ಸ್ಪೀಕರ್‌ ನಿಲುವಿಗೆ ಶಿವಸೇನೆಯ ಎರಡು ಬಣಗಳ ಆಕ್ಷೇಪ: ಸುಪ್ರೀಂ ಕದ ತಟ್ಟಿದ ಉದ್ಧವ್‌, ಹೈಕೋರ್ಟ್‌ಗೆ ಶಿಂಧೆ

ಶಿಂಧೆ ಬಣದ ಶಾಸಕರ ವಿರುದ್ಧ ಉದ್ಧವ್ ಠಾಕ್ರೆ ಪಾಳೆಯ ಮತ್ತು ಠಾಕ್ರೆ ಪಾಳೆಯದ ವಿರುದ್ಧ ಶಿಂಧೆ ಬಣ ಸಲ್ಲಿಸಿದ್ದ ಅನರ್ಹತೆ ಅರ್ಜಿಗಳನ್ನು ಸ್ಪೀಕರ್ ವಜಾಗೊಳಿಸಿದ್ದರು.
ಏಕನಾಥ್ ಶಿಂಧೆ, ಉದ್ಧವ್ ಠಾಕ್ರೆ ಮತ್ತು ಸುಪ್ರೀಂ ಕೋರ್ಟ್
ಏಕನಾಥ್ ಶಿಂಧೆ, ಉದ್ಧವ್ ಠಾಕ್ರೆ ಮತ್ತು ಸುಪ್ರೀಂ ಕೋರ್ಟ್ಫೇಸ್ ಬುಕ್

ಏಕನಾಥ್‌ ಶಿಂಧೆ ಬಣವೇ ನಿಜವಾದ ಶಿವಸೇನೆ ಎಂದು ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್‌ ರಾಹುಲ್‌ ನಾರ್ವೇಕರ್‌ ಅವರು ತಳೆದ ನಿಲುವು ಮತ್ತು ಶಿಂಧೆ ಹಾಗೂ 38 ಶಾಸಕರ ವಿರುದ್ಧದ ಅನರ್ಹತೆ ಅರ್ಜಿಗಳನ್ನು ವಜಾಗೊಳಿಸಿದ್ದನ್ನು ಪ್ರಶ್ನಿಸಿ ಪಕ್ಷದ ಉದ್ಧವ್‌ ಠಾಕ್ರೆ ಬಣ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ. ಇದರ ಬೆನ್ನಿಗೇ ಶಿಂಧೆ ಬಣ ಕೂಡ ಮಹಾರಾಷ್ಟ್ರ ಹೈಕೋರ್ಟ್‌ ಮೆಟ್ಟಿಲೇರಿದ್ದು ಉದ್ಧವ್‌ ಬಣದ ಹದಿನಾಲ್ಕು ಶಾಸಕರನ್ನು ಅನರ್ಹಗೊಳಿಸದೇ ಇರುವುದನ್ನು ಅದು ಪ್ರಶ್ನಿಸಿದೆ.

ಶಿಂಧೆ ಬಣದ ಶಾಸಕರ ವಿರುದ್ಧ ಉದ್ಧವ್ ಠಾಕ್ರೆ ಪಾಳೆಯ ಮತ್ತು ಠಾಕ್ರೆ ಪಾಳೆಯದ ವಿರುದ್ಧ ಶಿಂಧೆ ಬಣ ಸಲ್ಲಿಸಿದ್ದ ಅನರ್ಹತೆ ಅರ್ಜಿಗಳನ್ನು ಸ್ಪೀಕರ್ ವಜಾಗೊಳಿಸಿದ್ದರು.

ಈ ತೀರ್ಪಿನಿಂದಾಗಿ ಶಿಂಧೆ ಬಣವು ಬಿಜೆಪಿ ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಅಜಿತ್ ಪವಾರ್ ಬಣದ ಬೆಂಬಲದೊಂದಿಗೆ ರಾಜ್ಯದಲ್ಲಿ ಅಧಿಕಾರದಲ್ಲಿ ಮುಂದುವರಿಯುತ್ತದೆ. ಸ್ಪೀಕರ್‌ ನಿಲುವನ್ನು ಇದೀಗ ಠಾಕ್ರೆ ಬಣ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದೆ.

ಇತ್ತ ಉದ್ಧವ್ ಬಣಕ್ಕೆ ಸೇರಿದ ಹದಿನಾಲ್ಕು ಶಾಸಕರ ವಿರುದ್ಧ ಸಲ್ಲಿಸಿದ್ದ ಅನರ್ಹತೆ ಅರ್ಜಿಗಳನ್ನು ಮಹಾರಾಷ್ಟ್ರ ಸ್ಪೀಕರ್ ವಜಾಗೊಳಿಸಿದ್ದನ್ನು ಪ್ರಶ್ನಿಸಿ ಶಿವಸೇನೆಯ ಮುಖ್ಯ ಸಚೇತಕರೂ ಆಗಿರುವ ಏಕನಾಥ್ ಶಿಂಧೆ ಬಣದ ಸದಸ್ಯ ಭರತ್ ಗೋಗಾವಲೆ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಉದ್ಧವ್ ಠಾಕ್ರೆ ಬಣದ ಸದಸ್ಯರು ವಿಪ್ ಉಲ್ಲಂಘಿಸಿದ್ದಲ್ಲದೆ, ತಮ್ಮ ಕೃತ್ಯಗಳು ಮತ್ತು ಲೋಪಗಳಿಂದ ಶಿವಸೇನೆ ರಾಜಕೀಯ ಪಕ್ಷದ ಸದಸ್ಯತ್ವವನ್ನು ಸ್ವಯಂಪ್ರೇರಿತವಾಗಿ ತ್ಯಜಿಸಿದ್ದಾರೆ ಎಂದು ಗೋಗಾವಲೆ ವಾದಿಸಿದ್ದಾರೆ.

ಜುಲೈ 4, 2023 ರಂದು ವಿಧಾನಸಭೆಯಲ್ಲಿ ನಡೆದ ವಿಶ್ವಾಸ ಮತ ಯಾಚನೆ ಸಮಯದಲ್ಲಿ ಕಾಂಗ್ರೆಸ್ ಮತ್ತು ಎನ್‌ಸಿಪಿಯೊಂದಿಗೆ ಸೇರಿಕೊಂಡು ಠಾಕ್ರೆ ಶಾಸಕರು ಶಿವಸೇನೆ ಸರ್ಕಾರದ ವಿರುದ್ಧ ಮತ ಚಲಾಯಿಸಿದ್ದಾರೆ ಎಂಬುದನ್ನು ಗಣನೆಗೆ ತೆಗೆದುಕೊಳ್ಳಲು ಸ್ಪೀಕರ್ ವಿಫಲರಾಗಿದ್ದಾರೆ ಎಂದು ಶಿಂಧೆ ಬಣ ಹೇಳಿಕೊಂಡಿದೆ.

ಶಿವಸೇನೆ ಪಕ್ಷದಲ್ಲಿ ಜೂನ್ 2022 ರಲ್ಲಿ ಬಿರುಕು ಮೂಡಿತ್ತು. ಉದ್ಧವ್ ಠಾಕ್ರೆ ನೇತೃತ್ವದ ಅವಿಭಜಿತ ಶಿವಸೇನೆ ಕಾಂಗ್ರೆಸ್ ಮತ್ತು ಎನ್‌ಸಿಪಿಯೊಂದಿಗೆ ಮೈತ್ರಿ (ಮಹಾ ವಿಕಾಸ್ ಅಘಾಡಿ ಎಂದು ಕರೆಯಲಾಗುತ್ತದೆ) ಮಾಡಿಕೊಂಡು ಮಹಾರಾಷ್ಟ್ರದಲ್ಲಿ ಅಧಿಕಾರ ನಡೆಸುತ್ತಿತ್ತು. ಬಳಿಕ ಬಿಜೆಪಿ ಮತ್ತು ಎನ್‌ಸಿಪಿಯ ಅಜಿತ್ ಪವಾರ್ ಬಣದೊಂದಿಗೆ ಮೈತ್ರಿ ಮಾಡಿಕೊಂಡು ಶಿವಸೇನೆಯ ಏಕನಾಥ್ ಶಿಂಧೆ ಬಣವು ಗದ್ದುಗೆ ಹಿಡಿಯಿತು.

ಎರಡೂ ಬಣಗಳ ಸದಸ್ಯರು ಪಕ್ಷದ ಮುಖ್ಯ ಸಚೇತಕರ ಆದೇಶ ಪಾಲಿಸಿಲ್ಲ ಎಂಬುದು ಅನರ್ಹತೆಗಾಗಿ ಸಲ್ಲಿಸಿದ್ದ ಅರ್ಜಿಗಳ ಆರೋಪವಾಗಿತ್ತು.

ಶಿಂಧೆ ಬಣವು 55 ಶಾಸಕರ ಪೈಕಿ 37 ಮಂದಿಯ ಬಹುಮತ ಹೊಂದಿದ ಪರಿಣಾಮ ಸುನಿಲ್ ಪ್ರಭು ಅವರು ಪಕ್ಷದ ವಿಪ್ ಅಲ್ಲ ಎಂದು ಸ್ಪೀಕರ್‌ ನಾರ್ವೇಕರ್‌ ಜನವರಿ 10ರಂದು ನಿರ್ಧರಿಸಿದ್ದರು. ಹೀಗಾಗಿ ಶಿವಸೇನೆ ಶಾಸಕಾಂಗ ಪಕ್ಷದ ಸಭೆ ಕರೆಯಲು ಸುನಿಲ್‌ ಪ್ರಭು ಅವರಿಗೆ ಯಾವುದೇ ಅಧಿಕಾರ ಇಲ್ಲ ಮತ್ತು ಸಭೆ ಕರೆ ನೀಡುವ ವಾಟ್ಸಾಪ್‌ ಸಂದೇಶವನ್ನು 12 ಗಂಟೆಗಳಷ್ಟು ಕಡಿಮೆ ಅವಧಿಯಲ್ಲಿ ಕಳಿಸಲಾಗಿದೆ ಎಂದು ಒತ್ತಿ ಹೇಳಿದ್ದರು.

ಇದಲ್ಲದೆ, ಭರತ್ ಗೋಗಾವಲೆ ಅವರನ್ನು ಪಕ್ಷದ ವಿಪ್ ಆಗಿ ನೇಮಿಸಿರುವುದು ಮತ್ತು ಏಕನಾಥ್ ಶಿಂಧೆ ಅವರು ನಾಯಕರಾಗಿ ಆಯ್ಕೆಯಾಗಿರುವುದು ಸಿಂಧುವಾಗಿದೆ ಎಂದು ಎಂದು ಅವರು ತೀರ್ಪು ನೀಡಿದ್ದರು.

ಅನರ್ಹತೆ ಅರ್ಜಿಗಳನ್ನು ನಿರ್ಧರಿಸಲು ಸ್ಪೀಕರ್ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಡಿಸೆಂಬರ್ 31ರೊಳಗೆ ನಿರ್ಧಾರ ತೆಗೆದುಕೊಳ್ಳುವಂತೆ ಸುಪ್ರೀಂ ಕೋರ್ಟ್‌ ಸ್ಪೀಕರ್‌ ಅವರಿಗೆ ಆದೇಶಿಸಿತ್ತು.

Kannada Bar & Bench
kannada.barandbench.com