖಾತೆಗಳನ್ನು ಸ್ಥಗಿತಗೊಳಿಸುವ ಸಲುವಾಗಿ ಅವರ ವಿವರ ಒದಗಿಸುವಂತೆ ಟ್ವಿಟರ್, ಫೇಸ್‌ಬುಕ್ ಹಾಗೂ ಯೂಟ್ಯೂಬ್ ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ.
ಮುಸ್ಲಿಮರಿಗೆ ಸೇರಿದ ಮಸೀದಿಗಳು , ಅಂಗಡಿಗಳು ಹಾಗೂ ಮನೆಗಳನ್ನು ಧ್ವಂಸಗೊಳಿಸಲಾಗಿದೆ ಎಂಬ ವರದಿಗಳು ಪ್ರಕಟವಾದ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಬಾಂಗ್ಲಾದೇಶದಲ್ಲಿ ಹಿಂದೂಗಳು ವಿರುದ್ಧ ನಡೆದ ಹಿಂಸಾಚಾರ ಪ್ರತಿಭಟಿಸಿ ಮೆರವಣಿಗೆಗಳು ನಡೆಯುತ್ತಿದ್ದ ವೇಳೆ ಅಹಿತಕರ ಘಟನೆಗಳು ನಡೆದಿದ್ದವು ಎಂದು ವರದಿಯಾಗಿತ್ತು.
ಆದರೆ ಇದನ್ನು ನಿರಾಕರಿಸಿದ್ದ ಪೊಲೀಸರು "ಸಾಮಾಜಿಕ ಮಾಧ್ಯಮ ಬಳಕೆದಾರರು ಘಟನೆಗಳನ್ನು ವ್ಯಾಪಕವಾಗಿ ಉತ್ಪ್ರೇಕ್ಷಿಸಿದ್ದಾರೆ. ಭದ್ರತಾ ಪಡೆಗಳು ಪರಿಸ್ಥಿತಿಯನ್ನು ತ್ವರಿತವಾಗಿ ನಿಯಂತ್ರಿಸಿದವು" ಎಂದು ಸಮರ್ಥಿಸಿಕೊಂಡಿದ್ದರು. ಈ ಮಧ್ಯೆ, ಕೋಮು ಹಿಂಸಾಚಾರ ಕುರಿತಾದ ಸುದ್ದಿ ಪ್ರಸಾರ ನಿಗ್ರಹಿಸಲು ಕಠಿಣ ಕಾನೂನು ಜಾರಿಗೊಳಿಸುವ ಪೊಲೀಸರ ಕ್ರಮವನ್ನು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಖಂಡಿಸಿದೆ.