ಪ್ರಸ್ತುತ ಮಂಡೋಲಿ ಜೈಲಿನಲ್ಲಿರುವ ತನ್ನನ್ನು ಬೇರೆ ಜೈಲಿಗೆ ವರ್ಗಾಯಿಸುವಂತೆ ಕೋರಿ ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪಿ ಸುಕೇಶ್ ಚಂದ್ರಶೇಖರ್ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಶುಕ್ರವಾರ ದೆಹಲಿ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ [ಸುಕೇಶ್ ಚಂದ್ರಶೇಖರ್ ಅಲಿಯಾಸ್ ಸುಕೇಶ್ ಇನ್ನಿತರರು ಹಾಗೂ ದೆಹಲಿ ಸರ್ಕಾರ ನಡುವಣ ಪ್ರಕರಣ].
ತಾನು ನೀಡಿದ್ದ ದೂರು ಹಿಂಪಡೆಯುವಂತೆ ಒತ್ತಡ ಹೇರುವ ಸಲುವಾಗಿ ಎರಡು ಕ್ಯಾಮೆರಾಗಳ ಮೂಲಕ ತನ್ನ ಮೇಲೆ ನಿಗಾ ಇರಿಸಲಾಗಿದ್ದು ಬೆದರಿಕೆ ಸಂದೇಶಗಳು ಬರುತ್ತಿವೆ ಎಂದು ಸುಕೇಶ್ ಆರೋಪಿಸಿದ್ದಾನೆ.
ನಿರಂತರವಾಗಿ 2 ಕ್ಯಾಮೆರಾಗಳು ಮತ್ತು ಆರು ಬಾಡಿ ಕ್ಯಾಮೆರಾಗಳ ಮೂಲಕ ನನ್ನ ಮೇಲೆ ನಿಗಾ ಇರಿಸಲಾಗಿದೆ. ಯಾರೇ ಆದರೂ ಹೀಗೆ ಬದುಕುವುದು ಹೇಗೆ ಸಾಧ್ಯ. ಇದು ಸಂವಿಧಾನದ 21ನೇ ವಿಧಿಯಡಿ ಒದಗಿಸಲಾದ ನನ್ನ ಜೀವಿಸುವ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಸುಕೇಶ್ ಪರ ವಕೀಲ ಪಿ ಎಸ್ ಪಟ್ವಾಲಿಯಾ ವಾದಿಸಿದ್ದಾರೆ.
ಆರಂಭದಲ್ಲಿ ಮನವಿ ಪರಿಗಣಿಸದ ನ್ಯಾಯಮೂರ್ತಿಗಳಾದ ಬೇಲಾ ತ್ರಿವೇದಿ ಮತ್ತು ಪಂಕಜ್ ಮಿತ್ತಲ್ ಅವರಿದ್ದ ಪೀಠ ಆರೋಪಿ ಒಂದು ಜೈಲಿನಿಂದ ಮತ್ತೊಂದು ಜೈಲಿಗೆ ವರ್ಗಾವಣೆ ಕೋರುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸಿತು.
ಇದಕ್ಕೆ ಪ್ರತಿಕ್ರಿಯಿಸಿದ ಪಟ್ವಾಲಿಯಾ ಅವರು, ಆದರೆ ಚಂದ್ರಶೇಖರ್ ತಿಹಾರ್ ಜೈಲಿನಲ್ಲಿದ್ದಾಗ ಸುಲಿಗೆ ಆರೋಪ ಮಾಡಿದ್ದರು. ಆಗ ವಿಚಾರಣೆ ನಡೆಸಿದ್ದ ನ್ಯಾಯಾಲಯ ಸುಕೇಶ್‌ನನ್ನು ಮಂಡೋಲಿ ಜೈಲಿಗೆ ವರ್ಗಾಯಿಸಿತ್ತು ಎಂದರು.
ತಮ್ಮ ದೂರನ್ನು ಆಧರಿಸಿ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ ಅವರು ಮಾಜಿ ಸಚಿವ ಸತ್ಯೇಂದ್ರ ಜೈನ್ ವಿರುದ್ಧ ಸಿಬಿಐ ತನಿಖೆಗೆ ಶಿಫಾರಸು ಮಾಡಿದ್ದಾರೆ. ಜೀವ ಬೆದರಿಕೆಯ ಆತಂಕ ಇದ್ದು ಚಂದ್ರಶೇಖರ್ ಅವರ ವಿರುದ್ಧ ಈ ಹಿಂದೆ ಆರೋಪ ಮಾಡಿದ್ದ ಧನಂಜಯ್ ರಾವತ್ ಅವರನ್ನು ಈಗ ಮಂಡೋಲಿಯ ಸೂಪರಿಂಟೆಂಡೆಂಟ್ ಆಗಿ ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದರು.
ಆಪ್ ಸರ್ಕಾರ ಆಡಳಿತ ನಡೆಸುತ್ತಿರುವ ಪಂಜಾಬ್ ಮತ್ತು ದೆಹಲಿ ರಾಜ್ಯಗಳನ್ನು ಹೊರತುಪಡಿಸಿ ಬೇರೆ ರಾಜ್ಯಗಳ ಜೈಲಿಗೆ ತನ್ನನ್ನು ವರ್ಗಾಯಿಸಬೇಕು ಎಂದು ಸುಕೇಶ್ ಪರ ವಕೀಲರು ಕೋರಿದರು.
ಆದರೆ ಹೊಸ ಜೈಲು ಅಧೀಕ್ಷಕರಿಗೆ ಆರೋಪಗಳು ಹೇಗೆ ಸಂಬಂಧಿಸಿವೆ. ಬೆದರಿಕೆ ಕರೆಗಳು ಸುಕೇಶ್ ತಾಯಿಗೆ ಬಂದಿರುವುದರಿಂದ ಸುಕೇಶ್‌ನನ್ನು ಬೇರೆ ಜೈಲಿಗೆ ವರ್ಗಾಯಿಸುವುದರಿಂದ ಬೆದರಿಕೆ ಬರುವುದು ನಿಲ್ಲುತ್ತದೆಯೇ ಎಂದು ನ್ಯಾಯಾಲಯ ಪ್ರಶ್ನಿಸಿತು.
ಸುಕೇಶ್ ಸುರಕ್ಷತೆಗಾಗಿ ಕ್ಯಾಮೆರಾ ಅಳವಡಿಸಲಾಗಿದೆ ಎಂಬುದನ್ನು ನ್ಯಾಯಾಲಯಕ್ಕೆ ತಿಳಿಸಲಾಯಿತು. ನಂತರ ನ್ಯಾಯಾಲಯ ಪ್ರಕರಣಕ್ಕೆ ಸಂಬಂಧಿಸಿದಂತೆ ನೋಟಿಸ್ ನೀಡಿತು.
ವಂಚನೆ, ಸುಲಿಗೆ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪದಡಿ ಸುಕೇಶ್ ಪ್ರಸ್ತುತ ಬಂಧನದಲ್ಲಿದ್ದಾನೆ. ಜೈಲಿನೊಳಗೆ ಅದ್ದೂರಿ ಜೀವನ ಶೈಲಿ ನಡೆಸಲು ₹ 12.5 ಕೋಟಿ ರೂಪಾಯಿ ಲಂಚ ನೀಡುವಂತೆ ಕೇಳಿದ್ದ ತಿಹಾರ್ ಜೈಲು ಅಧಿಕಾರಿಗಳ ಹೆಸರನ್ನು ಬಹಿರಂಗಪಡಿಸುವಂತೆ ನ್ಯಾಯಾಲಯ ಆತನನ್ನು ಕೇಳಿತ್ತು. ಆಗಸ್ಟ್ 2022ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ಆದೇಶದ ಮೇರೆಗೆ ಆತನನ್ನು ಮಂಡೋಲಿ ಜೈಲಿಗೆ ವರ್ಗಾಯಿಸಲಾಗಿತ್ತು.