ಮುಂಬೈ ಪೊಲೀಸ್‌ನ ಅಪರಾಧ ವಿಭಾಗ ಹೊರಗೆಡವಿದ್ದ ನಕಲಿ ಟೆಲಿವಿಷನ್ ರೇಟಿಂಗ್ ಪಾಯಿಂಟ್ (ಟಿಆರ್‌ಪಿ) ಹಗರಣಕ್ಕೆ ಸಂಬಂಧಿಸಿದಂತೆ ಪೂರಕ ಆರೋಪ ಪಟ್ಟಿ ಸಲ್ಲಿಸಲಾಗಿದೆ.
ಎಆರ್‌ಜಿ ಔಟ್ಲಯರ್ ಮೀಡಿಯಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) 13ನೇ ಆರೋಪಿ ವಿಕಾಸ್ ಎಸ್ ಖಾನ್‌ಚಂದಾನಿ ಹಾಗೂ ಬ್ರಾಡ್‌ಕಾಸ್ಟ್ ಆಡಿಯನ್ಸ್ ರೀಸರ್ಚ್ ಕೌನ್ಸಿಲ್ (ಬಾರ್ಕ್) ಮಾಜಿ ಉದ್ಯೋಗಿಗಳಾದ 14ನೇ ಆರೋಪಿಯಾದ ರೋಮಿಲ್ ವಿ ರಾಮಗರಿಯಾ ಮತ್ತು 15ನೇ ಆರೋಪಿಯಾದ ಪಾರ್ಥೊ ದಾಸಗುಪ್ತಾ ಅವರು ಇತರೆ ಆರೋಪಿಗಳ ಜೊತೆ ಸೇರಿ ವೀಕ್ಷಕರ ಸಂಖ್ಯೆಯನ್ನು ತಿರುಚಲು ಸಂಚು ಮಾಡಿದ್ದು, ಆ ಮೂಲಕ ಟಿಆರ್‌ಪಿ ತಿರುಚಿ ಜಾಹಿರಾತುಗಳ ಮೂಲಕ ಚಾನೆಲ್‌ಗಳಿಗೆ ಹೆಚ್ಚಿನ ಆದಾಯ ದೊರಕಿಸುವ ಯತ್ನ ಮಾಡಿದ್ದಾರೆ ಎಂದು ಪೂರಕ ಆರೋಪ ಪಟ್ಟಿಯಲ್ಲಿ ವಿವರಿಸಲಾಗಿದೆ.
ರಿಪಬ್ಲಿಕ್ ಟಿವಿ ಮತ್ತು ಹಿಂದಿ ವಾಹಿನಿ ರಿಪಬ್ಲಿಕ್ ಭಾರತ್ ಪ್ರೇಕ್ಷಕರ ಸಂಖ್ಯೆ ಹೆಚ್ಚಿಸಲು ಖಾನ್‌ಚಂದಾನಿ ಮತ್ತು ಎಆರ್‌ಜಿಯ ಮುಖ್ಯ ನಿರ್ವಹಣಾಧಿಕಾರಿ ಪ್ರಿಯಾ ಮುಖರ್ಜಿ ಅವರು ವ್ಯವಹಾರ ನಡೆಸಿದ್ದಾರೆ. ಇದು ಅವರ ವಾಟ್ಸ್ ಆಪ್ ಗುಂಪಿನ ಚರ್ಚೆಯಿಂದ ತಿಳಿದುಬಂದಿದೆ ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (ಟ್ರಾಯ್) ನಿಯಮಗಳನ್ನು ಉಲ್ಲಂಘಿಸಿ ಕೇಬಲ್ ಆಪರೇಟರ್‌ಗಳು ಮತ್ತು ಬಹು ವ್ಯವಸ್ಥೆಯ ಆಪರೇಟರ್‌ಗಳಿಗೆ ಹಣ ಪಾವತಿಸಿ, ಆ ಮೂಲಕ ʼಬಹು/ಪ್ರಚಾರದ ಸ್ಥಳೀಯ ಚಾನೆಲ್ ಸಂಖ್ಯೆಯ ಮೂಲಕ ಒಂದಕ್ಕಿಂತ ಹೆಚ್ಚು ಚಾನೆಲ್‌ಗಳಲ್ಲಿ ತಮ್ಮ ಸುದ್ದಿ ವಾಹಿನಿಗಳನ್ನು ಪ್ರಸಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಬಾರ್ಕ್ ಸಿಒಒ ಸ್ಥಾನವನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ರಾಮಗರಿಯಾ ಅವರು ಟಿಆರ್‌ಪಿ ತಿರುಚಿ ರಿಪಬ್ಲಿಕ್ ಚಾನೆಲ್‌ಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ʼಅಕ್ವಿಸಿಟೊರಿ ರಿಸ್ಕ್ ಕನ್ಸಲ್ಟಿಂಗ್ ಪ್ರೈ. ಲಿʼ ಎಂಬ ಸ್ವತಂತ್ರ ಸಂಸ್ಥೆಯ ಮೂಲಕ ಬಾರ್ಕ್‌ನಲ್ಲಿ ರಾಮಗರಿಯಾ ಅವರು ತನಿಖೆ ನಡೆಸಿದ್ದು, ಇದು ರಾಮಗರಿಯಾ ಮತ್ತು ಸಹ ಆರೋಪಿಗೆ ಟಿಆರ್‌ಪಿ ಲೆಕ್ಕಾಚಾರದ ಕಾರ್ಯದ ಬಗ್ಗೆ ಒಳನೋಟ ನೀಡಿತ್ತು ಎಂದು ಹೇಳಲಾಗಿದೆ. ಟಿಆರ್‌ಪಿ ತಿರುಚುವ ಮೂಲಕ ಬಾರ್ಕ್ ದತ್ತಾಂಶ ಹೇಗೆ ರಿಪಬ್ಲಿಕ್ ಚಾನೆಲ್‌ಗಳಿಗೆ ಅನುಕೂಲಕರವಾಗಿದೆ ಎಂಬುದರ ಕುರಿತಾದ ಮಾಹಿತಿ ರಾಮಗರಿಯಾ ಅವರ ಕಚೇರಿ ಈಮೇಲ್‌ನಲ್ಲಿ ದೊರೆತಿದೆ.
ರಿಪಬ್ಲಿಕ್ ಟಿವಿ ಪ್ರೇಕ್ಷಕರ ಸಂಖ್ಯೆಯು ಟೈಮ್ಸ್ ನೌ ಪ್ರೇಕ್ಷಕರ ಸಂಖ್ಯೆಗಿಂತಲೂ ಹೆಚ್ಚಾಗಿದ್ದು, ಉದ್ದೇಶಪೂರ್ವಕಾಗಿ ರಿಪಬ್ಲಿಕ್ ಚಾನೆಲ್‌ಗಳ ಟಿಆರ್‌ಪಿ ಹೆಚ್ಚಿಸಲು ದತ್ತಾಂಶ ತಿದ್ದಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಬಾರ್ಕ್ ಮಾಜಿ ಸಿಇಒ ಪಾರ್ಥೊ ದಾಸಗುಪ್ತ ಅವರು ಟಿಆರ್‌ಪಿ ಹಗರಣದ ಪ್ರಮುಖ ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದ್ದು, ಎಆರ್‌ಜಿ ಔಟ್ಲಯರ್ ಗೆ ಅನುಕೂಲವಾಗುವ ನಿಟ್ಟಿನಲ್ಲಿ ಟಿಆರ್‌ಪಿ ರೇಟಿಂಗ್ ಹೆಚ್ಚಿಸಲು ತಮ್ಮ ಸ್ಥಾನವನ್ನು ಪಾರ್ಥೊ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಟಿಆರ್‌ಪಿ ತಿರುಚಿ ರಿಪಬ್ಲಿಕ್ ಟಿವಿಗೆ ಅನುಕೂಲ ಮಾಡಿಕೊಟ್ಟಿದ್ದಕ್ಕೆ ಅದರ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರು ದಾಸಗುಪ್ತಗೆ ಹಣ ಪಾವತಿಸಿರುವುದು ತನ್ನ ತನಿಖೆಯ ವೇಳೆ ಬೆಳಕಿಗೆ ಬಂದಿದೆ ಎಂದು ಮುಂಬೈ ಪೊಲೀಸರು ಹೇಳಿಕೊಂಡಿದ್ದಾರೆ.
ಗೋಸ್ವಾಮಿ ಪಾವತಿಸಿದ ಹಣದಿಂದ ಬೆಲೆ ಬಾಳುವ ಆಭರಣಗಳನ್ನು ದಾಸಗುಪ್ತ ಖರೀದಿಸಿರುವುದಕ್ಕೆ ಸಾಕ್ಷ್ಯಗಳಿವೆ. ದಾಸಗುಪ್ತ ಮನೆಯಲ್ಲಿ ಶೋಧ ನಡೆಸಿದಾಗ ಬೆಲೆ ಬಾಳುವ ಆಭರಣಗಳು ಸಿಕ್ಕಿವೆ ಎಂದು ಪೊಲೀಸರು ತಿಳಿಸಿದ್ದಾರೆ. 59 ಸಾಕ್ಷ್ಯಗಳು ಇದರಲ್ಲಿ 12 ತಜ್ಞ ಸಾಕ್ಷಿಗಳು (ವಿಧಿ ವಿಜ್ಞಾನ ಲೆಕ್ಕ ಪರಿಶೋಧಕರು, ಕಂಪ್ಯೂಟರ್ ವಿಧಿ ವಿಜ್ಞಾನ ಲೆಕ್ಕಪರಿಶೋಧಕರು) ಸೇರಿದ್ದಾರೆ ಎಂದು ಪೂರಕ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಕಳೆದ ವರ್ಷದ ನವೆಂಬರ್‌ನಲ್ಲಿ ಅಪರಾಧ ವಿಭಾಗವು ಮೊದಲ ಆರೋಪ ಪಟ್ಟಿ ಸಲ್ಲಿಸಿತ್ತು.