ಯುಕ್ರೇನ್‌-ರಷಿಯಾ ಬಿಕ್ಕಟ್ಟು: ಭಾರತೀಯರನ್ನು ತೆರವುಗೊಳಿಸುವ ಮನವಿ ಸಂಬಂಧ ಎಜಿ ಅವರ ಸಲಹೆ ಕೋರಿದ ಸುಪ್ರೀಂ ಕೋರ್ಟ್‌

ಯುದ್ಧವನ್ನು ತಡೆಯುವ ಬಗ್ಗೆ ತಾನು ಹೇಗೆ ನಿರ್ದೇಶನ ನೀಡಲು ಸಾಧ್ಯ ಎನ್ನುವ ಬಗ್ಗೆ ಆಲೋಚನೆಗೀಡಾದ ಸುಪ್ರೀಂ ಕೋರ್ಟ್‌.
Ukraine and Supreme Court

Ukraine and Supreme Court

ಯುದ್ಧವನ್ನು ತಡೆಯುವ ಬಗ್ಗೆ ತಾನು ಹೇಗೆ ನಿರ್ದೇಶನ ನೀಡಬಹುದು ಎನ್ನುವ ಬಗ್ಗೆ ಸುಪ್ರೀಂ ಕೋರ್ಟ್‌ ಆಲೋಚನೆಗೀಡಾದ ಪ್ರಸಂಗ ಗುರುವಾರ ನಡೆಯಿತು. ಯುದ್ಧಪೀಡಿತ ಯುಕ್ರೇನ್‌ನಲ್ಲಿರುವ ಭಾರತೀಯರ ಶೀಘ್ರ ತೆರವಿಗೆ ಕೋರಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ವೇಳೆ ಈ ಘಟನೆ ನಡೆಯಿತು.

ಹಿರಿಯ ವಕೀಲ ಎ ಎಂ ಧರ್ ಅವರು ಸಿಜೆಐ ಎನ್‌ ವಿ ರಮಣ ಅವರ ಮುಂದೆ ಪ್ರಕರಣವನ್ನು ಉಲ್ಲೇಖಿಸಿದರು. "ಯುಕ್ರೇನ್‌ ಗಡಿಯಲ್ಲಿ (ರೊಮೆನಿಯಾ) ಸಿಲುಕಿರುವ ಭಾರತೀಯರನ್ನು ತೆರವುಗೊಳಿಸುವ ಸಂಬಂಧ ಸಲ್ಲಿಸಲಾಗಿರುವ ಹೊಸ ಮನವಿ ಇದು. ಅಲ್ಲಿ ಸಿಲುಕಿರುವ ಬಹುತೇಕರು ಹೆಣ್ಣು ಮಕ್ಕಳು," ಎಂದು ಧರ್‌ ಸಿಜೆಐ ಅವರ ಗಮನಸೆಳೆದರು.

ಈ ವೇಳೆ ಸಿಜೆಐ ರಮಣ ಅವರು, "ಸಿಜೆಐ ಅವರು ಏನು ಮಾಡುತ್ತಿದ್ದಾರೆ ಎನ್ನುವ ಹೇಳಿಕೆಯನ್ನು ನಾನು ಎಲ್ಲಿಯೋ ಓದಿದೆ. ನಾವು ಯುದ್ಧವನ್ನು ನಿಲ್ಲಿಸುವಂತೆ ನಿರ್ದೇಶನ ನೀಡಲು ಸಾಧ್ಯವೇ," ಎಂದು ಅಸಮಾಧಾನ ಸೂಚಿಸಿದರು.

ಧರ್‌ ಅವರು ಮುಂದುವರೆದು, "ಅವರು ಅಲ್ಲಿ ಹೆಪ್ಪುಗಟ್ಟಿಸುವ ಚಳಿಯಲ್ಲಿದ್ದಾರೆ. ಅವರಲ್ಲಿ ವಿದ್ಯಾರ್ಥಿಗಳಿದ್ದಾರೆ, ಬಹುತೇಕರು ಹೆಣ್ಣು ಮಕ್ಕಳು. ಕಳೆದ ಆರು ದಿನಗಳಿಂದ ಅಲ್ಲಿಯೇ ಸಿಲುಕಿದ್ದಾರೆ," ಎಂದು ಭಿನ್ನವಿಸಿಕೊಂಡರು.

ಆಗ ಸಿಜೆಐ ಅವರು ವಕೀಲರಿಗೆ ಕಾಯವಂತೆ ತಿಳಿಸಿ, ಈ ಕುರಿತು ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್‌ ಅವರ ಸಲಹೆ ಕೋರುವುದಾಗಿ ಹೇಳಿದರು. "ನಮಗೆ ಸಂಪೂರ್ಣ ಅನುಕಂಪವಿದೆ. ಈ ವಿಚಾರದಲ್ಲಿ ನ್ಯಾಯಾಲಯಕ್ಕೆ ಸಹಕರಿಸಲು ನಾವು ಅಟಾರ್ನಿ ಜನರಲ್‌ ಅವರಿಗೆ ತಿಳಿಸುತ್ತೇವೆ" ಎಂದರು.

Related Stories

No stories found.
Kannada Bar & Bench
kannada.barandbench.com