
ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಬಿಜೆಪಿ ಸದಸ್ಯರಾಗಿದ್ದ ಯೋಗೀಶ್‌ಗೌಡ ಕೊಲೆ ಪ್ರಕರಣದ ಆರೋಪಿಯಾದ ಧಾರವಾಡ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಶಾಸಕ ವಿನಯ ಕುಲಕರ್ಣಿ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಎರಡು ದಿನಗಳ ತಾತ್ಕಾಲಿಕ ಜಾಮೀನು ಮಂಜೂರು ಮಾಡಿದೆ.
ಈ ಸಂಬಂಧ ವಿನಯ ಕುಲಕರ್ಣಿ ಸಲ್ಲಿಸಿದ್ದ ಅರ್ಜಿಯನ್ನು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್ ಮಂಗಳವಾರ ಭಾಗಶಃ ಪುರಸ್ಕರಿಸಿ ಆದೇಶಿಸಿದ್ದಾರೆ.
ವಿಚಾರಣೆ ವೇಳೆ ವಿನಯ ಕುಲಕರ್ಣಿ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಸಿ ವಿ ನಾಗೇಶ್, "ವಿನಯ ಕುಲಕರ್ಣಿ ಅವರ ಪುತ್ರನಿಗೆ ರಸ್ತೆ ಅಪಘಾತದಲ್ಲಿ ಪೆಟ್ಟಾಗಿದ್ದ ಕಾರಣ ಕಾಲಿನ ಮೂಳೆಯ ಶಸ್ತ್ರಚಿಕಿತ್ಸೆ ಗುರುವಾರ (ಸೆ.09) ನಡೆಯಲಿದೆ. ಈ ಸಂದರ್ಭದಲ್ಲಿ ಅರ್ಜಿದಾರರು ಹಾಜರಿರಲು 10 ದಿನಗಳ ಜಾಮೀನು ಮಂಜೂರು ಮಾಡಬೇಕು" ಎಂದು ಕೋರಿದ್ದರು.
ಇದನ್ನು ಭಾಗಶಃ ಮಾನ್ಯ ಮಾಡಿರುವ ನ್ಯಾಯಾಧೀಶರು, "ಅರ್ಜಿದಾರರು ಇಬ್ಬರ ಭದ್ರತೆ ನೀಡಬೇಕು. ಬೆಂಗಳೂರು ನಗರವನ್ನು ಬಿಟ್ಟು ಹೊರಗೆ ಹೋಗುವಂತಿಲ್ಲ. ಸಾಕ್ಷಿಗಳಿಗೆ ಬೆದರಿಕೆ ಹಾಕುವಂತಿಲ್ಲ. ಯಾವುದೇ ಕಡತಗಳಿಗೆ ಸಹಿ ಹಾಕುವಂತಿಲ್ಲ. ಯಾವುದೇ ಸಮಾವೇಶ, ಸಭೆ–ಸಮಾರಂಭ ನಡೆಸುವಂತಿಲ್ಲ. ಇದೇ 11ರ ಸಂಜೆ 5:00 ಗಂಟೆ ಒಳಗೆ ತಪ್ಪದೇ ನ್ಯಾಯಾಲಯಕ್ಕೆ ಶರಣಾಗತಕ್ಕದ್ದು" ಎಂಬ ಷರತ್ತುಗಳನ್ನು ವಿಧಿಸಿ ಎರಡು ದಿನಗಳ ಜಾಮೀನು ಮಂಜೂರು ಮಾಡಿದ್ದಾರೆ.
ಪ್ರಕರಣದ ಹಿನ್ನೆಲೆ: ಧಾರವಾಡ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2016ರ ಜೂನ್ 15ರಂದು ಯೋಗೀಶ್‌ಗೌಡ ಅವರ ಕೊಲೆ ನಡೆದಿತ್ತು. ಈ ಪ್ರಕರಣವನ್ನು ಸಿಬಿಐ ತನಿಖೆ ನಡೆಸಿದ್ದು, ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ.
ಪ್ರಕರಣದ ಪ್ರಮುಖ ಆರೋಪಿ ಧಾರವಾಡ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿ ಅವರು 2025ರ ಜೂನ್ 13ರಿಂದ ನ್ಯಾಯಾಂಗ ಬಂಧನದಲ್ಲಿದ್ದು ಪ್ರಕರಣದ ವಿಚಾರಣೆ ಎದುರಿಸುತ್ತಿದ್ದಾರೆ. ನ್ಯಾಯಾಲಯ ತ್ವರಿತಗತಿಯಲ್ಲಿ ವಿಚಾರಣೆ ನಡೆಸುತ್ತಿದೆ. ವಿನಯ ಕುಲಕರ್ಣಿ ಪರ ಹೈಕೋರ್ಟ್ ವಕೀಲ ಎಸ್ ಸುನಿಲ್ ಕುಮಾರ್ ವಕಾಲತ್ತು ವಹಿಸಿದ್ದಾರೆ.