ಅರ್ಹ ಉದ್ಯೋಗಾಕಾಂಕ್ಷಿಗೆ ಅವಕಾಶ ನಿರಾಕರಿಸುವುದು ಕಲ್ಯಾಣ ರಾಜ್ಯದಲ್ಲಿ ಘಟಿಸುವ ಒಳ್ಳೆಯ ವಿಚಾರವಲ್ಲ: ಹೈಕೋರ್ಟ್‌

“ಅರ್ಜಿದಾರರು ಸಲ್ಲಿಸುವ ಮೂಲ ಜಾತಿ ಪ್ರಮಾಣ ಪತ್ರ/ಸಾಮಾಜಿಕ ಸ್ಥಿತಿ ಸರ್ಟಿಫಿಕೇಟ್‌ ಸ್ವೀಕರಿಸಿ ಸೂಪರ್ ನ್ಯೂಮರರಿ ಹುದ್ದೆ ಸೃಷ್ಟಿಸಿ ಲೆಕ್ಕ ಸಹಾಯಕ ಗ್ರೇಡ್ 1 ಹುದ್ದೆಗೆ ನೇಮಕ ಮಾಡಿಕೊಳ್ಳಬೇಕು” ಎಂದು ನ್ಯಾಯಾಲಯ ಹೇಳಿದೆ.
Chief Justice P B Varale and Justice Krishna S. Dixit
Chief Justice P B Varale and Justice Krishna S. Dixit
Published on

“ಅರ್ಹ ಉದ್ಯೋಗ ಆಕಾಂಕ್ಷಿಗೆ ಅವಕಾಶ ನಿರಾಕರಿಸುವುದು ಕಲ್ಯಾಣ ರಾಜ್ಯದಲ್ಲಿ ಘಟಿಸುವ ಒಳ್ಳೆಯ ವಿಚಾರವಲ್ಲ” ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ಬೇಸರಿಸಿದ್ದು, ಅರ್ಜಿದಾರರ ಮೂಲ ಜಾತಿ ಪ್ರಮಾಣ ಪತ್ರ/ಸಾಮಾಜಿಕ ಸ್ಥಿತಿ ಸರ್ಟಿಫಿಕೇಟ್‌ ಪಡೆದು ಮೀಸಲು ವಿಭಾಗದಲ್ಲಿ ಉದ್ಯೋಗ ಕಲ್ಪಿಸುವಂತೆ ನಿರ್ದೇಶಿಸಿದೆ.

ಜಾತಿ ಪ್ರಮಾಣ ಪತ್ರ ಅಸ್ಪಷ್ಟವಾಗಿದೆ ಎಂಬ ಕಾರಣ ನೀಡಿ ತನ್ನನ್ನು ಸಾಮಾನ್ಯ ವರ್ಗದಲ್ಲಿ ನೇಮಕ ಮಾಡಿಕೊಂಡಿದ್ದ ಕರ್ನಾಟಕ ಹಾಲು ಉತ್ಪಾದಕರ ಸಹಕಾರ ಒಕ್ಕೂಟ ಸಂಸ್ಥೆ ಕ್ರಮ ಪ್ರಶ್ನಿಸಿ ಬೆಂಗಳೂರಿನ ನಿವಾಸಿ ಪಿ ಆರ್ ದೇವರಾಜು ಸಲ್ಲಿಸಿದ್ದ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠವು ಪುರಸ್ಕರಿಸಿದೆ.

“ಅರ್ಜಿದಾರರು ಸಲ್ಲಿಸುವ ಮೂಲ ಜಾತಿ ಪ್ರಮಾಣ ಪತ್ರ/ಸಾಮಾಜಿಕ ಸ್ಥಿತಿ (ಸೋಶಿಯಲ್‌ ಸ್ಟೇಟಸ್‌) ದಾಖಲೆ ಸ್ವೀಕರಿಸಿ ಸೂಪರ್ ನ್ಯೂಮರರಿ ಹುದ್ದೆ ಸೃಷ್ಟಿಸಿ ದೇವರಾಜು ಅವರಿಗೆ ಲೆಕ್ಕ ಸಹಾಯಕ ಗ್ರೇಡ್ 1 ಹುದ್ದೆಗೆ ನೇಮಕ ಮಾಡಿಕೊಳ್ಳಬೇಕು” ಎಂದು ನ್ಯಾಯಾಲಯವು ಪ್ರತಿವಾದಿ ಹಾಲು ಉತ್ಪಾದಕರ ಸಹಕಾರ ಒಕ್ಕೂಟ ಸಂಸ್ಥೆಗೆ ನಿರ್ದೇಶನ ನೀಡಿದೆ.

“ಅರ್ಜಿದಾರರನ್ನು ಸಾಮಾನ್ಯ ವರ್ಗದಲ್ಲಿ ನೇಮಕ ಮಾಡಿಕೊಂಡಿರುವ ಪ್ರತಿವಾದಿ ಸಂಸ್ಥೆಯು ತಪ್ಪು ಮಾಡಿದೆ. ಸಣ್ಣ ಸೂಚನೆಯಲ್ಲಿ ಪ್ರಮಾದ ಸರಿಪಡಿಸಿ, ನೈಸರ್ಗಿಕ ನ್ಯಾಯ ಪಾಲಿಸಬಹುದಿತ್ತು. ಆ ಕ್ರಮಕ್ಕೆ ಮುಂದಾಗದಿರುವುದನ್ನು ಒಪ್ಪಲಾಗದು. ಈ ಬೆಳವಣಿಗೆ ಅರ್ಜಿದಾರರ ಪರ ವಕೀಲರು ವಾದಿಸಿರುವಂತೆ ಅನ್ಯಾಯದ ಪರಮಾವಧಿ” ಎಂದು ಪೀಠ ತಿಳಿಸಿದೆ.

“ಜಾತಿ ಪ್ರಮಾಣ ಪತ್ರ ನಕಲಿ ಇದ್ದಲ್ಲಿ ಸ್ವೀಕಾರಾರ್ಹವಲ್ಲ ಎಂಬುದಾಗಿ ಪ್ರತಿವಾದಿ ಸಂಸ್ಥೆ ವಾದಿಸುತ್ತಿಲ್ಲ. ಆದರೆ, ವೆಬ್‌ಸೈಟ್‌ಗೆ ಅಪ್ಲೋಡ್ ಮಾಡುವ ಸಂದರ್ಭದಲ್ಲಿ ಸ್ಪಷ್ಟವಾಗಿಲ್ಲ ಎಂಬುದಾಗಿದೆ.  ಮೇಲ್ಮನವಿದಾರರಿಗೆ ಸ್ಪಷ್ಟವಾದ ಜಾತಿ ಪ್ರಮಾಣ ಪತ್ರ ಸಲ್ಲಿಸಲು ಸೂಚನೆ ನೀಡಿದ್ದರೆ ಸ್ವರ್ಗವೇನು ಬೀಳುತ್ತಿರಲಿಲ್ಲ. ನೇಮಕಾತಿ ಅಧಿಸೂಚನೆಯಲ್ಲಿ ಸಂವಿಧಾನದ 14ನೇ ವಿಧಿಯ ಭಾಗವಾಗಿ ನೈಸರ್ಗಿಕ ನ್ಯಾಯ ತತ್ವ ಹೊರತುಪಡಿಸಿ ಅರ್ಥೈಸುವುದಕ್ಕೆ ಸಾಧ್ಯವಿಲ್ಲ” ಎಂದು ನ್ಯಾಯಾಲಯ ಹೇಳಿದೆ.

“ನೇಮಕಾತಿ ವಿಭಾಗವೂ 12ನೇ ವಿಧಿ ಅಡಿಯಲ್ಲಿ ಸ್ಥಾಪನೆಯಾಗಿರುವ ಸರ್ಕಾರದ ಸಂಸ್ಥೆಯಾಗಿದೆ. ಇದರಿಂದ ಸಮಸ್ಯೆಗೆ ಎದುರಾದವರು ಸಂವಿಧಾನದ 16ನೇ ವಿಧಿ ಅಡಿಯಲ್ಲಿ ಹೋರಾಟ ನಡೆಸುವುದು ಮೂಲಭೂತ ಹಕ್ಕಾಗಿದೆ. ಸಣ್ಣ ಪ್ರಮಾದಗಳನ್ನು ಪ್ರತಿವಾದಿ ಸಂಸ್ಥೆ ಸುಲಭವಾಗಿ ಸರಿಪಡಿಸಬಹುದು. ಬದಲಿಗೆ ಸರಿಪಡಿಸುವಲ್ಲಿ ಆಗುವ ತೊಂದರೆಯನ್ನು ಮುಂದಿಟ್ಟು ವಾದ ಮಂಡಿಸುವುದಕ್ಕೆ ಅವಕಾಶ ನೀಡಲಾಗದು” ಎಂದು ಪೀಠ ಹೇಳಿದೆ.

ಅರ್ಜಿದಾರರ ಪರ ವಕೀಲ ಜೆ ಪ್ರಶಾಂತ್‌ ಅವರು “ಅರ್ಜಿದಾರರ ವಿಚಾರಕ್ಕೆ ಸಂಬಂಧಿಸಿದಂತೆ ಕೆಎಂಎಫ್ ಕ್ರಮ ಅನ್ಯಾಯದಿಂದ ಕೂಡಿದೆ. ಜಾತಿ ಪ್ರಮಾಣ ಪತ್ರವನ್ನು ಸ್ಪಷ್ಟವಾದ ರೀತಿಯಲ್ಲ ಅಪ್ಲೋಡ್ ಮಾಡುವುದಕ್ಕೆ ಅವಕಾಶ ನೀಡಿ ದೋಷವನ್ನು ಸರಿ ಪಡಿಸಲು ನಿರ್ದೇಶನ ನೀಡಬೇಕು” ಎಂದು ಕೋರಿದರು.

ಕರ್ನಾಟಕ ಹಾಲು ಉತ್ಪಾದಕರ ಸಹಕಾರ ಒಕ್ಕೂಟ ಸಂಸ್ಥೆ ಪ್ರತಿನಿಧಿಸಿದ್ದ ಹಿರಿಯ ವಕೀಲ ಎಸ್‌ ಎಸ್‌ ನಾಗಾನಂದ್‌ ಅವರು “ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಿರು ಷರತ್ತುಗಳಲ್ಲಿ ಅಸ್ಪಷ್ಟ ದಾಖಲೆಗಳನ್ನು ಸಲ್ಲಿಸುವವರ ಅರ್ಜಿ ತಿರಸ್ಕರಿಸಲಾಗುವುದು ಎಂದು ಸ್ಟಷ್ಟವಾಗಿ ತಿಳಿಸಲಾಗಿದೆ. ಸಾವಿರಾರು ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಿರುವ ಸಂದರ್ಭದಲ್ಲಿ ಒಬ್ಬ ಅಭ್ಯರ್ಥಿಗೆ ಸಮಸ್ಯೆಯಾಗಿದೆ ಎಂಬ ಕಾರಣದಿಂದ ಅದನ್ನು ಸರಿಪಡಿಸಲಾಗದು” ಎಂದು ಆಕ್ಷೇಪಿಸಿದ್ದರು.

ಪ್ರಕರಣದ ಹಿನ್ನೆಲೆ: 2022ರ ಅಕ್ಟೋಬರ್ 20ರಂದು ಲೆಕ್ಕ ಸಹಾಯಕರ ನೇಮಕಕ್ಕೆ ಕೆಎಂಎಫ್ ಅಧಿಸೂಚನೆ ಹೊರಡಿಸಿತ್ತು. ಅರ್ಜಿದಾರರು ದಾಖಲೆಗಳನ್ನು ಆನ್‌ಲೈನ್‌ ಮೂಲಕ ಅಪ್ಲೋಡ್ ಮಾಡಿದ ಬಳಿಕ ಪರೀಕ್ಷೆಗೆ ಹಾಜರಾಗಿದ್ದರು. ಆದರೆ, ಅವರು ಅಪ್ಲೋಡ್ ಮಾಡಿದ ಜಾತಿ ಪ್ರಮಾಣ ಪತ್ರ ಅಸ್ಪಷ್ಟವಾಗಿತ್ತು. ಪರಿಣಾಮ ಅರ್ಜಿದಾರರನ್ನು ಸಾಮಾನ್ಯ ಅಭ್ಯರ್ಥಿ ಎಂದು ಪರಿಗಣಿಸಲಾಗಿತ್ತು. ಇದರ ವಿರುದ್ಧ ಅರ್ಜಿದಾರರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠ ಅರ್ಜಿ ವಜಾಗೊಳಿಸಿ ಆದೇಶಿಸಿತ್ತು. ಏಕ ಸದಸ್ಯ ಪೀಠದ ಕ್ರಮ ಪ್ರಶ್ನಿಸಿ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಅರ್ಜಿ ಸಲ್ಲಿಸಲಾಗಿತ್ತು.

Attachment
PDF
Devaraj P R Vs Karnataka Co operative Milk Producers Federation Ltd.pdf
Preview
Kannada Bar & Bench
kannada.barandbench.com