ಯುದ್ಧ, ಕೋವಿಡ್ ಕಾರಣಗಳಿಂದಾಗಿ ವ್ಯಾಸಂಗದ ಮಧ್ಯದಲ್ಲಿಯೇ ಒತ್ತಾಯಪೂರ್ವಕವಾಗಿ ಯುಕ್ರೇನ್ ಹಾಗೂ ಚೀನಾ ಕಾಲೇಜುಗಳನ್ನು ತೊರೆದು ಭಾರತಕ್ಕೆ ಮರಳಿದ್ದ ವೈದ್ಯಕೀಯ ವಿದ್ಯಾರ್ಥಿಗಳು ದೇಶದ ಕಾಲೇಜುಗಳಿಗೆ ದಾಖಲಾಗದೆಯೂ ಎಂಬಿಬಿಎಸ್ ಅಂತಿಮ ಪರೀಕ್ಷೆ ತೇರ್ಗಡೆ ಮಾಡಿಕೊಳ್ಳುವುದಕ್ಕಾಗಿ ಅವಕಾಶವೊಂದನ್ನು ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ [ಅರ್ಚಿಕಾ ಮತ್ತು ರಾಷ್ಟ್ರೀಯ ವೈದ್ಯಕೀಯ ಆಯೋಗ ನಡುವಣ ಪ್ರಕರಣ].
ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಈ ನಿರ್ಧಾರ ತಿಳಿಸಿದೆ. ಅಧ್ಯಯನದ ಅಂತಿಮ ವರ್ಷದಲ್ಲಿ ಯುಕ್ರೇನ್‌ನಿಂದ ಹಿಂದಿರುಗಿದ ಭಾರತೀಯ ಎಂಬಿಬಿಎಸ್ ವಿದ್ಯಾರ್ಥಿಗಳು ಭಾರತದಲ್ಲಿ ವ್ಯಾಸಂಗಕ್ಕೆ ಅವಕಾಶ ನೀಡಬೇಕು ಎಂದು ಕೋರಿದ್ದ ಅರ್ಜಿಗೆ ಪ್ರತಿಕ್ರಿಯೆಯಾಗಿ ಸರ್ಕಾರ ಅಫಿಡವಿಟ್ ಸಲ್ಲಿಸಿದೆ.
ರಾಷ್ಟ್ರೀಯ ವೈದ್ಯಕೀಯ ಮಂಡಳಿ (ಎನ್‌ಎಂಸಿ) ಮತ್ತು ಸಂಬಂಧಿತ ಕೇಂದ್ರ ಸಚಿವಾಲಯಗಳನ್ನು ಒಳಗೊಂಡಿರುವ ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯದ ಅಧ್ಯಕ್ಷತೆಯ ಸಮಿತಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳೊಂದಿಗೆ ಸಮಾಲೋಚಿಸಿದ ನಂತರ, ಆನ್‌ಲೈನ್ ತರಗತಿಗಳಿಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳಿಗೆಂದು ಈ ಕೆಳಗಿನ ಶಿಫಾರಸುಗಳನ್ನು ಮಾಡಿದೆ:
ಭಾರತದಲ್ಲಿ ಅಸ್ತಿತ್ವದಲ್ಲಿರುವ ಯಾವುದೇ ವೈದ್ಯಕೀಯ ಕಾಲೇಜುಗಳಿಗೆ ದಾಖಲಾಗದೆ ಎನ್‌ಎಂಸಿ ಪಠ್ಯಕ್ರಮ ಮತ್ತು ಮಾರ್ಗಸೂಚಿಗಳ ಪ್ರಕಾರ ಭಾಗ 1 ಮತ್ತು ಭಾಗ 2 (ಥಿಯರಿ ಮತ್ತು ಪ್ರಾಕ್ಟಿಕಲ್) ಎರಡನ್ನೂ ಉತ್ತೀರ್ಣರಾಗಲು ವಿದ್ಯಾರ್ಥಿಗಳಿಗೆ ಒಂದು ಬಾರಿಗೆ ಮಾತ್ರ ಅವಕಾಶ ನೀಡಬಹುದಾಗಿದೆ.
ಒಂದು ವರ್ಷದ ಅವಧಿಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆಯನ್ನು ಉತ್ತೀರ್ಣಗೊಳಿಸಿಕೊಳ್ಳತಕ್ಕದ್ದು.
ಭಾರತೀಯ ಎಂಬಿಬಿಎಸ್ ಪರೀಕ್ಷೆಯ ಮಾದರಿಯಲ್ಲಿಯೇ ಥಿಯರಿ ಪರೀಕ್ಷೆಯನ್ನು ಕೇಂದ್ರೀಯವಾಗಿ ಮತ್ತು ಭೌತಿಕವಾಗಿ ನಡೆಸಲಾಗುವುದು.
ಎರಡೂ ಪರೀಕ್ಷೆಗಳಲ್ಲಿ ತೇರ್ಗಡೆಯಾದ, ವಿದ್ಯಾರ್ಥಿಗಳು ಕಡ್ಡಾಯವಾಗಿ 2 ವರ್ಷಗಳ ರೊಟೇಟರಿ ಇಂಟರ್ನ್‌ಶಿಪ್ ಪೂರ್ಣಗೊಳಿಸಿಕೊಳ್ಳತಕ್ಕದ್ದು. ಮೊದಲ ವರ್ಷ ಉಚಿತವಾಗಿದ್ದು, ಎರಡನೆಯ ವರ್ಷ ಪಾವತಿಯುಕ್ತವಾಗಿರುತ್ತದೆ.
ಇದು ಒಂದು ಬಾರಿ ನೀಡುವ ಅವಕಾಶವಾಗಿದ್ದು ಭವಿಷ್ಯದಲ್ಲಿ ಉಂಟಾಗುವ ಸಮಸ್ಯೆಗಳಿಗೆ ಇದನ್ನು ಪೂರ್ವ ನಿದರ್ಶನವಾಗಿ ಪರಿಗಣಿಸುವಂತಿಲ್ಲ.