ಭಾರತದಲ್ಲಿ 25 ಕೋಟಿಗೂ ಹೆಚ್ಚು ಶಾಲಾ ಮಕ್ಕಳ ಪಾಲಿಗೆ ಕಳೆದ 16 ತಿಂಗಳುಗಳಿಂದ ಪಾಠಶಾಲೆಗಳು ಮುಚ್ಚಿವೆ. ಇಷ್ಟು ದೀರ್ಘಕಾಲ ಶಾಲೆಗಳು ಇಲ್ಲದಿರುವುದು ನಮ್ಮ ಮಕ್ಕಳಿಗೆ ಅದರಲ್ಲಿಯೂ ಆರಂಭಿಕ ವರ್ಷಗಳಲ್ಲಿ ಕಲಿಯುತ್ತಿರುವವರಿಗೆ ಅಪಾರ ಹಾನಿ ಉಂಟು ಮಾಡಿದೆ.
ಇತ್ತೀಚಿನವರೆಗೂ, ಭಾರತದಲ್ಲಿ ಶಾಲೆಗಳು ಸ್ಥಗಿತಗೊಂಡಿರುವ ಬಗ್ಗೆ ನೈಜ ಗಮನ ಹರಿದಿರಲಿಲ್ಲ. ಧಾರಿಣಿ ಮಾಥುರ್ ಮತ್ತು ತಾನ್ಯಾ ಅಗರ್‌ವಾಲ್ ಎಂಬ ಇಬ್ಬರು ವಕೀಲರು ಹಾಗೂ ಚಿಕ್ಕ ಮಕ್ಕಳ ತಾಯಂದಿರು ಜುಲೈ 12ರಂದು ನಡೆಯಲಿರುವ ಸಂವಾದ ಕಾರ್ಯಕ್ರಮದ ಹಿಂದಿನ ಪ್ರೇರಣೆ ಕುರಿತು ʼಬಾರ್ ಅಂಡ್ ಬೆಂಚ್ʼ ಜೊತೆ ಮಾತನಾಡಿದ್ದಾರೆ.
ತಾನ್ಯಾ ಮಾತನಾಡುತ್ತಾ “ನಾವು ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ವಾಟ್ಸಾಪ್ ಗ್ರೂಪ್‌ನ ಭಾಗವಾಗಿದ್ದು ಭಾರತ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆ (ಬೆಂಗಳೂರು) ಹಾರ್ವರ್ಡ್ ಕಾನೂನು ಶಾಲೆ ಹಾಗೂ ಅತಿ ಮುಖ್ಯವಾಗಿ ಅದೇ ಶಾಲೆಯ ಕಿರಿಯ ಮಕ್ಕಳ ಕುರಿತಂತೆ ಎಷ್ಟೊಂದು ಸಮಾನ ವಿಚಾರಗಳಿವೆ ಎಂದು ಕಂಡುಕೊಂಡೆವು. ನಾವು ಆಗಾಗ ನಮ್ಮ ಮಕ್ಕಳನ್ನು ಬೆಳೆಸಲಾಗದ ಬಗ್ಗೆ, ಕೆಲಸದ ಅನಿವಾರ್ಯತೆ ಜೊತೆಗೆ ಮನೆ-ಕಲಿಕೆ ಹಾಗೂ ಮಕ್ಕಳ ನಡವಳಿಕೆಯಲ್ಲಾಗುತ್ತಿರುವ ಬದಲಾವಣೆಗಳ ಬಗ್ಗೆ ಮಾತನಾಡಿಕೊಳ್ಳುತ್ತಿದ್ದೆವು. ನಮ್ಮ ಸುತ್ತ ಇರುವವರಿಗೆ ಸಾಧನಗಳನ್ನು ಒದಗಿಸುವ ಮೂಲಕ, ಶಿಕ್ಷಣಕ್ಕೆ ಹಣ ಒದಗಿಸುವ ಮೂಲಕ ಸಹಾಯ ಮಾಡಲು ಯತ್ನಿಸಿದೆವು” ಎಂದು ತಿಳಿಸಿದ್ದಾರೆ.
ಟೀಚ್ ಫಾರ್ ಇಂಡಿಯಾ, ಆಕಾಂಕ್ಷಾ ಪ್ರತಿಷ್ಠಾನ, ಹಾರ್ವರ್ಡ್ ಲಾ ಸ್ಕೂಲ್ ವುಮೆನ್ಸ್ ಅಲೈಯನ್ಸ್ (ಭಾರತ ವಿಭಾಗ), ಐಡಿಐಎ ಹಾಗೂ ಸೆಂಟ್ರಲ್ ಸ್ಕ್ವೇರ್ ಪ್ರತಿಷ್ಠಾನ ಈ ಚರ್ಚೆ ಆಯೋಜಿಸುತ್ತಿವೆ.
ಕಾನೂನು ಶಿಕ್ಷಣ ಮತ್ತು ಕಾನೂನು ವೃತ್ತಿಯಲ್ಲಿನ ವೈವಿಧ್ಯತೆ ಮೇಲೆ ಕೆಲಸ ಮಾಡುತ್ತಿರುವ ಲಾಭದ ಉದ್ದೇಶವಿಲ್ಲದ ಸಂಸ್ಥೆ ಐಡಿಐಎ ಸಲಹೆಗಾರರಾಗಿರುವ ಧಾರಿಣಿ, ಆನ್‌ಲೈನ್ ಕಲಿಕೆಗೆ ಸಂಬಂಧಿಸಿದ ನೈಜ ಸಂಘರ್ಷಗಳಿಗೆ ಸಾಕ್ಷಿಯಾಗಿದ್ದಾರೆ. “ಈ ವರ್ಷದ ಫೆಬ್ರುವರಿಯಲ್ಲಿ ಶಾಲೆಗಳು ಬಹುತೇಕ ಒಂದು ವರ್ಷ ಕಾಲ ಸ್ಥಗಿತಗೊಂಡಿರುವುದು ನಮ್ಮ ಅರಿವಿಗೆ ಬಂದಿತು. ದೀರ್ಘ ಕಾಲ ಶಾಲೆಗಳನ್ನು ಮುಚ್ಚುವುದು ನಮ್ಮ ಭವಿಷ್ಯದ ಪೀಳಿಗೆ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ ಮತ್ತು ಭಾರತದ ಮಕ್ಕಳಿಗೆ ಶಿಕ್ಷಣ ನೀಡುವ ಕುರಿತಂತೆ ಮಾಡಲಾದ ಯಾವುದೇ ಪ್ರಗತಿಯನ್ನು ಅದು ಅಳಿಸಿಹಾಕುತ್ತದೆ ಎಂಬುದು ಹೆಚ್ಚು ಸ್ಪಷ್ಟವಾಗುತ್ತಾ ಹೋಯಿತು. ಚರ್ಚೆಗಳು ಮತ್ತು ಯೋಜನೆ ರೂಪಿಸಲು ಸಮಯ ಹಿಡಿಯಿತು ಮತ್ತು ದೃಢವಾದ ಕ್ರಮ ಕೈಗೊಳ್ಳುವ ಹೊತ್ತಿಗೆ ಕೋವಿಡ್ ಎರಡನೇ ಅಲೆ ಅಪ್ಪಳಿಸಿತು” ಎಂಬುದು ಅವರ ಮಾತು.
ತಾನ್ಯಾ ಮಾತನಾಡಿ “ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳ ಹೊರತಾಗಿಯೂ ನನ್ನ ಕುಟುಂಬ ತೀವ್ರ ಕೋವಿಡ್‌ನಿಂದ ಚೇತರಿಸಿಕೊಂಡ ಅದೃಷ್ಟಶಾಲಿಯಾಗಿತ್ತು. ಹಾಗಿದ್ದರೂ ಕೂಡ ನಾವು ನಮಗಾಗಿ ಮಾಹಿತಿ ಹಂಚಿಕೊಳ್ಳಬೇಕಿದ್ದು, ಮಕ್ಕಳಲ್ಲಿ ತೀವ್ರತರವಾದ ಕಾಯಿಲೆ ಅಪರೂಪ ಮತ್ತು ಪ್ರತಿಬಾರಿಯೂ ಸೋಂಕಿನ ಅಲೆಗಳು ಹಿಮ್ಮೆಟ್ಟುತ್ತಿದ್ದಂತೆ ಆರ್ಥಿಕತೆ ಮುಕ್ತಗೊಳ್ಳುವುದರಿಂದ ಮಕ್ಕಳು ಯಾವಾಗ ಬೇಕಾದರೂ ಸೋಂಕಿಗೆ ತುತ್ತಾಗಬಹುದು- ಮನೆಯ ವಯಸ್ಕರು ಕೂಡ ಸೋಂಕನ್ನು ತರಬಹುದು ಎಂಬ ತಜ್ಞರ ಮಾತುಗಳಿಗೆ ಕಿವಿಗೊಡಬೇಕಿದೆ. ಬೇರೆ ಅನೇಕ ದೇಶಗಳಲ್ಲಿ ಪೋಷಕರು ಕೆಲಸಕ್ಕೆ ಹೋಗಬೇಕಿರುವುದರಿಂದ ಶಾಲೆ ತೆರೆಯಬೇಕೆಂಬ ಬೇಡಿಕೆ ಅವರಿಂದ ಬಂದಿದೆ ಎಂಬುದು ನಮಗೆ ಗೊತ್ತಾಗಿದೆ.” ಎಂದು ಹೇಳುತ್ತಾರೆ.
ಭಾರತವು ವಿಶಿಷ್ಟ ಸಾಂಸ್ಕೃತಿಕ ಅಂಶಗಳನ್ನು ಹೊಂದಿದ್ದರೂ ಶಿಶುಪಾಲನೆ ಎಂಬುದು ನಿಖರವಾಗಿ ದೊರೆಯುವುದಿಲ್ಲ. ವಿಶೇಷವಾಗಿ ಕಡಿಮೆ ಆದಾಯದ ಕುಟುಂಗಳಲ್ಲಿ ಮನೆಯಿಂದ ಕೆಲಸ ಮಾಡುವುದು (ವರ್ಕ್ ಫ್ರಂ ಹೋಂ) ಒಂದು ಆಯ್ಕೆಯಾಗಿಲ್ಲ. ಉದಾಹರಣೆಗೆ ಯಾವುದೇ ಬೆಂಬಲ ಹೊಂದಿರದ ಮಕ್ಕಳಿರುವ ಅಜ್ಜಿಯ ಕತೆ ಏನು? ಕಡಿಮೆ ಆದಾಯ ಇರುವ ಕುಟುಂಬಗಳಲ್ಲಿ ವಯಸ್ಕರು ಕೆಲಸಕ್ಕೆ ಹೋಗುವಾಗ ಚಿಕ್ಕ ಮಕ್ಕಳ ಆರೈಕೆಯ ಹೊಣೆಯನ್ನು ದೊಡ್ಡ ಮಕ್ಕಳಿಗೆ ವಹಿಸಲಾಗುತ್ತದೆ ಎಂಬುದನ್ನು ನಾವು ನೋಡಿದ್ದೇವೆ. ಪರಿಣಾಮ ದೊಡ್ಡ ಮಕ್ಕಳು ಆನ್‌ಲೈನ್ ಕಲಿಕೆಯತ್ತ ಗಮನ ಹರಿಸಲಾಗುವುದಿಲ್ಲ. ಮನೆಯಿಂದ ಕೆಲಸ ಮಾಡುತ್ತಿರುವ ಮತ್ತು ಅಜ್ಜ-ಅಜ್ಜಿಯರ ಬೆಂಬಲ ಪಡೆದಿರುವ ನಮ್ಮಂತಹ ಪೋಷಕರು ಕೂಡ, ಚಿಕ್ಕ ಮಕ್ಕಳನ್ನು ಶಾಲೆಗೆ ಕಳುಹಿಸುವ ಆಯ್ಕೆಯನ್ನೇ ಬಯಸಬಹುದು. ಭಾರತದಲ್ಲಿ ಶಾಲೆಗಳು ತೆರೆದರೂ ಕೂಡ ಅದು ದೊಡ್ಡ ಮಕ್ಕಳಿಗಾಗಿ ಮಾತ್ರ. ಆದರೆ ನಮ್ಮ ಚಿಕ್ಕ ಮಕ್ಕಳು ಈ ನಿರ್ಣಾಯಕ ಆರಂಭಿಕ ವರ್ಷಗಳಲ್ಲಿ ತಮ್ಮ ವಾರಿಗೆಯವರ ಒಡನಾಟದ ಮೂಲಕ ಮಾತ್ರ ಪಡೆಯಬಹುದಾದ ಸಾಮಾಜಿಕ ಅಭಿವೃದ್ಧಿಯಿಂದ ವಂಚಿತರಾಗುತ್ತಿದ್ದಾರೆ. ಶೈಕ್ಷಣಿಕ ನಷ್ಟ ಸರಿದೂಗಿಸಲು ನಾವು ನಮ್ಮ ಮಕ್ಕಳಿಗೆ ಸಹಾಯ ಮಾಡಬಹುದು. ಆದರೆ ಮನೆಯಲ್ಲಿ ಇದನ್ನು ಮಾಡಲು ಸಾಧ್ಯವಾಗದ ಲಕ್ಷಾಂತರ ಜನರಿದ್ದಾರೆ” ಎಂದು ಅಭಿಪ್ರಾಯಪಡುತ್ತಾರೆ.
ಧಾರಿಣಿ ಅವರು ಹೇಳುವಂತೆ “ಮಾಹಿತಿಯುಕ್ತ ನಿರ್ಧಾರ ತೆಗೆದುಕೊಳ್ಳಲು ನಾವು ವಿಚಾರ ಸಂಕಿರಣ ಆಯೋಜಿಸುವ ಚಿಂತನೆಯಲ್ಲಿದ್ದೇವೆ. ಇದು ಟೈಮ್ಸ್ ಆಫ್ ಇಂಡಿಯಾದ ಶಾಹೀನ್ ಮಿಸ್ಟ್ರಿ ಮತ್ತು ಡಾ.ಮಹೇಶ್ ಬಾಲ್ಸೆಕರ್ ಅವರ ಸಂಪಾದಕೀಯದೊಂದಿಗೆ ಹೊಂದಿಕೆಯಾಯಿತು. ಟೀಚ್ ಫಾರ್ ಇಂಡಿಯಾದಲ್ಲಿ ನಾವು ಶಾಹೀನ್ ಮತ್ತವರ ತಂಡವನ್ನು ಸಂಪರ್ಕಿಸಿದೆವು. ಪರಿಣಾಮ ಸಂವಾದ ನಿಜವಾಯಿತು. ವಿದ್ಯಾರ್ಥಿಗಳು ಮತ್ತು ಪೋಷಕರ ಆತಂಕವನ್ನು ಅರ್ಥ ಮಾಡಿಕೊಳ್ಳುವುದು, ಈ ಆತಂಕಗಳನ್ನು ಆರೋಗ್ಯ ಮತ್ತು ಶಿಕ್ಷಣ ತಜ್ಞರು ಹೇಗೆ ಪರಿಹರಿಸುತ್ತಾರೆ ಎಂದು ಅರಿಯುವುದು ಇದರ ಇದರ ಉದ್ದೇಶವಾಗಿದೆ.
ನಾಳೆಯೇ ಶಾಲೆಗಳನ್ನು ತೆರೆದುಬಿಡಬೇಕೆಂದು ನಾವು ಹೇಳುತ್ತಿಲ್ಲ. ಶಾಲೆಗಳನ್ನು ತೆರೆಯಲು ದೃಢವಾದ ನೀತಿ ರೂಪಿಸುವ ಸಂಬಂಧ ಮಧ್ಯಸ್ಥಗಾರರು ಮತ್ತು ತಜ್ಞರೊಂದಿಗೆ ಸಮಾಲೋಚನೆ ಅಗತ್ಯವಿದ್ದು ಇದನ್ನು ಆರಂಭಿಸಲು ಇದು ಸೂಕ್ತ ಸಮಯ” ಎನ್ನುತ್ತಾರೆ ಈ ಇಬ್ಬರು ವಕೀಲೆಯರು ಹಾಗೂ ತಾಯಂದಿರು.
ಚರ್ಚೆಯಲ್ಲಿ ಈ ಕೆಳಗಿನ ವ್ಯಕ್ತಿಗಳು, ತಜ್ಞರು ಭಾಗವಹಿಸಲಿದ್ದಾರೆ:
- ಡಾ.ಮಹೇಶ್ ಬಾಲ್ಸೆಕರ್, ಎಸ್‌ಆರ್‌ಸಿಸಿ ಮಕ್ಕಳ ಆಸ್ಪತ್ರೆಯ ಹಿರಿಯ ವೈದ್ಯ
- ಕಿರಣ್ ಭಾಟ್ಟಿ, ಹಿರಿಯ ವಿಸಿಟಿಂಗ್ ಫೆಲೋ, ಸೆಂಟರ್ ಫಾರ್ ಪಾಲಿಸಿ ರಿಸರ್ಚ್
- ರೇಖಾ ಕೃಷ್ಣನ್, ಪ್ರಾಂಶುಪಾಲರು, ವಸಂತ್ ವ್ಯಾಲಿ ಶಾಲೆ
- ಸಿಮ್ರಾನ್ ಖಾರಾ, ಪೋಷಕರು ಮತ್ತು ಸ್ಟಾರ್ಟ್ ಅಪ್ ಸ್ಥಾಪಕರು
- ಪ್ರಶಾಂತ್ ಡೊಡ್ಕೆ, ಪೋಷಕರು ಮತ್ತು ಸಮಾಜ ಸೇವಕರು, ಆಕಾಂಕ್ಷಾ ಪ್ರತಿಷ್ಠಾನ
- ಹೆಲನ್ ಎಲಿಜಬೆತ್, ಹನ್ನೆರಡನೇ ತರಗತಿ ವಿದ್ಯಾರ್ಥಿ, ಐಡಿಐಎ ಟ್ರೈನಿ
- ರೋಹನ್ ಜಗದೀಶನ್, ಹತ್ತನೇ ತರಗತಿ ವಿದ್ಯಾರ್ಥಿ
ಸಂವಾದ ಕಾರ್ಯಕ್ರಮವನ್ನು ತಾರಾ ಶರ್ಮಾ ಸಳುಜಾ (ನಟಿ, ಉದ್ಯಮಿ ಹಾಗೂ ಪೋಷಕಿ) ಮತ್ತು ಪ್ರಿಯಾಂಕಾ ಪಾಟೀಲ್ (ಫೆಲೋ, ಟಿಎಫ್‌ಐ) ಸಂವಾದ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಜುಲೈ 12 ರಂದು ಸಂಜೆ 6 ಗಂಟೆಗೆ ಸಂವಾದ ಕಾರ್ಯಕ್ರಮ ನೇರಪ್ರಸಾರವಾಗಲಿದೆ.
ಶಾಲೆಗಳು ಸ್ಥಗಿತಗೊಂಡಿರುವುದರ ಪರಿಣಾಮವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು, ಶಾಲೆಗಳನ್ನು ಮುಚ್ಚುವ ಅಥವಾ ಪುನರಾರಂಭಿಸುವುದರ ಹಿಂದಿನ ಸಾಧಕ ಬಾಧಕಗಳನ್ನು ಅರಿಯಲು ಹಾಗೂ ಬೇರೆಯವರ ಅನುಭವಗಳನ್ನು ಹಂಚಿಕೊಳ್ಳಲು ಪೋಷಕರು, ಸರ್ಕಾರಗಳು, ಶಾಲೆಗಳು ಹಾಗೂ ತಜ್ಞರನ್ನು (ಶಿಕ್ಷಣತಜ್ಞರು, ಸಾರ್ವಜನಿಕ ನೀತಿ ಮತ್ತು ಆರೋಗ್ಯ) ಒಗ್ಗೂಡಿಸುವುದು ಈ ಸಂವಾದ ಕಾರ್ಯಕ್ರಮದ ಉದ್ದೇಶ. ಜೊತೆಗೆ ಸೂಕ್ತ ನೀತಿಗಳನ್ನು ರೂಪಿಸಲು ಸರ್ಕಾರಗಳನ್ನು ಪ್ರೇರೇಪಿಸುವುದು ಇದರ ಅಂತಿಮ ಧ್ಯೇಯವಾಗಿದೆ.