ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಅನಧಿಕೃತ ಜಾಹೀರಾತು ಫಲಕಗಳು, ಫ್ಲೆಕ್ಸ್ ಹಾಗೂ ಹೋರ್ಡಿಂಗ್‌ಗಳ ಹಾವಳಿಯನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಹೈಕೋರ್ಟ್ ಶುಕ್ರವಾರ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ದಾಖಲಿಸಿಕೊಂಡಿದೆ.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಬಿಬಿಎಂಪಿ ಮುಖ್ಯ ಆಯುಕ್ತರು ಹಾಗೂ ನಗರ ಪೊಲೀಸ್ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಲು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್ ನೇತೃತ್ವದ ಪೀಠವು ಆದೇಶಿಸಿದೆ.
“ನ್ಯಾಯಾಲಯದ ಆದೇಶ ಪಾಲಿಸುವಲ್ಲಿ ವಿಫಲವಾಗಿರುವ ನಿಮ್ಮ ವಿರುದ್ಧ ನ್ಯಾಯಾಂಗ ನಿಂದನೆಯಡಿ ಯಾಕೆ ಕ್ರಮ ಜರುಗಿಸಬಾರದು ಎಂಬ ಬಗ್ಗೆ ವಿವರಣೆ ನೀಡಿ” ಎಂದು ಪಾಲಿಕೆಯ ಮುಖ್ಯ ಆಯುಕ್ತರು ಹಾಗೂ ನಗರ ಪೊಲೀಸ್ ಆಯುಕ್ತರಿಗೆ ಪೀಠ ತಾಕೀತು ಮಾಡಿದೆ.
“ಬೆಂಗಳೂರಿನಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್ ಮತ್ತು ಹೋರ್ಡಿಂಗ್‌ಗಳ ಹಾವಳಿ ತಡೆಯಲು ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಗೆ ನಿರ್ದೇಶಿಸಬೇಕು” ಎಂದು ಕೋರಿ ಮಾಯಿಗೇಗೌಡ ಹಾಗೂ ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯನ್ನು ನ್ಯಾಯಾಲಯ ನಡೆಸಿತು.
ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಅಂಜಾರಿಯಾ ಅವರು “ಈಗಾಗಲೇ 2017, 2018 ಮತ್ತು 2022ರಲ್ಲಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಜೊತೆಗೆ ಜುಲೈ 11ರಂದು ಆಂಗ್ಲ ದಿನಪತ್ರಿಕೆಯೊಂದರಲ್ಲಿ ಪ್ರಕಟವಾಗಿರುವ ಸುದ್ದಿ ಆಧರಿಸಿ ನ್ಯಾಯಾಲಯ ಈ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಳ್ಳುತ್ತಿದೆ” ಎಂದರು.
“ಪತ್ರಿಕೆಯಲ್ಲಿ ವರದಿಯಾಗಿರುವಂತೆ ಹೈಕೋರ್ಟ್‌ನ ಹಲವು ಆದೇಶಗಳ ಹೊರತಾಗಿಯೂ ಬೆಂಗಳೂರು ಮಹಾನಗರದಲ್ಲಿ ಅನಧಿಕೃತ ಜಾಹೀರಾತು ಫಲಕಗಳು, ಫ್ಲೆಕ್ಸ್ ಹಾಗೂ ಹೋರ್ಡಿಂಗ್‌ಗಳ ಹಾವಳಿ ಮುಂದುವರಿದಿದೆ. 2017ರಿಂದ ಕಾಲಕಾಲಕ್ಕೆ ನ್ಯಾಯಾಲಯ ಆದೇಶ, ನಿರ್ದೇಶನಗಳನ್ನು ನೀಡುತ್ತಾ ಬಂದಿದೆ. 2024ರ ಜನವರಿ 8ರಂದು ವಿವರವಾದ ಆದೇಶ ಹೊರಡಿಸಿದೆ. ಪಾಲಿಕೆ 6.8 ಲಕ್ಷ ಅನಧಿಕೃತ ಬ್ಯಾನರ್, ಹೋರ್ಡಿಂಗ್‌ಗಳನ್ನು ತೆರವುಗೊಳಿಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಇದು ಬೆಂಗಳೂರಿನ ಸಾರ್ವಜನಿಕ ರಸ್ತೆ, ಪಾದಚಾರಿ ಮಾರ್ಗಗಳಲ್ಲಿ ಅನಧಿಕೃತ ಬ್ಯಾನರ್, ಫ್ಲೆಕ್ಸ್ ಹಾಕುವ ಪ್ರವೃತ್ತಿ ಎಗ್ಗಿಲ್ಲದೆ ಮುಂದುವರಿದಿದೆ ಎನ್ನುವುದನ್ನು ಸಾಕ್ಷೀಕರಿಸುತ್ತದೆ. ಜೊತೆಗೆ ನ್ಯಾಯಾಲಯದ ಅದೇಶಗಳ ಬಗ್ಗೆ ಪಾಲಿಕೆ, ನಗರ ಪೊಲೀಸರು ನಿರ್ಲಕ್ಷ್ಯ ತೋರಿಸುತ್ತಿದ್ದಾರೆ ಎಂಬುದನ್ನೂ ಪುಷ್ಟೀಕರಿಸುತ್ತದೆ. ಹಾಗಾಗಿ, ಸ್ವಯಂಪ್ರೇರಿತ ಪಿಐಎಲ್ ದಾಖಲಿಸಿಕೊಳ್ಳಲಾಗುತ್ತಿದೆ” ಎಂದು ಪೀಠ ತಿಳಿಸಿದೆ.
ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ರಾಜ್ಯ ಸರ್ಕಾರ, ಪಾಲಿಕೆ ಮತ್ತು ಬೆಂಗಳೂರು ಪೊಲೀಸರಿಗೆ ನಿರ್ದೇಶಿಸಿದ ಪೀಠ ವಿಚಾರಣೆಯನ್ನು ಜುಲೈ 26ಕ್ಕೆ ಮುಂದೂಡಿತು.