ಹಿಂದುತ್ವದ ಕುರಿತು ಟ್ವೀಟ್‌: ನಟ ಚೇತನ್‌ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದ ಬೆಂಗಳೂರಿನ ನ್ಯಾಯಾಲಯ

ಬೆಂಗಳೂರಿನ ಶಿವಕುಮಾರ್‌ ಎಂಬವರು ನೀಡಿದ ದೂರಿನ ಅನ್ವಯ ಶೇಷಾದ್ರಿಪುರ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ 295ಎ ಮತ್ತು 505ಬಿ ಅಡಿ ಎಫ್‌ಐಆರ್‌ ದಾಖಲಿಸಲಾಗಿದೆ.
Actor Chetan
Actor Chetan

ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದ ಆರೋಪದಲ್ಲಿ ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಚೇತನ್‌ ಅವರನ್ನು ಬೆಂಗಳೂರಿನ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಮಂಗಳವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದೆ.

ಚೇತನ್‌ ಅವರ ಜಾಮೀನು ಅರ್ಜಿಯನ್ನು 32ನೇ ಹೆಚ್ಚುವರಿ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಜೆ ಲತಾ ಅವರು ವಿಚಾರಣೆ ನಡೆಸಿದ್ದು, ಮಾರ್ಚ್‌ 23ಕ್ಕೆ ಮುಂದೂಡಿದ್ದಾರೆ.

ಬೆಂಗಳೂರಿನ ಶಿವಕುಮಾರ್‌ ಎಂಬವರು ನೀಡಿದ ದೂರಿನ ಅನ್ವಯ ಶೇಷಾದ್ರಿಪುರ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ 295ಎ ಮತ್ತು 505ಬಿ ಅಡಿ ಎಫ್‌ಐಆರ್‌ ದಾಖಲಿಸಲಾಗಿದೆ. ಇದರ ಆಧಾರದಲ್ಲಿ ಮಂಗಳವಾರ ಬೆಳಿಗ್ಗೆ ಪೊಲೀಸರು ಚೇತನ್‌ ಅವರನ್ನು ಬಂಧಿಸಿ, ಮ್ಯಾಜಿಸ್ಟ್ರೇಟ್‌ ಮುಂದೆ ಹಾಜರುಪಡಿಸಿದ್ದರು. ಪ್ರಕರಣದ ಕುರಿತು ಮಾಹಿತಿ ಪಡೆದ ಮ್ಯಾಜಿಸ್ಟ್ರೇಟ್‌ ಅವರು ಚೇತನ್‌ರನ್ನು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.

ದೂರಿನಲ್ಲಿ ಏನಿದೆ: ಹಿಂದುತ್ವವನ್ನು ಸುಳ್ಳಿನ ಆಧಾರದ ಮೇಲೆ ಕಟ್ಟಲಾಗಿದೆ. ರಾವಣನನ್ನು ಸೋಲಿಸಿ ರಾಮ ಅಯೋಧ್ಯೆಗೆ ಹಿಂದಿರುಗಿದಾಗ ಭಾರತೀಯ ರಾಷ್ಟ್ರ ಪ್ರಾರಂಭವಾಯಿತು ಎಂಬುದು ಸುಳ್ಳು. 1992ರಲ್ಲಿ ಬಾಬರಿ ಮಸೀದಿ ರಾಮನ ಜನ್ಮಭೂಮಿ-ಇದು ಒಂದು ಸುಳ್ಳು. ಈಗ 2023ರಲ್ಲಿ ಉರಿಗೌಡ ಮತ್ತು ನಂಜೇಗೌಡರು ಟಿಪ್ಪುವನ್ನು ಕೊಂದರು- ಇದು ಕೂಡ ಒಂದು ಸುಳ್ಳು. ಹಿಂದುತ್ವವನ್ನು ಸತ್ಯದಿಂದ ಸೋಲಿಸಬಹುದು. ಸತ್ಯವೇ ಸಮಾನತೆ ಎಂಬ ಬರಹವನ್ನು ಚೇತನ್‌ ಅವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಮಾರ್ಚ್‌ 20ರ ರಾತ್ರಿ ಹಂಚಿಕೊಂಡಿದ್ದರು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಅಲ್ಲದೇ, ಹಿಂದುತ್ವದ ಉರಿ-ನಂಜೆ ಪಾತ್ರಕ್ಕೆ ಒಕ್ಕಲಿಗರ ಸಂಘ ಆಕ್ಷೇಪ ವ್ಯಕ್ತಪಡಿಸಿದೆ. ಸ್ವಾತಂತ್ರ್ಯ ಹೋರಾಟಗಾರನನ್ನು (ಟಿಪ್ಪು) ಕೊಂದ ವಿಚಾರದಲ್ಲಿ ಖಳನಾಯಕರಾಗಲು ಬಯಸುವುದಿಲ್ಲ. ಒಕ್ಕಲಿಗರು ಮತ್ತು ಮುಸ್ಲಿಮರ ನಡುವೆ ವೈಮನಸ್ಸು ಸೃಷ್ಟಿಸಲು ಬಯಸುವುದಿಲ್ಲ. ಒಕ್ಕಲಿಗ ಲಾಬಿಯು ಹಿಂದುತ್ವಕ್ಕೆ ಜಾತಿಯಾಧಾರಿತ ಮತಗಳನ್ನು ಚುನಾವಣೆಯಲ್ಲಿ ಕಳೆದುಕೊಳ್ಳಲು ಬಯಸದಿರುವುದು ವಿರೋಧಕ್ಕೆ ಪ್ರಮುಖ ಕಾರಣಗಳಾಗಿವೆ ಎಂದು ವಿವರಿಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.

1927ರಲ್ಲಿ ಮಾರ್ಚ್‌ 20ರಂದು ಬಾಬಾ ಸಾಹೇಬ್‌ ಮತ್ತು ಸಾವಿರಾರು ದಲಿತರು ಮಹಾಡ್‌ ನಗರದ ಚೌಡರ್‌ ಕೆರೆಯಲ್ಲಿ ನೀರು ಕುಡಿದರು. ಅವರೆಲ್ಲರೂ ಅಸ್ಪೃಶ್ಯರಾಗಿದ್ದು, ಬ್ರಾಹ್ಮಣ್ಯದ ಅಡಿಯಲ್ಲಿ ಸಾರ್ವಜನಿಕವಾಗಿ ನೀರಿನಿಂದ ವಂಚಿತರಾಗುವುದನ್ನು ವಿರೋಧಿಸಿದರು. 2023ರಲ್ಲಿ ಕರ್ನಾಟಕದಲ್ಲಿ ನಾವು ಮಹಾಡ್‌ ಸತ್ಯಾಗ್ರಹದಲ್ಲಿ ಪ್ರದರ್ಶಿಸಿದ ಸೈದ್ದಾಂತಿಕ ಸಮಾನತೆಯು ನಮ್ಮ ಹಿಂದುಳಿದವರ ಬಗ್ಗೆ ಕಾಳಜಿ ಮತ್ತು ನಿಸ್ವಾರ್ಥ ಧೈರ್ಯವನ್ನು ಪುನರಾವರ್ತಿಸಬೇಕು ಎಂದು ಹೇಳಿಕೆ ನೀಡಿದ್ದಾರೆ. ಈ ಮೂಲಕ ಬಹುಸಂಖ್ಯಾತ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದ್ದು, ಜಾತಿ-ಜಾತಿಗಳ ನಡುವೆ ವೈಮನಸ್ಸು ಉಂಟು ಮಾಡಿ ಕೋಮುಗಲಭೆಗೆ ಪ್ರಚೋದನೆ ನೀಡಿದ್ದಾರೆ. ಅಲ್ಲದೇ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡಿರುವುದರಿಂದ ಚೇತನ್‌ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ದೂರಿನಲ್ಲಿ ವಿವರಿಸಲಾಗಿದೆ.

Also Read
ದೈವಾರಾಧಾನೆ ಕುರಿತು ಆಕ್ಷೇಪಾರ್ಹ ಹೇಳಿಕೆ ಆರೋಪ: ನಟ ಚೇತನ್‌ ವಿರುದ್ಧದ ಎಫ್‌ಐಆರ್‌ ರದ್ದುಪಡಿಸಲು ಹೈಕೋರ್ಟ್‌ ನಕಾರ

ಹಿಜಾಬ್‌ ಪ್ರಕರಣ ವಿಚಾರಣೆ ನಡೆಸಿದ್ದ ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ಬಗ್ಗೆ ಆಕ್ಷೇಪಾರ್ಹ ಟ್ವೀಟ್‌ ಮಾಡಿದ ಆರೋಪದ ಮೇಲೆ ಬಂಧಿತರಾಗಿದ್ದ ಚೇತನ್‌ ಅವರು ಆನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಕಾಂತಾರ ಸಿನಿಮಾ ಬಗ್ಗೆ ಮಾತನಾಡುವ ವೇಳೆ ದೈವಾರಾಧನೆ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದಡಿ ನಟ ಚೇತನ್‌ ವಿರುದ್ಧ ಬೆಂಗಳೂರಿನ ಶೇಷಾದ್ರಿಪುರಂನಲ್ಲಿ ದಾಖಲಾಗಿರುವ ಎಫ್‌ಐಆರ್‌ ವಜಾ ಮಾಡಲು ಈಚೆಗೆ ಕರ್ನಾಟಕ ಹೈಕೋರ್ಟ್‌ ನಿರಾಕರಿಸಿತ್ತು.

Kannada Bar & Bench
kannada.barandbench.com