
ರಾಜಸ್ಥಾನದಲ್ಲಿ ನಡೆದ ದರ್ಜಿ ಕನ್ಹಯ್ಯಾ ಲಾಲ್ ತೇಲಿ ಹತ್ಯೆ ಆಧರಿಸಿದ 'ಉದಯಪುರ ಫೈಲ್ಸ್' ಚಿತ್ರ ಒಂದು ನಿರ್ದಿಷ್ಟ ಅಪರಾಧವನ್ನು ಕುರಿತದ್ದಾಗಿದ್ದು, ಅದು ಯಾವುದೇ ನಿರ್ದಿಷ್ಟ ಸಮುದಾಯದ ವಿರುದ್ಧ ಇಲ್ಲ ಎಂದು ಕೇಂದ್ರ ಸರ್ಕಾರ ಗುರುವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಚಿತ್ರ ಅಪರಾಧ ಕುರಿತದ್ದಾಗಿದ್ದು ಅದು ಯಾವುದೇ ಸಮುದಾಯವನ್ನು ಅವಹೇಳನ ಮಾಡಿಲ್ಲ ಎಂದು ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ಅವರು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೊಯಮಲ್ಯ ಬಾಗ್ಚಿ ಅವರಿದ್ದ ಪೀಠಕ್ಕೆ ತಿಳಿಸಿದರು.
"ಆರೋಪಿಗಳೇ ಫೇಸ್‌ಬುಕ್‌ನಲ್ಲಿ ತಾವು ಶಿರಚ್ಛೇದ ಮಾಡಿರುವುದಾಗಿ ತಿಳಿಸಿದ್ದಾರೆ. ಚಿತ್ರ ಅಪರಾಧ ಕುರಿತದ್ದಾಗಿದ್ದು ಸಮುದಾಯವನ್ನು ಗುರಿಯಾಗಿರಿಸಿಕೊಂಡಿಲ್ಲ. ಸಂಭಾಷಣೆಗಳು ಸಾಮಾನ್ಯ. ಭಯೋತ್ಪಾದನೆಗೆ ಸಂಬಂಧಿಸಿದ ಉಲ್ಲೇಖಗಳಾಗಿದ್ದು ಚಿತ್ರದ ಸನ್ನಿವೇಶಕ್ಕೆ ತಕ್ಕಂತೆ ಇವೆ... ಇಲ್ಲಿನ ವಸ್ತುವಿಷಯಗಳು ಯಾವುದೇ ವಿದೇಶಗಳೊಂದಿಗಿನ ಬಾಂಧವ್ಯಕ್ಕೆ ಧಕ್ಕೆ ತರುವುದಿಲ್ಲ. ಸಮಿತಿಯ ಮುಂದೆ ಚಿತ್ರ ಪ್ರದರ್ಶಿಸಲಾಗಿದೆ... ವಿದೇಶಾಂಗ ಸಚಿವಾಲಯವನ್ನು ತನ್ನ ಶಿಫಾರಸು ನೀಡುವಂತೆ ಸಮಿತಿ ಆಹ್ವಾನಿಸಿತ್ತು. ಸಿಬಿಎಫ್‌ಸಿ ಆದೇಶಿಸಿದಂತೆ 55 ದೃಶ್ಯಗಳಿಗೆ ಕತ್ತರಿ ಪ್ರಯೋಗ ಮಾಡಲಾಗಿದೆ. ಚಿತ್ರ ಯಾವುದೇ ಸಮುದಾಯವನ್ನು ಅವಹೇಳನ ಮಾಡುವುದಿಲ್ಲ. ಚಿತ್ರಿಸಲಾದ ಎಲ್ಲಾ ಪಾತ್ರಗಳು ಕಾಲ್ಪನಿಕವಾದವು" ಎಂದು ಅವರು ಹೇಳಿದರು.
ಚಿತ್ರ ಯಾವುದೇ ಸಮುದಾಯವನ್ನು ಅವಹೇಳನ ಮಾಡುವುದಿಲ್ಲ. ಚಿತ್ರಿಸಲಾದ ಎಲ್ಲಾ ಪಾತ್ರಗಳು ಕಾಲ್ಪನಿಕ ಸಂಯೋಜನೆಗಳಾಗಿವೆ.
ಎಸ್.ಜಿ. ತುಷಾರ್ ಮೆಹ್ತಾ
ಚಿತ್ರ ಬಿಡುಗಡೆಗೆ ತಡೆ ನೀಡಿದ ದೆಹಲಿ ಹೈಕೋರ್ಟ್ ಆದೇಶದ ವಿರುದ್ಧ ಚಿತ್ರದ ನಿರ್ಮಾಪಕರು ಸಲ್ಲಿಸಿದ ಮೇಲ್ಮನವಿ; ಕನ್ಹಯ್ಯಾ ಲಾಲ್ ಕೊಲೆ ಪ್ರಕರಣದ ಆರೋಪಿಗಳಲ್ಲಿ ಒಬ್ಬರು ಚಿತ್ರ ಬಿಡುಗಡೆಯಾದರೆ ನ್ಯಾಯಯುತ ವಿಚಾರಣೆಯ ಹಕ್ಕಿಗೆ ಧಕ್ಕೆಯಾಗುತ್ತದೆ ಎಂದು ಸಲ್ಲಿಸಿದ ರಿಟ್ ಅರ್ಜಿ - ಹೀಗೆ ಎರಡು ಮನವಿಗಳ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.
ಜಮಿಯತ್ ಉಲೇಮಾ-ಇ-ಹಿಂದ್ ಅಧ್ಯಕ್ಷ ಮೌಲಾನಾ ಅರ್ಷದ್ ಮದನಿ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಮುಸ್ಲಿಂ ಸಮುದಾಯದ ವಿರುದ್ಧ ನಂಜು ಕಾರುವ ರೀತಿಯಲ್ಲಿ ಇಡೀ ಸಿನಿಮಾ ನಿರ್ಮಿಸಲಾಗಿದೆ ಎಂದು ದೂರಿದರು. ದ್ವೇಷ ಭಾಷಣವು ವಾಕ್ ಸ್ವಾತಂತ್ರ್ಯವಲ್ಲ ಎಂದರು.
ʼಚಿತ್ರ ಇಡಿಯಾಗಿ ಒಂದು ಸಮುದಾಯದ ವಿರುದ್ಧ ನಂಜು ಕಾರುತ್ತಿದೆʼ
ಕಪಿಲ್ ಸಿಬಲ್
ಪ್ರಕರಣದ ಆರೋಪಿಗಳಲ್ಲಿ ಒಬ್ಬರಾದ ಮೊಹಮ್ಮದ್ ಜಾವೇದ್ ಪರ ವಾದ ಮಂಡಿಸಿದ ಹಿರಿಯ ವಕೀಲೆ ಮೇನಕಾ ಗುರುಸ್ವಾಮಿ, ಚಿತ್ರ ತಮ್ಮ ಕಕ್ಷಿದಾರರ ನ್ಯಾಯಯುತ ವಿಚಾರಣೆಯ ಹಕ್ಕಿನ ಮೇಲೆ ಪರಿಣಾಮ ಬೀರಬಹುದು ಎಂದರು.
ಮಾಧ್ಯಮ ವಿಚಾರಣೆಗಳು, ಸಾರ್ವಜನಿಕ ಅಭಿಪ್ರಾಯಗಳು ಅಥವಾ ನಿಜ ಜೀವನ ಅಪರಾಧಗಳನ್ನು ಆಧರಿಸಿದ ಚಿತ್ರಗಳಿಂದ ಪ್ರಭಾವಿತರಾಗದಂತೆ ನ್ಯಾಯಾಧೀಶರಿಗೆ ತರಬೇತಿ ನೀಡಲಾಗಿರುವುದರಿಂದ, ಚಿತ್ರ ಬಿಡುಗಡೆ ವಿರೋಧಿಸುವ ವಕೀಲರು ಅವರನ್ನು ಗೌಣವಾಗಿ ಕಾಣಬಾರದು ಎಂದು ಮೇನಕಾ ಅವರನ್ನು ಉದ್ದೇಶಿಸಿ ಪೀಠ ಹೇಳಿತು.
"ಆದರೆ ಸಮಾಜವು ಪೂರ್ವಾಗ್ರಹ ಪೀಡಿತವಾಗುತ್ತದೆ " ಎಂದು ಮೇನಕಾ ಹೇಳಿದರು.
"ಸಮಾಜ ಯಾವಾಗಲೂ ಹೀಗೆಯೇ ಇರುತ್ತದೆ. ನ್ಯಾಯಾಂಗವು ಈ ಅಸಂಬದ್ಧತೆಯಿಂದ ಪ್ರಭಾವಿತವಾಗಬಾರದು. ನಮ್ಮಲ್ಲಿ ಹೆಚ್ಚಿನವರು ಬೆಳಿಗ್ಗೆ ಪತ್ರಿಕೆ ಓದುವುದಿಲ್ಲ. ನಾವು ಅದರ ಬಗ್ಗೆ ಎಂದಿಗೂ ಚಿಂತಿಸುವುದಿಲ್ಲ" ಎಂದು ನ್ಯಾಯಮೂರ್ತಿ ಕಾಂತ್ ಟೀಕಿಸಿದರು.
ಈ ಮಧ್ಯೆ ಚಿತ್ರದ ನಿರ್ಮಾಪಕರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಗೌರವ್ ಭಾಟಿಯಾ , ಚಿತ್ರ ಬಿಡುಗಡೆಗೆ ಅವಕಾಶ ನೀಡುವಲ್ಲಿ ವಿಳಂಬ ಉಂಟಾಗಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ವಿಚಾರಣೆ ನಾಳೆಯೂ (ಶುಕ್ರವಾರ) ಮುಂದುವರೆಯಲಿದೆ.