ಪೊಲೀಸ್ ಮತ್ತು ಕೇಂದ್ರ ತನಿಖಾ ಸಂಸ್ಥೆಗಳು ವೈಯಕ್ತಿಕ ಡಿಜಿಟಲ್ ಸಾಧನಗಳ ಶೋಧ ಮತ್ತು ಜಪ್ತಿ ಮಾಡುವುದನ್ನು ನಿಯಂತ್ರಿಸುವುದಕ್ಕಾಗಿ ಮಾರ್ಗಸೂಚಿ ರೂಪಿಸುವಲ್ಲಿ ಕೇಂದ್ರ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಬುಧವಾರ ಅಸಮಾಧಾನ ವ್ಯಕ್ತಪಡಿಸಿದೆ.
ಈ ಸಂಬಂಧ ಸಮಿತಿ ರಚಿಸಲಾಗಿದ್ದು ಮಾರ್ಗಸೂಚಿ ರೂಪಿಸಲು ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಸಮಯ ಬೇಕಾಗುತ್ತದೆ. ಸಕಾರಾತ್ಮಕ ಫಲಿತಾಂಶ ದೊರೆಯಲಿದೆ ಎಂದು ಎಎಸ್‌ಜಿ ವಿ ರಾಜು ಅವರು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಸುಧಾಂಶು ಧುಲಿಯಾ ಅವರಿದ್ದ ಪೀಠಕ್ಕೆ ಮಾಹಿತಿ ನೀಡಿದರು.
ಆದರೂ ಮಾರ್ಗಸೂಚಿ ರೂಪಿಸಲು ಎರಡು ವರ್ಷಗಳಷ್ಟು ವಿಳಂಬ ಮಾಡಿದ್ದನ್ನು ನ್ಯಾ. ಕೌಲ್ ಪ್ರಶ್ನಿಸಿದರು. "ನಾವು ನೋಟಿಸ್ ನೀಡಿದ್ದು ಯಾವಾಗ? ಸ್ವಲ್ಪವಾದರೂ ಗಡುವನ್ನು ಪಾಲಿಸಬೇಕಾಗುತ್ತದೆ ಎರಡು ವರ್ಷ ಕಳೆದಿವೆ ರಾಜು ಅವರೇ" ಎಂದು ಅವರು ಪ್ರತಿಕ್ರಿಯಿಸಿದರು.
ಕಾನೂನು ಜಾರಿ ಮತ್ತು ತನಿಖಾ ಸಂಸ್ಥೆಗಳು ಡಿಜಿಟಲ್ ಸಾಧನಗಳನ್ನು ಶೋಧಿಸಲು ಜಪ್ತಿ ಮಾಡಲು ಅಗತ್ಯ ಕಾರ್ಯವಿಧಾನೆ ರೂಪಿಸುವಂತೆ ಕೋರಿ ಸಲ್ಲಿಸಲಾಗಿದ್ದ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು (ಪಿಐಎಲ್) ವಿಚಾರಣೆ ನಡೆಸುವ ವೇಳೆ ಸುಪ್ರೀಂ ಕೋರ್ಟ್ ಈ ವಿಚಾರ ತಿಳಿಸಿತು.
ಮಾರ್ಗಸೂಚಿ ಜಾರಿಗೊಳಿಸುವಂತೆ ಕೋರಿ ಫೌಂಡೇಷನ್ ಫಾರ್ ಮೀಡಿಯಾ ಪ್ರೊಫೆಷನಲ್ಸ್ ಅರ್ಜಿ ಸಲ್ಲಿಸಿತ್ತು. ಐವರು ಶಿಕ್ಷಣ ತಜ್ಞರು ಹಾಗೂ ಸಂಶೋಧಕರು ಸಲ್ಲಿಸಿದ್ದ ಮತ್ತೊಂದು ಅರ್ಜಿಯಲ್ಲಿ ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಳ್ಳುವಾಗ ತನಿಖಾ ಸಂಸ್ಥೆಗಳು ಅನಿಯಂತ್ರಿತ ಅಧಿಕಾರಗಳನ್ನು ಚಲಾಯಿಸುತ್ತಿವೆ ಎಂದು ದೂರಲಾಗಿತ್ತು.
ಈ ಅರ್ಜಿಗೆ ಕೇಂದ್ರ ಸರ್ಕಾರ ನೀಡಿರುವ ಉತ್ತರ ತೃಪ್ತಿಕರವಾಗಿಲ್ಲ ಎಂದು ಆಗಸ್ಟ್ 2022ರಲ್ಲಿ ಸೂಚಿಸಿದ್ದ ಸುಪ್ರೀಂ ಕೋರ್ಟ್ ಹೊಸದಾಗಿ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿತ್ತು. ಆದರೆ ಉತ್ತರ ಸಲ್ಲಿಸದ ಕಾರಣ ಅದೇ ವರ್ಷ ನವೆಂಬರ್‌ನಲ್ಲಿ ನ್ಯಾಯಾಲಯ ಸರ್ಕಾರಕ್ಕೆ 25,000 ದಂಡ ವಿಧಿಸಿತ್ತು.
ಬುಧವಾರ ಪ್ರಕರಣದ ವಿಚಾರಣೆ ನಡೆದಾಗ ಹಿರಿಯ ವಕೀಲೆ ನಿತ್ಯಾ ರಾಮಕೃಷ್ಣನ್ ಅವರು ಮಾರ್ಗಸೂಚಿ ರೂಪಿಸುವ ತುರ್ತು ಅಗತ್ಯವಿದೆ ಎಂದರು. ವಾದಗಳನ್ನು ಆಲಿಸಿದ ನ್ಯಾಯಾಲಯ ಪ್ರಕರಣವನ್ನು ಡಿಸೆಂಬರ್ 14ಕ್ಕೆ ಮುಂದೂಡಿತು.