ಪ್ರಕರಣಗಳ ತುರ್ತು ಇತ್ಯರ್ಥ ಕೋರಿ ಹೈಕೋರ್ಟ್‌ ಕದತಟ್ಟಿದ ಪಾತಕಿ ರವಿ ಪೂಜಾರಿ: ಕೇಂದ್ರ, ರಾಜ್ಯ ಸರ್ಕಾರಗಳಿಗೆ ನೋಟಿಸ್‌

ರವಿ ಪೂಜಾರಿ ಮೂರು ವರ್ಷಗಳಿಂದ ನ್ಯಾಯಾಂಗ ಬಂಧನದಲ್ಲಿದ್ದು, ಹಸ್ತಾಂತರ ಆದೇಶದಲ್ಲಿ ಉಲ್ಲೇಖಿಸಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಿ, ಆರೋಪ ಪಟ್ಟಿ ಸಲ್ಲಿಸುವ ಕೆಲಸವನ್ನು ಸರ್ಕಾರ ಮಾಡಿಲ್ಲ ಎಂದು ಅರ್ಜಿಯಲ್ಲಿ ಆಕ್ಷೇಪ.
High Court of Karnataka
High Court of Karnataka
Published on

ಆರೋಪಿ ಹಸ್ತಾಂತರ ಒಪ್ಪಂದದ ದಾಖಲೆಯಲ್ಲಿ ಉಲ್ಲೇಖಿಸಿರುವ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ವಿದೇಶದಿಂದ ಭಾರತಕ್ಕೆ ವರ್ಗಾವಣೆಗೊಂಡಿರುವ ಆರೋಪಿಯನ್ನು ಇತರೆ ಅಪರಾಧ ಪ್ರಕರಣಗಳಲ್ಲೂ ವಿಚಾರಣೆಗೆ ಒಳಪಡಿಸಬಹುದೇ ಎಂಬುದನ್ನು ಸ್ಪಷ್ಟಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಮಂಗಳವಾರ ನಿರ್ದೇಶಿಸಿದೆ. ಅಲ್ಲದೇ, ಕೇಂದ್ರ ಸರ್ಕಾರ ಸೇರಿದಂತೆ ಎಲ್ಲಾ ಪ್ರತಿವಾದಿಗಳಿಗೆ ನೋಟಿಸ್‌ ಜಾರಿ ಮಾಡಿದೆ.

ತಮ್ಮ ವಿರುದ್ಧದ ಪ್ರಕರಣಗಳನ್ನು ತುರ್ತಾಗಿ ಇತ್ಯರ್ಥಪಡಿಸುವಂತೆ ಕೋರಿ 2020ರಲ್ಲಿ ಸೆನೆಗಲ್‌ನಿಂದ ಭಾರತಕ್ಕೆ ಹಸ್ತಾಂತರವಾಗಿ, ಸದ್ಯ ಮಹಾರಾಷ್ಟ್ರದ ಜೈಲಿನಲ್ಲಿರುವ ಭೂಗತ ಪಾತಕಿ ರವಿ ಪೂಜಾರಿ ಅಲಿಯಾಸ್‌ ರವಿಪ್ರಕಾಶ್‌ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಮಂಗಳವಾರ ನಡೆಸಿರುವ ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಕೇಂದ್ರದಿಂದ ಸ್ಪಷ್ಟನೆ ಕೇಳಿದೆ.

ಕರ್ನಾಟಕ, ಕೇರಳ, ಮಹಾರಾಷ್ಟ್ರ, ಗುಜರಾತ್‌ ಮತ್ತು ರಾಜಸ್ಥಾನದಲ್ಲಿ ರವಿ ಪೂಜಾರಿ ವಿರುದ್ಧ 107 ಪ್ರಕರಣ ದಾಖಲಾಗಿವೆ. ಹಸ್ತಾಂತರ ನ್ಯಾಯಾಲಯವು ಯಾವೆಲ್ಲಾ ಪ್ರಕರಣಗಳಲ್ಲಿ ಪೂಜಾರಿಯನ್ನು ವಿಚಾರಣೆಗೆ ಒಳಪಡಿಸಬಹುದು ಎಂಬುದನ್ನು ಉಲ್ಲೇಖಿಸಿದೆ. ಹೀಗಾಗಿ, ಹಸ್ತಾಂತರ ಆದೇಶದಲ್ಲಿ ಉಲ್ಲೇಖಿಸಿರುವುದಕ್ಕೆ ವಿರುದ್ಧವಾಗಿ ಇತರೆ ಪ್ರಕರಣಗಳಲ್ಲಿ ಪೂಜಾರಿಯನ್ನು ತನಿಖೆ ಮತ್ತು ವಿಚಾರಣೆಗೆ ಒಳಪಡಿಸುವುದು ಹಸ್ತಾಂತರ ಕಾಯಿದೆ ಸೆಕ್ಷನ್‌ 21ಕ್ಕೆ ವಿರುದ್ಧ ಎಂದು ವಕೀಲ ದಿಲ್‌ ರಾಜ್‌ ಜೂಡ್‌ ರೋಹಿತ್‌ ಸೀಕ್ವೈರಾ ಅವರ ಮೂಲಕ ಸಲ್ಲಿಸಲಾಗಿರುವ ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.

ರವಿ ಪೂಜಾರಿ ಮೂರು ವರ್ಷಗಳಿಂದ ನ್ಯಾಯಾಂಗ ಬಂಧನದಲ್ಲಿದ್ದು, ಹಸ್ತಾಂತರ ಆದೇಶದಲ್ಲಿ ಉಲ್ಲೇಖಿಸಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಿ, ಆರೋಪ ಪಟ್ಟಿ ಸಲ್ಲಿಸುವ ಕೆಲಸವನ್ನು ಸರ್ಕಾರ ಮಾಡಿಲ್ಲ. ಈ ನೀತಿಯನ್ನು ಅಳವಡಿಸಿಕೊಂಡರೆ ಸೆರೆವಾಸದಿಂದ ಹೊರಬರಲು ಆರೋಪಿಗೆ ಯಾವುದೇ ಭರವಸೆ ಉಳಿಯುವುದಿಲ್ಲ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

“ಮಹಾರಾಷ್ಟ್ರಕ್ಕೆ ಸಂಬಂಧಿಸಿದ ಪ್ರಕರಣಗಳು ತನಿಖಾ ಹಂತದಲ್ಲಿದ್ದು, ಥಾಣೆಗೆ ಸಂಬಂಧಿಸಿದ ಆರು ಪ್ರಕರಣಗಳನ್ನು ಇನ್ನಷ್ಟೇ ವಿಚಾರಣೆ ನಡೆಸಬೇಕಿದೆ. ಥಾಣೆ ಜಿಲ್ಲೆಗೆ ಸಂಬಂಧಿಸಿದಂತೆ ಐದನೇ ಪ್ರತಿವಾದಿಯಾಗಿರುವ ಅಲ್ಲಿನ ಪೊಲೀಸ್‌ ಆಯುಕ್ತರು ಕಳೆದ ಮೂರು ವರ್ಷಗಳಿಂದ ಪೂಜಾರಿಯನ್ನು ವಶಕ್ಕೆ ಪಡೆಯುವ ಯಾವುದೇ ಪ್ರಯತ್ನ ಮಾಡಿಲ್ಲ” ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

Kannada Bar & Bench
kannada.barandbench.com