ಸುಳ್ಳುಸುದ್ದಿಗೆ ಸತ್ಯ ಬಲಿ, ಜನರಲ್ಲಿ ಕಡಿಮೆಯಾದ ಸಹಿಷ್ಣುತೆ: ತಂತ್ರಜ್ಞಾನದ ಅಡ್ಡಪರಿಣಾಮ ಕುರಿತು ಸಿಜೆಐ ಕಳವಳ

ಇದೇ ವೇಳೆ, ತಂತ್ರಜ್ಞಾನವು ಸಮಾನತೆಗೆ ಇಂಬು ನೀಡಿದ್ದು ಸುಪ್ರೀಂ ಕೋರ್ಟ್‌ ಎಂಬುದು ದೆಹಲಿಯ ತಿಲಕ್‌ ಮಾರ್ಗಕ್ಕೆ ಮಾತ್ರ ಸೀಮಿತವಾಗದೆ ಇಂದು ಚಿಕ್ಕಹಳ್ಳಿಗಳ ಸರ್ವೋಚ್ಚ ನ್ಯಾಯಾಲಯವಾಗಿದೆ ಎಂದು ತಂತ್ರಜ್ಞಾನದ ಸಾಧ್ಯತೆಯ ಬಗ್ಗೆ ಸಿಜೆಐ ಮೆಚ್ಚುಗೆ.
CJI DY Chandrachud
CJI DY Chandrachud

ಜನರು ಸಹಿಷ್ಣುತೆ ಕಳೆದುಕೊಳ್ಳುತ್ತಿದ್ದಾರೆ, ತಮ್ಮೊಳಗೇ ಮುಳುಗಿದ್ದಾರೆ ಹಾಗೂ ಸತ್ಯ ಎಂಬುದು ಸುಳ್ಳುಸುದ್ದಿಗೆ ಬಲಿಯಾಗಿದೆ ಎಂದು ತಂತ್ರಜ್ಞಾನದ ಕೆಟ್ಟ ಮುಖಗಳನ್ನು ಎತ್ತಿ ತೋರಿಸುತ್ತಾ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್‌ ಕಳವಳ ವ್ಯಕ್ತಪಡಿಸಿದರು.

ಅಮೆರಿಕ ವಕೀಲರ ಸಂಘದ (ಎಬಿಎ) ಅಂತರರಾಷ್ಟ್ರೀಯ ಕಾನೂನು ವಿಭಾಗದ ವತಿಯಿಂದ ನವದೆಹಲಿಯಲ್ಲಿ ಶುಕ್ರವಾರ ಆರಂಭವಾದ ಮೂರು ದಿನಗಳ ಎಬಿಎ ಇಂಡಿಯಾ ಸಮಾವೇಶ 2023ರ ಉದ್ಘಾಟನಾ ಗೋಷ್ಠಿಯಲ್ಲಿ ʼ ಜಾಗತಿಕಸ್ಥಳೀಯತೆಯ ಯುಗದಲ್ಲಿ ಕಾನೂನು: ಭಾರತ ಮತ್ತು ಪಶ್ಚಿಮ ಸಂಗಮʼ ಎಂಬ ವಿಷಯದ ಕುರಿತು ಅವರು ಮಾತನಾಡಿದರು.

ತಮ್ಮ ಮಾತನ್ನು ಒಪ್ಪದವರನ್ನು ಟ್ರೋಲ್‌ ಮಾಡುವ ಪರಿಪಾಠ ಹೆಚ್ಚುತ್ತಿದ್ದು ಜನರು ತಮ್ಮ ಅಭಿಪ್ರಾಯಗಳಿಗೆ ವಿರುದ್ಧವಾದ ಮಾತನ್ನು ಒಪ್ಪಲು ಸಿದ್ದರಿಲ್ಲದ ಕಾರಣ ಸಹಿಷ್ಣತೆ ಕಡಿಮೆಯಾಗುತ್ತಿದೆ ಎಂದರು. ನ್ಯಾಯಮೂರ್ತಿಗಳನ್ನು ಯಾರು ಬೇಕಾದರೂ ಕಾಲೆಳೆಯುವ ಪರಿಪಾಠದ ಬಗ್ಗೆ ವಿಷಾಧಿಸಿದರು.

ಸಿಜೆಐ ಭಾಷಣದ ಪ್ರಮುಖಾಂಶಗಳು

  • ಜನರು ಮತ್ತೊಬ್ಬರ ಅಭಿಪ್ರಾಯಗಳನ್ನು ಸ್ವೀಕರಿಸಲು ಸಿದ್ಧರಿಲ್ಲದ ಕಾರಣ ಸಹಿಷ್ಣುತೆ ಕಡಿಮೆಯಾಗಿದೆ. ಮಾನವೀಯತೆಯೂ ಒಳಗೊಳಗೆ ಹಿಂದೆ ಸರಿದಿದೆ... ಇವುಗಳಲ್ಲಿ ಕೆಲವು ತಂತ್ರಜ್ಞಾನದ ಫಲಶ್ರುತಿಯಾಗಿದ್ದು ಸತ್ಯವು ಸುಳ್ಳುಸುದ್ದಿಗಳಿಗೆ ಬಲಿಯಾಗುತ್ತಿದೆ.

  • ಸಂವಿಧಾನವನ್ನು ರಚಿಸಿದಾಗ, ಮಾನವ ಸಮಾಜ ಹೇಗೆ ವಿಕಸನಗೊಳ್ಳುತ್ತದೆ ಎಂಬುದು ತಿಳಿದಿರಲಿಲ್ಲ. ಆಗ ಸಾಮಾಜಿಕ ಮಾಧ್ಯಮ ಇರಲಿಲ್ಲ. ನಮ್ಮನ್ನು ಒಪ್ಪದೇ ಇರುವ ಯಾರಾದರೂ ನಮ್ಮನ್ನು ಟ್ರೋಲ್‌ ಮಾಡುತ್ತಾರೆ ಎಂಬುದು ನಮಗೆ (ನ್ಯಾಯಾಧೀಶರು) ತಿಳಿದಿದೆ.

  • ಯಾವುದೋ ಆಲೋಚನೆಯ ಬೀಜವೊಂದು ಸಿದ್ಧಾಂತವಾಗಿ ಮೊಳೆಯುತ್ತದೆ. ಅದನ್ನು ತಾರ್ಕಿಕ ವಿಜ್ಞಾನದ ಮೂಸೆಯಲ್ಲಿಟ್ಟು ಪರೀಕ್ಷಿಸುವುದಿಲ್ಲ.

  • ಆದಾಗ್ಯೂ, ತಂತ್ರಜ್ಞಾನ ನ್ಯಾಯಾಧೀಶರ ಜೀವನವನ್ನು ಪರಿವರ್ತಿಸುತ್ತಿದೆ. ಕೋವಿಡ್‌ ಸಮಯದಲ್ಲಿ ನ್ಯಾಯಾಲಯದ ಬಾಗಿಲು ಮುಚ್ಚಿದರೆ, ಜಾಮೀನು ಮುಂತಾದ ಪರಿಹಾರಗಳನ್ನು ಹೇಗೆ ನೀಡಬಹುದು ಎಂದು ಅಂದಿನ ಸಿಜೆಐ ಕೇಳಿದಾಗ ನಾನು ನಮ್ಮಲ್ಲಿ ಡೆಸ್ಕ್‌ಟಾಪ್‌ ಕಂಪ್ಯೂಟರ್‌ಗಳಿವೆ. ವೀಡಿಯೊ ಕಾನ್ಫರೆನ್ಸ್‌ ಆರಂಭಿಸಬಹುದು ಎಂದೆ.

  • ನ್ಯಾಯದ ವಿಕೇಂದ್ರೀಕರಣಕ್ಕೆ ವೀಡಿಯೊ ಕಾನ್ಫರೆನ್ಸಿಂಗ್ ಕಾರಣವಾಗಿದ್ದು ನ್ಯಾಯ ದೊರಕಿಸಿಕೊಡುವ ಪ್ರಮುಖ ಮಾದರಿಯಾಗಿದೆ.

  • ಇದು ನ್ಯಾಯದ ಸಮಾನತೆಗೆ ಪ್ರೋತ್ಸಾಹ ನೀಡಿದ್ದು ಸುಪ್ರೀಂ ಕೋರ್ಟ್‌ ಎಂಬುದು ದೆಹಲಿಯ ತಿಲಕ್‌ ಮಾರ್ಗಕ್ಕೆ ಮಾತ್ರ ಸೀಮಿತವಾಗದೆ ಇಂದು ಚಿಕ್ಕಹಳ್ಳಿಗಳ ಸರ್ವೋಚ್ಚ ನ್ಯಾಯಾಲಯವಾಗಿದೆ.

ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ದೇಶದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ʼಭಾರತ ಜಾಗತೀಕರಣದ ಕೇಂದ್ರವಾಗಿದ್ದು ಈಗ ವಿಶ್ವದ ಆರ್ಥಿಕ ಶಕ್ತಿ ಕೇಂದ್ರಬಿಂದುವಾಗಿದೆʼ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Related Stories

No stories found.
Kannada Bar & Bench
kannada.barandbench.com