ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ (ಯುಎಪಿಎ) ಅಡಿ ಬಂಧಿತರಾಗಿದ್ದ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ (ಐಸಿಸ್) ಸಂಘಟನೆಯ ಜೊತೆ ಸಂಪರ್ಕ ಹೊಂದಿದ್ದಾಗಿ ಇಬ್ಬರು ಆರೋಪಿಗಳು ತಮ್ಮ ಅಪರಾಧವನ್ನು ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯ ವಿಶೇಷ ನ್ಯಾಯಾಲಯವು ಶುಕ್ರವಾರ ಅವರಿಗೆ ಎಂಟು ವರ್ಷಗಳ ಕಠಿಣ ಸಜೆ ವಿಧಿಸಿದೆ.
ಬಂಧಿತರಾಗಿರುವ ಮೊಹ್ಸಿನ್ ಸಯ್ಯದ್ ಮತ್ತು ರಿಜ್ವಾನ್ ಅಹ್ಮದ್ ಅವರು 2016ರಿಂದ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದು, ಅದು ಈಗ ವಿಧಿಸಲಾಗಿರುವ ಶಿಕ್ಷೆಗೆ ಒಳಪಟ್ಟಿರುತ್ತದೆ ಎಂದು ನ್ಯಾಯಮೂರ್ತಿ ಎ ಟಿ ವಾಂಖೆಡೆ ಆದೇಶದಲ್ಲಿ ಹೇಳಿದ್ದಾರೆ. ಅಲ್ಲದೇ, ಇಬ್ಬರೂ ಅಪರಾಧಿಗಳಿಗೆ ನ್ಯಾಯಾಲಯವು ತಲಾ ₹35,000 ದಂಡ ವಿಧಿಸಿದೆ.
ಸಯ್ಯದ್ ಮತ್ತು ಅಹ್ಮದ್ ಅವರ ವಿರುದ್ಧ ಮುಸಲ್ಮಾನ ಯುವಕರನ್ನು ಐಸಿಸ್‌ಗೆ ಸೇರಿಸುವ ಕೆಲಸದಲ್ಲಿ ತೊಡಗಿದ್ದರು ಎಂಬ ಆರೋಪವನ್ನು ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ 2015ರಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿದ್ದು, 2016ರಲ್ಲಿ ಎನ್‌ಐಎ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿತ್ತು.
ಸಯ್ಯದ್ ಮತ್ತು ಅಹ್ಮದ್ ವಿರುದ್ಧ ಯುಎಪಿಎ ಸೆಕ್ಷನ್‌ಗಳಾದ 18 (ಪಿತೂರಿ), 20, 38 ಮತ್ತು 39 (ಉಗ್ರ ಸಂಘಟನೆಯ ಸದಸ್ಯ) ಹಾಗೂ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120ಬಿ (ಕ್ರಿಮಿನಲ್ ಪಿತೂರಿ) ಅಡಿ ಪ್ರಕರಣ ದಾಖಲಿಸಲಾಗಿತ್ತು.
ವಿಚಾರಣಾಧೀನ ನ್ಯಾಯಾಲಯವು ಪ್ರಕ್ರಿಯೆ ಆರಂಭಿಸಿದ್ದು, 200 ಸಾಕ್ಷಿಗಳ ಪೈಕಿ ಇದುವರೆಗೆ ಕೇವಲ 35 ಸಾಕ್ಷಿಗಳ ವಿಚಾರಣೆಯಷ್ಟೇ ಮುಗಿದಿದೆ. ವಿಚಾರಣೆಯು ಮಂದಗತಿಯಲ್ಲಿ ಸಾಗುತ್ತಿರುವ ಹಿನ್ನೆಲೆಯಲ್ಲಿ ಸಯ್ಯದ್ ಮತ್ತು ಅಹ್ಮದ್ ಅವರು ತಮ್ಮನ್ನು ಅಪರಾಧಿಗಳು ಎಂದು ಘೋಷಿಸುವಂತೆ ನ್ಯಾಯಾಲಯದ ಮುಂದೆ ಮನವಿ ಸಲ್ಲಿಸಿದ್ದರು. ಯುವಕರಾಗಿದ್ದಾಗ ಐಸಿಸ್ ಪ್ರಭಾವಕ್ಕೆ ಒಳಗಾಗಿದ್ದು, ತಮ್ಮ ಕೃತ್ಯದ ಪರಿಣಾಮದ ಬಗ್ಗೆ ಅರಿವಿರಲಿಲ್ಲ ಎಂದು ಎಂದು ವಿವರಿಸಿದ್ದಾರೆ.
ಅರೋಪಿಗಳ ತಪ್ಪೊಪ್ಪಿಗೆಯನ್ನು ಒಪ್ಪಿಕೊಂಡಿರುವ ನ್ಯಾಯಾಲಯವು ಇಬ್ಬರಿಗೂ ದಂಡ ಮತ್ತು ಎಂಟು ವರ್ಷಗಳ ಶಿಕ್ಷೆ ವಿಧಿಸಿದೆ. ದಂಡದ ಮೊತ್ತ ಪಾವತಿಸಲು ವಿಫಲವಾದಲ್ಲಿ ಇನ್ನೂ ಕೆಲ ತಿಂಗಳು ಕಾರಾಗೃಹ ವಾಸ ಅನುಭವಿಸಬೇಕು ಎಂದು ಹೇಳಲಾಗಿದೆ.