ಉಮರ್ ಖಾಲಿದ್ ಸೆರೆವಾಸದ ಸುತ್ತ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಉತ್ಪ್ರೇಕ್ಷಿತ ಕಥನ: ದೆಹಲಿ ಪೊಲೀಸ್

ಖಾಲಿದ್ ದೆಹಲಿ ಗಲಭೆಯ ಸೂತ್ರಧಾರನಾಗಿದ್ದು ಗಲಭೆ ಸಮಯದಲ್ಲಿ ಮಹಿಳೆಯರನ್ನುಗುರಾಣಿ ರೀತಿ ಬಳಸಿದ್ದರು ಎಂಬ ಆರೋಪವನ್ನು ಖಾಲಿದ್ ಪರ ವಕೀಲರು ನಿರಾಕರಿಸಿದರು.
Umar Khalid
Umar KhalidFacebook

ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬಂಧಿತರಾಗಿರುವ ಸಾಮಾಜಿಕ ಕಾರ್ಯಕರ್ತ ಉಮರ್ ಖಾಲಿದ್ ಅವರ ಜಾಮೀನು ಅರ್ಜಿಗೆ ದೆಹಲಿ ಪೊಲೀಸರು ಬುಧವಾರ ವಿರೋಧ ವ್ಯಕ್ತಪಡಿಸಿದ್ದು ಖಾಲಿದ್‌ ಅವರ ತಂದೆಯವರೇ ಮಾಧ್ಯಮಗಳಿಗೆ ಸಂದರ್ಶನ ನೀಡಿರುವುದರಿಂದ ತಮ್ಮ ವಿರುದ್ಧ ಮಾಧ್ಯಮ ವಿಚಾರಣೆ ನಡೆಯುತ್ತಿದೆ ಎಂಬ ಖಾಲಿದ್‌ ಅವರ ವಾದದಲ್ಲಿ ಹುರುಳಿಲ್ಲ ಎಂದು ದೆಹಲಿಯ ಕಡಕಡ್‌ಡೂಮಾ ನ್ಯಾಯಾಲಯದಲ್ಲಿ ವಾದಿಸಿದರು [ಉಮರ್‌ ಖಾಲಿದ್‌ ಮತ್ತು ಪ್ರಭುತ್ವ ನಡುವಣ ಪ್ರಕರಣ].

ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್‌ವಾಡ್‌, ಆಕಾರ್‌ ಪಟೇಲ್‌ ಮುಂತಾದ ಹೋರಾಟಗಾರರು ಹಾಗೂ ಅಮ್ನೆಸ್ಟಿ ಇಂಟರ್‌ನ್ಯಾಶನಲ್‌ ರೀತಿಯ ಪ್ರಭಾವಿ ಸಂಘಟನೆಯ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಖಾಲಿದ್‌ ಸೆರೆವಾಸದ ವಿರುದ್ಧ ಪ್ರತಿಕೂಲಕರ ಉತ್ಪ್ರೇಕ್ಷಿತ ಹೇಳಿಕೆಯನ್ನು ನೀಡಲಾಗುತ್ತಿದೆ ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅಮಿತ್ ಪ್ರಸಾದ್ ಅವರು ವಿಶೇಷ ನ್ಯಾಯಾಧೀಶ ಸಮೀರ್ ಬಾಜ್‌ಪೇಯ್‌ ಅವರಿಗೆ ತಿಳಿಸಿದರು.

ಸೆಟಲ್‌ವಾಡ್‌, ಪಟೇಲ್ ಮತ್ತು ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಮಾತ್ರವಲ್ಲದೆ, ಸ್ವಾತಿ ಚತುರ್ವೇದಿ ಮತ್ತು ಕೌಶಿಕ್ ರಾಜ್ ಅವರು ಕೂಡ ಇದೇ ರೀತಿಯ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ ಎಂದು ಪ್ರಸಾದ್‌ ದೂರಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಹಿರಿಯ ವಕೀಲ ತ್ರಿದೀಪ್ ಪಯಸ್‌, ಈ ಬಾರಿ ವರ್ನಾನ್ ಗೊನ್ಸಾಲ್ವೆಸ್ ಮತ್ತು ಶೋಮಾ ಸೇನ್ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪುಗಳ ಹಿನ್ನೆಲೆಯಲ್ಲಿ ಜಾಮೀನು ಅರ್ಜಿ ಪರಿಶೀಲಿಸುವುದು ಅತ್ಯಗತ್ಯ ಎಂದರು.

ಕಾಲ್ ಡೇಟಾ ರೆಕಾರ್ಡ್ಸ್‌ಗೆ (ಸಿಡಿಆರ್) ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಮಾಡಿದ್ದ ಅವಲೋಕನಗಳ ಪಾಲನೆಯಾಗಿಲ್ಲ‌. ಜೊತೆಗೆ ವಿಚಾರಣಾ ನ್ಯಾಯಾಲಯ ಮತ್ತು ದೆಹಲಿ ಹೈಕೋರ್ಟ್ ತನ್ನ ಕಕ್ಷಿದಾರ ಉಮರ್‌ ಖಾಲಿದ್‌ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದಾಗ ತನಿಖಾ ಅಗತ್ಯತೆಯನ್ನು ಪರಿಶೀಲಿಸಲು ಸಾಕ್ಷ್ಯಗಳನ್ನು ತೆಳುವಾಗಿ ಮಾತ್ರವೇ ವಿಶ್ಲೇಷಿಸಿವೆ ಎಂದು ಅವರು ಹೇಳಿದರು.

ಖಾಲಿದ್‌ ದೆಹಲಿ ಗಲಭೆಯ ಸೂತ್ರಧಾರನಾಗಿದ್ದು ಗಲಭೆ ಸಮಯದಲ್ಲಿ ಮಹಿಳೆಯರನ್ನುಗುರಾಣಿ ರೀತಿ ಬಳಸಿದ್ದರು ಎಂಬ ಆರೋಪವನ್ನು ಅವರು ಇದೇ ವೇಳೆ ನಿರಾಕರಿಸಿದರು. ಏಪ್ರಿಲ್ 24ರಂದು ವಾದ ಮಂಡನೆಗಳು ಮುಂದುವರಿಯಲಿವೆ.

ಕ್ರಿಮಿನಲ್ ಪಿತೂರಿ, ಗಲಭೆ, ಕಾನೂನುಬಾಹಿರ ಸಭೆ ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯಿದೆಯಡಿ (ಯುಎಪಿಎ) ವಿವಿಧ ಆರೋಪಗಳನ್ನು ಖಾಲಿದ್‌ ಅವರ ಮೇಲೆ ಹೊರಿಸಲಾಗಿದ್ದು ಅವರು  ಸೆಪ್ಟೆಂಬರ್ 2020ರಿಂದ ಜೈಲಿನಲ್ಲಿದ್ದಾರೆ.

Kannada Bar & Bench
kannada.barandbench.com