ಸಿಜೆ ಕೋರ್ಟ್‌ ಹಾಲ್‌ನಲ್ಲಿ ಅನಾಮಿಕ ವ್ಯಕ್ತಿಯಿಂದ ನ್ಯಾಯ ಕೋರಿ ರೇಜರ್‌ನಿಂದ ಸ್ವಯಂ ಹಾನಿ; ಪಂಚನಾಮೆಗೆ ಸೂಚನೆ

“ರೇಜರ್‌ ಹಿಡಿದು ಕೋರ್ಟ್‌ ಹಾಲ್‌ಗೆ ಬರಲು ನಮ್ಮ ಭದ್ರತಾ ಸಿಬ್ಬಂದಿ ಹೇಗೆ ಅನುಮತಿಸಿದರು? ನಮ್ಮಲ್ಲಿ ಭದ್ರತೆ ಅಪಾರವಾಗಿದೆ. ಆದರೂ ಹೇಗೆ ಅವರು ನುಸುಳಿದರು?” ಎಂದು ಪ್ರಶ್ನಿಸಿದ ನ್ಯಾ. ಶಾಸ್ತ್ರಿ.
Karnataka High Court
Karnataka High Court

ಅನಾಮಿಕ ವ್ಯಕ್ತಿಯೊಬ್ಬರು ರೇಜರ್‌ ಹಿಡಿದು ಹೈಕೋರ್ಟ್‌ನ ಕೋರ್ಟ್‌ ಹಾಲ್‌ 1ಕ್ಕೆ ಪ್ರವೇಶಿಸಿ ನ್ಯಾಯಕ್ಕಾಗಿ ಮನವಿ ಮಾಡಿ ಕುತ್ತಿಗೆ ಕತ್ತರಿಸಿಕೊಳ್ಳಲು ಯತ್ನಿಸಿ ಗಾಯಗೊಂಡಿರುವ ವಿಲಕ್ಷಣ ಘಟನೆಗೆ ಕರ್ನಾಟಕ ಹೈಕೋರ್ಟ್‌ ಬುಧವಾರ ಸಾಕ್ಷಿಯಾಗಿದೆ.

ಮುಖ್ಯ ನ್ಯಾಯಮೂರ್ತಿ ಅನ್‌ ವಿ ಅಂಜಾರಿಯಾ ಮತ್ತು ಡಾ. ನ್ಯಾಯಮೂರ್ತಿ ಎಚ್‌ ಬಿ ಪ್ರಭಾಕರ್‌ ಶಾಸ್ತ್ರಿ ಅವರ ನೇತೃತ್ವದ ಶಿಷ್ಟಾಚಾರದ ವಿಭಾಗೀಯ ಪೀಠದ‌ ಮುಂದೆ ಘಟನೆ ನಡೆದಿದೆ.

Chief Justice N V Anjaria and Justice H B Prabhakara Sastry
Chief Justice N V Anjaria and Justice H B Prabhakara Sastry

ಏಕಾಏಕಿ ಪೀಠದ ಮುಂದೆ ವ್ಯಕ್ತಿಯು ದಾಖಲೆಗಳನ್ನು ನ್ಯಾಯಾಲಯದ ಅಧಿಕಾರಿಗೆ ಸಲ್ಲಿಸಿ, ನನಗೆ ನ್ಯಾಯ ಕೊಡಿಸಬೇಕು ಎಂದು ಮನವಿ ಮಾಡಿದರು. ತಕ್ಷಣ ತಮ್ಮ ಜೇಬಿನಿಂದ ರೇಜರ್‌ ತೆಗೆದು ಕುತ್ತಿಗೆ ಕೊಯ್ಯಲು ಮುಂದಾದರು. ಇದರಿಂದ ಚಕಿತವಾದ ಪೀಠ ಮತ್ತು ಸುತ್ತಲಿದ್ದ ವಕೀಲರು ಅವರನ್ನು ತಡೆದು, ಪೊಲೀಸರಿಗೆ ಒಪ್ಪಿಸಿದರು.

ತಕ್ಷಣ ಎಚ್ಚೆತ್ತುಕೊಂಡ ಪೀಠ ಸ್ಥಳದಲ್ಲಿದ್ದ ವಕೀಲರಿಗೆ “ರೇಜರ್‌ ಮುಟ್ಟಬೇಡಿ. ಸ್ಥಳದ ಪಂಚನಾಮೆ ನಡೆಸಬೇಕಾಗುತ್ತದೆ. ಹೈಕೋರ್ಟ್‌ನ ರಿಜಿಸ್ಟ್ರಾರ್‌ ಜನರಲ್‌ ಅವರನ್ನು ಬರ ಹೇಳಿ” ಎಂದರು.

ಈ ನಡುವೆ, ನ್ಯಾ. ಶಾಸ್ತ್ರಿ ಅವರು “ರೇಜರ್‌ ಹಿಡಿದು ಕೋರ್ಟ್‌ ಹಾಲ್‌ಗೆ ಬರಲು ನಮ್ಮ ಭದ್ರತಾ ಸಿಬ್ಬಂದಿ ಹೇಗೆ ಅನುಮತಿಸಿದರು? ನಮ್ಮಲ್ಲಿ ಭದ್ರತೆ ಅಪಾರವಾಗಿದೆ. ಆದರೂ ಹೇಗೆ ಅವರು ನುಸುಳಿದರು? ರೇಜರ್‌ ಅನ್ನು ಮುಟ್ಟಬೇಡಿ. ಹೈಕೋರ್ಟ್‌ ಪೊಲೀಸರು ಎಲ್ಲಿ ಹೋಗಿದ್ದಾರೆ?" ಎಂದು ಪ್ರಶ್ನಿಸಿದರು.

ಮುಂದುವರಿದು, “ಆತ ನೀಡಿದ ಕಡತವನ್ನು ನೀವೇಕೆ ಪಡೆದುಕೊಂಡಿರಿ (ಕೋರ್ಟ್‌ ಅಧಿಕಾರಿಗೆ). ಅದನ್ನು ಪಡೆದು ಬಳಿಕ ಕೆಳಗೆ ಇಟ್ಟಿದ್ದೀರಿ. ಹೀಗಾಗಿ, ನಿಮ್ಮ ಬೆರಳಚ್ಚನ್ನೂ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಬೇಕು. ನ್ಯಾಯಾಲಯದ ಅನುಮತಿ ಇಲ್ಲದೇ ಕೋರ್ಟ್‌ ಅಧಿಕಾರಿಯು ಯಾವುದೇ ದಾಖಲೆ ಸ್ವೀಕರಿಸುವಂತಿಲ್ಲ. ವಕೀಲರು ಕಡತ ನೀಡಿದ್ದರೆ ನೋಡಬಹುದಿತ್ತು. ಆದರೆ, ಅದನ್ನು ವ್ಯಕ್ತಿಯೊಬ್ಬರು ನೀಡಿದ್ದಾರೆ” ಎಂದರು.

ಸ್ಥಳದಲ್ಲಿದ್ದ ಸರ್ಕಾರದ ಪರ ವಕೀಲ ಎಸ್‌ ಎಸ್‌ ಮಹೇಂದ್ರ ಅವರು “ಪ್ರಕರಣವನ್ನು ವ್ಯಾಪ್ತಿ ಹೊಂದಿದ ಪೊಲೀಸರಿಗೆ ತಿಳಿಸುವುದು ಸೂಕ್ತ” ಎಂದರು.

ಇದಕ್ಕೆ ಸಮ್ಮತಿಸಿದ ಪೀಠವು ಸ್ಥಳಕ್ಕೆ ಆಗಮಿಸಿದ ರಿಜಿಸ್ಟ್ರಾರ್‌ ಜನರಲ್‌ ಅವರಿಗೆ ಮಾಹಿತಿ ನೀಡಿದರು. ಅಂತಿಮವಾಗಿ ಕಲಾಪ ಮುಕ್ತಾಯಗೊಳಿಸಿದರು.

“ರೇಜರ್‌ನಿಂದ ಕತ್ತು ಕೊಯ್ದುಕೊಳ್ಳಲು ಪ್ರಯತ್ನಿಸಿದ ವ್ಯಕ್ತಿಗೆ ಗಂಭೀರ ಗಾಯವಾಗಿದೆ” ಎಂದು ಸ್ಥಳದಲ್ಲಿದ್ದ ವಕೀಲರು ʼಬಾರ್‌ ಅಂಡ್‌ ಬೆಂಚ್‌ʼಗೆ ಖಾತರಿಪಡಿಸಿದ್ದಾರೆ. ಗಾಯಾಳು ಹಿನ್ನೆಲೆಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

Related Stories

No stories found.
Kannada Bar & Bench
kannada.barandbench.com