ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಮತ್ತು ಅದರ ಅಂಗ ಸಂಸ್ಥೆಗಳ ಮೇಲೆ 5 ವರ್ಷಗಳ ನಿಷೇಧ ಹೇರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ದಿನೇಶ್ ಕುಮಾರ್ ಶರ್ಮಾ ಅವರ ಅಧ್ಯಕ್ಷರಾಗಿರುವ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆಯಡಿ ರೂಪಗೊಂಡಿರುವ ನ್ಯಾಯಮಂಡಳಿ (ಯುಎಪಿಎ ನ್ಯಾಯಮಂಡಳಿ) ಮಂಗಳವಾರ ಎತ್ತಿ ಹಿಡಿದಿದೆ.
ನಿಷೇಧ ಕುರಿತು ಪರಿಶೀಲಿಸಲು ಯುಎಪಿಎ ನ್ಯಾಯಮಂಡಳಿ ಅಧ್ಯಕ್ಷರಾಗಿ ನ್ಯಾ. ಶರ್ಮಾ ಅವರನ್ನು ನೇಮಿಸಿ ಕೇಂದ್ರ ಸರ್ಕಾರ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಅಧಿಸೂಚನೆ ಹೊರಡಿಸಿತ್ತು.
ಯುಎಪಿಎ ಸೆಕ್ಷನ್ 3ರ ಅಡಿಯಲ್ಲಿ ಪಿಎಫ್‌ಐ ಕಾನೂನುಬಾಹಿರ ಎಂದು ಸೆಪ್ಟೆಂಬರ್ 28, 2022ರಂದು ಕೇಂದ್ರ ಸರ್ಕಾರ ಘೋಷಿಸಿ ಅದರ ಮೇಲೆ ಐದು ವರ್ಷಗಳ ನಿಷೇಧ ವಿಧಿಸಿತ್ತು. ದೇಶದ ಸಮಗ್ರತೆ, ಸಾರ್ವಭೌಮತೆ ಹಾಗೂ ಭದ್ರತೆಗೆ ಹಾನಿಯುಂಟು ಮಾಡುವ 'ಕಾನೂನುಬಾಹಿರ ಚಟುವಟಿಕೆಗಳಲ್ಲಿ' ತೊಡಗಿಸಿಕೊಂಡಿದೆ ಎಂದು ಸಂಘಟನೆ ವಿರುದ್ಧ ಆರೋಪ ಮಾಡಲಾಗಿತ್ತು.
ಯುಎಪಿಎ ನ್ಯಾಯಮಂಡಳಿಯು ಕಾಯಿದೆಯ ಸೆಕ್ಷನ್ 4ರ ಅಡಿಯಲ್ಲಿ ಆದೇಶ ಜಾರಿಗೊಳಿಸಿ ದೃಢೀಕರಿಸದ ಹೊರತು ಯಾವುದೇ ನಿಷೇಧವೂ ಜಾರಿಗೆ ಬರುವುದಿಲ್ಲ ಎಂದು ಯುಎಪಿಎ ಕಾಯಿದೆ ಒದಗಿಸುತ್ತದೆ. ಆದರೆ ಅಸಾಧಾರಣ ಸಂದರ್ಭಗಳಲ್ಲಿ ಕಾರಣಗಳನ್ನು ಲಿಖಿತವಾಗಿ ದಾಖಲಿಸಿದ ನಂತರ ಅಧಿಸೂಚನೆಯನ್ನು ತಕ್ಷಣವೇ ಜಾರಿಗೆ ತರಬಹುದಾಗಿದೆ. ನ್ಯಾಯಮಂಡಳಿ ಆ ಅಧಿಸೂಚನೆಯನ್ನು ಅನುಮೋದಿಸಬಹುದು ಇಲ್ಲವೇ ತಿರಸ್ಕರಿಸಬಹುದು.