ಭಾರತದಲ್ಲಿ ಉದ್ಭವಿಸುವ ಅಹವಾಲುಗಳನ್ನು ನಿರ್ವಹಿಸಲು ಟ್ವಿಟರ್‌ನಿಂದ ನೇಮಿಸಲಾದ ವ್ಯಕ್ತಿಯು ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ವಾಸಿಸುತ್ತಿದ್ದಾರೆ. ಆ ಮೂಲಕ ಮಾಹಿತಿ ತಂತ್ರಜ್ಞಾನ (ಮಧ್ಯಸ್ಥ ವೇದಿಕೆಗಳಿಗೆ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ಸಂಹಿತೆ) ನಿಯಮಾವಳಿ - 2021 ಅನ್ನು ಟ್ವಿಟರ್ ಅನುಸರಣೆ ಮಾಡುತ್ತಿಲ್ಲ ಎಂದು ಕೇಂದ್ರ ಸರ್ಕಾರವು ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.
ಈ ಸಂಬಂಧ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಕೇಂದ್ರ ಸಚಿವಾಲಯವು ದೆಹಲಿ ಹೈಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಸಿದ್ದು, “ಐಟಿ ನಿಯಮಾವಳಿಗಳು - 2021ಅನ್ನು ಅನುಸರಣೆ ಮಾಡಲು ನೀಡಲಾಗಿದ್ದ ಮೂರು ತಿಂಗಳ ಸಮಯಾವಕಾಶ ಮೇ 26, 2021ಕ್ಕೆ ಮುಗಿದಿದೆ. ಹೀಗಿದ್ದರೂ, ಎರಡನೇ ಪ್ರತಿವಾದಿ ಟ್ವಿಟರ್ ಇದರ ಪೂರ್ಣ ಅನುಸರಣೆ ಮಾಡುವಲ್ಲಿ ವಿಫಲವಾಗಿದೆ” ಎನ್ನಲಾಗಿದೆ.
ಮುಸ್ಲಿಂ ಪುರುಷರೊಬ್ಬರನ್ನು ಥಳಿಸುತ್ತಿರುವ ಗಾಜಿಯಾಬಾದ್‌ನ ವಿಡಿಯೋ ಒಂದನ್ನು ಕೆಲ ವ್ಯಕ್ತಿಗಳು ಟ್ವೀಟ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಿತ್ ಆಚಾರ್ಯ ಎನ್ನುವರು ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಅಫಿಡವಿಟ್ ಸಲ್ಲಿಸಿದೆ.
ವಿಡಿಯೊ ಸಂಬಂಧ ತಾವು ಟ್ವಿಟರ್‌ಗೆ ದೂರು ನೀಡಲು ಮುಂದಾದಾಗ ಟ್ವಿಟರ್‌ನ ಅಹವಾಲು ಅಧಿಕಾರಿಯ ಸಂಪರ್ಕ ಮಾಹಿತಿಯು ಯುಎಸ್‌ನಲ್ಲಿರುವುದನ್ನು ತಾವು ಗಮನಿಸಿದ್ದಾಗಿ ಅರ್ಜಿದಾರರು ತಿಳಿಸಿದ್ದಾರೆ. ಈ ಕಾರಣಕ್ಕಾಗಿ, ನೂತನ ಐಟಿ ನಿಯಮಾವಳಿಗಳ ಅನ್ವಯ ಸ್ಥಾನಿಕ ಅಹವಾಲು ಅಧಿಕಾರಿಯನ್ನು ನೇಮಿಸಲು ಟ್ವಿಟರ್‌ಗೆ ನಿರ್ದೇಶಿಸುವಂತೆ ಕೋರಿ ಅವರು ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು.
ಈ ಮೊದಲು ಆಚಾರ್ಯ ದೆಹಲಿಯ ತಿಲಕ್ ಮಾರ್ಗ್ ಪೊಲೀಸ್ ಠಾಣೆಯಲ್ಲಿ ಟ್ವಿಟರ್ ಇಂಡಿಯಾದ ಮುಖ್ಯಸ್ಥ ಮನೀಶ್ ಮಹೇಶ್ವರಿ, ನಟಿ ಸ್ವರಾ ಭಾಸ್ಕರ್, ಪತ್ರಕರ್ತ ಅರ್ಫಾ ಖಾನುಂ ಶೇರ್ವಾನಿ ಮತ್ತು ಮೊಹಮದ್ ಆಸಿಫ್ ಖಾನ್ ವಿರುದ್ಧ ಪ್ರಶ್ನಾರ್ಹವಾದ ವಿಡಿಯೋ ವಿಚಾರವಾಗಿ ದೂರು ದಾಖಲಿಸಿದ್ದರು.
ತನ್ನ ಅಫಿಡವಿಟ್‌ನಲ್ಲಿ ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಟ್ವಿಟರ್ ಗುರುತರ ಸಾಮಾಜಿಕ ಮಾಧ್ಯಮ ಮಧ್ಯಸ್ಥ ವೇದಿಕೆ (ಎಸ್‌ಎಸ್‌ಎಂಐ) ಅಡಿ ಬರುತ್ತದೆ. ಹಾಗಾಗಿ, ಅದು 2021 ರ ಐಟಿ ನಿಯಮಾವಳಿಗಳ ಅನ್ನು ಅನುಸರಣೆ ಮಾಡುವ ಬಾಧ್ಯತೆ ಹೊಂದಿದೆ ಎಂದು ತಿಳಿಸಿದೆ.
ಮುಂದುವರೆದು, ಟ್ವಿಟರ್‌ನ ಮಧ್ಯಂತರ ಸ್ಥಳೀಯ ಅಹವಾಲು ಅಧಿಕಾರಿ ಮತ್ತು ಮಧ್ಯಂತರ ನೋಡಲ್ ಸಂಪರ್ಕಾಧಿಕಾರಿಗಳು ತಮ್ಮ ಹುದ್ದೆಗಳಿಗೆ ರಾಜೀನಾಮೆ ಕೊಟ್ಟಿದ್ದಾರೆ. ಇದರ ನಂತರ ಭಾರತದ ದೂರುಗಳನ್ನು ಅಮೆರಿಕದಲ್ಲಿರುವ ವ್ಯಕ್ತಿಯು ನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ, ಕ್ಯಾಲಿಫೋರ್ನಿಯಾ ಮೂಲದ ಜೆರೆಮಿ ಕೆಸೆಲ್ ಎನ್ನುವವರನ್ನು ಭಾರತದ ನೂತನ ಅಹವಾಲು ಅಧಿಕಾರಿಯಾಗಿ ಟ್ವಿಟರ್ ನೇಮಿಸಿದೆ ಎಂದು ತಿಳಿಸಿದೆ.
ಟ್ವಿಟರ್ ನೂತನ ಐಟಿ ನಿಯಮಾವಳಿಗಳನ್ನು ಈ ಕೆಳಗಿನ ವಿಚಾರಗಳಲ್ಲಿ ಅನುಸರಣೆ ಮಾಡಿಲ್ಲ ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ:
ಅ) ಮುಖ್ಯ ಅನುಸರಣಾ ಅಧಿಕಾರಿಯನ್ನು ನೇಮಕ ಮಾಡಿಲ್ಲ
ಆ) ಸ್ಥಾನಿಕ ಅಹವಾಲು ಅಧಿಕಾರಿಯ ಹುದ್ದೆ ಖಾಲಿ ಇದೆ.
ಇ) ನೋಡಲ್ ಸಂಪರ್ಕ ವ್ಯಕ್ತಿಯ ಹುದ್ದೆಯೂ (ಮಧ್ಯಂತರ ಆಧಾರದಲ್ಲಿಯೂ ಸಹ) ಖಾಲಿ ಇದೆ
ಈ) ಮೇ 29, 2021ರಂತೆ ಟ್ವಿಟರ್ ವೆಬ್‌ತಾಣದಲ್ಲಿ ತೋರಿಸಲಾಗಿರುವ ಭೌತಿಕ ವಿಳಾಸವು ಲಭ್ಯವಿಲ್ಲ.
ಟ್ವಿಟರ್ ಇದೇ ರೀತಿ ಐಟಿ ನಿಯಮಾವಳಿಗಳ ಅನುಸರಣೆ ಮಾಡದೆ ಮುಂದುವರೆದರೆ ಅದನ್ನು ಮಾಹಿತಿ ತಂತ್ರಜ್ಞಾನ ಕಾಯಿದೆಯಡಿ ರಕ್ಷಣೆ ಮಾಡಲು ಸಾಧ್ಯವಾಗದು ಎಂದು ಅಫಿಡವಿಟ್‌ನಲ್ಲಿ ಅಂತಿಮವಾಗಿ ಹೇಳಲಾಗಿದೆ.