ನಮ್ಮ ಆದೇಶಕ್ಕೆ ತಲೆಬಾಗಿ, ಅರ್ಜಿದಾರರಿಗೆ ಕಿರುಕುಳ ನೀಡಬೇಡಿ: ತ್ರಿಪುರ ಸರ್ಕಾರಕ್ಕೆ ಚಾಟಿ ಬೀಸಿದ ಸುಪ್ರೀಂ ಕೋರ್ಟ್‌

"ನಾವು ಆದೇಶವೊಂದನ್ನು ನೀಡಿದ ನಂತರ ಅದನ್ನು ಜಾರಿಗೊಳಿಸದಿರಲು ನಿಮಗೆಷ್ಟು ಧೈರ್ಯ?" ಎಂದು ಕಟುವಾಗಿ ಪ್ರಶ್ನಿಸಿದ ಪೀಠ.
Supreme court and Tripura Violence

Supreme court and Tripura Violence

ಇತ್ತೀಚೆಗೆ ರಾಜ್ಯದಲ್ಲಿ ಸಂಭವಿಸಿದ್ದ ಕೋಮು ಹಿಂಸಾರದ ಕುರಿತಾಗಿ ಟ್ವೀಟ್‌ ಮಾಡಿದ್ದ ಪತ್ರಕರ್ತ ಸಮಿವುಲ್ಲಾ ಶಬ್ಬೀರ್‌ ಖಾನ್‌ ಅವರಿಗೆ ನೀಡಿರುವ ಮಧ್ಯಂತರ ರಕ್ಷಣೆಗೆ ಸಂಬಂಧಿಸಿದ ಆದೇಶವನ್ನು ಪಾಲಿಸದ ತ್ರಿಪುರ ಸರ್ಕಾರದ ನಡೆಯ ಬಗ್ಗೆ ಸುಪ್ರೀಂ ಕೋರ್ಟ್‌ ಸೋಮವಾರ ಕೆಂಡಾಮಂಡಲವಾಯಿತು.

ಮಧ್ಯಂತರದ ಆದೇಶದ ರಕ್ಷಣೆ ದೊರೆತ ನಂತರವೂ ತ್ರಿಪುರ ಪೊಲೀಸರು ಅರ್ಜಿದಾರರಿಗೆ ನೋಟಿಸ್‌ ಜಾರಿ ಮಾಡಿ, ಅವರು ಮಾಡಿರುವ ಟ್ವೀಟ್‌ಗಳನ್ನು ತೆಗೆದುಹಾಕುವಂತೆ ಹಾಗೂ ತನಿಖೆಗೆ ಹಾಜರಾಗುವಂತೆ ಆದೇಶಿಸಿರುವ ಬಗ್ಗೆ ಅರ್ಜಿದಾರರು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. ಇದರಿಂದ ಅಸಮಾಧಾನಗೊಂಡ ನ್ಯಾ. ಡಿ ವೈ ಚಂದ್ರಚೂಡ್‌ ಮತ್ತು ನ್ಯಾ. ಸೂರ್ಯಕಾಂತ್ ಅವರನ್ನೊಳಗೊಂಡ ಪೀಠವು, "ನಾವು ಆದೇಶವೊಂದನ್ನು ನೀಡಿದ ನಂತರ ಅದನ್ನು ಜಾರಿಗೊಳಿಸದಿರಲು ನಿಮಗೆಷ್ಟು ಧೈರ್ಯ?... ನಾವು ಪ್ರಕರಣವನ್ನು ನಿರ್ವಹಿಸಿದ್ದೇವೆ ಎಂದ ಮೇಲೆ ಕನಿಷ್ಠ ನಮ್ಮ ಆದೇಶಕ್ಕೆ ತಲೆಬಾಗಿ," ಎಂದು ತ್ರಿಪುರ ಸರ್ಕಾರದ ಪರ ಹಾಜರಿದ್ದ ವಕೀಲರಿಗೆ ಕಠಿಣವಾಗಿ ಹೇಳಿತು.

ಮುಂದುವರೆದು, ಅರ್ಜಿದಾರರಿಗೆ ಕಿರುಕುಳ ನೀಡದಂತೆ ತ್ರಿಪುರ ಸರ್ಕಾರಕ್ಕೆ ಸೂಚಿಸಿದ ಪೀಠವು ಒಂದೊಮ್ಮೆ ನ್ಯಾಯಾಲಯದ ಆದೇಶವನ್ನು ಪಾಲಿಸದಿದ್ದರೆ ಮುಂದಿನ ವಿಚಾರಣೆ ವೇಳೆ ರಾಜ್ಯ ಸರ್ಕಾರದ ಗೃಹ ಕಾರ್ಯದರ್ಶಿಯವರೇ ಖುದ್ದು ಹಾಜರಾಗಲು ಸೂಚಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿತು.

ಖಾನ್‌ ಅವರ ಟ್ವೀಟ್‌ಗಳಿಗೆ ಸಂಬಂಧಿಸಿದಂತೆ ಯಾವುದೇ ಕ್ರಮಕ್ಕೆ ಮುಂದಾಗದಂತೆ ಸಂಯಮವಹಿಸಲು ನ್ಯಾಯಾಲಯವು ಜನವರಿ 10ರಂದು ಸೂಚಿಸಿದ್ದನ್ನು ಇಲ್ಲಿ ನೆನೆಯಬಹುದು.

Related Stories

No stories found.
Kannada Bar & Bench
kannada.barandbench.com