ಒಳಉಡುಪು ಪ್ರಕರಣ: ಶಾಸಕ ಆಂಟೊನಿ ರಾಜು ಅರ್ಜಿಗೆ ಪ್ರತಿಕ್ರಿಯಿಸದ ಕೇರಳ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ

"ನೀವು (ಕೇರಳ ಸರ್ಕಾರ) ಏಕೆ ಪ್ರತಿಕ್ರಿಯೆ ನೀಡಲಿಲ್ಲ? ನೀವು ಆರೋಪಿಗಳೊಂದಿಗೆ ಕೈ ಜೋಡಿಸಿದ್ದೀರಿ ಎಂಬುದು ಇದಕ್ಕೆ ಕಾರಣವೇ?" ಎಂದು ನ್ಯಾಯಾಲಯ ಇಂದು ಪ್ರಶ್ನಿಸಿತು.
ಆಂಟನಿ ರಾಜು
ಆಂಟನಿ ರಾಜುಫೇಸ್ ಬುಕ್

ದಶಕಗಳ ಹಿಂದಿನ ಕುಪ್ರಸಿದ್ಧ ಒಳ ಉಡುಪು ಸಾಕ್ಷ್ಯ ತಿರುಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸದಾಗಿ ಕ್ರಿಮಿನಲ್‌ ವಿಚಾರಣೆ ಆರಂಭಿಸುವುದನ್ನು ಪ್ರಶ್ನಿಸಿ ಕೇರಳ ಶಾಸಕ ಆಂಟೊನಿ ರಾಜು ಅವರು ಸಲ್ಲಿಸಿದ್ದ ಮನವಿಗೆ ಪ್ರತಿಕ್ರಿಯೆ ಸಲ್ಲಿಸದೆ ಇರುವುದಕ್ಕೆ ಕೇರಳ ಸರ್ಕಾರವನ್ನು ಸುಪ್ರೀಂ ಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ.

ಕಡೆಗೆ ಕೇರಳ ಸರ್ಕಾರ ಪ್ರತಿಕ್ರಿಯೆ ಸಲ್ಲಿಸಲು ನ್ಯಾಯಮೂರ್ತಿಗಳಾದ ಸಿ.ಟಿ.ರವಿಕುಮಾರ್ ಮತ್ತು ರಾಜೇಶ್ ಬಿಂದಾಲ್ ಅವರಿದ್ದ ಪೀಠ ಗಡುವು ನೀಡಿತು .

"ಇದು ಗಂಭೀರ ವಿಷಯ, ಆರೋಪಗಳು ಹೀಗೆ ಎದುರಾದರೆ ಸಂಸ್ಥೆಯ (ನ್ಯಾಯಾಂಗ) ಮೇಲೆ ಜನರು ಇರಿಸಿರುವ ವಿಶ್ವಾಸಕ್ಕೆ ಧಕ್ಕೆ ಬರುತ್ತದೆ" ಎಂದು ನ್ಯಾಯಮೂರ್ತಿ ರವಿಕುಮಾರ್ ಅವರು ಇಂದಿನ ವಿಚಾರಣೆ ವೇಳೆ ಅಭಿಪ್ರಾಯಪಟ್ಟರು.

"ನೀವೇಕೆ (ಕೇರಳ ಸರ್ಕಾರ) ಪ್ರತಿಕ್ರಿಯೆ ನೀಡಿಲ್ಲ? ಆರೋಪಿಗಳೊಂದಿಗೆ ನೀವು ಕೈ ಜೋಡಿಸಿರುವುದು ಇದಕ್ಕೆ ಕಾರಣವೇ? ನೀವೀಗ ಯಾವ ರೀತಿಯ ಪ್ರತಿಕ್ರಿಯೆ ಸಲ್ಲಿಸುತ್ತೀರಿ? ಎಲ್ಲಾ ಸಂಗತಿಗಳೂ ದಾಖಲೆಯಲ್ಲಿವೆ" ಎಂದು ನ್ಯಾ. ಬಿಂದಾಲ್‌ ಹೇಳಿದರು.

ನ್ಯಾಯಮೂರ್ತಿಗಳಾದ ಸಿ.ಟಿ.ರವಿಕುಮಾರ್ ಮತ್ತು ರಾಜೇಶ್ ಬಿಂದಾಲ್
ನ್ಯಾಯಮೂರ್ತಿಗಳಾದ ಸಿ.ಟಿ.ರವಿಕುಮಾರ್ ಮತ್ತು ರಾಜೇಶ್ ಬಿಂದಾಲ್

ರಾಜು ಅವರು ಕೇರಳದ ಆಡಳಿತಾರೂಢ ಎಡ ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್‌) ಮೈತ್ರಿಕೂಟದ ಭಾಗವಾಗಿರುವ ಪ್ರಜಾಪ್ರಭುತ್ವ ಕೇರಳ ಕಾಂಗ್ರೆಸ್ ಪಕ್ಷದ ನಾಯಕರಾಗಿದ್ದಾರೆ. ಕಳೆದ ವರ್ಷ ಸಂಪುಟ ರಚನೆಯಾಗುವವರೆಗೂ ಅವರು ರಾಜ್ಯ ಸಾರಿಗೆ ಸಚಿವರಾಗಿದ್ದರು.

ರಾಜು ವಿರುದ್ಧ ಪ್ರಕರಣ ಸುಮಾರು 33 ವರ್ಷಗಳ ಹಿಂದೆ ನಡೆದ ಘಟನೆಯಾಗಿದ್ದು ಆಗ ಅವರಿನ್ನೂ ರಾಜಕೀಯ ಕ್ಷೇತ್ರದಲ್ಲಿ ಗಂಭೀರವಾಗಿ ತೊಡಗಿಕೊಳ್ಳದ; ಕೇರಳದ ನ್ಯಾಯಾಲಯಗಳಲ್ಲಿ ಪ್ರಾಕ್ಟೀಸ್‌ ಮಾಡುತ್ತಿದ್ದ ಯುವ ವಕೀಲರಾಗಿದ್ದರು.

ಆಂಡ್ರ್ಯೂ ಸಾಲ್ವಟೋರ್ ಸೆರ್ವೆಲ್ಲಿ ಎಂಬ ಆಸ್ಟ್ರೇಲಿಯಾದ ವ್ಯಕ್ತಿಯೊಬ್ಬ ತಿರುವನಂತಪುರ ವಿಮಾನ ನಿಲ್ದಾಣದಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ. 61.5 ಗ್ರಾಂನಷ್ಟು ಮಾದಕವಸ್ತು ಹಶೀಶನ್ನು ತನ್ನ ಒಳ ಉಡುಪಿನಲ್ಲಿ ಇರಿಸಿಕೊಂಡಿದ್ದ ಎಂಬ ಆರೋಪ ಆತನ ಮೇಲಿತ್ತು. ಮಾದಕವಸ್ತು ಮತ್ತು ಅಮಲು ಪದಾರ್ಥ ನಿಯಂತ್ರಣ ಕಾಯಿದೆ- 1985ರ ಅಡಿ ಆತ ತಪ್ಪಿತಸ್ಥ ಎಂಬುದು ಸಾಬೀತಾಗಿ 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿತ್ತು.

ಶಿಕ್ಷೆ ಪ್ರಶ್ನಿಸಿ ಕೇರಳ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ ಸೆರ್ವೆಲ್ಲಿ ತನ್ನ ದೇಹದ ಗಾತ್ರಕ್ಕಿಂತಲೂ ತಾನು ಮಾದಕವಸ್ತು ಬಚ್ಚಿಟ್ಟುಕೊಂಡಿದ್ದೆನೆನ್ನಲಾದ ಒಳ ಉಡುಪು ಚಿಕ್ಕದು ಎಂದು ಪ್ರತಿಪಾದಿಸಿದ. ಆಗ ಆತನ ಪರವಾಗಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದು ಶಾಸಕ ಆಂಟೊನಿ ರಾಜು. ಹೈಕೋರ್ಟ್‌ ಸೆರ್ವೆಲ್ಲಿಯನ್ನು ದೋಷಮುಕ್ತ ಗೊಳಿಸಿತು.

ಇನ್ನು ನೆಮ್ಮದಿಯ ಜೀವನ ನಡೆಸಬಹುದು ಎಂದು ಲೆಕ್ಕಹಾಕಿ ಸೆರ್ವೆಲ್ಲಿ ಆಸ್ಟ್ರೇಲಿಯಾಕ್ಕೆ ಹೋದ. ಆದರೆ ಆ ನೆಮ್ಮದಿ ಬಹುಕಾಲ ಉಳಿಯಲಿಲ್ಲ.

ಸೆರ್ವೆಲ್ಲಿ ಆಸ್ಟ್ರೇಲಿಯಾದಲ್ಲಿ ಕೊಲೆ ಪ್ರಕರಣವೊಂದರಲ್ಲಿ ಸಿಕ್ಕಿಬಿದ್ದ. ಆತನನ್ನು ವಿಕ್ಟೋರಿಯಾದಲ್ಲಿ ಸೆರೆ ಹಿಡಿಯಲಾಯಿತು. ಜೈಲು ಸೇರಿದ ಅವನ ಬಾಯಿ ಸುಮ್ಮನಿರಲಿಲ್ಲ. ತಾನು ಭಾರತದ ಪ್ರಕರಣವೊಂದರಲ್ಲಿ ಪಾರಾಗಿ ಬಂದ ಕತೆಯನ್ನು ಕೈದಿಗಳಿಗೆ ಬಣ್ಣಿಸತೊಡಗಿದ. ಅದರಲ್ಲೂ ಭಾರತದ ಪೊಲೀಸರು ಮತ್ತು ನ್ಯಾಯಾಲಯಗಳಿಗೆ ಹೇಗೆ ಚಳ್ಳೆಹಣ್ಣು ತಿನ್ನಿಸಿದೆ ಎಂಬುದನ್ನು ಕೊಚ್ಚಿಕೊಳ್ಳತೊಡಗಿದ.

ತಕ್ಷಣವೇ ಎಚ್ಚೆತ್ತುಕೊಂಡ ಆಸ್ಟ್ರೇಲಿಯಾದ ರಾಷ್ಟ್ರೀಯ ತನಿಖಾ ಸಂಸ್ಥೆ ಎನ್‌ಸಿಬಿ ಭಾರತೀಯ ಅಧಿಕಾರಿಗಳಿಗೆ ಮಾಹಿತಿ ನೀಡಿತು. ಕೊಲೆ ಪ್ರಕರಣದಲ್ಲಿ ಸರ್ವೆಲ್ಲಿಯ ಸಹ ಆರೋಪಿಯ ವಿಚಾರಣೆ ನಡೆಸಿದಾಗ ಸರ್ವೆಲ್ಲಿಯ ಕುಟುಂಬ ಮತ್ತು ವಕೀಲರು ನ್ಯಾಯಾಲಯದ ಅಧಿಕಾರಿಯೊಬ್ಬರಿಗೆ ಲಂಚ ನೀಡಿದ್ದ ವಿಚಾರ ಬಯಲಾಯಿತು. ಹಾಗೆ ಲಂಚ ಪಡೆದ ಅಧಿಕಾರಿ ಒಳ ಉಡುಪನ್ನು ಬದಲಿಸಿದ್ದ.

12 ವರ್ಷಗಳ ನಂತರ, 2006 ರಲ್ಲಿ, ಸಹಾಯಕ ಪೊಲೀಸ್ ಆಯುಕ್ತರು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದರು. ಆದರೆ, ಹೈಕೋರ್ಟ್ ಕಳೆದ ವರ್ಷ ಮಾರ್ಚ್‌ನಲ್ಲಿ ತಾಂತ್ರಿಕ ಆಧಾರದ ಮೇಲೆ ವಿಚಾರಣಾ ನ್ಯಾಯಾಲಯದ ವಿಚಾರಣೆಯನ್ನು ರದ್ದುಗೊಳಿಸಿತ್ತು.

ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 195 (1) (ಬಿ) ನಿಬಂಧನೆಗಳ ಪ್ರಕಾರ ಕಾನೂನು ಕ್ರಮ ಮುಂದುವರಿಸಲು ತನ್ನ ಆದೇಶ ಅಡ್ಡಿಪಡಿಸುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿತು.

ಅಲ್ಲದೆ ವಿಚಾರಣೆ ಆರಂಭಿಸಲು ತನ್ನ ರಿಜಿಸ್ಟ್ರಿಗೆ ಆದೇಶಿಸಿತು ಹೀಗಾಗಿ ತಿರುವನಂತಪುರದ ವಿಚಾರಣಾ ನ್ಯಾಯಾಲಯ ರಾಜು ವಿರುದ್ಧದ ಕ್ರಿಮಿನಲ್ ವಿಚಾರಣೆಯನ್ನು ಪುನರಾರಂಭಿಸಿತು. ವಿಚಾರಣೆ ಪ್ರಶ್ನಿಸಿ ರಾಜು ಅವರು ವಕೀಲ ದೀಪಕ್ ಪ್ರಕಾಶ್ ಅವರ ಮೂಲಕ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದರು.

ರಾಜು ವಿರುದ್ಧ ಆರಂಭಿಸಲಾದ ಹೊಸ ವಿಚಾರಣೆಗೆ ಜುಲೈ 2023 ರಲ್ಲಿ ತಡೆ ನೀಡಿದ ಸುಪ್ರೀಂ ಕೋರ್ಟ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಪ್ರತಿಕ್ರಿಯೆ ಕೇಳಿತ್ತು.

Related Stories

No stories found.
Kannada Bar & Bench
kannada.barandbench.com