Karnataka High Court
Karnataka High Court

ಎರವಲು ಸೇವೆಯ ಅಧಿಕಾರಿಗಳಿಗೆ ಎರಡು ವರ್ಷ ಹುದ್ದೆಯಲ್ಲಿರುವ ನಿಯಮ ಕಡ್ಡಾಯವಲ್ಲ: ಹೈಕೋರ್ಟ್

ಅರ್ಜಿದಾರರನ್ನು ಆನೇಕಲ್ ತಹಶೀಲ್ದಾರ್ ಹುದ್ದೆಯಿಂದ ಬೆಂಗಳೂರು ದಕ್ಷಿಣ ತಾಲ್ಲೂಕು ತಹಶೀಲ್ದಾರರನ್ನಾಗಿ 1.5 ವರ್ಷದಲ್ಲಿ ವರ್ಗಾವಣೆ ಮಾಡಲಾಗಿದೆ. ನಿಯಮಗಳಿಗೆ ವಿರುದ್ಧವಾಗಿ ಮಾಡಿದ್ದರೂ ಅರ್ಜಿದಾರರು ಕೋರ್ಟ್‌ ಮೆಟ್ಟಿಲೇರಿಲ್ಲ ಎಂದಿರುವ ಪೀಠ.

ಎರವಲು ಸೇವೆಯಲ್ಲಿ ಮತ್ತೊಂದು ಇಲಾಖೆಯ ಸೇವೆಗೆ ನಿಯೋಜಿತಗೊಂಡ ಅಧಿಕಾರಿಗಳಿಗೆ ಒಂದೇ ಹುದ್ದೆಯಲ್ಲಿ ಎರಡು ವರ್ಷ ಮುಂದುವರೆಯಬೇಕು ಎಂಬ ನಿಯಮ ಕಡ್ಡಾಯವಲ್ಲ ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಆದೇಶಿಸಿದೆ. ಅಧಿಕಾರಿಯೊಬ್ಬರನ್ನು ಧಾರ್ಮಿಕ ದತ್ತಿ ಇಲಾಖೆಯಿಂದ ಕಂದಾಯ ಇಲಾಖೆಗೆ ಎರವಲು ಸೇವೆ ಮೂಲಕ ನಿಯೋಜಿಸಿ ಮಾತೃ ಇಲಾಖೆಗೆ ವಾಪಸ್ ಕಳುಹಿಸಿದ್ದ ರಾಜ್ಯ ಸರ್ಕಾರದ ಕ್ರಮವನ್ನು ಪುರಸ್ಕರಿಸಿದ್ದ ಕರ್ನಾಟಕ ಆಡಳಿತ ನ್ಯಾಯ ಮಂಡಳಿ (ಕೆಎಟಿ) ಆದೇಶವನ್ನು ಎತ್ತಿ ಹಿಡಿದಿದೆ.

ತನ್ನನ್ನು ಮಾತೃ ಇಲಾಖೆಗೆ ವರ್ಗಾವಣೆ ಮಾಡಿದ್ದ ಕ್ರಮವನ್ನು ಪ್ರಶ್ನಿಸಿ ಗ್ರೇಡ್ 1 ತಹಿಶೀಲ್ದಾರ್ ಆಗಿದ್ದ ಪಿ ದಿನೇಶ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಕೆ ಸೋಮಶೇಖರ್​ ಮತ್ತು ಉಮೇಶ್​ ಎಂ ಅಡಿಗ ಅವರ ನೇತೃತ್ವದ ವಿಭಾಗೀಯ ಪೀಠವು ವಜಾ ಮಾಡಿದೆ.

“ಅರ್ಜಿದಾರರನ್ನು ಆನೇಕಲ್ ತಹಶೀಲ್ದಾರ್ ಹುದ್ದೆಯಿಂದ ಬೆಂಗಳೂರು ದಕ್ಷಿಣ ತಾಲ್ಲೂಕು ತಹಶೀಲ್ದಾರ್‌ ಹುದ್ದೆಗೆ ಒಂದೂವರೆ ವರ್ಷದಲ್ಲಿ ವರ್ಗಾವಣೆ ಮಾಡಲಾಗಿದೆ. ನಿಯಮಗಳ ವಿರುದ್ಧವಾಗಿ ವರ್ಗಾವಣೆ ಮಾಡಿದ್ದರೂ ಅರ್ಜಿದಾರರು ನ್ಯಾಯಾಲಯದ ಮೊರೆ ಹೋಗಿರಲಿಲ್ಲ. ಅದರ ಬದಲಾಗಿ ಮಾತೃ ಇಲಾಖೆಗೆ ವಾಪಸ್ ಕಳುಹಿಸಿ ಹುದ್ದೆ ನೀಡಿದಾಗ ಮಾತ್ರ ಅವರು ನ್ಯಾಯಾಲಯದ ಕದ ತಟ್ಟಿದ್ದಾರೆ. ಮಾತೃ ಇಲಾಖೆಗೆ ವರ್ಗಾವಣೆ ಮಾಡಿರುವುದು ಅವರಿಗೆ ಇಚ್ಚೆಯಿಲ್ಲ. ಜೊತೆಗೆ, ಅವರಿಗೆ ಇಷ್ಟವಿರುವ ಹುದ್ದೆಗೆ ನಿಯೋಜನೆ ಮಾಡಿದಾಗ ಅವರು ನ್ಯಾಯಾಲಯದ ಮೊರೆ ಹೋಗಲು ಮುಂದಾಗಿಲ್ಲ. ಇದೀಗ ಅರ್ಜಿ ಸಲ್ಲಿದ್ದು, ಅರ್ಜಿಯಲ್ಲಿ ಪ್ರಾಮಾಣಿಕತೆ ಇಲ್ಲ” ಎಂದು ಪೀಠ ತಿಳಿಸಿದೆ.

“ಸರ್ಕಾರದ ಯಾವುದೇ ಇಲಾಖೆಯಲ್ಲಿ ಖಾಲಿ ಹುದ್ದೆಗಳು ಇದ್ದ ಸಂದರ್ಭದಲ್ಲಿ ಮತ್ತೊಂದು ಇಲಾಖೆಯಿಂದ ಎರವಲು ಪಡೆದುಕೊಳ್ಳಲಾಗಿರುತ್ತದೆ. ಅರ್ಜಿದಾರರ ಸ್ಥಾನಕ್ಕೆ ಕಂದಾಯ ಇಲಾಖೆಗೆ ಮತ್ತೊಬ್ಬ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ಆ ಅಧಿಕಾರಿಯನ್ನು ಬದಲಾವಣೆ ಮಾಡುವುದಕ್ಕೆ ಸಾಧ್ಯವಿಲ್ಲ” ಎಂದು ಪೀಠ ತಿಳಿಸಿದೆ.

“ಸಾರ್ವಜನಿಕ ಹಿತದೃಷ್ಟಿಯಿಂದ ಸರ್ಕಾರಗಳು ಅಧಿಕಾರಗಳನ್ನು ಬದಲಾವಣೆ ಮಾಡುವ ಅಗತ್ಯವಿದೆ. ಇದೇ ಕಾರಣದಿಂದ ಮಾತೃ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ” ಎಂದು ಪೀಠ ಹೇಳಿದೆ.

ಒಂದೇ ಹುದ್ದೆಯಲ್ಲಿ ಎರಡು ವರ್ಷ ಪೂರ್ಣಗೊಳಿಸಿಲ್ಲ ಎಂಬ ಅರ್ಜಿದಾರರ ವಾದವನ್ನು ತಳ್ಳಿಹಾಕಿರುವ ಪೀಠವು “ಅಧಿಕಾರಿಯಿಂದ ಮತ್ತೊಂದು ಇಲಾಖೆಯಿಂದ ಎರವಲು ಸೇವೆ ಪಡೆದುಕೊಂಡಿದ್ದು, ಎರಡು ಕಡೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ‌ಎರಡೂ ಹುದ್ದೆಗಳನ್ನು ಪರಿಗಣಿಸಿದರೆ ಎರಡು ವರ್ಷ ಪೂರ್ಣಗೊಂಡಿದೆ. ಅಲ್ಲದೆ, ಎರವಲು ಸೇವೆ ಪಡೆದುಕೊಂಡ ಸಂದರ್ಭದಲ್ಲಿ ಎರಡು ವರ್ಷ ಸೇವೆ ಸಲ್ಲಿಸಬೇಕು ಎಂಬ ನಿಯಮ ಕಡ್ಡಾಯವಿಲ್ಲ” ಎಂದು ಪೀಠವು ಆದೇಶದಲ್ಲಿ ತಿಳಿಸಿದೆ.  ಇದೇ ಕಾರಣಕ್ಕೆ ಆಡಳಿತ ನ್ಯಾಯಮಂಡಳಿ ನ್ಯಾಯಾಧಿಕರಣ (ಕೆಎಟಿ) ನೀಡಿರುವ ಆದೇಶದಲ್ಲಿ ಮಧ್ಯಪ್ರವೇಶ ಮಾಡುವ ಅಗತ್ಯವಿಲ್ಲ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಪ್ರಕರಣದ ಹಿನ್ನೆಲೆ: ಅರ್ಜಿದಾರರ ದಿನೇಶ್ ಅವರು ಧಾರ್ಮಿಕ ದತ್ತಿ ಇಲಾಖೆಯಲ್ಲಿ ನೇಮಕಗೊಂಡಿದ್ದರು. ಈ ನಡುವೆ ಕಂದಾಯ ಇಲಾಖೆಗೆ ಗ್ರೇಡ್ 1 ತಹಶೀಲ್ದಾರ್‌ ಆಗಿ ಎರವಲು ಪಡೆದುಕೊಳ್ಳಲಾಗಿದೆ. 1.5 ವರ್ಷಗಳ ಕಾಲ ಆನೇಕಲ್​ನಲ್ಲಿ ತಹಶೀಲ್ದಾರ್​, ಬೆಂಗಳೂರು ದಕ್ಷಿಣ ತಹಶಿಲ್ದಾರ್ 8 ತಿಂಗಳ ಸೇವೆ ಸಲ್ಲಿಸಿದ ಬಳಿಕ ಮಾತೃ ಇಲಾಖೆಗೆ ವಾಪಸ್​ ಕಳುಹಿಸಲಾಗಿತ್ತು.

ವರ್ಗಾವಣೆ ಆದೇಶವನ್ನು ಅರ್ಜಿದಾರರು, ಕರ್ನಾಟಕ ರಾಜ್ಯ ಆಡಳಿತ ಮಂಡಳಿ ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

ಅರ್ಜಿದಾರರ ಪರವಾಗಿ ಹಿರಿಯ ವಕೀಲ ವಿ ಲಕ್ಷ್ಮಿನಾರಾಯಣ ವಾದಿಸಿದ್ದರು. ಸರ್ಕಾರದ ಪರವಾಗಿ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ವಿಕ್ರಂ ಹುಯಿಲಗೋಳ ವಾದಿಸಿದ್ದರು. ಕೆಜಿಎಫ್‌ ತಹಶೀಲ್ದಾರ್‌ ಶ್ರೀನಿವಾಸ್‌ ಎಚ್‌ ಅವರ ಪರವಾಗಿ ಸರ್ಕಾರದ ವಕೀಲೆ ಶಿಲ್ಪಾ ಗೋಗಿ ವಕಾಲತ್ತು ವಹಿಸಿದ್ದರು.

Attachment
PDF
P Dinesh Vs State of Karnataka.pdf
Preview

Related Stories

No stories found.
Kannada Bar & Bench
kannada.barandbench.com