ನ್ಯಾಯಾಂಗ ನಿಂದನೆ ಪ್ರಕರಣದಿಂದ ಚಿತ್ರ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಯನ್ನು ಮುಕ್ತಗೊಳಿಸಿದ ದೆಹಲಿ ಹೈಕೋರ್ಟ್

ನ್ಯಾಯಾಲಯಕ್ಕೆ ಹಾಜರಾಗಿ ಅಗ್ನಿಹೋತ್ರಿ ಅವರು ಬೇಷರತ್ ಕ್ಷಮೆಯಾಚಿಸಿದ ಬಳಿಕ ಅವರನ್ನು ಪ್ರಕರಣದಿಂದ ಮುಕ್ತಗೊಳಿಸಿದ ನ್ಯಾಯಾಲಯ ಮತ್ತೊಬ್ಬ ಆರೋಪಿ ರಂಗನಾಥನ್‌ ಅವರು ಸಹ ಇದನ್ನೇ ಅನುಸರಿಸುವಂತೆ ತಿಳಿಹೇಳಿತು.
Vivek Agnihotri and Anand Ranganathan
Vivek Agnihotri and Anand Ranganathan
Published on

ದೆಹಲಿ ಹೈಕೋರ್ಟ್‌ನ ಈ ಹಿಂದಿನ ನ್ಯಾಯಮೂರ್ತಿ ಮತ್ತು ಒರಿಸ್ಸಾ ಹೈಕೋರ್ಟ್‌ನ ಹಾಲಿ ಮುಖ್ಯ ನ್ಯಾಯಮೂರ್ತಿ ಎಸ್‌ ಮುರಳೀಧರ್‌ ಅವರ ವಿರುದ್ಧ ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಚಿತ್ರ ನಿರ್ಮಾಪಕ ವಿವೇಕ್ ಅಗ್ನಿಹೋತ್ರಿ ಅವರನ್ನು ನ್ಯಾಯಾಂಗ ನಿಂದನೆ ಪ್ರಕರಣದಿಂದ ದೆಹಲಿ ಹೈಕೋರ್ಟ್ ಸೋಮವಾರ ಮುಕ್ತಗೊಳಿಸಿದೆ.

ಸಾಮಾಜಿಕ ಹೋರಾಟಗಾರ ಗೌತಮ್ ನವಲಖಾ ಅವರಿಗೆ ಜಾಮೀನು ನೀಡಿದ್ದಕ್ಕಾಗಿ ನ್ಯಾಯಮೂರ್ತಿ ಮುರಳೀಧರ್ ಅವರ ವಿರುದ್ಧ ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಟೀಕಾಪ್ರಹಾರ ನಡೆಸಿದ್ದರು. ಈ ಸಂಬಂಧ ನ್ಯಾಯಾಲಯ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಕ್ರಿಮಿನಲ್‌ ನ್ಯಾಯಾಂಗ ನಿಂದನೆ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಿದ್ಧಾರ್ಥ್‌ ಮೃದುಲ್‌ ಮತ್ತು ವಿಕಾಸ್‌ ಮಹಾಜನ್‌ ಅವರಿದ್ದ ವಿಭಾಗೀಯ ಪೀಠ  ಈ ಆದೇಶ ನೀಡಿತು.

ʼಟ್ವಿಟರ್‌ ದುಃಖದ ದೊಡ್ಡ ಮೂಲವಾಗಿದೆʼ ಎಂದು ನ್ಯಾಯಮೂರ್ತಿ ಮೃದುಲ್‌ ವಿಚಾರಣೆ ವೇಳೆ ತಿಳಿಸಿದರು. ಈ ಸಂದರ್ಭದಲ್ಲಿ ಅಗ್ನಿಹೋತ್ರಿ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಪ್ರಕರಣ ಕೈಗೆತ್ತಿಕೊಂಡ ಪೀಠ ಇನ್ನೊಬ್ಬ ಆರೋಪಿ, ವಿಜ್ಞಾನಿ ಆನಂದ್‌ ರಂಗನಾಥನ್‌ ಕೂಡ ಹಾಜರಾಗುವಂತೆ ಸೂಚಿಸಿತು.

ಆರ್‌ಎಸ್‌ಎಸ್‌ ಪ್ರತಿಪಾದಕ ಎಸ್ ಗುರುಮೂರ್ತಿ ವಿರುದ್ಧ ದಾಖಲಾಗಿರುವ ಮತ್ತೊಂದು ಅವಹೇಳನ ಪ್ರಕರಣವನ್ನು ನೆನೆಯುತ್ತಾ, "ತಾವು ಜಾಗ್ರತೆಯಿಂದಿರಬೇಕು ಎಂಬುದು ದೇಶದ ಪ್ರತಿಯೊಬ್ಬ ನಾಗರಿಕನಿಗೂ ತಿಳಿದಿರಲಿ. ನಾವು ನ್ಯಾಯಯುತ ಮತ್ತು ಸಮಂಜಸ ಟೀಕೆಗಳನ್ನು ಒಪುತ್ತೇವೆ. ಇದು ನಾವು ಕಾರ್ಯ ನಿರ್ವಹಿಸುವ ರೀತಿ" ಎಂದು ನ್ಯಾಯಾಲಯ ಹೇಳಿತು.

ಗುರುಮೂರ್ತಿ ಅವರು ಪಶ್ಚಾತ್ತಾಪ ವ್ಯಕ್ತಪಡಿಸಿ ಬೇಷರತ್‌ ಕ್ಷಮೆ ಕೇಳಿದ್ದಾರೆ. ನ್ಯಾ. ಗೊಗೊಯ್‌ ಪ್ರಕರಣದ ತೀರ್ಪಿನಲ್ಲಿ "ನ್ಯಾಯಾಲಯಗಳು ತಮ್ಮ ಘನತೆ ಕಾಪಾಡಿಕೊಳ್ಳಲು ನ್ಯಾಯಾಂಗ ನಿಂದನೆ ಶಿಕ್ಷೆ ವಿಧಿಸುವುದಿಲ್ಲ ಎಂದು ಹೇಳಲಾಗಿದೆ. ನಮಗೆ ಘನತೆ ಎಂಬುದು ಜನ ಏನು ಹೇಳುತ್ತಾರೋ ಅದರಿಂದ ಬರುವುದಿಲ್ಲ. ಬದಲಿಗೆ ನಮ್ಮ ಕರ್ತವ್ಯಗಳಿಂದ ಬರುತ್ತದೆ" ಎಂದು ನುಡಿಯಿತು.

ಅಂತೆಯೇ ನ್ಯಾಯಾಲಯಕ್ಕೆ ಹಾಜರಾಗಿ ಅಗ್ನಿಹೋತ್ರಿ ಅವರು ಬೇಷರತ್‌ ಕ್ಷಮೆಯಾಚಿಸಿದ ಬಳಿಕ ಅವರನ್ನು ಪ್ರಕರಣದಿಂದ ಮುಕ್ತಗೊಳಿಸಿದ ನ್ಯಾಯಾಲಯ ಇನ್ನೊಬ್ಬ ಆರೋಪಿ ರಂಗನಾಥನ್‌ ಅವರಿಗೂ ಇದೇ ಹಾದಿ ಅನುಸರಿಸಲು ತಿಳಿಸಿತು.

Kannada Bar & Bench
kannada.barandbench.com