ಸುರಂಗ ಮಾರ್ಗ ಯೋಜನೆ: 'ಲಾಲ್‌ಬಾಗ್‌ನಲ್ಲಿನ ಮರಗಳ ಹನನ ಮಾಡಲಾಗುತ್ತದೆಯೇ?' ಸರ್ಕಾರಕ್ಕೆ ಹೈಕೋರ್ಟ್‌ ಪ್ರಶ್ನೆ

ಪರಿಸರ ಪರಿಣಾಮದ ಮೌಲ್ಯಮಾಪನ (ಇಐಎ) ಆಗಬೇಕು ಎಂಬುದು ಅರ್ಜಿದಾರರ ಮೂಲ ವಾದವಾಗಿದೆ. ಅದನ್ನು ಮಾಡಲಾಗಿದೆಯೇ? ಕಾನೂನಿನ ನಿಬಂಧನೆಗಳನ್ನು ಅನುಸರಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನ್ಯಾಯಾಲಯ ಪರಿಶೀಲಸಲಾಗುವುದು ಎಂದ ಪೀಠ.
Karnataka High Court
Karnataka High Court
Published on

ಬೆಂಗಳೂರು ನಗರದ ಹೆಬ್ಬಾಳದಿಂದ ಸಿಲ್ಕ್‌ಬೋರ್ಡ್‌ವರೆಗಿನ ಉದ್ದೇಶಿತ ಜೋಡಿ ಸುರಂಗ ಮಾರ್ಗದ ಯೋಜನೆಗಾಗಿ ಲಾಲ್‌ಬಾಗ್ ಸಸ್ಯ ತೋಟದೊಳಗಿನ ಮರಗಳನ್ನು ಕಡಿಯಲು ಯೋಜಿಸಲಾಗಿದೆಯೇ ಎಂಬ ಬಗ್ಗೆ ಮಂಗಳವಾರದೊಳಗೆ ತಿಳಿಸುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಈಚೆಗೆ ನಿರ್ದೇಶಿಸಿದೆ.

ಸುರಂಗ ಮಾರ್ಗದ ಟೆಂಡರ್ ರದ್ದು ಕೋರಿ ಇಂದಿರಾನಗರದ ಆದಿಕೇಶವುಲು ರವೀಂದ್ರ ಮತ್ತಿತರರು ಹಾಗೂ ಕಲಾವಿದ ಪ್ರಕಾಶ್ ಬೆಳವಾಡಿ ಸಲ್ಲಿಸಿರುವ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ನೇತೃತ್ವದ ವಿಭಾಗಿಯ ಪೀಠ ವಿಚಾರಣೆ ನಡೆಸಿತು.

ಪ್ರಕಾಶ್ ಬೆಳವಾಡಿ ಪರ ವಕೀಲರಾದ ಸಂಸದ ತೇಜಸ್ವಿ ಸೂರ್ಯ ಅವರು “ಉದ್ದೇಶಿತ ಸುರಂಗ ಮಾರ್ಗ ಯೋಜನೆಗಾಗಿ ಲಾಲ್‌ಬಾಗ್‌ನಲ್ಲಿ ಸುಮಾರು 6.5 ಎಕರೆ ಭೂಮಿಯನ್ನು ಗುರುತಿಸಲಾಗಿದ್ದು, ಅಲ್ಲಿ ಸಾರ್ವಜನಿಕರ ಪ್ರವೇಶ ಹಾಗೂ ನಿರ್ಗಮನವನ್ನು ನಿರ್ಬಂಧಿಸಲಾಗಿದೆ. ಈ ಪ್ರದೇಶದಲ್ಲಿ ಸಾವಿರಾರು ವರ್ಷಗಳಷ್ಟು ಹಳೆಯದಾದ ಬಂಡೆಗಳ ರಚನೆಯೂ ಇದ್ದು, ಯೋಜನೆಯಿಂದ ಅದಕ್ಕೆ ಹಾನಿಯಾಗುವ ಸಾಧ್ಯತೆ ಇದೆ” ಎಂದು ಪೀಠಕ್ಕೆ ವಿವರಿಸಿದರು.

ಜೋಡಿ ಸುರಂಗ ಯೋಜನೆ ಪ್ರಶ್ನಿಸಿ ಮತ್ತೊಂದು ಪಿಐಎಲ್ ಸಲ್ಲಿಸಿರುವ ಆದಿಕೇಶವುಲು ಮತ್ತಿತರರ ಪರ ವಕೀಲರು, ಬೆಂಗಳೂರಿನಲ್ಲಿರುವ ಮರಗಳು ಅಪಾಯದಲ್ಲಿವೆ. ನ್ಯಾಯಾಲಯದ ಅನುಮತಿ ಇಲ್ಲದೆ ಮರಗಳನ್ನು ಕಡಿಯದಂತೆ‌ ಪ್ರತಿವಾದಿಗಳಿಗೆ ನಿರ್ದೇಶಿಸಬೇಕು ಎಂದು ಕೋರಿದರು.

ವಾದ ಆಲಿಸಿದ ಪೀಠವು ಉದ್ದೇಶಿತ ಜೋಡಿ ಸುರಂಗ ಮಾರ್ಗ ಯೋಜನೆಗಾಗಿ ಲಾಲ್‌ಬಾಗ್‌ನಲ್ಲಿ ಮರಗಳನ್ನು ಕಡಿಯುವ ಯಾವುದೇ ಪ್ರಸ್ತಾಪವಿದೆಯೇ ಎಂದು ಸರ್ಕಾರದ ಪರ ವಕೀಲರನ್ನು ಪ್ರಶ್ನಿಸಿತು.

ಇದಕ್ಕೆ ಪ್ರತಿಕ್ರಿಯಿಸಿದ ಸರ್ಕಾರದ ಪರ ವಕೀಲೆ ನಿಲೋಫರ್ ಅಕ್ಬರ್ ಅವರು “ಈ ಸಂಬಂಧ ಸೂಕ್ತ ಮಾಹಿತಿ ಪಡೆದು ಮಂಗಳವಾರ ನ್ಯಾಯಾಲಯಕ್ಕೆ ತಿಳಿಸಲಾಗುವುದು. ಅಲ್ಲಿಯವರೆಗೆ ಅರ್ಜಿ ವಿಚಾರಣೆ ಮುಂದೂಡಬೇಕು” ಎಂದು ಮನವಿ ಮಾಡಿದರು.

ಅಂತಿಮವಾಗಿ, ಪ್ರಕಾಶ್ ಬೆಳವಾಡಿ ಅವರ ಪಿಐಎಲ್ ಸಂಬಂಧ ರಾಜ್ಯ ಸರ್ಕಾರ, ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ), ಬೆಂಗಳೂರು ಸ್ಮಾರ್ಟ್ ಮೂಲಸೌಕರ್ಯ ನಿಯಮಿತ (ಬಿ-ಸ್ಮೈಲ್‌) ಸೇರಿ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿದ ಪೀಠವು ಅರ್ಜಿ ವಿಚಾರಣೆಯನ್ನು ಮಂಗಳವಾರಕ್ಕೆ (ಅಕ್ಟೋಬರ್ 28) ಮುಂದೂಡಿತು.

ಈ ವೇಳೆ ಪೀಠವು ಪರಿಸರ ಪರಿಣಾಮದ ಮೌಲ್ಯಮಾಪನ (ಇಐಎ) ಆಗಬೇಕು ಎಂಬುದು ಅರ್ಜಿದಾರರ ಮೂಲ ವಾದವಾಗಿದೆ. ಅದನ್ನು ಮಾಡಲಾಗಿದೆಯೇ? ಕಾನೂನಿನ ನಿಬಂಧನೆಗಳನ್ನು ಅನುಸರಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನ್ಯಾಯಾಲಯ ಪರಿಶೀಲಸಲಿದೆ ಎಂದು ಮೌಖಿಕವಾಗಿ ನುಡಿಯಿತು.

Kannada Bar & Bench
kannada.barandbench.com