ತನ್ನ ವಿರುದ್ಧದ ಪ್ರಕರಣವನ್ನು ಉತ್ತರ ಪ್ರದೇಶದಿಂದ ವರ್ಗಾಯಿಸಲು ಕೋರಿ ಸುಪ್ರೀಂ ಮೆಟ್ಟಿಲೇರಿದ ಉನ್ನಾವೊ ಸಂತ್ರಸ್ತೆ

ಸಂತ್ರಸ್ತೆ ವಿರುದ್ಧ ಹೊರಡಿಸಲಾದ ಜಾಮೀನು ರಹಿತ ವಾರೆಂಟ್‌ಗೆ ತಡೆಯಾಜ್ಞೆ ನೀಡುವಂತೆಯೂ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಮಾಡಲಾಗಿದೆ.
Supreme Court
Supreme Court

ಉತ್ತರ ಪ್ರದೇಶದ ಉನ್ನಾವೊನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯು ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದು ತನ್ನ ವಿರುದ್ಧ ಆರೋಪಿಯೊಬ್ಬರ ತಂದೆ ದಾಖಲಿಸಿರುವ ಪ್ರಕರಣವನ್ನು ಉತ್ತರ ಪ್ರದೇಶದಿಂದ ದೆಹಲಿಗೆ ವರ್ಗಾಯಿಸುವಂತೆ ಕೋರಿದ್ದಾರೆ.

ಉನ್ನಾವೋದಲ್ಲಿ 2017ರಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ವಿಚಾರಣೆ ದೆಹಲಿಯಲ್ಲಿ ನಡೆಯುತ್ತಿದೆ ಮತ್ತು ಇದಕ್ಕೆ ಸಂಬಂಧಿಸಿದ ನಿರೀಕ್ಷಣಾ ಜಾಮೀನು ಅರ್ಜಿ ಅಲಾಹಾಬಾದ್ ಹೈಕೋರ್ಟ್‌ನಲ್ಲಿ ಬಾಕಿ ಇದೆ ಎಂದು ತಿಳಿದಿದ್ದರೂ ಉನ್ನಾವೊ ನ್ಯಾಯಾಲಯ ತನ್ನ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿದೆ ಎಂದು ಅರ್ಜಿದಾರೆಯು ದೂರಿದ್ದಾರೆ.

ಆರೋಪಿಗಳಲ್ಲಿ ಒಬ್ಬನಾದ ಶುಭಂ ಸಿಂಗ್‌ ಎಂಬಾತನ ತಂದೆ 2018ರಲ್ಲಿ ಸಲ್ಲಿಸಿದ್ದ ದೂರಿನ ಆಧಾರದ ಮೇಲೆ ಈ ವಾರಂಟ್ ಹೊರಡಿಸಲಾಗಿದೆ. ಸಂತ್ರಸ್ತೆ ಪೊಲೀಸರಿಗೆ ಒದಗಿಸಿದ ವಯಸ್ಸಿನ ದಾಖಲೆಯನ್ನು ಫೋರ್ಜರಿ ಮಾಡಲಾಗಿದೆ ಎಂದು ಆರೋಪಿಯ ತಂದೆ ವಾದಿಸಿದ್ದಾರೆ.

Also Read
ನನ್ನನ್ನು ಸುತ್ತುವರೆದು ಕಪಾಳಕ್ಕೆ ಹೊಡೆದರು: ಉನ್ನಾವೋ ವಕೀಲರ ವಿರುದ್ಧ ನ್ಯಾಯಾಧೀಶರ ದೂರು; ಎಫ್ಐಆರ್ ದಾಖಲು

ತನ್ನ ವಿರುದ್ಧದ ದೂರನ್ನು ರದ್ದುಗೊಳಿಸುವಂತೆ ಸಂತ್ರಸ್ತೆ ಸಲ್ಲಿಸಿದ್ದ ಅರ್ಜಿಯನ್ನು ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿತ್ತು. ಅಲ್ಲದೆ ವಾರಂಟ್ ರದ್ದುಪಡಿಸುವಂತೆ ಇಲ್ಲವೇ ಹಿಂತೆಗೆದುಕೊಳ್ಳುವಂತೆ ಕೋರಿ ಆಕೆ ಸಲ್ಲಿಸಿದ ಅರ್ಜಿಯ ಕುರಿತು ಯಾವುದೇ ನಿರ್ಧಾರವನ್ನು ನ್ಯಾಯಾಲಯ ಕೈಗೊಂಡಿರಲಿಲ್ಲ. ಹೀಗಾಗಿ ಜಾಮೀನು ರಹಿತ ವಾರಂಟ್‌ಗೆ ಏಕ ಪಕ್ಷೀಯ ಮಧ್ಯಂತರ ತಡೆ ನೀಡುವಂತೆ ಸರ್ವೋಚ್ಚ ನ್ಯಾಯಾಲಯವನ್ನು ಸಂತ್ರಸ್ತೆ ಕೋರಿದ್ದಾರೆ.

ಅತ್ಯಾಚಾರದ ಪ್ರಕರಣದಲ್ಲಿ ಪ್ರಧಾನ ಆರೋಪಿಯಾಗಿರುವ ಬಿಜೆಪಿ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗರ್‌ನನ್ನು ದೋಷಿ ಎಂದು ಘೋಷಿಸಿದ ದೆಹಲಿಯ ವಿಚಾರಣಾ ನ್ಯಾಯಾಲಯ ಸಂತ್ರಸ್ತೆ, ಅಪ್ರಾಪ್ತೆ ಎಂಬುದನ್ನು ಈಗಾಗಲೇ ನಿರ್ಧರಿಸಿದ್ದರೂ, ಉನ್ನಾವೊ ನ್ಯಾಯಾಲಯ ವಿಚಾರಣೆ ವೇಳೆ ತನ್ನ ಹಾಜರಾತಿಗೆ ಸೂಚಿಸಿದೆ. ಜೀವ ಬೆದರಿಕೆ ಎದುರಿಸುತ್ತಿರುವ ತನಗೆ ಇದು ಅಪಾಯಕಾರಿಯಾಗಿ ಪರಿಣಮಿಸಿದೆ ಎಂದು ಸಂತ್ರಸ್ತೆ ಅಳಲು ತೋಡಿಕೊಂಡಿದ್ದಾರೆ.

ಉನ್ನಾವೊ ಅತ್ಯಾಚಾರ ಸಂತ್ರಸ್ತೆಯನ್ನು ಬಿಜೆಪಿ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಜೂನ್ 2017ರಲ್ಲಿ ಅಪಹರಿಸಿ ಅತ್ಯಾಚಾರ ಮಾಡಿದ್ದ. ಬಳಿಕ ಆಕೆಯನ್ನು ₹ 60,000ಕ್ಕೆ ಮಾರಾಟ ಮಾಡಲಾಗಿತ್ತು. 2018ರಲ್ಲಿ ಸಂತ್ರಸ್ತೆ ಚಲಿಸುತ್ತಿದ್ದ ಕಾರಿಗೆ, ನಂಬರ್‌ ಪ್ಲೇಟ್‌ ಇಲ್ಲದ ಲಾರಿಯೊಂದು ಡಿಕ್ಕಿ ಹೊಡೆದಿತ್ತು. ಸಂತ್ರಸ್ತೆ ಮತ್ತು ಆಕೆಯ ಪರ ವಕೀಲರು ತೀವ್ರವಾಗಿ ಗಾಯಗೊಂಡಿದ್ದರು. ಬಳಿಕ ವಕೀಲ ಮೃತಪಟ್ಟಿದ್ದರು. ಅಲ್ಲದೆ ಘಟನೆಯಲ್ಲಿ ಆಕೆಯ ಇಬ್ಬರು ಸಂಬಂಧಿಕರು ಕೂಡ ಸಾವನ್ನಪ್ಪಿದ್ದರು. ಘಟನೆಯ ಹಿಂದೆ ಸೆಂಗರ್‌ ಸಂಚು ಇದೆ ಎಂದು ವಕೀಲರ ಪತ್ನಿ ದೂರಿದ್ದರು.

ಪ್ರಕರಣಕ್ಕೆ ಸಂಬಂಧಿಸಿದ ನಾಲ್ಕು ಪ್ರಕರಣಗಳ ವಿಚಾರಣೆಯನ್ನು ಆಗಸ್ಟ್ 2019ರಲ್ಲಿ, ದೆಹಲಿಗೆ ವರ್ಗಾಯಿಸಿದ ಸುಪ್ರೀಂಕೋರ್ಟ್ ಅವುಗಳ ವಿಚಾರಣೆಯನ್ನು ದಿನಂಪ್ರತಿ 45 ದಿನಗಳಲ್ಲಿ ಪೂರ್ಣಗೊಳಿಸಲು ಆದೇಶಿಸಿತ್ತು. ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಂಗರ್‌ಗೆ ಡಿಸೆಂಬರ್ 2019ರಲ್ಲಿ ಶಿಕ್ಷೆ ವಿಧಿಸಲಾಗಿತ್ತು. ಬಳಿಕ ಪೊಲೀಸ್‌ ಕಸ್ಟಡಿಯಲ್ಲಿದ್ದ ಸಂತ್ರಸ್ತೆಯ ತಂದೆಯ ಸಾವಿಗೆ ಕೂಡ ಸೆಂಗರ್‌ ಕಾರಣ ಎಂದು ತಿಳಿಸಿ ಶಿಕ್ಷೆ ನೀಡಲಾಯಿತು. ಇದರ ವಿರುದ್ಧ ಸೆಂಗರ್‌ ಸಲ್ಲಿಸಿರುವ ಮೇಲ್ಮನವಿ ಮತ್ತು ಜಾಮೀನು ಅರ್ಜಿ ದೆಹಲಿ ಹೈಕೋರ್ಟ್‌ನಲ್ಲಿ ವಿಚಾರಣೆ ಎದುರು ನೋಡುತ್ತಿದೆ.

Related Stories

No stories found.
Kannada Bar & Bench
kannada.barandbench.com