ಕಾನೂನುಬಾಹಿರ ಕಟ್ಟಡ ತೆರವು ಪ್ರಕರಣ: ಬಿಬಿಎಂಪಿ ವಿಶ್ವಾಸಾರ್ಹತೆ ಬಗ್ಗೆ ಸಂದೇಹ ವ್ಯಕ್ತಪಡಿಸಿದ ಹೈಕೋರ್ಟ್‌

ನ್ಯಾಯಾಲಯದ ಆದೇಶ ಬಳಿಕ 1,31,745 ಕಟ್ಟಡಗಳ ಸಮೀಕ್ಷೆ ನಡೆಸಲಾಗಿದ್ದು, ದಾಖಲಾತಿಗಳ ಬಗ್ಗೆ ಅನುಮಾನ ಮೂಡಿರುವ 16,286 ಕಟ್ಟಡಗಳ ಮಾಲೀಕರಿಗೆ 7 ದಿನಗಳ ಒಳಗೆ ದಾಖಲಾತಿ ಪ್ರಸ್ತುತಪಡಿಸುವಂತೆ ಸೂಚಿಸಿ ನೋಟಿಸ್‌ ಜಾರಿ ಮಾಡಲಾಗಿದೆ ಎಂದ ಬಿಬಿಎಂಪಿ.
ಕಾನೂನುಬಾಹಿರ ಕಟ್ಟಡ ತೆರವು ಪ್ರಕರಣ: ಬಿಬಿಎಂಪಿ ವಿಶ್ವಾಸಾರ್ಹತೆ ಬಗ್ಗೆ ಸಂದೇಹ ವ್ಯಕ್ತಪಡಿಸಿದ ಹೈಕೋರ್ಟ್‌
BBMP Commissioner Gauvrav Gupta and Karnataka HC

ಅಕ್ರಮ ಕಟ್ಟಡಗಳ ತೆರವಿಗೆ ಸಂಬಂಧಿಸಿದಂತೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು ಕೈಗೊಂಡಿರುವ ಕ್ರಮವು ಅದರ ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆ ಎತ್ತಿದೆ ಎನ್ನುವ ಇಂಗಿತವನ್ನು ಕರ್ನಾಟಕ ಹೈಕೋರ್ಟ್‌ ಗುರುವಾರ ವ್ಯಕ್ತಪಡಿಸಿದೆ.

“ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಕಾನೂನುಬಾಹಿರ ಕಟ್ಟಡಗಳ ಪತ್ತೆ, ನೆಲಸಮಕ್ಕೆ ಸಂಬಂಧಿಸಿದಂತೆ ಉತ್ತಮ ರೀತಿಯಲ್ಲಿ ನೀವು ಕಾರ್ಯ ಯೋಜನೆಯನ್ನು ಕಾಗದದ ಮೇಲೆ ಸಾದರಪಡಿಸಿದ್ದೀರಿ. ಆದರೆ, ವಾಸ್ತವಿಕವಾಗಿ ಏನು ಕ್ರಮಕೈಗೊಂಡಿದ್ದೀರಿ ಎಂಬುದು ತಿಳಿಯಬೇಕು. ನೀವು (ಬಿಬಿಎಂಪಿ) ವಿಶ್ವಾಸಾರ್ಹತೆ ಕಳೆದುಕೊಂಡಿದ್ದೀರಿ. ಇದು ನಿಮ್ಮ ಮೇಲೆ ನಂಬಿಕೆ ಮೂಡುವಂತೆ ಮಾಡುವುದಿಲ್ಲ” ಎಂದು ಕರ್ನಾಟಕ ಹೈಕೋರ್ಟ್‌ ಅಕ್ರಮ ಕಟ್ಟಡಗಳ ತೆರವಿಗೆ ಸಂಬಂಧಿಸಿದಂತೆ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಪ್ರಕರಣದ ವಿಚಾರಣೆ ವೇಳೆ ಮಾರ್ಮಿಕವಾಗಿ ನುಡಿಯಿತು.

ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ನೇತೃತ್ವದ ವಿಭಾಗೀಯ ಪೀಠವು ಪ್ರಕರಣದ ವಿಚಾರಣೆಯನ್ನು ನಡೆಸಿತು. ಈ ವೇಳೆ ಅದು ಬಿಬಿಎಂಪಿ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ಸೂಚಿಸಿತು.

ಬಿಬಿಎಂಪಿ ಪ್ರತಿನಿಧಿಸಿದ್ದ ಹಿರಿಯ ವಕೀಲ ನಂಜುಂಡ ರೆಡ್ಡಿ ಅವರು “ನ್ಯಾಯಾಲಯದ ಆದೇಶ ಬಳಿಕ 1,31,745 ಕಟ್ಟಡಗಳ ಸಮೀಕ್ಷೆ ನಡೆಸಲಾಗಿದ್ದು, ದಾಖಲಾತಿಗಳ ಬಗ್ಗೆ ಅನುಮಾನ ಮೂಡಿರುವ 16,286 ಕಟ್ಟಡಗಳ ಮಾಲೀಕರಿಗೆ 7 ದಿನಗಳ ಒಳಗೆ ದಾಖಲಾತಿ ಪ್ರಸ್ತುತಪಡಿಸುವಂತೆ ಸೂಚಿಸಿ, ನೋಟಿಸ್‌ ಜಾರಿ ಮಾಡಲಾಗಿದೆ. ಈ ಅವಧಿಯಲ್ಲಿ ಸಂಬಂಧಪಟ್ಟವರು ಮಾಹಿತಿ ನೀಡದಿದ್ದರೆ ಅಂತಿಮ ನೋಟಿಸ್‌ ಜಾರಿ ಮಾಡಲಾಗುವುದು. ಅದಕ್ಕೂ ಪ್ರತಿಕ್ರಿಯೆ ಬರದಿದ್ದರೆ ಕಟ್ಟಡ ಮಾಲೀಕರಿಗೆ ಅವುಗಳನ್ನು ನೆಲಸಮ ಮಾಡಲು ಆದೇಶಿಸಲಾಗುವುದು. ಒಂದೊಮ್ಮೆ ಅವರು ಅದನ್ನು ಮಾಡದಿದ್ದರೆ ಬಿಬಿಎಂಪಿ ಕಟ್ಟಡ ನೆಲಸಮ ಮಾಡಲಿದೆ” ಎಂದು ಪೀಠಕ್ಕೆ ವಿವರಿಸಿದರು.

ಇದಕ್ಕೆ ಪೀಠವು “ಬೆಂಗಳೂರು ದಕ್ಷಿಣ ವಲಯದಲ್ಲಿ ಮೂರು ಕಾನೂನುಬಾಹಿರ ಕಟ್ಟಡಗಳನ್ನು ನೆಲಸಮ ಮಾಡಲಾಗಿದೆ ಎಂದು ತಿಳಿಸಲಾಗಿದೆ. ನಿಮ್ಮನ್ನು ಎಚ್ಚರಿಸಿ ನಗರದಲ್ಲಿ ಏನು ನಡೆಯುತ್ತಿದೆ ಎಂಬುದರ ಕುರಿತು ನಿಮಗೆ ಅರಿವು ಮೂಡಿಸಲು ಈ ಪ್ರಯತ್ನ ಮಾಡಲಾಗುತ್ತಿದೆ. ನಿಮ್ಮ ಕೆಲಸ ಕಾಗದದ ಮೇಲೆ ಮಾತ್ರವಲ್ಲ ವಾಸ್ತವದಲ್ಲಿ ಬಿಂಬಿತವಾಗಬೇಕು” ಎಂದಿತು.

“ಕಾನೂನುಬಾಹಿರ ಕಟ್ಟಡ ನೆಲಸಮ ಮಾಡುವಾಗ ಯಾವ ಕಟ್ಟಡ ಯಾರಿಗೆ ಸೇರಿದ್ದು ಎಂಬುದನ್ನು ತಿಳಿಸಬೇಕು. ಈ ಕುರಿತು ಒಂದೆರಡು ಉದಾಹರಣೆಗಳನ್ನು ನೀಡಬೇಕು. ಆಗ ನೀವು ಕ್ರಮ ಕೈಗೊಂಡಿದ್ದೀರಿ ಎಂಬುದು ನಮಗೆ ಅರಿವಾಗಲಿದೆ” ಎಂದು ಪೀಠವು ಹೇಳಿತು.

Also Read
ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡಲು ಬಿಬಿಎಂಪಿ ಹೆದರುತ್ತಿರುವುದೇಕೆ? ಆಯುಕ್ತ ಗೌರವ್‌ ಗುಪ್ತಾಗೆ ಹೈಕೋರ್ಟ್ ಪ್ರಶ್ನೆ

“ಕಾನೂನುಬಾಹಿರಕ ಕಟ್ಟಡಗಳ ಪತ್ತೆ, ಈ ಸಂಬಂಧ ಕೈಗೊಂಡಿರುವ ಕ್ರಮ, ಕಾರ್ಯವಿಧಾನದ ಕುರಿತ ಮಾಹಿತಿಯನ್ನು ಒಳಗೊಂಡ ಪ್ರಮಾಣ ಪತ್ರವನ್ನು ಖುದ್ದು ಹಾಜರಿದ್ದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತಾ ಅವರು ಸಲ್ಲಿಸಿದ್ದಾರೆ. ಬಿಬಿಎಂಪಿ ಕಾಯಿದೆಯ ಸೆಕ್ಷನ್‌ 313ರ ಅಡಿ ಬಿ ವಿಭಾಗದಲ್ಲಿ 1,31,745 ಕಟ್ಟಡಗಳ ಸಮೀಕ್ಷೆ ನಡೆಸಲಾಗಿದ್ದು, ದಾಖಲಾತಿಗಳ ಬಗ್ಗೆ ಅನುಮಾನ ಮೂಡಿರುವ 16,286 ಕಟ್ಟಡಗಳ ಮಾಲೀಕರಿಗೆ ನೋಟಿಸ್‌ ನೀಡಲಾಗಿದೆ. ಈ ಸಂಬಂಧ ಕಾನೂನಿನ ಪ್ರಕಾರ ಅಗತ್ಯ ಕ್ರಮಕೈಗೊಂಡು ಅಂತಿಮ ಆದೇಶವನ್ನು ಹೊರಡಿಸಬೇಕು” ಎಂದು ನ್ಯಾಯಾಲಯ ಆದೇಶಿಸಿದೆ.

ಅಲ್ಲದೇ, “ಕಾನೂನುಬಾಹಿರ ಕಟ್ಟಡಗಳನ್ನು ನೆಲಸಮ ಮಾಡಿ, ಈ ಸಂಬಂಧ ಅನುಪಾಲನಾ ವರದಿ ಸಲ್ಲಿಸಲು ಬಿಬಿಎಂಪಿ ಕೋರಿಕೆಯಂತೆ ಮೂರು ತಿಂಗಳ ಕಾಲಾವಕಾಶ ನೀಡಲಾಗಿದೆ. ಮುಂದಿನ ವಿಚಾರಣೆಯ ಸಂದರ್ಭದಲ್ಲೂ ಬಿಬಿಎಂಪಿ ಮುಖ್ಯ ಆಯುಕ್ತರು ಹಾಜರಾಗಬೇಕು” ಎಂದು ಪೀಠ ಆದೇಶದಲ್ಲಿ ಹೇಳಿತು. ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಅವರೂ ವಿಚಾರಣೆಯಲ್ಲಿ ಭಾಗಿಯಾಗಿದ್ದರು.

Related Stories

No stories found.
Kannada Bar & Bench
kannada.barandbench.com