ಉದುಮಲ್ ಪೇಟೆ ಮರ್ಯಾದಗೇಡು ಹತ್ಯೆ: ಕೌಶಲ್ಯ ಪೋಷಕರು, ಸೋದರ ಮಾವನ ಖುಲಾಸೆ ಪ್ರಶ್ನಿಸಿದ್ದ ಮನವಿ ಆಧರಿಸಿ ನೋಟಿಸ್ ಜಾರಿ

ಆರೋಪಿಗಳು ವಿದೇಶ ಪ್ರಯಾಣಕೈಗೊಳ್ಳದಂತೆ ನಿರ್ದೇಶಿಸುವಂತೆ ಕೋರಿದ್ದ ಅರ್ಜಿದಾರರ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.
Supreme Court
Supreme Court

ಉದುಮಲ್ ಪೇಟೆ ಮರ್ಯಾದಗೇಡು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೌಶಲ್ಯ ಪೋಷಕರು ಹಾಗೂ ಸೋದರ ಮಾವನನ್ನು ಖುಲಾಸೆಗೊಳಿಸಿದ್ದನ್ನು ಪ್ರಶ್ನಿಸಿದ್ದ ಮನವಿಯನ್ನು ಆಧರಿಸಿ ಸುಪ್ರೀಂ ಕೋರ್ಟ್ ಸೋಮವಾರ ನೋಟಿಸ್ ಜಾರಿಗೊಳಿಸಿದೆ.

ನ್ಯಾಯಮೂರ್ತಿಗಳಾದ ಸಂಜಯ್ ಕೌಲ್, ಅನಿರುದ್ಧ ಬೋಸ್ ಮತ್ತು ಕೃಷ್ಣ ಮುರಾರಿ ನೇತೃತ್ವದ ತ್ರಿಸದಸ್ಯ ಪೀಠವು ಪ್ರಕರಣವನ್ನು ವಿಸ್ತೃತವಾಗಿ ವಿಚಾರಣೆಗೆ ಒಳಪಡಿಸುವ ಅಗತ್ಯವಿದ್ದು, ಅದಕ್ಕಾಗಿ ಮನವಿ ಸಲ್ಲಿಸಲು ವಿಶೇಷ ಅವಕಾಶ (ಸ್ಪೆಷಲ್‌ ಲೀವ್‌) ಒದಗಿಸಿತು.

ತಮಿಳುನಾಡು ಸರ್ಕಾರವನ್ನು ಪ್ರಕರಣದಲ್ಲಿ ಒಳಗೊಳ್ಳುವ ರೀತಿಯಲ್ಲಿ ಪಕ್ಷಕಾರರ ಪಟ್ಟಿಗೆ ತಿದ್ದುಪಡಿಯ ಅಗತ್ಯವಿದೆ ಎಂದು ಪೀಠವು ಸೂಚಿಸಿತು.

ಅರ್ಜಿದಾರರನ್ನು ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ನಿತ್ಯಾ ರಾಮಕೃಷ್ಣನ್ ಅವರು ಆರೋಪಿಗಳು ವಿದೇಶ ಪ್ರಯಾಣ ಮಾಡದಂತೆ ತಡೆಯಲು ಆದೇಶಿಸುವಂತೆ ನ್ಯಾಯಾಲಯವನ್ನು ಕೋರಿದರು. ಆದರೆ, ಅಂಥ ಆದೇಶ ಹೊರಡಿಸಲು ನ್ಯಾಯಾಲಯ ನಿರಾಕರಿಸಿತು.

ತಮಿಳುನಾಡಿನ ಹೆಚ್ಚುವರಿ ಅಡ್ವೊಕೇಟ್ ಜನರಲ್ ಬಾಲಾಜಿ ಶ್ರೀನಿವಾಸನ್ ಅವರು ಪ್ರಕರಣದ ವಿಚಾರಣೆಯನ್ನು ತ್ವರಿತಗೊಳಿಸುವಂತೆ ಕೋರಿದರು. ಇದಕ್ಕೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಇನ್ನಷ್ಟೇ ಪೂರ್ಣಗೊಳ್ಳಬೇಕಿದೆ ಎಂದು ನ್ಯಾಯಾಲಯ ಹೇಳಿತು.

2016ರ ಮಾರ್ಚ್ ನಲ್ಲಿ ದಲಿತ ಕಾರ್ಯಕರ್ತೆ ಕೌಶಲ್ಯ ಹಾಗೂ ಆಕೆಯ ಪತಿ ಶಂಕರ್ ಮೇಲೆ ಉದುಮಲ್ ಪೇಟೆ ಬಸ್ ನಿಲ್ದಾಣದಲ್ಲಿ ನಡೆದ ದಾಳಿ ದೇಶವನ್ನೇ ಆಘಾತಗೊಳಿಸಿತ್ತು. ಘಟನೆಯಲ್ಲಿ ಕೌಶಲ್ಯ ಚೇತರಿಸಿಕೊಂಡರೆ ಶಂಕರ್ ಸಾವನ್ನಪ್ಪಿದ್ದರು. ಮರ್ಯಾದುಗೇಡು ಹತ್ಯೆಯ ವಿಡಿಯೋ ವೈರಲ್ ಆಗಿ, ತಮಿಳುನಾಡಿನಲ್ಲಿ ವ್ಯಾಪಕ ಪ್ರತಿಭಟನೆ ನಡೆದಿತ್ತು.

ಪಳನಿಯ ಚಾಲಕ ಮತ್ತು ಸ್ಥಳೀಯ ಲೇವಾದೇವಿಗಾರರಾದ ಕೌಶಲ್ಯ ತಂದೆ ಚಿನ್ನಸ್ವಾಮಿ ಅವರು ಶಂಕರ್ ಹತ್ಯೆಗೆ ಸುಪಾರಿ ನೀಡಿದ್ದರು. ಪತಿ ಹತ್ಯೆಗೆ ಸಂಬಂಧಿಸಿದಂತೆ ತನ್ನ ಪೋಷಕರು ಮತ್ತು ಇತರರ ವಿರುದ್ಧದ ಪ್ರಕರಣದಲ್ಲಿ ಕೌಶಲ್ಯ ಪ್ರಮುಖ ಪ್ರಾಷಿಕ್ಯೂಷನ್ ಸಾಕ್ಷಿಯಾಗಿ ಹೊರಹೊಮ್ಮಿದ್ದರು.
2017ರ ಡಿಸೆಂಬರ್ ನಲ್ಲಿ ಕೆಳ ನ್ಯಾಯಾಲಯವು ಕೌಶಲ್ಯ ತಾಯಿ ಅಣ್ಣಾಲಕ್ಷ್ಮಿ ಮತ್ತು ಚಿಕ್ಕಪ್ಪ ಪಂಡಿದೊರೈ ಅವರನ್ನು ಖುಲಾಸೆಗೊಳಿಸಿತ್ತು. ಕೊಲೆಗೆ ಕಾರಣರಾದ ಐವರನ್ನು ಅಪರಾಧಿಗಳು ಎಂದು ಘೋಷಿಸಿ ಅವರಿಗೆ ಮರಣದಂಡನೆ ಶಿಕ್ಷೆ ಪ್ರಕಟಿಸಿತ್ತು.

Also Read
ಎನ್ಎಲ್ಎಟಿ ಪ್ರವೇಶ ಪರೀಕ್ಷೆ: ವಿಶೇಷಚೇತನ ಅಭ್ಯರ್ಥಿಗಳಿಗೆ ಸೂಚನೆ ಬಿಡುಗಡೆ ಮಾಡಿದ ಎನ್ಎಲ್‌ಎಸ್‌ಐಯು

ಜೂನ್ 22ರಂದು ಮದ್ರಾಸ್ ಹೈಕೋರ್ಟ್‌ ನ ವಿಭಾಗೀಯ ಪೀಠವು ಕೌಶಲ್ಯ ತಂದೆ ಚಿನ್ನಸ್ವಾಮಿ ಅವರನ್ನು ಪ್ರಕರಣದಲ್ಲಿ ಖುಲಾಸೆಗೊಳಿಸಿದ್ದಲ್ಲದೇ ಅವರ ವಿರುದ್ಧದ ಕ್ರಿಮಿನಲ್ ಪಿತೂರಿ ಸೇರಿದಂತೆ ಎಲ್ಲಾ ಪ್ರಕರಣಗಳನ್ನು ಬದಿಗೆ ಸರಿಸಿತ್ತು.

ಕೆಳ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿದ್ದ ಹೈಕೋರ್ಟ್, ಅಪರಾಧಿಗಳಿಗೆ ವಿಧಿಸಲಾಗಿದ್ದ ಮರಣ ದಂಡನೆ ಶಿಕ್ಷೆಯನ್ನು ಆಜೀವ ಶಿಕ್ಷೆಯನ್ನಾಗಿ ಮಾರ್ಪಡಿಸಿತ್ತು. ಈ ಪೈಕಿ 25 ವರ್ಷಗಳ ಕಾಲ ಯಾವುದೇ ಮಾಫಿ ನೀಡಬಾರದು ಎಂಬ ಷರತ್ತನ್ನು ನ್ಯಾಯಾಲಯ ವಿಧಿಸಿದೆ.

Related Stories

No stories found.
Kannada Bar & Bench
kannada.barandbench.com