ಟೆಲಿವಿಷನ್ ರೇಟಿಂಗ್ ಪಾಯಿಂಟ್ (ಟಿಆರ್‌ಪಿ) ಹಗರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸ್‌ನ ಅಪರಾಧ ವಿಭಾಗದ ತಂತ್ರಕ್ಕೆ ಪೂರಕವಾಗಿ ಹೇಳಿಕೆ ನೀಡುವಂತೆ ತನ್ನ ಸಿಬ್ಬಂದಿಗೆ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿರುವ ಹನ್ಸ್ ಸಂಶೋಧನಾ ಸಮೂಹವು ಪ್ರಕರಣವನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ವರ್ಗಾಯಿಸಲು ನಿರ್ದೇಶನ ನೀಡಬೇಕು ಎಂದು ಬಾಂಬೆ ಹೈಕೋರ್ಟ್‌ಗೆ ಮನವಿ ಮಾಡಿದೆ.
ಹನ್ಸ್ ವರದಿಯನ್ನು ರಿಪಬ್ಲಿಕ್ ಟಿವಿ ಪ್ರಸಾರ ಮಾಡಿದ್ದು, ಅದು ನಕಲಿ ವರದಿ ಎಂದು ಹೇಳಿಕೆ ನೀಡುವಂತೆ ಹನ್ಸ್ ಸಿಬ್ಬಂದಿಗೆ ಪೊಲೀಸರು ಬಲಪ್ರಯೋಗದ ಮೂಲಕ ಒತ್ತಾಯ ಮಾಡುತ್ತಿದ್ದಾರೆ. ಪೊಲೀಸರು ಒತ್ತಡ ಕ್ರಮ ಅನುಸರಿಸುತ್ತಿದ್ದಾರೆ ಎಂದು ಹನ್ಸ್ ಆರೋಪಿಸಿದೆ. ಹನ್ಸ್ ಸಮೂಹದ ವರದಿ ಎನ್ನಲಾದುದನ್ನು ಪ್ರಸಾರ ಮಾಡುವ ಮೂಲಕ ಟಿಆರ್‌ಪಿ ಹಗರಣದಲ್ಲಿ ತಾನು ಮುಗ್ಧ ಎಂದು ರಿಪಬ್ಲಿಕ್ ಟಿವಿ ಹೇಳಿಕೊಂಡಿತ್ತು.
ರಿಪಬ್ಲಿಕ್ ಟಿವಿ ಪ್ರಸಾರ ಮಾಡಿದ ದಾಖಲೆಯು ನಕಲಿಯೋ ಅಥವಾ ಅಸಲಿಯೋ ಎಂಬುದನ್ನು ನಿರ್ಧರಿಸುವ ಸ್ಥಿತಿಯಲ್ಲಿ ಇಲ್ಲ ಎಂಬುದನ್ನು ಈಗಾಗಲೇ ಪೊಲೀಸರಿಗೆ ತಿಳಿಸಲಾಗಿದೆ ಎಂದು ಹನ್ಸ್ ನಿರ್ದೇಶಕ ನರಸಿಂಹನ್ ಕೆ ಸ್ವಾಮಿ, ಸಿಇಒ ಪ್ರವೀಣ್ ಓಂಪ್ರಕಾಶ್ ಮತ್ತು ನಿತಿನ್ ಕಾಶಿನಾಥ್ ದಿಯೋಕರ್ ಮನವಿಯಲ್ಲಿ ವಿವರಿಸಿದ್ದಾರೆ.
ಹನ್ಸ್ ಸಿದ್ಧಪಡಿಸಿದ್ದ ನೈಜ ಆಂತರಿಕ ವರದಿಯ ಪ್ರತಿಗಾಗಿ ರಿಪಬ್ಲಿಕ್ ಟಿವಿ ತಮ್ಮನ್ನು ಸಂಪರ್ಕಿಸಿಲ್ಲ ಎಂಬುದು ಮಾತ್ರ ತಮಗೆ ಗೊತ್ತು. ಟಿಆರ್‌ಪಿ ಹಗರಣಕ್ಕೆ ಸಂಬಂಧಿಸಿದಂತೆ ಹನ್ಸ್ ಸಮೂಹದ ಆಯ್ದ ಭಾಗವನ್ನು ಮಾತ್ರ ಪ್ರಸಾರ ಮಾಡಲಾಗಿದೆ ಎಂದು ಹನ್ಸ್ ಹೇಳಿದೆ.
“ಅರ್ಜಿದಾರರನ್ನು ನಿರಂತರವಾಗಿ ಹಲವು ತಾಸುಗಟ್ಟಲೇ ಅಪರಾಧ ವಿಭಾಗದಲ್ಲಿ ಕಾಯಿಸುವುದು, ಬಂಧಿಸುವುದಾಗಿ ಬೆದರಿಸುವುದು ಮತ್ತು ತಪ್ಪು ಹೇಳಿಕೆ ನೀಡುವಂತೆ ನಿರಂತರವಾಗಿ ಒತ್ತಾಯಿಸಲಾಗುತ್ತಿದೆ” ಎಂದು ಮನವಿಯಲ್ಲಿ ವಿವರಿಸಲಾಗಿದೆ.
“ಉಲ್ಲೇಖಿಸಿದ ದಿನಗಳಂದು ವಿಚಕ್ಷಣಾ ಪ್ರಕ್ರಿಯೆ ಮತ್ತು ಆಂತರಿಕ ತನಿಖೆಯ ಬಗ್ಗೆ ಮಾಹಿತಿ ಮತ್ತು ಪ್ರಶ್ನೆಗಳನ್ನು ಮೊದಲನೇ ಅರ್ಜಿದಾರರಿಗೆ ಅಧಿಕಾರಿಗಳು ಕೇಳಿದ್ದಾರೆ. ದಾಖಲೆಗಳನ್ನು ಪ್ರಸ್ತುತಪಡಿಸಲು ಬೇಕಾದ ಸಮಯದ ಬಗ್ಗೆಯೂ ಅವರಿಗೆ ಅರಿವಿಲ್ಲ. ಇದಕ್ಕೆ ಸಂಬಂಧಿಸಿದಂತೆ ಮುಂಚಿತವಾಗಿ ಮುದ್ರಿತ ನೋಟಿಸ್ ಸಹ ಕಳುಹಿಸಲಾಗಿಲ್ಲ. ಹೀಗೆ ಮಾಡಿದಲ್ಲಿ ಮೊದಲನೇ ಅರ್ಜಿದಾರರು ಎಲ್ಲವನ್ನೂ ಸಿದ್ಧಪಡಿಸಿಕೊಂಡು ಹೋಗುತ್ತಿದ್ದರು. ಈ ರೀತಿ ಮಾಹಿತಿಗೆ ಆಗ್ರಹಿಸುವುದು, ಪ್ರತಿಕ್ರಿಯೆಗೆ ಸಮಯಾವಕಾಶ ನೀಡದಿರುವುದು ಮತ್ತು ಮೊದಲನೇ ಅರ್ಜಿದಾರರ ಮೇಲೆ ಅಧಿಕಾರಿಗಳು ಈ ರಿಟ್ ಮನವಿ ಸಿದ್ಧಪಡಿಸುವವರೆವಿಗೂ ಒತ್ತಡ ಮುಂದುವರಿಸಿದ್ದರು” ಎಂದು ಹೇಳಲಾಗಿದೆ.
ಮನವಿಯಲ್ಲಿ ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ಸಚಿನ್ ವಾಜ್, ಪೊಲೀಸ್ ಆಯುಕ್ತ ಪರಮ್‌ಬೀರ್ ಸಿಂಗ್ ಮತ್ತು ಸಹಾಯಕ ಪೊಲೀಸ್ ಆಯುಕ್ತ ಶಶಾಂಕ್ ಸಾನ್‌ಭ್ಲೋರ್ ಅವರನ್ನು ಪ್ರತಿವಾದಿಗಳನ್ನಾಗಿಸಲಾಗಿದೆ. ಅಕ್ಟೋಬರ್ 12ರಿಂದ ದಿನನಿತ್ಯ ಹನ್ಸ್ ಸಮೂಹದಿ ಸಿಬ್ಬಂದಿಯನ್ನು ಅಪರಾಧ ವಿಭಾಗಕ್ಕೆ ಆಹ್ವಾನಿಸಿ ತಾಸುಗಟ್ಟಲೇ ಕಾಯುವಂತೆ ಮಾಡಲಾಗುತ್ತಿದೆ ಎಂದೂ ಆರೋಪಿಸಲಾಗಿದೆ.
“ಅಪರಾಧಕ್ಕೆ ಸಂಬಂಧಿಸಿದಂತೆ ಮೊದಲನೇ ಮಾಹಿತಿದಾರರಿಗೆ ತನಿಖಾ ಸಂಸ್ಥೆ ಕಿರುಕುಳ ನೀಡುತ್ತಿರುವುದು ಮತ್ತು ತಮ್ಮನ್ನು ತಪ್ಪು ಹೇಳಿಕೆಗೋಸ್ಕರ ಆರೋಪಿಗಳ ರೀತಿಯಲ್ಲಿ ನೋಡುತ್ತಿರುವುದು ವಿಭಿನ್ನ ಪರಿಸ್ಥಿತಿಯಾಗಿದೆ. ಇದು ಕಾನೂನು ಮತ್ತು ನಿಯಮಗಳಿಗೆ ವಿರುದ್ಧವಾದ ಕ್ರಮವಾಗಿದೆ. ವ್ಯಕ್ತಿಯ ಮೂಲಭೂತ ಹಕ್ಕುಗಳಿಗೆ ವಿರುದ್ಧವಾದ ನಡೆ ಇದಾಗಿದ್ದು, ಈ ವಿಚಾರದಲ್ಲಿ ಗೌರವಾನ್ವಿತ ನ್ಯಾಯಾಲಯ ಮಧ್ಯಪ್ರವೇಶಿಸಬೇಕು” ಎಂದು ಮನವಿ ಮಾಡಲಾಗಿದೆ.
ಟಿಆರ್‌ಪಿ ಹಗರಣಕ್ಕೆ ಸಂಬಂಧಿಸಿದಂತೆ ಹನ್ಸ್ ಸಮೂಹದ ಮಾಜಿ ಉದ್ಯೋಗಿ ವಿಶಾಲ್ ವೇದ್‌ಪ್ರಕಾಶ್ ಭಂಡಾರಿ ಅವರನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಹನ್ಸ್ ಸಹ ವಿಶಾಲ್ ವಿರುದ್ಧ ದೂರು ದಾಖಲಿಸಿದೆ. ಟಿಆರ್‌ಪಿ ಹೆಚ್ಚಿಸುವ ಸಂಬಂಧ ನಿರ್ದಿಷ್ಟ ಟಿವಿ ಚಾನೆಲ್‌ಗಳನ್ನು ನೋಡುವಂತೆ ಬಾರ್ಕ್ ಮೀಟರ್ ಅಳವಡಿಸಿದ್ದ ಕೆಲವು ಮನೆಯವರನ್ನು ಪ್ರಭಾವಿಸುತ್ತಿದ್ದುದಾಗಿ ವಿಶಾಲ್ ತಪ್ಪೊಪ್ಪಿಕೊಂಡಿದ್ದರು.