

ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರದ (ಯುಐಡಿಎಐ) ಬಳಿ ಇರುವ ದತ್ತಾಂಶದಲ್ಲಿ ಮೃತ ವ್ಯಕ್ತಿಯ ಬೆರಳಚ್ಚಿನ ಮೂಲಕ ಆಕೆಯ ಗುರುತು ಪತ್ತೆಹಚ್ಚಲು ನಿರ್ದೇಶಿಸುವಂತೆ ಕೋರಿ ಬ್ಯಾಟರಾಯನಪುರ ಪೊಲೀಸರು ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ.
ದೃಢೀಕರಣಕ್ಕೆ ಜೀವಂತ ಬೆರಳಚ್ಚು ಅಗತ್ಯವಾಗಿದೆ ಎಂದಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠವು ಯುಐಡಿಎಐ ದತ್ತಾಂಶದಲ್ಲಿ ಮೃತ ವ್ಯಕ್ತಿಯ ಬೆರಳಚ್ಚು ಶೋಧಿಸಲು ನಿರ್ದೇಶಿಸಲಾಗದು ಎಂದಿದೆ.
ಮೃತ ವ್ಯಕ್ತಿಯ ಬೆರಳಚ್ಚು ಹೊಂದಿಸಲು ತಾಂತ್ರಿಕ ನಿರ್ಬಂಧಗಳಿರಲಿವೆ ಎಂದಿರುವ ಪೀಠವು ವ್ಯಕ್ತಿಗತ ಖಾಸಗಿತನವನ್ನು ಕಾಪಾಡಬೇಕಿದ್ದು, ದೃಢೀಕರಿಸಲು ಜೀವಂತ ಬೆರಳಚ್ಚು ಅಗತ್ಯ. ಹೀಗಾಗಿ, ಯುಐಡಿಎಐ ದತ್ತಾಂಶದಲ್ಲಿ ಮೃತ ವ್ಯಕ್ತಿಯ ಬೆರಳಚ್ಚು ಶೋಧಿಸಲು ನಿರ್ದೇಶಿಸಲಾಗದು ಎಂದು ಅಭಿಪ್ರಾಯಪಟ್ಟಿದೆ.
“ಹಾಲಿ ಪ್ರಕರಣದಲ್ಲಿ ಯುಐಡಿಎಐ ಮಾಹಿತಿ ಹಂಚಿಕೊಳ್ಳುವುದಿಲ್ಲ ಎಂಬುದು ವಿಚಾರವಲ್ಲ. ಮೃತ ವ್ಯಕ್ತಿಯ ಗುರುತನ್ನು ಬಹಿರಂಗಪಡಿಸಲು ಆಧಾರ್ ಸಂಖ್ಯೆಯೊಂದಿಗೆ ಬೆರಳಚ್ಚು ಹೊಂದಾಣಿಕೆ ಮಾಡಲು ಸಾಧ್ಯವಾಗುವುದಿಲ್ಲ. ಅರ್ಜಿದಾರರು ಕೋರಿದ ಮಾಹಿತಿಯನ್ನು ಪ್ರತಿವಾದಿಯು ಹಂಚಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ, ಅರ್ಜಿದಾರರು ಕೋರಿರುವಂತೆ ನಿರ್ದೇಶನ ಹೊರಡಿಸುವುದರಲ್ಲಿ ಯಾವುದೇ ಅರ್ಥವಿರುವುದಿಲ್ಲ” ಎಂದು ಹೇಳಿದೆ.
“ಮೃತ ವ್ಯಕ್ತಿಯ ಗುರುತು ಪತ್ತೆ ಮಾಡಲು ಬೇರೆ ಪ್ರಯತ್ನವನ್ನು ಅರ್ಜಿದಾರರು ಮಾಡಬಹುದು. ಒಂದೊಮ್ಮೆ ಆಧಾರ್ ಕಾರ್ಡ್ ಲಭ್ಯವಾಗಿಸಿದರೆ ಅದರ ಬಳಕೆಯ ವಿವರಗಳನ್ನು ಯುಐಡಿಎಐ ಲಭ್ಯವಾಗಿಸಬೇಕು” ಎಂದು ಆದೇಶಿಸಿ, ಅರ್ಜಿಯನ್ನು ವಜಾಗೊಳಿಸಿದೆ.
ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಪ್ರತಿನಿಧಿಸಿದ್ದ ಉಪ ಸಾಲಿಸಿಟರ್ ಜನರಲ್ ಎಚ್ ಶಾಂತಿಭೂಷಣ್ ಅವರು “ಯುಐಡಿಎಐ ಅಡಿ ಬಯೋಮೆಟ್ರಿಕಲ್ ಗುರುತಿನ ವ್ಯವಸ್ಥೆ ಬಳಸಲು ಮೊದಲಿಗೆ ಜೀವಂತ ಬಯೋಮೆಟ್ರಿಕ್ ಮಾಹಿತಿ ವ್ಯವಸ್ಥೆ ಇರಬೇಕು. ಅದರರ್ಥ ಗುರುತು ಪತ್ತೆ ಹಚ್ಚಲು ಬೆರಳಚ್ಚು ಬಳಕೆ ಮಾಡಬೇಕಾದರೆ ವ್ಯಕ್ತಿ ಜೀವಂತವಾಗಿರಬೇಕು. ಯುಐಡಿಎಐ ದತ್ತಾಂಶದಲ್ಲಿ ಮೃತ ವ್ಯಕ್ತಿಯ ಗುರುತು ಪತ್ತೆ ಮಾಡಲು ಆತನ ಬೆರಳಚ್ಚನ್ನು ಬಳಕೆ ಮಾಡಲಾಗದು. ಭದ್ರತೆಯ ವಿಚಾರದ ಭಾಗವಾಗಿ ಗುರುತು ಪತ್ತೆ ಮಾಡಲು ಬೆರಳಚ್ಚು ಮಾತ್ರವಲ್ಲ ಅದನ್ನು ಪತ್ತೆ ಮಾಡಲು ಆ ವ್ಯಕ್ತಿ ಜೀವತವಾಗಿರಬೇಕಾಗುತ್ತದೆ” ಎಂದರು.
“ಇಡೀ ದತ್ತಾಂಶದಲ್ಲಿ ಬೆರಳಚ್ಚಿಗೆ ಸಂಬಂಧಿಸಿದಂತೆ ಶೋಧ ಮಾಡಲಾಗದ ರೀತಿಯಲ್ಲಿ ಡೇಟಾಬೇಸ್ ಅನ್ನು ರೂಪಿಸಲಾಗಿದೆ. ಖದ್ದು ಹಾಜರಾತಿಯ ಮೂಲಕ ಅವರ ಗುರುತು ಪತ್ತೆ ಮಾಡಬಹುದಾಗಿದೆ. ಆಧಾರ್ ಸಂಖ್ಯೆ, ಬೆರಳಚ್ಚು ಅಥವಾ ಬಯೋಮೆಟ್ರಿಕ್ ಮಾಹಿತಿಯ ಮೂಲಕ ಹಾಗೆ ಮಾಡಲಾಗುತ್ತದೆ. ಡೇಟಾಬೇಸ್ ಶೋಧಿಸಲು ಆಧಾರ್ ಸಂಖ್ಯೆ ಅಥವಾ ಬಯೋಮೆಟ್ರಿಕ್ ಮಾಹಿತಿ ಮಾತ್ರವೇ ಬಳಕೆ ಮಾಡಲಾಗದು” ಎಂದರು.
“ಆಧಾರ್ ಸಂಖ್ಯೆ ಪತ್ತೆ ಮಾಡಲು ಬೆರಳಚ್ಚನ್ನು ಡೇಟಾಬೇಸ್‌ನಲ್ಲಿ ಶೋಧಿಸಲಾಗದು. ಹಾಗೆಯೇ ಬೆರಳಚ್ಚು ಪತ್ತೆ ಮಾಡಲು ಆಧಾರ್ ಸಂಖ್ಯೆ ಮಾತ್ರ ಬಳಕೆ ಮಾಡಲಾಗದು. ಎರಡೂ ಇದ್ದಾಗ ಮಾತ್ರ ಗುರುತು ಪತ್ತೆ ಮಾಡಬಹುದಾಗಿದೆ” ಎಂದರು.
“ಗುರುತಿನ ಮಾಹಿತಿ ನೀಡಬೇಕಿಲ್ಲವಾದ್ದರಿಂದ ಆಧಾರ್ ಕಾರ್ಡ್ ಬಳಕೆಯ ಮಾಹಿತಿಯನ್ನು ನೀಡಬಹುದಾಗಿದೆ. ಹೀಗಾಗಿ, ಭದ್ರತೆ ಮತ್ತು ಗೌಪ್ಯತೆಯ ಕಾರಣದಿಂದಾಗಿ ಮತ್ತು ಆಧಾರ್ ಸಂಖ್ಯೆಯೊಂದಿಗೆ ಬೆರಳಚ್ಚು ಹೊಂದಿಸಲು ಯುಐಡಿಎಐ ನೋಂದಣಿ ಪುಸ್ತಕದಲ್ಲಿ ಹುಡುಕಾಟ ಮಾನದಂಡಗಳು ಲಭ್ಯವಿಲ್ಲದ ಕಾರಣ, ಆಧಾರ್ ಸಂಖ್ಯೆ ಲಭ್ಯವಿಲ್ಲದೆ, ಪ್ರತಿವಾದಿಗಳು ಅರ್ಜಿದಾರರ ಕೋರಿಕೆಯನ್ನು ಪ್ರಕ್ರಿಯೆಗೊಳಿಸಲು ಸಾಧ್ಯವಾಗುವುದಿಲ್ಲ ಮತ್ತು ಬೆರಳಚ್ಚು ಆಧರಿಸಿ ಮೃತರನ್ನು ಗುರುತಿಸಲು ಸಾಧ್ಯವಾಗುವುದಿಲ್ಲ” ಎಂದರು.
ಪ್ರಕರಣದ ಹಿನ್ನೆಲೆ: ಬ್ಯಾಟರಾಯನಪುರ ಪೊಲೀಸ್ ಠಾಣೆಯ ವ್ಯಾಪ್ತಿಯ ಕಾಲುವೆಯಲ್ಲಿ ಮೃತ ಮಹಿಳೆ ದೇಹ ಪತ್ತೆಯಾಗಿದ್ದು, ಕೊಲೆ ಪ್ರಕರಣ ದಾಖಲಾಗಿತ್ತು. ಆಕೆಯ ಗುರುತನ್ನು ಪತ್ತೆ ಹಚ್ಚದ ವಿನಾ ತನಿಖೆ ಮುಂದುವರಿಸಲು ಕಷ್ಟವಾಗಿತ್ತು. ಹೀಗಾಗಿ, ಠಾಣಾಧಿಕಾರಿಯು ಆಧಾರ್ ದತ್ತಾಂಶದ ಜೊತೆ ಮೃತ ಮಹಿಳೆಯ ಬೆರಳಚ್ಚು ಹೊಂದಿಸುವಂತೆ ಮನವಿ ಸಲ್ಲಿಸಿದ್ದರು. ಹೈಕೋರ್ಟ್ ಆದೇಶ ಮಾಡದ ಹೊರತು ಆಧಾರ್ ಕಾಯಿದೆ ಅಡಿ ಯಾವುದೇ ವಿಚಾರ ಬಹಿರಂಗಪಡಿಸಲಾಗದು ಎಂದು ಯುಐಡಿಎಐ ಮನವಿ ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಬ್ಯಾಟರಾಯನಪುರ ಠಾಣಾಧಿಕಾರಿಯು ಹೈಕೋರ್ಟ್ ಮೆಟ್ಟಿಲೇರಿದ್ದರು.