ಭಾರತೀಯ ಕಾನೂನು ವರದಿಗಳು, ಕರ್ನಾಟಕ ತೀರ್ಪುಗಳನ್ನು ಉಚಿತವಾಗಿ ಒದಗಿಸುವ ಇ-ಐಎಲ್‌ಆರ್‌ ಪೋರ್ಟಲ್‌ ದ್ವಿಭಾಷೆಯಲ್ಲಿ ಆರಂಭ

ನ್ಯಾಯಮೂರ್ತಿಗಳು, ನ್ಯಾಯಾಂಗ ಅಧಿಕಾರಿಗಳು, ವಕೀಲರು, ದಾವೆದಾರರು, ಸರ್ಕಾರಿ ಅಧಿಕಾರಿಗಳು, ಕಾನೂನು ವಿದ್ಯಾರ್ಥಿಗಳು ಮತ್ತು ಸಾಮಾನ್ಯ ಜನರಿಗೆ ಅನುಕೂಲವಾಗುವಂತೆ ಇದನ್ನು ರೂಪಿಸಲಾಗಿದೆ.
e-ILR portal
e-ILR portalhttps://hck.gov.in/ilr

ಭಾರತೀಯ ಕಾನೂನು ವರದಿಗಳು ಮತ್ತು ಕರ್ನಾಟಕ ತೀರ್ಪುಗಳನ್ನು ಉಚಿತವಾಗಿ ಒದಗಿಸುವ ಉದ್ದೇಶದಿಂದ ಕನ್ನಡ ಮತ್ತು ಆಂಗ್ಲ ಎರಡೂ ಭಾಷೆಗಳಲ್ಲಿ ಇ-ಐಎಲ್‌ಆರ್‌ (ಇಂಡಿಯನ್‌ ಲಾ ರಿಪೋರ್ಟ್ಸ್‌ –ಭಾರತೀಯ ಕಾನೂನು ವರದಿಗಳು) ಪೋರ್ಟಲ್‌ ಅನ್ನು ಕರ್ನಾಟಕ ಹೈಕೋರ್ಟ್‌ ಈಚೆಗೆ ಅನಾವರಣಗೊಳಿಸಿದೆ.

ನ್ಯಾಯಮೂರ್ತಿಗಳು, ನ್ಯಾಯಾಂಗ ಅಧಿಕಾರಿಗಳು, ವಕೀಲರು, ದಾವೆದಾರರು, ಸರ್ಕಾರಿ ಅಧಿಕಾರಿಗಳು, ಕಾನೂನು ವಿದ್ಯಾರ್ಥಿಗಳು ಮತ್ತು ಸಾಮಾನ್ಯ ಜನರಿಗೆ ಅನುಕೂಲವಾಗುವಂತೆ ಇದನ್ನು ರೂಪಿಸಲಾಗಿದೆ. ಬಳಕೆದಾರರ ಸ್ನೇಹಿ ಅಂಶಗಳನ್ನು ಸೇರ್ಪಡೆಗೊಳಿಸಲಾಗಿದ್ದು, ಇ-ಕೋರ್ಟ್ಸ್‌ ಯೋಜನೆಯ ಮೂರನೇ ಹಂತದ ಭಾಗವಾಗಿ ಇದನ್ನು ಪರಿಚಯಿಸಲಾಗಿದೆ. ಹೈಕೋರ್ಟ್‌ನ ಸಮಗ್ರ ಮತ್ತು ವರದಿ ಮಾಡಬಹುದಾದ ಕೇಸ್‌ ಲಾಗಳನ್ನು ಇದು ಒಳಗೊಂಡಿದೆ. ಹೈಕೋರ್ಟ್‌ ನೆರವಿನೊಂದಿಗೆ ಕರ್ನಾಟಕ ಕಾನೂನು ವರದಿಗಾರಿಕೆ ಒಕ್ಕೂಟ ಇದನ್ನು ಪರಿಚಯಿಸಿದೆ.

ಭಾಷಾಂತರಿಸಿದ ತೀರ್ಪುಗಳ ಜೊತೆಗೆ ಡಿಟಿಟಲ್‌ ಕಾನೂನು ವರದಿಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ಒದಗಿಸುವ ಕೃತಕ ಬುದ್ದಿಮತ್ತೆ ಆಧಾರಿತ ಕಾನೂನು ಭಾಷಾಂತರ ಸಲಹಾ ಸಮಿತಿಯ ಉದ್ದೇಶವನ್ನು ದ್ವಿಭಾಷಾ ಇ-ಐಎಲ್‌ಆರ್‌ ಪೋರ್ಟಲ್‌ ಈಡೇರಿಸಿದಂತಾಗಲಿದೆ. 2023ರ ಡಿಸೆಂಬರ್‌ 16ರಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಅವರು ಅನಾವರಣಗೊಳಿಸಿದ್ದು, ಇದರ ಭಾಗವಾಗಿ ಪೋರ್ಟಲ್‌ ಈಗ ಚಾಲ್ತಿಗೆ ಬಂದಿದೆ.

ಕನ್ನಡವೂ ಒಳಗೊಂಡಂತೆ ಸುಪ್ರೀಂ ಕೋರ್ಟ್‌ನ 2000+ಕ್ಕೂ ಅಧಿಕ ತೀರ್ಪುಗಳನ್ನು ಇ-ಐಎಲ್‌ಆರ್‌ ಪೋರ್ಟಲ್‌ ಒಳಗೊಂಡಿದೆ. ಇಂಗ್ಲಿಷ್‌ ಜೊತೆಗೆ ಪರ್ಯಾಯವಾಗಿ ಪೋರ್ಟಲ್‌ನಲ್ಲಿ ಕನ್ನಡ ವರದಿಗಳನ್ನು ಅಪ್‌ಲೋಡ್‌ ಮಾಡಲಾಗುತ್ತಿದೆ. ಕರ್ನಾಟಕ ಹೈಕೋರ್ಟ್‌ನ ಭಾಷಾತರಿಸಿದ ಕನ್ನಡ ತೀರ್ಪುಗಳನ್ನೂ ಲಭ್ಯವಾಗುವಂತೆ ಮಾಡಲಾಗಿದೆ. ಪೋರ್ಟಲ್‌ನಲ್ಲಿ ಕರ್ನಾಟಕ ಹೈಕೋರ್ಟ್‌ನ ತೀರ್ಪುಗಳನ್ನಷ್ಟೇ ಅಲ್ಲದೇ ಸಂಪಾದಕರ ನುಡಿಯನ್ನೂ ಒಳಗೊಂಡಿರಲಿದೆ. ಇದರಲ್ಲಿ ವರದಿ ಮಾಡಬಹುದಾದ ಎಲ್ಲ ತೀರ್ಪುಗಳೂ ಸೇರಿರಲಿದೆ.

ತಮಗೆ ಗೊತ್ತಿರುವ ಭಾಷೆಯಲ್ಲಿ ಡಿಟಿಟಲ್‌ ಮಾದರಿಯಲ್ಲಿ ಸರ್ಚ್‌ ಮಾಡಲು ಅನುಕೂಲ ಮಾಡಿಕೊಡುವ ಮೂಲಕ ಇ-ಐಎಲ್‌ಆರ್‌ ಪೋರ್ಟಲ್‌ ಎಲ್ಲರೂ ನ್ಯಾಯದಾನ ಪಡೆಯಲು ಅನುಕೂಲ ಮಾಡಿಕೊಡುತ್ತದೆ. ಹೈಕೋರ್ಟ್‌ನ ಈ ಯೋಜನೆಯು ಮುದ್ರಣ ಮಾಧ್ಯಮಕ್ಕೆ ಪರ್ಯಾಯವಾಗಿ ಕಾನೂನು ಕ್ಷೇತ್ರದಲ್ಲಿರುವವರಿಗೆ ಅಮೂಲ್ಯವಾದ ಕಾನೂನು ಸಂಪನ್ಮೂಲ ಒದಗಿಸಲಿದೆ. ಡಿಜಿಟಲ್‌ ರೂಪದಲ್ಲಿರುವುದರಿಂದ ವೆಚ್ಚವೂ ಕಡಿಮೆಯಾಗಲಿದ್ದು, ಇಂಗಾಲ ಹೊರಸೂಸುವಿಕೆ ತಪ್ಪಿಸುವ ಮೂಲಕ ಪರಿಸರ ಸ್ನೇಹಿಯಾಗಿದೆ ಎಂದು ಹೇಳಲಾಗಿದೆ.

ಐಎಲ್‌ಆರ್‌ ಪೋರ್ಟಲ್‌ಗೆ https://hck.gov.in/ilr ಮೂಲಕ ಭೇಟಿ ನೀಡಬಹುದು.

Attachment
PDF
e ILR series.pdf
Preview
Kannada Bar & Bench
kannada.barandbench.com