ಆರ್‌ಎಸ್‌ಎಸ್‌ ನಾಯಕರ ಭಾವಚಿತ್ರದೊಂದಿಗೆ ಸಿಕ್ಕಿಬಿದ್ದಿದ್ದ 8 ಪಿಎಫ್ಐ ಸದಸ್ಯರ ಜಾಮೀನು ರದ್ದುಗೊಳಿಸಿದ ಸುಪ್ರೀಂ

ಅಪರಾಧದ ಗಂಭೀರತೆಯನ್ನು ಪರಿಗಣಿಸಿ ಹಾಗೂ ಆರೋಪಿಗಳು ಸೆರೆವಾಸ ಅನುಭವಿಸಿರುವುದು ಕೇವಲ 1.5 ವರ್ಷವಾದ್ದರಿಂದ ತಾನು ಮಧ್ಯಪ್ರವೇಶಿಸಿ ಜಾಮೀನು ರದ್ದುಗೊಳಿಸಬಹುದು ಎಂದು ತಿಳಿಸಿದ ಪೀಠ.
UAPA
UAPA

ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸದಸ್ಯರಾಗಿದ್ದು ದೇಶಾದ್ಯಂತ ಭಯೋತ್ಪಾದಕ ಕೃತ್ಯಗಳನ್ನು ಎಸಗಲು ಸಂಚು ರೂಪಿಸಿದ್ದಕ್ಕಾಗಿ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಅಡಿ ಬಂಧಿತರಾಗಿದ್ದ ಎಂಟು ಮಂದಿಗೆ ಮದ್ರಾಸ್ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ಬುಧವಾರ ರದ್ದುಗೊಳಿಸಿದೆ [ಭಾರತ ಒಕ್ಕೂಟ ಮತ್ತು ಬರ್ಕತ್ತುಲ್ಲಾ ನಡುವಣ ಪ್ರಕರಣ].

ಆರ್‌ಎಸ್‌ಎಸ್‌ ಹಾಗೂ ಹಿಂದೂ ಸಂಘಟನೆಗಳಿಗೆ ಸೇರಿದ ವಿವಿಧ ನಾಯಕರ ಭಾವಚಿತ್ರ ಸೇರಿದಂತೆ ಅನೇಕ ದಾಖಲೆಗಳು ಆರೋಪಿಗಳ ಬಳಿ ದೊರೆತಿದ್ದು ಈ ನಾಯಕರು ಹಿಟ್‌ಲಿಸ್ಟ್‌ನಲ್ಲಿದ್ದರು ಎಂಬುದನ್ನು ಇದು ಸೂಚಿಸುತ್ತದೆ ಎನ್ನುವುದು ಆರೋಪಿಗಳ ವಿರುದ್ಧದ ಪ್ರಕರಣವಾಗಿತ್ತು.

ಅಪರಾಧದ ಗಾಂಭೀರ್ಯದ ಹಿನ್ನೆಲೆಯಲ್ಲಿ ಹಾಗೂ ಆರೋಪಿಗಳು ಸೆರೆವಾಸ ಅನುಭವಿಸಿರುವುದು ಕೇವಲ 1.5 ವರ್ಷವಾದ್ದರಿಂದ ತಾನು ಮಧ್ಯಪ್ರವೇಶಿಸಿ ಜಾಮೀನು ರದ್ದುಗೊಳಿಸಬಹುದು ಎಂದು ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಮತ್ತು ಪಂಕಜ್ ಮಿತ್ತಲ್‌ ಅವರಿದ್ದ ಪೀಠ ತಿಳಿಸಿತು. ಅಂತೆಯೇ ಅದು ಪ್ರಕರಣದ ತ್ವರಿತ ವಿಚಾರಣೆಗೂ ಆದೇಶಿಸಿತು.

8 ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದ ಮದ್ರಾಸ್ ಹೈಕೋರ್ಟ್ ಆದೇಶದ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ವೇಳೆ ಸರ್ವೋಚ್ಚ ನ್ಯಾಯಾಲಯ ಈ ವಿಚಾರ ತಿಳಿಸಿತು.

ಕೇರಳ, ತಮಿಳುನಾಡು, ಉತ್ತರ ಪ್ರದೇಶ ಸೇರಿದಂತೆ ಭಾರತದ ಹಲವು ರಾಜ್ಯಗಳಲ್ಲಿ ಪಿಎಫ್‌ಐನ ವಿವಿಧ ಸದಸ್ಯರು ಭಯೋತ್ಪಾದಕ ಕೃತ್ಯ ನಡೆಸಲು ಸಂಚು ರೂಪಿಸುತ್ತಿದ್ದಾರೆ ಎಂಬುದಾಗಿ ಕೇಂದ್ರ ಸರ್ಕಾರಕ್ಕೆ ಮಾಹಿತಿ ಸಿಕ್ಕಿದೆ ಎಂದು ತಿಳಿಸಿ ಆರೋಪಿಗಳನ್ನು ಎನ್‌ಐಎ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಬಂಧಿಸಿತ್ತು. ಆರ್‌ಎಸ್‌ಎಸ್‌ ಸೇರಿದಂತೆ ವಿವಿಧ ಹಿಂದೂ ಸಂಘಟನೆಗಳ ನಾಯಕರ ಭಾವಚಿತ್ರಗಳು ಆರೋಪಿಗಳ ಬಳಿ ದೊರೆತಿವೆ ಎಂದು ಅದು ದೂರಿತ್ತು.

ವಿಚಾರಣಾ ನ್ಯಾಯಾಲಯ ಆರೋಪಿಗಳಿಗೆ ಜಾಮೀನು ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಅವರು ಮದ್ರಾಸ್‌ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಭಯೋತ್ಪಾದಕ ಕೃತ್ಯ ನಡೆಸಲು ಮೇಲ್ಮನವಿದಾರರು ನಿಧಿ ಸಂಗ್ರಹಿಸುತ್ತಿದ್ದರು ಎಂದು ಎನ್‌ಐಎ ಆರೋಪಿಸಿತ್ತು. ಆಗ ಹೈಕೋರ್ಟ್‌ ಆರೋಪಿಗಳು ಭಯೋತ್ಪಾದಕ ಚಟುವಟಿಕೆಗಳೊಂದಿಗೆ ನೇರ ಸಂಬಂಧ ಹೊಂದಿದ್ದಾರೆ ಎಂಬುದನ್ನು ಸಾಬೀತುಪಡಿಸುವಂತಹ ದಾಖಲೆಗಳಿಲ್ಲ ಎಂದು ತಿಳಿಸಿ ಜಾಮೀನು ನೀಡಿತ್ತು. ಈ ಹಿನ್ನೆಲೆಯಲ್ಲಿ ಎನ್‌ಐಎ ಸುಪ್ರೀಂ ಕೋರ್ಟ್‌ ಕದ ತಟ್ಟಿತ್ತು.

Kannada Bar & Bench
kannada.barandbench.com