ಮಹಾರಾಷ್ಟ್ರ ಸಿಎಂ ಆಗಿ ಶಿಂಧೆ ನೇಮಕ ಮಾಡಿದ ರಾಜ್ಯಪಾಲರ ನಿರ್ಧಾರ ಪ್ರಶ್ನಿಸಿ ಸುಪ್ರೀಂ ಕದತಟ್ಟಿದ ಉದ್ಧವ್‌ ಬಣ

ಸಂವಿಧಾನದಲ್ಲಿ ನಿಷೇಧಿಸಲಾಗಿರುವುದನ್ನು ರಾಜ್ಯಪಾಲರ ನಿರ್ಧಾರವು ಶಾಸನಬದ್ಧಗೊಳಿಸುತ್ತದೆ ಎಂದು ಮನವಿಯಲ್ಲಿ ಆಕ್ಷೇಪಿಸಲಾಗಿದೆ.
Eknath Shinde, Uddhav Thackeray with Supreme Court
Eknath Shinde, Uddhav Thackeray with Supreme Court

ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರ ರಚಿಸಲು ಏಕನಾಥ್‌ ಶಿಂಧೆ ಅವರನ್ನು ಆಹ್ವಾನಿಸಿದ ರಾಜ್ಯಪಾಲ ಭಗತ್‌ ಸಿಂಗ್‌ ಕೋಶ್ಯಾರಿ ಅವರ ನಿರ್ಧಾರವನ್ನು ಪ್ರಶ್ನಿಸಿ ಶಿವಸೇನೆಯ ಉದ್ಧವ್‌ ಠಾಕ್ರೆ ಬಣವು ಸುಪ್ರೀಂ ಕೋರ್ಟ್‌ನಲ್ಲಿ ಹೊಸ ಮನವಿ ಸಲ್ಲಿಸಿದೆ.

ಶಿವಸೇನೆಯ ಪ್ರಧಾನ ಕಾರ್ಯದರ್ಶಿ ಸುಭಾಷ್‌ ದೇಸಾಯಿ ಅವರು ಸಲ್ಲಿಸಿರುವ ಮನವಿಯನ್ನು ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ಜೆ ಕೆ ಮಹೇಶ್ವರಿ ಅವರ ವಿಭಾಗೀಯ ಪೀಠದ ಮುಂದೆ ಹಿರಿಯ ವಕೀಲ ದೇವದತ್‌ ಕಾಮತ್‌ ಅವರು ಉಲ್ಲೇಖಿಸಿದರು.

ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಈಗಾಗಲೇ ಸಲ್ಲಿಕೆಯಾಗಿರುವ ಮನವಿಗಳ ಜೊತೆ ಸದರಿ ಮನವಿಯನ್ನು ಜುಲೈ 11ರಂದು ವಿಚಾರಣೆ ನಡೆಸಲಾಗುವುದು ಎಂದು ಪೀಠ ಹೇಳಿತು.

ಶಿಂಧೆ ಅವರನ್ನು ಸರ್ಕಾರ ರಚಿಸಲು ಆಹ್ವಾನಿಸಿದ ನಿರ್ಧಾರವಲ್ಲದೇ ಜುಲೈ 3ರಂದು ಮಹಾರಾಷ್ಟ್ರ ವಿಧಾನಸಭೆಯಲ್ಲಿ ನಡೆದ ಪ್ರಕ್ರಿಯೆಯನ್ನು ವಜಾ ಮಾಡಬೇಕು. ಅಲ್ಲದೇ, ಅದೇ ಸಭೆಯಲ್ಲಿ ನಡೆಸಲಾದ ಸ್ಪೀಕರ್‌ ಆಯ್ಕೆ ಚುನಾವಣೆಯನ್ನೂ ವಜಾ ಮಾಡಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.

ಶಿಂಧೆ ಸೇರಿದಂತೆ 16 ಬಂಡಾಯ ಶಾಸಕರ ಅನರ್ಹ ಪ್ರಕರಣವನ್ನು ಸ್ಪೀಕರ್‌ ಅವರಿಂದ ಹಿಂಪಡೆದು ಅದನ್ನು ಸುಪ್ರೀಂ ಕೋರ್ಟ್‌ ನಿರ್ಧರಿಸಬೇಕು ಎಂದು ಮನವಿ ಮಾಡಲಾಗಿದೆ. ಪ್ರಶ್ನಾತೀತವಾಗಿ ಶಿವಸೇನೆಯ ನೇತೃತ್ವ ವಹಿಸಿರುವ ಉದ್ಧವ್‌ ಠಾಕ್ರೆ ಅವರ ಉದ್ದೇಶಕ್ಕೆ ವಿರುದ್ಧವಾಗಿ ಸ್ವಯಂಪ್ರೇರಿತವಾಗಿ ಸದಸ್ಯತ್ವ ತ್ಯಜಿಸಿರುವ ಬಂಡಾಯ ಶಾಸಕ ಏಕನಾಥ್‌ ಶಿಂಧೆ ಅವರನ್ನು ಸದನದ ನಾಯಕರಾಗಿ ಮತ್ತು ಮತ್ತೊಬ್ಬ ಬಂಡಾಯ ಶಾಸಕರನ್ನು ಶಿವಸೇನೆಯ ಮುಖ್ಯ ವಿಪ್‌ ಆಗಿ ನೇಮಕ ಮಾಡುವ ಮೂಲಕ ಕಾನೂನುಬಾಹಿರವಾಗಿ ಸ್ಪೀಕರ್‌ ಅವರು ಗೊಂದಲ ಸೃಷ್ಟಿಸಿದ್ದಾರೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಸಂವಿಧಾನದ ಹತ್ತನೇ ಷೆಡ್ಯೂಲ್‌ ಪ್ರಕಾರ ಶಿಂಧೆ ನೇತೃತ್ವದ ಬಂಡಾಯ ಶಾಸಕರ ಬಣವು ವಿಧಾನಸಭೆಯಲ್ಲಿ ಯಾವುದೇ ಪಕ್ಷದ ಜೊತೆ ಸೇರಿಕೊಂಡಿಲ್ಲ ಅಥವಾ ಹೊಸ ಪಕ್ಷವನ್ನು ಹುಟ್ಟುಹಾಕಿಲ್ಲ. ಒಂದೊಮ್ಮೆ ಬಂಡಾಯ ಶಾಸಕರು 2/3ರಷ್ಟು ಶಾಸಕಾಂಗ ಪಕ್ಷದ ಬಲ ಹೊಂದಿದ್ದಾರೆ ಎಂದುಕೊಂಡರೂ ಇದಕ್ಕೆ ಪಕ್ಷಾಂತರದ ಗೋಡೆ ಎದುರಾಗಲಿದ್ದು, ಅದಕ್ಕೆ ಹತ್ತನೇ ಷೆಡ್ಯೂಲ್‌ನ ಪ್ಯಾರಾ 4ರಲ್ಲಿ ಉಲ್ಲೇಖಿಸಿರುವ ರಕ್ಷಣೆ ದೊರೆಯದು ಎಂದು ಮನವಿಯಲ್ಲಿ ಹೇಳಲಾಗಿದೆ.

“ಶಿವಸೇನೆಯ ಅಧ್ಯಕ್ಷರಾದ ಉದ್ಧವ್‌ ಠಾಕ್ರೆ ಅವರು ಸಾರ್ವಜನಿಕವಾಗಿ ಬಿಜೆಪಿಗೆ ಬೆಂಬಲ ಸೂಚಿಸಿಲ್ಲ. ಹೀಗಿರುವಾಗ, ಶಿವಸೇನೆಯ 39 ಶಾಸಕರ ಬಂಡಾಯದ ನೇತೃತ್ವವಹಿಸಿರುವ ನಾಲ್ಕನೇ ಪ್ರತಿವಾದಿಯನ್ನು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ರಾಜ್ಯಪಾಲರು ಆಹ್ವಾನಿಸುವುದು ಅಸಾಂವಿಧಾನಿಕ. ಸಂವಿಧಾನದ ಹತ್ತನೇ ಷೆಡ್ಯೂಲ್‌ ಪ್ರಕಾರ ರಾಜಕೀಯ ಪಕ್ಷದ ಬಂಡಾಯ ಶಾಸಕರನ್ನು ಪರಿಗಣಿಸುವುದಕ್ಕೆ ನಿಷೇಧ ವಿಧಿಸಲಾಗಿದೆ. ಸಂವಿಧಾನದಲ್ಲಿ ನಿಷೇಧಿಸಿರುವುದನ್ನು ರಾಜ್ಯಪಾಲರ ನಡೆಯು ಶಾಸನಬದ್ಧಗೊಳಿಸಿದೆ. ಸಂವಿಧಾನ ನಿಷೇಧಿಸುವುದನ್ನು ರಾಜ್ಯಪಾಲರು ಪರಿಗಣಿಸುವಂತೆ ಮಾಡಿದ್ದಾರೆ” ಎಂದು ಮನವಿಯಲ್ಲಿ ಆಕ್ಷೇಪಿಸಲಾಗಿದೆ.

ಶಿವಸೇನೆ ಯಾರಿಗೆ ಸೇರಿದೆ ಎಂಬುದನ್ನು ಚುನಾವಣಾ ಆಯೋಗವು ನಿರ್ಧರಿಸಬೇಕೆ ವಿನಾ ಅದನ್ನು ನಿರ್ಧರಿಸಲು ರಾಜ್ಯಪಾಲರಿಗೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಮನವಿಯಲ್ಲಿ ತಗಾದೆ ಎತ್ತಲಾಗಿದೆ.

Related Stories

No stories found.
Kannada Bar & Bench
kannada.barandbench.com