ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್ ಅವರ ವಿರುದ್ಧ ಆಕ್ಷೇಪಾರ್ಹ ಟ್ವೀಟ್ ಮಾಡಿ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುವ 22 ವರ್ಷದ ನಿಖಿಲ್ ಭ್ರಾಮೆಗೆ ತುರ್ತು ಪರಿಹಾರ ನೀಡಲು ಬಾಂಬೆ ಹೈಕೋರ್ಟ್ ಸೋಮವಾರ ನಿರಾಕರಿಸಿದೆ [ನಿಖಿಲ್ ಭ್ರಾಮೆ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ].
ಪವಾರ್ ಅವರ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಹಿನ್ನೆಲೆಯಲ್ಲಿ ಮುಂಬೈ ಸುತ್ತಮುತ್ತ ತನ್ನ ವಿರುದ್ಧ ದಾಖಲಾಗಿದ್ದ ವಿವಿಧ ಎಫ್‌ಐಆರ್‌ಗಳನ್ನು ಒಗ್ಗೂಡಿಸಿ ವಿಚಾರಣೆ ನಡೆಸುವಂತೆ, ಥಾಣೆ ಪೊಲೀಸರಿಂದ ಬಂಧಿತನಾಗಿದ್ದ ಆರೋಪಿ ಭಾಮ್ರೆ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದ.
ಸುಪ್ರೀಂ ಕೋರ್ಟ್‌ನ ಹಲವು ತೀರ್ಪುಗಳನ್ನು ಉಲ್ಲೇಖಿಸಿದ ಭಾಮ್ರೆ ಪರ ವಕೀಲ ಸುಭಾಷ್ ಝಾ, ವಿವಿಧ ಎಫ್‌ಐಆರ್‌ಗಳು ದಾಖಲಾಗಿದ್ದರೆ ಅವುಗಳನ್ನು ಒಟ್ಟಿಗೆ ಸೇರಿಸಿ ಒಂದೇ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಬೇಕು ಎಂದು ವಿವರಿಸಿದರು.
ಪ್ರಕರಣದ ವಿಚಾರಣೆ ಮುಂದುವರೆಸುವ ಮೊದಲು ಪ್ರಾಸಿಕ್ಯೂಟಿಂಗ್ ಏಜೆನ್ಸಿಯಿಂದ ಉತ್ತರ ಪಡೆಯುವುದು ಸೂಕ್ತವೆಂದು ನ್ಯಾಯಾಲಯ ಹೇಳಿತು. ಆಗ ಆರೋಪಿಯ ವಾಕ್ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲಾಗಿದೆ ಎಂದು ಝಾ ಒತ್ತಿ ಹೇಳಿದರು.
ಆದರೆ ನ್ಯಾಯಮೂರ್ತಿಗಳಾದ ಎಸ್ ಎಸ್ ಶಿಂಧೆ ಮತ್ತು ಎಂ ಎನ್ ಜಾಧವ್ ಅವರಿದ್ದ ಪೀಠ, ಸರ್ಕಾರಕ್ಕೆ ಪ್ರತಿಕ್ರಿಯೆ ಸಲ್ಲಿಸಲು ಅವಕಾಶ ನೀಡದೆ ಯಾವುದೇ ಪರಿಹಾರ ಒದಗಿಸಲು ಒಲವು ತೋರಲಿಲ್ಲ. (ಮೂಲಭೂತ) ಹಕ್ಕುಗಳ ಜೊತೆಗೆ ಪಾಲಿಸಬೇಕಾದ ಸಮಂಜಸ ನಿರ್ಬಂಧಗಳೂ ಇರುತ್ತವೆ. ನಮಗೆ ಹಕ್ಕುಗಳು ಅನುಭವಿಸಲು ಇವೆಯೇ ಹೊರತು ಮತ್ತೊಬ್ಬರ ಶಾಂತಿಯುತ ಜೀವನದಲ್ಲಿ ಮಧ್ಯಪ್ರವೇಶಿಸಲು ಇಲ್ಲ. ನನಗೆ ಹಕ್ಕಿದೆ ಎಂದ ಮಾತ್ರಕ್ಕೆ ಅದಕ್ಕಿರುವ ನಿರ್ಬಂಧವನ್ನು ಲೆಕ್ಕಿಸದೆ ಅದನ್ನು ಚಲಾಯಿಸಲು ಸಾಧ್ಯವಿಲ್ಲ ಎಂದು ಕೂಡ ಪೀಠ ಇದೇ ವೇಳೆ ಅಭಿಪ್ರಾಯಪಟ್ಟಿತು.
ಪ್ರಕರಣದ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಲಾಗಿದ್ದು ತನಿಖೆಯ ಪ್ರಗತಿ ಸೂಚಿಸಿಸುವ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ಅದು ನಿರ್ದೇಶಿಸಿದೆ.