ಮುಂಬೈ ಪೊಲೀಸರ ಎಫ್‌ಐಆರ್‌ ಪ್ರಶ್ನಿಸಿ ಬಾಂಬೆ ಹೈಕೋರ್ಟ್‌ ಮೊರೆಹೋದ ರಿಪಬ್ಲಿಕ್‌ ಟಿವಿ: ಸಿಬಿಐ ಮಧ್ಯಪ್ರವೇಶಕ್ಕೆ ಮನವಿ

ರಿಪಬ್ಲಿಕ್ ಟಿವಿ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಮಧ್ಯಂತರ ರಕ್ಷಣೆ ನೀಡಬೇಕು ಮತ್ತು ಮುಂಬೈ ಪೊಲೀಸರು ನಡೆಸುತ್ತಿರುವ ತನಿಖಾ ಕ್ರಮಗಳನ್ನು ತಡೆಹಿಡಿಯಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ.
ಮುಂಬೈ ಪೊಲೀಸರ ಎಫ್‌ಐಆರ್‌ ಪ್ರಶ್ನಿಸಿ ಬಾಂಬೆ ಹೈಕೋರ್ಟ್‌ ಮೊರೆಹೋದ ರಿಪಬ್ಲಿಕ್‌ ಟಿವಿ: ಸಿಬಿಐ ಮಧ್ಯಪ್ರವೇಶಕ್ಕೆ ಮನವಿ
Published on

ಮುಂಬೈ ಪೊಲೀಸರು ಬಯಲಿಗೆಳೆದರೆನ್ನಲಾದ ಟಿಆರ್‌ಪಿ ಹಗರಣಕ್ಕೆ ಸಂಬಂಧಿಸಿದಂತೆ ದಾಖಲಿಸಲಾದ ಎಫ್‌ಐಆರ್‌ ಪ್ರಶ್ನಿಸಿ ಮುಂಬೈ ರಿಪಬ್ಲಿಕ್ ಟಿವಿ ತನ್ನ ಮಾತೃಕಂಪೆನಿ ಎಜಿಆರ್‌ ಮೂಲಕ ಬಾಂಬೆ ಹೈಕೋರ್ಟ್‌ ಮೊರೆಹೋಗಿದೆ. ಮುಖ್ಯಸ್ಥ ಅರ್ನಾಬ್ ಗೋಸ್ವಾಮಿ ಸೇರಿದಂತೆ ರಿಪಬ್ಲಿಕ್‌ ಟಿವಿಯ ಸಿಬ್ಬಂದಿಯ ವಿರುದ್ಧ ದಾಖಲಿಸಲಾದ ಎಫ್‌ಐಆರ್‌ ರದ್ದುಪಡಿಸಬೇಕು ಮತ್ತು ಮುಂಬೈ ಪೊಲೀಸರಿಂದ ಸಿಬಿಐಗೆ ಪ್ರಕರಣ ವರ್ಗಾಯಿಸಬೇಕು ಎಂದು ಕೋರಲಾಗಿದೆ.

ಅಧಿಕಾರ ದುರುಪಯೋಗ ಮಾಡಿಕೊಂಡ ಕಾರಣಕ್ಕಾಗಿ ಮುಂಬೈ ಪೊಲೀಸ್‌ ಕಮಿಷನರ್‌ ಪರಮ್‌ ವೀರ್‌ ಸಿಂಗ್‌ ಅವರ ವಿರುದ್ಧ ಸಿಬಿಐ ತನಿಖೆ ನಡೆಸಬೇಕು ಮತ್ತು ಶಿಸ್ತುಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಮನವಿ ಮಾಡಲಾಗಿದೆ. ಚಾನೆಲ್ ಸದಸ್ಯರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಮಧ್ಯಂತರ ರಕ್ಷಣೆ ನೀಡಬೇಕು ಮತ್ತು ಮುಂಬೈ ಪೊಲೀಸರು ನಡೆಸುತ್ತಿರುವ ತನಿಖೆ ತಡೆಹಿಡಿಯಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ. ಪ್ರಕರಣದ ವಿಚಾರಣೆ ಅಕ್ಟೋಬರ್‌ 19 ರಂದು ನಡೆಯಲಿದೆ.

ಅರ್ಜಿಯ ಮುಖ್ಯಾಂಶಗಳು...

  • ಮುಂಬೈ ಪೊಲೀಸರಿಂದ ಪೂರ್ವಗ್ರಹ ಪೀಡಿತ ಮತ್ತು ಪಕ್ಷಪಾತದ ತನಿಖೆ ನಡೆಯುವ ಸಾಧ್ಯತೆಯಿದ್ದು ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಬೇಕು.

  • ಸುಶಾಂತ್ ಸಿಂಗ್ ರಜಪೂತ್ ಮತ್ತು ಪಾಲ್ಘರ್ ಗುಂಪುಹಲ್ಲೆ ಘಟನೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರ ಮತ್ತು ಮುಂಬೈ ಪೊಲೀಸರ ವಿರುದ್ಧ ಕಾರ್ಯಕ್ರಮ ಪ್ರಸಾರ ಮಾಡಿದ್ದಕ್ಕಾಗಿ ತಮ್ಮ ವಿರುದ್ಧ ಸುಳ್ಳು ಆರೋಪ ಹೊರಿಸಲಾಗಿದೆ.

  • ಯಾವುದೇ ಪರಿಹಾರ ಪಡೆಯದಂತೆ ತಡೆಯಲು ಎಫ್‌ಐಆರ್‌ನಲ್ಲಿ ರಿಪಬ್ಲಿಕ್ ವಾಹಿನಿ ಹೆಸರನ್ನು ಉದ್ದೇಶಪೂರ್ವಕವಾಗಿ ಉಲ್ಲೇಖಿಸಿಲ್ಲ.

  • ರಿಪಬ್ಲಿಕ್‌ ವಾಹಿನಿ ಉದ್ಯೋಗಿಗಳಿಗೆ ,ಮುಂಬೈ ಪೊಲೀಸರ ಭೀತಿ ಇದೆ.

ಮುಂಬೈ ಪೊಲೀಸರು ಚಾನೆಲ್‌ಗೆ ನೀಡಿದ ಸಮನ್ಸ್ ಅನ್ನು ಪ್ರಶ್ನಿಸಿ ರಿಪಬ್ಲಿಕ್ ಟಿವಿ ಕಳೆದ ವಾರ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿತ್ತು. ಆದರೆ ಅರ್ಜಿ ಹಿಂಪಡೆಯುವಂತೆ ಹೇಳಿದ್ದ ನ್ಯಾಯಾಲಯ ಬಾಂಬೆ ಹೈಕೋರ್ಟ್‌ ಮೊರೆ ಹೋಗುವಂತೆ ಸೂಚಿಸಿತ್ತು.

Kannada Bar & Bench
kannada.barandbench.com