ಅನಿಲ್ ದೇಶಮುಖ್ ಕಾರ್ಯದರ್ಶಿ ಬಳಿ ಅನಧಿಕೃತ ವರ್ಗಾವಣೆ, ಸ್ಥಳ ನಿಯುಕ್ತಿಗಳ ಪಟ್ಟಿ ಇತ್ತು: ಬಾಂಬೆ ಹೈಕೋರ್ಟ್‌ಗೆ ಇ ಡಿ

ದೇಶಮುಖ್ ಅವರ ವಿರುದ್ಧ ದಾಖಲಾಗಿರುವ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಸಿಐಆರ್ ರದ್ದುಗೊಳಿಸುವಂತೆ ಕೋರಿ ಅವರ ಆಪ್ತ ಕಾರ್ಯದರ್ಶಿ ಸಂಜೀವ್ ಪಲಾಂಡೆ ಸಲ್ಲಿಸಿದ್ದ ಮನವಿಗೆ ಇ ಡಿ ತನ್ನ ಪ್ರತಿಕ್ರಿಯೆ ಸಲ್ಲಿಸಿದೆ.
Anil Deshmukh and Bombay HC
Anil Deshmukh and Bombay HC
Published on

ದೇಶಮುಖ್‌ ಅವರ ವಿರುದ್ಧ ದಾಖಲಾಗಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಸಿಐಆರ್‌ ರದ್ದುಗೊಳಿಸುವಂತೆ ಕೋರಿ ಅವರ ಆಪ್ತ ಕಾರ್ಯದರ್ಶಿ ಸಂಜೀವ್‌ ಪಲಾಂಡೆ ಸಲ್ಲಿಸಿರುವ ಮನವಿಯನ್ನು ವಜಾಗೊಳಿಸಬೇಕು ಎಂದು ಜಾರಿ ನಿರ್ದೇಶನಾಲಯ ಬಾಂಬೆ ಹೈಕೋರ್ಟ್‌ಗೆ ತಿಳಿಸಿದೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ಕೆಲವು ನಿಬಂಧನೆಗಳ ಸಿಂಧುತ್ವವನ್ನು ಪ್ರಶ್ನಿಸಿ ಪಲಾಂಡೆ ಅವರು ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ವಕೀಲ ಶ್ರೀರಾಮ್ ಶಿರ್ಸತ್ ಅವರ ಮೂಲಕ ಇ ಡಿ ತನ್ನ ಪ್ರತಿಕ್ರಿಯೆ ಸಲ್ಲಿಸಿತು.

ವಿಚಾರಣೆಯ ಸಮಯದಲ್ಲಿ ಪ್ರಕರಣದ ವಿವಿಧ ಆರೋಪಿಗಳು ನೀಡಿದ ಹೇಳಿಕೆಗಳನ್ನು ಉಲ್ಲೇಖಿಸಿದ ತನಿಖಾ ಸಂಸ್ಥೆ ಮನವಿಗೆ ವಿರೋಧ ವ್ಯಕ್ತಪಡಿಸಿತು. ಶಿಫಾರಸು ಮಾಡಿದ ಶಾಸಕರು ಮತ್ತು ವಿಧಾನ ಪರಿಷತ್‌ ಸದಸ್ಯರ ಹೆಸರಿನೊಂದಿಗೆ ಸಹಾಯಕ ಪೊಲೀಸ್‌ ಕಮಿಷನರ್‌ ಮತ್ತು ಅದಕ್ಕಿಂತ ಉನ್ನತ ಶ್ರೇಣಿಯ ಪೊಲೀಸ್‌ ಅಧಿಕಾರಿಗಳ ವರ್ಗಾವಣೆ ಮತ್ತು ಸ್ಥಳ ನಿಯುಕ್ತಿಗೆ ಸಂಬಂಧಿಸಿದ ಪಟ್ಟಿಯನ್ನು ಮಾಜಿ ಗೃಹಸಚಿವರ ಕಚೇರಿ ಸ್ವೀಕರಿಸಿತ್ತು ಎಂಬುದಾಗಿ ಪಲಾಂಡೆ ಅವರೇ ಹೇಳಿಕೆ ನೀಡಿದ್ದಾರೆ ಎಂದು ತನ್ನ 28 ಪುಟಗಳ ಸುದೀರ್ಘ ಪ್ರತಿಕ್ರಿಯೆಯಲ್ಲಿ ಆರೋಪಿಸಿದೆ.

Also Read
ಸಿಬಿಐ ಎಫ್‌ಐಆರ್‌ ವಜಾ ಕೋರಿದ್ದ ಮಾಜಿ ಗೃಹ ಸಚಿವ ಅನಿಲ್‌ ದೇಶಮುಖ್‌ ಮನವಿ ವಜಾ ಮಾಡಿದ ಬಾಂಬೆ ಹೈಕೋರ್ಟ್‌

ಪಟ್ಟಿ ಅನಧಿಕೃತ ಸ್ವರೂಪದ್ದಾಗಿರುವುದರಿಂದ, ಅದಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆಯನ್ನು ನಿರ್ವಹಿಸಿಲ್ಲ. ಅಂತಹ ಪಟ್ಟಿಗಳನ್ನು ಸಿದ್ಧಪಡಿಸಲು ಮತ್ತು ರವಾನಿಸಲು ಯಾವುದೇ ಮಾರ್ಗಸೂಚಿಯನ್ನು ರೂಪಿಸಿಲ್ಲ ಎಂದು ಗೊತ್ತಿದ್ದರೂ ದೇಶಮುಖ್ ಅವರ ನಿರ್ದೇಶನದಂತೆ ಪಟ್ಟಿಯನ್ನು ಪೊಲೀಸ್‌ ಅನುಸ್ಥಾಪನಾ ಮಂಡಳಿಗೆ ಕಳುಹಿಸಲಾಗಿತ್ತು. ಶಿವಸೇನೆಯ ಶಾಸಕರು ಮತ್ತು ಎಂಎಲ್‌ಸಿಗಳ ಹೆಸರುಗಳೊಂದಿಗೆ ಪೊಲೀಸ್‌ ಅಧಿಕಾರಿಗಳನ್ನು ವರ್ಗ ಮಾಡಬೇಕಾದ ಸ್ಥಳಗಳ ಪಟ್ಟಿಯೊಂದಿಗೆ ಮತ್ತೊಬ್ಬ ಸಚಿವರು ದೇಶಮುಖ್‌ ಅವರನ್ನು ಭೇಟಿಯಾಗಲಿದ್ದಾರೆ ಎಂದು ಪಲಾಂಡೆ ಹೇಳಿದ್ದರು ಎಂಬುದಾಗಿ ಇ ಡಿ ವಿವರಿಸಿದೆ.

ಭ್ರಷ್ಟಾಚಾರ ಮತ್ತು ತಮ್ಮ ಸ್ಥಾನದ ದುರ್ಬಳಕೆಗೆ ಸಂಬಂಧಿಸಿದಂತೆ ದೇಶಮುಖ್‌ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಸಿಬಿಐಗೆ ನ್ಯಾಯಾಲಯ ನಿರ್ದೇಶಿಸಿದ ಬೆನ್ನಿಗೇ ಜಾರಿ ನಿರ್ದೇಶನಾಲಯ ದೇಶಮುಖ್‌ ಮತ್ತು ಅವರ ಸಂಬಂಧಿಕರ ವಿರುದ್ಧ ತನಿಖೆ ಪ್ರಾರಂಭಿಸಿತ್ತು.

Kannada Bar & Bench
kannada.barandbench.com