ತುಮಕೂರು ದುಂಡ ದಲಿತ ದೌರ್ಜನ್ಯ ಪ್ರಕರಣ: ಅಪರಾಧಿಗಳ ಬಂಧನಕ್ಕೆ ಆದೇಶಿಸಿದ ಹೈಕೋರ್ಟ್; ನ.16ಕ್ಕೆ ಶಿಕ್ಷೆ

ಅರ್ಜಿದಾರರ ಪರ ವಾದ ಮಂಡಿಸಿದ್ದ ವಕೀಲ ಕ್ಲಿಫ್ಟನ್‌ ಡಿ ರೊಜಾರಿಯೊ ದೂರಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸುವಲ್ಲಿ ವಿಚಾರಣಾ ನ್ಯಾಯಾಲಯ ಎಡವಿದೆ ಎಂದಿದ್ದರು.
ತುಮಕೂರು ದುಂಡ ದಲಿತ ದೌರ್ಜನ್ಯ ಪ್ರಕರಣ: ಅಪರಾಧಿಗಳ ಬಂಧನಕ್ಕೆ ಆದೇಶಿಸಿದ ಹೈಕೋರ್ಟ್; ನ.16ಕ್ಕೆ ಶಿಕ್ಷೆ

ತುಮಕೂರು ಜಿಲ್ಲೆಯ ದುಂಡ ಗ್ರಾಮದಲ್ಲಿ 2008ರಲ್ಲಿ ನಡೆದಿದ್ದ ದಲಿತ ದೌರ್ಜನ್ಯ ಪ್ರಕರಣದ ಆರೋಪಿಗಳನ್ನು ಅಪರಾಧಿಗಳೆಂದು ಘೋಷಿಸಿರುವ ಕರ್ನಾಟಕ ಹೈಕೋರ್ಟ್‌ ಅವರನ್ನು ಬಂಧಿಸುವಂತೆ ಪೊಲೀಸರಿಗೆ ಸೂಚಿಸಿದೆ.

ಆ ಮೂಲಕ ವಿಚಾರಣಾ ನ್ಯಾಯಾಲಯ 2011ರಲ್ಲಿ ಆರೋಪಿಗಳ ಪರವಾಗಿ ನೀಡಿದ್ದ ತೀರ್ಪನ್ನು ರದ್ದುಗೊಳಿಸಿರುವ ನ್ಯಾಯಮೂರ್ತಿ ಖಾಜಿ ಜೈಬುನ್ನೀಸಾ ಮೊಹಿದ್ದೀನ್ ನವೆಂಬರ್ 16ಕ್ಕೆ ಶಿಕ್ಷೆಯ ಪ್ರಮಾಣ ಪ್ರಕಟಿಸಲಿದ್ದಾರೆ.

ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ದುಂಡ ಗ್ರಾಮದಲ್ಲಿ 14.08.2008ರಲ್ಲಿ ಬಲವಂತವಾಗಿ ದಲಿತ ಕೇರಿಗೆ ನುಗ್ಗಿ ದಲಿತ ಸಮುದಾಯಕ್ಕೆ ಸೇರಿದ ವ್ಯಕ್ತಿಗಳ ಜಾತಿ ಪ್ರಸ್ತಾಪಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಪ್ರಕರಣ ನಡೆದಿತ್ತು. ಜೊತೆಗೆ ಅಲ್ಲಿದ್ವದವರ ಮೇಲೆ ತೀವ್ರ ದೈಹಿಕ ಹಲ್ಲೆ ನಡೆಸಲಾಗಿತ್ತು. ಗೋವಿಂದರಾಜು, ನರಸಿಂಹಮೂರ್ತಿ, ಕೆಂಪ ಓಬಳಯ್ಯ, ದೊಡ್ಡಯ್ಯನ ಕೆಂಪ ಓಬಳಯ್ಯ, ವೆಂಕಟೇಶ್‌, ಮಂಜುನಾಥ್‌, ಉಮೇಶ್‌, ಮಹಾಲಕ್ಷ್ಮಮ್ಮ ಅವರ ಮೇಲೆ ದೊಣ್ಣೆ, ಕಲ್ಲುಗಳನ್ನು ಬಳಸಿ ದಾಳಿ ನಡೆಸಿದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡಿದ್ದರು.

ಅದೇ ದಿನ ಪ್ರಕರಣದ ಮೇಲ್ಮನವಿದಾರ ದಂಡಿನಶಿವರ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಹನ್ನೊಂದು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್‌ 143, 147, 148, 324, 149 ಹಾಗೂ 1989ರ ಎಸ್‌ಸಿ ಎಸ್‌ಟಿ (ದೌರ್ಜನ್ಯ ತಡೆ) ಕಾಯಿದೆಯ ಸೆಕ್ಷನ್‌ 3 (10)ರ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ವಿಚಾರಣಾ ನ್ಯಾಯಾಲಯ 2011ರಲ್ಲಿ ಆರೋಪಿಗಳನ್ನು ಖುಲಾಸೆಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ದಲಿತ ಸಮುದಾಯಕ್ಕೆ ಸೇರಿದ ದೂರುದಾರರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಅಕ್ಟೋಬರ್ 31ರಂದು ಪ್ರಕರಣ ಆಲಿಸಿದ ಹೈಕೋರ್ಟ್‌ ವಿಚಾರಣಾ ನ್ಯಾಯಾಲಯದ ಆದೇಶ ರದ್ದುಗೊಳಿಸಿದೆ.

ಅರ್ಜಿದಾರರ ಪರ ವಾದ ಮಂಡಿಸಿದ್ದ ವಕೀಲ ಕ್ಲಿಫ್ಟನ್‌ ಡಿ ರೊಜಾರಿಯೊ ದೂರಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸುವಲ್ಲಿ ವಿಚಾರಣಾ ನ್ಯಾಯಾಲಯ ಎಡವಿದೆ ಎಂದಿದ್ದರು. ಘಟನೆಯಲ್ಲಿ ಗಾಯಗೊಂಡಿದ್ದ ಪ್ರತ್ಯಕ್ಷದರ್ಶಿಗಳು ನೀಡಿದ್ದ ಮೌಖಿಕ ಸಾಕ್ಷ್ಯವನ್ನು ಸಂಪೂರ್ಣ ತಿರಸ್ಕರಿಸಲಾಗಿದೆ. ಆ ಮೂಲಕ ಘೋರ ಅಪರಾಧ ಎಸಗಿದ ಆರೋಪಿಗಳ ಉದ್ದೇಶವನ್ನು ಪ್ರಾಸಿಕ್ಯೂಷನ್‌ಸಾಬೀತುಪಡಿಸಿದ್ದರೂ ಅದನ್ನು ಪರಿಗಣಿಸಲು ವಿಚಾರಣಾ ನ್ಯಾಯಾಲಯ ವಿಫಲವಾಗಿದೆ. ವೈದ್ಯಕೀಯ ಸಾಕ್ಷ್ಯಗಳನ್ನು ಪರಿಗಣಿಸುವಲ್ಲಿ ವೈಫಲ್ಯ ಕಂಡುಬಂದಿದೆ ಎಂದು ಪ್ರಮುಖವಾಗಿ ವಾದ ಮಂಡಿಸಿದ್ದರು.

ಅಲ್ಲದೆ ರಾಜಕಾರಣಿಗಳಿಂದ ಪ್ರಕರಣ ಪ್ರಭಾವಿತವಾಗಿದೆ ಎಂದು ವಿಚಾರಣಾ ನ್ಯಾಯಾಲಯ ತಪ್ಪಾಗಿ ಹೇಳಿದೆ. ಒಬ್ಬ ನಿರಪರಾಧಿ ವ್ಯಕ್ತಿಯನ್ನು ಅಪರಾಧಿ ಎಂದು ನಿರ್ಣಯಿಸುವುದಕ್ಕಿಂತಲೂ 10 ಅಪರಾಧಿಗಳನ್ನು ಬಿಟ್ಟುಬಿಡುವುದು ಉತ್ತಮ ಎಂಬ ತತ್ವವನ್ನು ತಪ್ಪಾಗಿ ಅನ್ವಯಿಸಲಾಗಿದೆ ಎಂದು ಕೂಡ ಅವರು ವಾದಿಸಿದ್ದರು. ಪ್ರತಿವಾದಿಗಳನ್ನು ವಕೀಲ ಕೆ ಜಿ ಸದಾಶಿವಯ್ಯ ಪ್ರತಿನಿಧಿಸಿದ್ದರು.

Related Stories

No stories found.
Kannada Bar & Bench
kannada.barandbench.com