ಉಡುಪಿ ಶ್ರೀಕೃಷ್ಣ ಮಠದಿಂದ ವಾರ್ಷಿಕ 1,087 ಕೆಜಿ ಶ್ರೀಗಂಧಕ್ಕೆ ಕೋರಿಕೆ: 10 ಕೆಜಿಗೆ ಮಾತ್ರ ಅರ್ಹ ಎಂದ ಹೈಕೋರ್ಟ್‌

ಶ್ರೀಕೃಷ್ಣ ಮಠದಂಥ ಸಂಸ್ಥೆಗಳು ಧಾರ್ಮಿಕ ಚಟುವಟಿಕೆಗಳಿಗೆ ಅಗತ್ಯವಾದ ಶ್ರೀಗಂಧ ಬೆಳೆಯಲು ಸಾಧ್ಯವಿದೆಯೇ ಎಂಬುದನ್ನು ಪರಿಗಣಿಸಬೇಕು. ಸಾಧ್ಯವಿದ್ದಲ್ಲಿ ಅಗತ್ಯ ನೀತಿ ರೂಪಿಸಲು ಅರಣ್ಯ ಇಲಾಖೆ ಕ್ರಮಕೈಗೊಳ್ಳಬೇಕು ಎಂದು ಹೈಕೋರ್ಟ್‌ ಹೇಳಿದೆ.
Sri Krishna Mutt
Sri Krishna Mutt
Published on

ಕಾಲ ಬದಲಾಗಿದ್ದು, ಶ್ರೀಗಂಧದ ಮರಗಳನ್ನು ರಕ್ಷಿಸಬೇಕಿದೆ. ಹೀಗಾಗಿ, ಉಡುಪಿಯ ಶ್ರೀಕೃಷ್ಣ ಮಠಕ್ಕೆ 1,087 ಕೆಜಿ ಶ್ರೀಗಂಧ ಪೂರೈಸಲಾಗದು ಎಂದಿರುವ ಕರ್ನಾಟಕ ಹೈಕೋರ್ಟ್‌ ನಿಯಮಾನುಸಾರ ಪ್ರತಿವರ್ಷ10 ಕೆಜಿ ಶ್ರೀಗಂಧ ಪೂರೈಸುವಂತೆ ರಾಜ್ಯ ಸರ್ಕಾರಕ್ಕೆ ಈಚೆಗೆ ನಿರ್ದೇಶಿಸಿದೆ.

1921ರಿಂದ ವಾರ್ಷಿಕ 1,087 ಕೆಜಿ ಶ್ರೀಗಂಧ ಪೂರೈಸುತ್ತಿರುವುದನ್ನು ಮುಂದುವರಿಸಲು ನಿರ್ದೇಶಿಸುವಂತೆ ಕೋರಿ ಉಡುಪಿಯ ಶ್ರೀಕೃಷ್ಣ ಮಠ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ಏಕಸದಸ್ಯ ಪೀಠ ಭಾಗಶಃ ಪುರಸ್ಕರಿಸಿದೆ.

Justice Suraj Govindraj
Justice Suraj Govindraj

“ಉಡುಪಿಯ ಶ್ರೀಕೃಷ್ಣ ಮಠವು 10 ಕೆಜಿ ಶ್ರೀಗಂಧದ ಕಟ್ಟಿಗೆ ಪೂರೈಸಲು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಬೇಕು. ಅನ್ವಯಿಸುವ ನೀತಿಯನ್ನು ಪರಿಗಣಿಸಿ ತಿಂಗಳ ಒಳಗೆ ಉಡುಪಿ ಜಿಲ್ಲಾಧಿಕಾರಿ ಶ್ರೀಕೃಷ್ಣ ಮಠಕ್ಕೆ 10 ಕೆಜಿ ಶ್ರೀಗಂಧ ಪೂರೈಸಬೇಕು. ಶ್ರೀಕೃಷ್ಣ ಮಠದಂಥ ಸಂಸ್ಥೆಗಳು ಧಾರ್ಮಿಕ ಚಟುವಟಿಕೆಗಳಿಗೆ ಅಗತ್ಯವಾದ ಶ್ರೀಗಂಧ ಬೆಳೆಯಲು ಸಾಧ್ಯವಿದೆಯೇ ಎಂಬುದನ್ನು ಪರಿಗಣಿಸಬೇಕು. ಸಾಧ್ಯವಿದ್ದಲ್ಲಿ ಅಗತ್ಯ ನೀತಿ ರೂಪಿಸಲು ಅರಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕ್ರಮಕೈಗೊಳ್ಳಬೇಕು” ಎಂದು ನ್ಯಾಯಾಲಯ ನಿರ್ದೇಶಿಸಿದೆ.

“ಶ್ರೀಗಂಧ ಲಭ್ಯತೆಯನ್ನು ಆಧರಿಸಿ ರಾಜ್ಯ ಸರ್ಕಾರವು ತಾರತಮ್ಯ ಮಾಡದೇ ತಕ್ಷಣ ಕಾರ್ಯಪ್ರವೃತ್ತವಾಗಿದೆ. ಅಲ್ಲದೇ, ಎ ಮತ್ತು ಬಿ ವಿಭಾಗಗಳನ್ನಾಗಿ ಪರಿಗಣಿಸಿದ್ದು, ಎ ವಿಭಾಗದ ಸಂಸ್ಥೆಗಳಿಗೆ ವಾರ್ಷಿಕ 20 ಮತ್ತು ಬಿ ವಿಭಾಗದ ಸಂಸ್ಥೆಗಳಿಗೆ 10 ಕೆಜಿ ಶ್ರೀಗಂಧ ಪೂರೈಸುವ ತೀರ್ಮಾನ ಮಾಡಿದೆ. ಈ ಕುರಿತು ಸಾಕಷ್ಟು ಚರ್ಚೆ ನಡೆಸಿ, ಕಾರಣಗಳನ್ನು ನೀಡಲಾಗಿದೆ. ಶ್ರೀಗಂಧದ ಲಭ್ಯತೆ ಆಧರಿಸಿ ಅರ್ಹತೆಯನ್ನು ಪರಿಪಕ್ವವಾಗಿ ಸರ್ಕಾರ ನಿರ್ಧರಿಸಿದೆ. ಉಡುಪಿ ಜಿಲ್ಲಾಧಿಕಾರಿಗೆ ನಿಯಮಾನುಸಾರ ಮನವಿ ಸಲ್ಲಿಸುವ ಏಕೈಕ ಪರಿಹಾರ ಮಾತ್ರ ಲಭ್ಯವಿದೆ” ಎಂದು ಹೇಳಿದೆ.

ಶ್ರೀಕೃಷ್ಣ ಮಠ ಪ್ರತಿನಿಧಿಸಿದ್ದ ಹಿರಿಯ ವಕೀಲ ಪುತ್ತಿಗೆ ರಮೇಶ್‌ ಅವರು “ಹೈದರ್‌ ಅಲಿ ಆಡಳಿತವು ಶ್ರೀಗಂಧದ ತುಂಡುಗಳನ್ನು ಧಾರ್ಮಿಕ ಕ್ಷೇತ್ರಗಳಿಗೆ ಪೂರೈಸುವ ಕೆಲಸ ಆರಂಭಿಸಿತ್ತು. ಆನಂತರ ಅರಣ್ಯ ಕೈಪಿಡಿಯ ಪ್ರಕಾರ ಮನವಿ ನೀಡುವ ದೇವಸ್ಥಾನ, ಮಠ ಮತ್ತು ಇತರೆ ಸಂಸ್ಥೆಗಳಿಗೆ ಅರಣ್ಯ ಇಲಾಖೆಯು ಶ್ರೀಗಂಧ ಪೂರೈಸುತ್ತಿತ್ತು. ಆದರೆ, ಆನಂತರ ಅಧಿಸೂಚಿತ ಸಂಸ್ಥೆಗಳ ಪಟ್ಟಿಯಿಂದ ಮಠವನ್ನು ಕೈಬಿಡಲಾಗಿದೆ. 26.10.2010ರಿಂದ ಮಠವನ್ನು ಅಧಿಸೂಚಿತ ಪಟ್ಟಿಯಿಂದ ಕೈಬಿಡಲಾಗಿದೆ. 2006ರಲ್ಲಿ ಕೊನೆಯ ಬಾರಿಗೆ ಕೃಷ್ಣ ಮಠಕ್ಕೆ ಶ್ರೀಗಂಧ ಪೂರೈಸಲಾಗಿತ್ತು. ಆನಂತರ ನಾಲ್ಕು ವರ್ಷಗಳ ಕಾಲ ಮಠಕ್ಕೆ ಶ್ರೀಗಂಧ ಪೂರೈಸಿರಲಾಗಿರಲಿಲ್ಲ. ಅಧಿಸೂಚಿತ ಸಂಸ್ಥೆಗಳ ಪಟ್ಟಿಯಿಂದ ಕೃಷ್ಣಮಠ ಕೈಬಿಟ್ಟಿರುವುದಕ್ಕೂ 1,087 ಕೆಜಿ ಶ್ರೀಗಂಧ ಪೂರೈಸುವುದಕ್ಕೂ ಯಾವುದೇ ಸಂಬಂಧವಿಲ್ಲ. ಮಠಕ್ಕೆ 1,087 ಕೆಜಿ ಶ್ರೀಗಂಧ ಪೂರೈಸಬೇಕು. ಅರಣ್ಯ ಇಲಾಖೆಯು ಶ್ರೀಗಂಧ ಇಲ್ಲ ಎಂದು ಹೇಳಿದರೂ ಇಬ್ಬರು ಅತಿಗಣ್ಯರ ಅಂತ್ಯಕ್ರಿಯೆಗೆ ಶ್ರೀಗಂಧ ಬಳಕೆ ಮಾಡಲಾಗಿದೆ. ಇದರಿಂದ ಶ್ರೀಗಂಧ ಇದೆ ಎಂಬುದು ಅರ್ಥವಾಗುತ್ತದೆ. ಅದನ್ನು ಅಂತ್ಯಕ್ರಿಯೆಗೆ ಬಳಕೆ ಮಾಡುವುದರ ಬದಲು ದೇವಸ್ಥಾನಕ್ಕೆ ಪೂರೈಸಬಹುದಿತ್ತು” ಎಂದಿದ್ದರು.

ಅರಣ್ಯ ಇಲಾಖೆ ಪ್ರತಿನಿಧಿಸಿದ್ದ ಸರ್ಕಾರದ ವಕೀಲ ಮಹಾಂತೇಶ್‌ ಶೆಟ್ಟರ್‌ ಅವರು “ಅರಣ್ಯ ಕೈಪಿಡಿ ಪ್ರಕಾರ ಶ್ರೀಗಂಧವನ್ನು ಎಂಟು ವಿಭಿನ್ನ ವಿಭಾಗಗಳಾಗಿ ರೂಪಿಸಲಾಗಿದ್ದು, 31.10.2019ರ ಅಂತ್ಯಕ್ಕೆ 84675.823 ಕೆಜಿ ಶ್ರೀಗಂಧ ದಾಸ್ತಾನಿನ ಪೈಕಿ 70242.427ಕೆಜಿ ವೈಟ್‌ ಚಿಪ್ಸ್‌ ಶ್ರೀಗಂಧವಿತ್ತು. ವೈಟ್‌ ಚಿಪ್ಸ್‌ ಕಳೆದು ಬಾಕಿ ಉಳಿದ ಶ್ರೀಗಂಧದ ಪ್ರಮಾಣ ಕಡಿಮೆ ಇತ್ತು. ಹೀಗಾಗಿ, ಕೃಷ್ಣಮಠಕ್ಕೆ ಅಗತ್ಯವಿದ್ದಷ್ಟು ಶ್ರೀಗಂಧ ಪೂರೈಸಿರಲಿಲ್ಲ. ಒಟ್ಟಾರೆ ಏಳು ಶ್ರೀಗಂಧ ಕೋಟೆಗಳಿದ್ದು, ಈ ಪೈಕಿ ಕರ್ನಾಟಕದಲ್ಲಿ ಶಿವಮೊಗ್ಗ, ಮೈಸೂರು ಮತ್ತು ಧಾರವಾಡ ಶ್ರೀಗಂಧ ಕೋಟೆಗಳಿವೆ” ಎಂದಿದ್ದರು.

“4.12.2017ರ ಸರ್ಕಾರದ ಅಧಿಸೂಚನೆಯ ಪ್ರಕಾರ ಮುಜರಾಯಿ ಇಲಾಖೆಯ ಎ ವಿಭಾಗದಡಿ ಬರುವ ಸಂಸ್ಥೆಗಳು 20 ಕೆಜಿ ಶ್ರೀಗಂಧ ಪಡೆಯಲು ಅರ್ಹವಾಗಿವೆ. ಬಿ ವಿಭಾಗದಡಿ ಬರುವ ಸಂಸ್ಥೆಗಳು 10 ಕೆಜಿ ಶ್ರೀಗಂಧ ಪಡೆಯಲು ಅರ್ಹವಾಗಿದ್ದು, ಅದರ ಪ್ರಕಾರ ಶ್ರೀಗಂಧ ಪೂರೈಸಲಾಗುತ್ತಿದೆ. ಅಲ್ಲದೇ, ಕೊರತೆಯ ಹಿನ್ನೆಲೆಯಲ್ಲಿ ಕೃಷ್ಣಮಠಕ್ಕೆ ವಾರ್ಷಿಕವಾಗಿ 1,087 ಕೆಜಿ ಶ್ರೀಗಂಧ ಪೂರೈಸಲಾಗದು. 19.12.2016ರ ಅಧಿಕೃತ ಟಿಪ್ಪಣಿ ಪ್ರಕಾರ ಮಠವು ಉಡುಪಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರೆ ಲಭ್ಯತೆಯನ್ನು ನೋಡಿಕೊಂಡು ಅವರು 10 ಕೆಜಿ ಶ್ರೀಗಂಧ ಪೂರೈಸಬಹುದು. 1921ರಲ್ಲಿ ಲಭ್ಯತೆ ಇದ್ದುದರಿಂದ ಶ್ರೀಗಂಧ ಪೂರೈಸಲಾಗಿತ್ತು. ಕಾಲ ಬದಲಾಗಿದ್ದು, ಶ್ರೀಗಂಧದ ಮರಗಳನ್ನು ರಕ್ಷಿಸಬೇಕಿದ್ದು, ಮಠಕ್ಕೆ ಪೂರೈಸಲು ಶ್ರೀಗಂಧವಿಲ್ಲ” ಎಂದಿದ್ದರು.

“2011-12ರಲ್ಲಿ ಶಿವಮೊಗ್ಗ ಪ್ರಾದೇಶಿಕ ಅರಣ್ಯಾಧಿಕಾರಿಗೆ 100 ಕೆಜಿ ಶ್ರೀಗಂಧ ಪೂರೈಸುವಂತೆ 5,14,331 ರೂಪಾಯಿ ಬಿಡುಗಡೆ ಮಾಡಲಾಗಿತ್ತು. ಆನಂತರ ಸಾಕಷ್ಟು ಮನವಿ ಸಲ್ಲಿಸಿದ್ದು, 30 ಕೆಜಿ ಶ್ರೀಗಂಧ ಇದ್ದು ಅದನ್ನು ಬಿಡುಗಡೆ ಮಾಡಲಾಗಿತ್ತು. ಈಗ ಸರ್ಕಾರದ ನೀತಿಯ ಪ್ರಕಾರ ಕೃಷ್ಣ ಮಠದಂಥ ಸಂಸ್ಥೆಗಳಿಗೆ 10 ಕೆಜಿ ಪೂರೈಸಬಹುದಾಗಿದ್ದು, ಅವರು ಮನವಿ ಸಲ್ಲಿಸಿದರೆ ಅಷ್ಟನ್ನು ಪೂರೈಸಲಾಗುವುದು” ಎಂದಿದ್ದರು.

ಪ್ರಕರಣದ ಹಿನ್ನೆಲೆ: ಅನಾದಿ ಕಾಲದಿಂದಲೂ ಕೃಷ್ಣನಿಗೆ ಹೂವು, ಗಂಧದ ಪೇಸ್ಟ್‌ ಮತ್ತು ತುಳಸಿ ಅಲಂಕಾರ ಮಾಡುವುದು ಸಂಪ್ರದಾಯ. ಕಲ್ಲಿನ ಮೇಲೆ ಶ್ರೀಗಂಧ ತೇಯುವ ಮೂಲಕ ಪೇಸ್ಟ್‌ ಸಿದ್ಧಪಡಿಸಲಾಗುತ್ತದೆ. ಇದನ್ನು ಪೂಜೆ ಮತ್ತು ಪ್ರಸಾದಕ್ಕೆ ಬಳಕೆ ಮಾಡಲಾಗುತ್ತದೆ.

ಈ ಹಿಂದೆ ಪೂಜೆಗೆ ಶ್ರೀಗಂಧ ದೊರೆಯುವಂತೆ ಸರ್ಕಾರ ವ್ಯವಸ್ಥೆ ಮಾಡುತ್ತಿತ್ತು. ಈಗ ಅದನ್ನು ಕರ್ನಾಟಕ ಅರಣ್ಯ ಕಾಯಿದೆ 1963ರ ಅಡಿ ಸಂರಕ್ಷಿಸಲಾಗಿದೆ. ಇದಕ್ಕೂ ಮುನ್ನ 1921ರಿಂದ ಸರ್ಕಾರವು ಪ್ರತಿ ವರ್ಷ ಉಚಿತವಾಗಿ 1,087 ಕೆಜಿ ಶ್ರೀಗಂಧ ನೀಡುತ್ತಿತ್ತು. 22.06.1976ರಲ್ಲಿ ಸರ್ಕಾರವು ಮಾರ್ಗಸೂಚಿ ರೂಪಿಸಿ ಸುತ್ತೋಲೆ ಹೊರಡಿಸಿದ್ದು, ಅದನ್ನು ಸರ್ಕಾರ ಮತ್ತು ಕೃಷ್ಣಮಠ ಅನುಪಾಲಿಸುತ್ತಾ ಬಂದಿವೆ.

2004-05ರಲ್ಲಿ 1,087 ಕೆಜಿ ಶ್ರೀಗಂಧ ನೀಡಲು ಚಲನ್‌ ಸಿದ್ಧಪಡಿಸಿದ್ದು, ಅದರ ಮೇಲೆ ತಿದ್ದಿ ಅದನ್ನು 239 ಕೆಜಿಗೆ ಇಳಿಸಲಾಗಿತ್ತು. ಇದಕ್ಕೆ ಕೃಷ್ಣಮಠ ಹಣ ನೀಡಿದ್ದು, ಅದನ್ನು ಪೂರೈಸಲಾಗಿತ್ತು. ಅಂದಿನಿಂದ ಕೃಷ್ಣಮಠವು ತಾವು 1,087 ಕೆಜಿ ಶ್ರೀಗಂಧಕ್ಕೆ ಅರ್ಹವಾಗಿದ್ದರೂ, 239 ಕೆಜಿ ಮಾತ್ರ ನೀಡಲಾಗುತ್ತಿದೆ ಎಂದು ಪದೇಪದೇ ಮನವಿ ಮಾಡಿತ್ತು. ಇದರ ಆಧಾರದಲ್ಲಿ 4.9.2007ರಲ್ಲಿ 100 ಕೆಜಿ ಶ್ರೀಗಂಧ ನೀಡಲಾಗಿತ್ತು. ಆದರೆ, ಸಂಪೂರ್ಣವಾದ ಶ್ರೀಗಂಧವನ್ನು ಬಿಡುಗಡೆ ಮಾಡಿರಲಿಲ್ಲ. ಇದನ್ನು ಪ್ರಶ್ನಿಸಿ ಕೃಷ್ಣಮಠವು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಅದರ ಬೆನ್ನಿಗೇ ಒಂದಷ್ಟು ಶ್ರೀಗಂಧ ಪೂರೈಸಿದ್ದ ಹಿನ್ನೆಲೆಯಲ್ಲಿ ಮಠ ಅರ್ಜಿ ಹಿಂಪಡೆದಿತ್ತು. ಇದಾದ ನಂತರ ಶ್ರೀಗಂಧ ಬಿಡುಗಡೆ ಮಾಡದ ಹಿನ್ನೆಲೆಯಲ್ಲಿ ಮಠವು 25.2.2009ರಂದು ಅರ್ಜಿ ಸಲ್ಲಿಸಿತ್ತು. ಆನಂತರ 3.2.2010ರಂದು ಮನವಿ ಸಲ್ಲಿಸಿತ್ತು. ಅದಾಗ್ಯೂ, ಶ್ರೀಗಂಧ ಬಿಡುಗಡೆ ಮಾಡಿರಲಿಲ್ಲ. 26.10.2010ರಲ್ಲಿ ಕೃಷ್ಣಮಠವನ್ನು ಮುಜರಾಯಿ ಇಲಾಖೆ ವ್ಯಾಪ್ತಿಗೆ ತಂದಿದ್ದು, 26.04.2011 ಮತ್ತು 22.07.2011ರಲ್ಲಿ ಸಲ್ಲಿಸಿದ ಮನವಿ ಪರಿಗಣಿಸಿರಲಿಲ್ಲ. ಹೀಗಾಗಿ, ಮಠವು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

Attachment
PDF
Krishna Mutt Vs State of Karnataka
Preview
Kannada Bar & Bench
kannada.barandbench.com