ಯಾಸೀನ್ ಮಲಿಕ್ ನೇತೃತ್ವದ ಜೆಕೆಎಲ್ಎಫ್ ಸಂಘಟನೆಯ ನಿಷೇಧ ಎತ್ತಿಹಿಡಿದ ಯುಎಪಿಎ ನ್ಯಾಯಮಂಡಳಿ

ಪ್ರತ್ಯೇಕತಾವಾದವನ್ನು ಬಹಿರಂಗವಾಗಿ ಕುಮ್ಮಕ್ಕು ನೀಡುವ ಸಂಘಟನೆಗಳಿಗೆ ಅವಕಾಶವಿಲ್ಲ ಎಂದು ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ನೇತೃತ್ವದ ಪೀಠ ಅಭಿಪ್ರಾಯಪಟ್ಟಿದೆ.
Yasin Malik
Yasin Malik
Published on

ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್ (ಜೆಕೆಎಲ್‌ಎಫ್) ಸಂಘಟನೆಯನ್ನು ಕಾನೂನುಬಾಹಿರ ಎಂದು ಘೋಷಿಸಿ ಐದು ವರ್ಷಗಳವರೆಗೆ ನಿಷೇಧ ಹೇರಿದ್ದ ಕೇಂದ್ರ ಗೃಹ ಸಚಿವಾಲಯದ ಆದೇಶವನ್ನು ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯಿದೆಯಡಿ ರೂಪುಗೊಂಡಿರುವ ಯುಎಪಿಎ ನ್ಯಾಯಮಂಡಳಿ ಎತ್ತಿಹಿಡಿದಿದೆ.

ಗೃಹ ಸಚಿವಾಲಯ ಮಾರ್ಚ್ 15, 2024 ರಂದು ನಿಷೇಧ ವಿಧಿಸಿದ್ದ ಸಂಘಟನೆಯ ನಾಯಕ ಪ್ರಸ್ತುತ ಭಯೋತ್ಪಾದನೆ ಆರೋಪದ ಮೇಲೆ ಜೈಲಿನಲ್ಲಿರುವ ಯಾಸಿನ್ ಮಲಿಕ್. ಆತನ ನೇತೃತ್ವದ ಜೆಕೆಎಲ್ಎಫ್ ಸಂಘಟನೆ (ಜೆಕೆಎಲ್‌ಎಫ್‌- ವೈ) ದೇಶದ ಭದ್ರತೆ, ಸಾರ್ವಜನಿಕ ಸುವ್ಯವಸ್ಥೆ, ಏಕತೆ ಹಾಗೂ ಸಮಗ್ರತೆಗೆ ಅಡ್ಡಿಯಾಗಬಲ್ಲದು ಎಂದು ಸಚಿವಾಲಯದ ಅಧಿಸೂಚನೆ ತಿಳಿಸಿತ್ತು.

Also Read
ಯುಎಪಿಎ ಅಡಿಯಲ್ಲಿ ವಿಚಾರಣೆಗೆ ಅನುಮತಿಸಲು ಇರುವ ಗಡುವು ಕಡ್ಡಾಯವಾದುದು, ಕೇವಲ ಔಪಚಾರಿಕವಲ್ಲ: ಸುಪ್ರೀಂ ಕೋರ್ಟ್

ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ನೇತೃತ್ವದ ಯುಎಪಿಎ ನ್ಯಾಯಮಂಡಳಿ ಈ ನಿರ್ಧಾರವನ್ನು ಎತ್ತಿಹಿಡಿದಿದ್ದು ಪ್ರತ್ಯೇಕತಾವಾದಕ್ಕೆ ಬಹಿರಂಗವಾಗಿ ಕುಮ್ಮಕ್ಕು ನೀಡುವ ಸಂಘಟನೆಗಳಿಗೆ ಅವಕಾಶವಿಲ್ಲ ಎಂದಿದೆ.

“ದೇಶದ ಸಂವಿಧಾನ ಮತ್ತು ಯುಎಪಿಎ ಅಡಿ ಪ್ರತ್ಯೇಕತಾವಾದವನ್ನು ಬಹಿರಂಗವಾಗಿ ಪ್ರಚುರಪಡಿಸುವ, ಸಂವಿಧಾನಕ್ಕೆ ನಿಷ್ಠೆ ವ್ಯಕ್ತಪಡಿಸದ ಹಾಗೂ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವವನ್ನು ದುರ್ಬಲಗೊಳಿಸುವ ಜೆಕೆಎಲ್‌ಎಫ್‌- ವೈ ರೀತಿಯ ಸಂಘಟನೆಗೆ ಯಾವುದೇ ಜಾಗ ಇಲ್ಲ” ಎಂದು ನ್ಯಾಯಾಲಯ ತಿಳಿಸಿದೆ.

ಜೆಕೆಎಲ್‌ಎಫ್‌- ವೈ ಚಟುವಟಿಕೆಗಳು ಹಲವು ದಶಕಗಳಿಂದ ಜಮ್ಮು ಕಾಶ್ಮೀರದ ಕಾನೂನು ಸುವ್ಯವಸ್ಥೆ ಮೇಲೆ ವಿಷಕಾರಿ ಪರಿಣಾಮ ಬೀರಿವೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಪ್ರತ್ಯೇಕತಾವಾದವನ್ನು ಬಹಿರಂಗವಾಗಿ ಪ್ರಚಾರ ಮಾಡುವ ಜೆಕೆಎಲ್‌ಎಫ್‌- ವೈ ರೀತಿಯ ಸಂಘಟನೆಗೆ ಜಾಗವಿಲ್ಲ.
ಯುಎಪಿಎ ನ್ಯಾಯಮಂಡಳಿ

ಪ್ರಸ್ತುತ ಜೈಲಿನಲ್ಲಿರುವ ಯಾಸೀನ್‌ ಮಲಿಕ್‌ ಆಗಸ್ಟ್ 3, 2024ರಂದು ವಿಡಿಯೋ ಕಾನ್ಫರೆನ್ಸ್‌ ಮೂಲಕ ವಾದ ಮಂಡಿಸಿ ತಮ್ಮ ಸಂಘಟನೆಯ ಮೇಲಿನ ನಿಷೇಧವನ್ನು ವಿರೋಧಿಸಿದ್ದರು. 1994ರಲ್ಲಿ ಬಿಡುಗಡೆಯಾದ ನಂತರ ವ್ಯವಸ್ಥೆಯನ್ನು ವಿರೋಧಿಸಲು  ಅಹಿಂಸಾತ್ಮಕ ಗಾಂಧೀವಾದದ ಮಾರ್ಗ ಹಿಡಿದ್ದಾಗಿ ಹೇಳಿದ್ದರು. ಅಂದಿನಿಂದ ತಮಗೆ ಜೀವ ಬೆದರಿಕೆ ಇದ್ದರೂ ಹಿಂಸೆಯ ಹಾದಿ ತುಳಿದಿರಲಿಲ್ಲ ಎಂದಿದ್ದರು. ಆದರೆ ಈ ವಾದವನ್ನು ನ್ಯಾಯಮಂಡಳಿ ಒಪ್ಪಲಿಲ್ಲ.

ಯಾಸೀನ್‌ ಮಲಿಕ್‌ ತಾವು ಗಾಂಧೀವಾದವನ್ನು ಅನುಸರಿಸುತ್ತಿರುವುದಾಗಿ ಹೇಳುತ್ತಿದ್ದರೂ ಉಗ್ರವಾದ ಹಾಗೂ ಹಿಂಸಾತ್ಮಕ ಮಾರ್ಗದಲ್ಲಿ ಮುಂದುವರಿದಿರುವ ವ್ಯಕ್ತಿ, ಸಂಘಟನೆಗಳೆಡೆಗಿನ ಅವರ ಗಾಢ ಒಲವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಅವರು ಭಯೋತ್ಪಾದಕರೊಂದಿಗೆ ಸಂಪರ್ಕವನ್ನು ಮಾತ್ರವೇ ಹೊಂದಿಲ್ಲ, ಬದಲಿಗೆ ತಾವೇ ಒಪ್ಪಿಕೊಂಡಿರುವಂತೆ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿರುವ ಭಯೋತ್ಪಾಕರ ಶಿಬಿರಗಳಿಗೂ ಹೋಗಿಬಂದಿದ್ದಾರೆ, ಅಲ್ಲಿ ಸನ್ಮಾನವನ್ನೂ ಸ್ವೀಕರಿಸಿದ್ದಾರೆ," ಎಂದು ಮಂಡಳಿ ತನ್ನ ತೀರ್ಪಿನಲ್ಲಿ ವಿವರಿಸಿದೆ.

Kannada Bar & Bench
kannada.barandbench.com