ನಿವೇಶನ ಮಾರಾಟದ ವೇಳೆ ಪಾವತಿಯಾಗದ ಮುದ್ರಾಂಕ ಶುಲ್ಕ: ದಾಖಲೆ ವಶಕ್ಕೆ ಪಡೆಯಲು ಹೈಕೋರ್ಟ್‌ ಆದೇಶ

“ನಿವೇಶನ ಮಾರಾಟದ ಕ್ರಯಪತ್ರದ ದಾಖಲೆಯನ್ನು ಕೇವಲ ಎರಡು ರೂಪಾಯಿ ಮೌಲ್ಯದ ಕಾಗದದಲ್ಲಿ ಮುದ್ರಿಸಲಾಗಿದೆ. ಅದಕ್ಕೆ ಮುದ್ರಾಂಕ ಶುಲ್ಕ ಪಾವತಿಸಿಲ್ಲ ಎಂಬ ಸಂಗತಿ ಬೆಳಕಿಗೆ ಬಂದಿದೆ” ಎಂದು ನ್ಯಾಯಾಲಯ ಹೇಳಿದೆ.
Karnataka High Court
Karnataka High Court

ಕೋಲಾರದಲ್ಲಿ 13 ವರ್ಷಗಳ ಹಿಂದೆ ಎರಡು ನಿವೇಶನಗಳ ಮಾರಾಟ ವಿಚಾರದಲ್ಲಿ ಮುದ್ರಾಂಕ ಶುಲ್ಕ ಪಾವತಿಸದಿರುವ ಸಂಗತಿ ಬೆಳಕಿಗೆ ಬಂದಿದ್ದು, ಆ ದಾಖಲೆಯನ್ನು ವಶಕ್ಕೆ ತೆಗೆದುಕೊಳ್ಳುವಂತೆ ಕರ್ನಾಟಕ ಹೈಕೋರ್ಟ್ ಈಚೆಗೆ ಆದೇಶಿಸಿದೆ.

ಅಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿ ಮೆಹಬೂಬ್ ಮುನಾವರ್ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಎಸ್ ಜಿ ಪಂಡಿತ್ ಮತ್ತು ಸಿ ಎಂ ಪೂಣಚ್ಚ ಅವರ ನೇತೃತ್ವದ ರಜಾಕಾಲೀನ ವಿಭಾಗೀಯ ಪೀಠ ನಡೆಸಿತು.

“ನಿವೇಶನ ಮಾರಾಟದ ಕ್ರಯಪತ್ರದ ದಾಖಲೆಯನ್ನು ಕೇವಲ ಎರಡು ರೂಪಾಯಿ ಮೌಲ್ಯದ ಕಾಗದದಲ್ಲಿ ಮುದ್ರಿಸಲಾಗಿದೆ. ಅದಕ್ಕೆ ಮುದ್ರಾಂಕ ಶುಲ್ಕ ಪಾವತಿಸಿಲ್ಲ ಎಂಬ ಸಂಗತಿ ಬೆಳಕಿಗೆ ಬಂದಿದೆ” ಎಂದಿದೆ.

“ಕರಾರು ಒಪ್ಪಂದಕ್ಕೆ ಮುದ್ರಾಂಕ ಶುಲ್ಕ ಪಾವತಿಸಿಲ್ಲ. ಹೀಗಾಗಿ ಆ ದಾಖಲೆಯನ್ನು ವಶಕ್ಕೆ ಪಡೆದುಕೊಳ್ಳಬೇಕು. ಒಪ್ಪಂದ ಪರಿಶೀಲಿಸಿ ಅದಕ್ಕೆ ಎಷ್ಟು ಶುಲ್ಕ ಪಾವತಿಸಬೇಕು ಮತ್ತು ಅದಕ್ಕೆ ಎಷ್ಟು ದಂಡ ಶುಲ್ಕ ಪಾವತಿಸಬೇಕು ಎಂಬುದನ್ನು ಜಿಲ್ಲಾಧಿಕಾರಿ ನಿರ್ಧರಿಸಬೇಕು” ಎಂದು ಆದೇಶಿಸಿದೆ. 

ಅಶ್ವಥ್‌ ನಾರಾಯಣ ಗುಪ್ತಾ ಅವರು ನೀಡಿದ್ದ ₹50 ಸಾವಿರ ಹಣವನ್ನು ಒಪ್ಪಂದ ಮಾಡಿಕೊಂಡ ದಿನದಿಂದ ಶೇ.12ರ ಬಡ್ಡಿ ದರ ಸೇರಿಸಿ ಪಾವತಿಸಬೇಕು ಎಂದು ಆದೇಶಿಸಿತ್ತು.

ಅರ್ಜಿದಾರರ ಪರ ವಕೀಲರು, ಕರಾರು ಒಪ್ಪಂದಕ್ಕೆ ₹9,125 ಮುದ್ರಾಂಕ ಶುಲ್ಕ ಪಾವತಿಸಬೇಕಿತ್ತು. ಆದರೆ, ಪಾವತಿಸಿಲ್ಲ. ಹೀಗಾಗಿ, ಕರಾರು ಒಪ್ಪಂದ ವಶಪಡಿಸಿಕೊಳ್ಳಲು ಆದೇಶ ನೀಡಬೇಕು ಎಂದು ಕೋರಿದ್ದರು.

ಪ್ರಕರಣದ ಹಿನ್ನೆಲೆ: ಬೆಂಗಳೂರಿನ ಮೆಹಬೂಬ್ ಮುನಾವರ್ 2010ರ ಅಕ್ಟೋಬರ್‌ 18ರಂದು ಕೋಲಾರದವರೇ ಆದ ಅಶ್ವಥ್‌ನಾರಾಯಣ ಗುಪ್ತಾಗೆ ಕೋಲಾರದಲ್ಲಿನ ತಮ್ಮ ಎರಡು ನಿವೇಶನಗಳನ್ನು ಮಾರಾಟ ಮಾಡಲು ಒಪ್ಪಂದ ಮಾಡಿಕೊಂಡಿದ್ದರು. ಆ ನಿವೇಶನಗಳನ್ನು ₹36.5 ಲಕ್ಷಕ್ಕೆ ಖರೀದಿಸಲು ಉದ್ದೇಶಿಸಿ ಒಪ್ಪಂದ ಮಾಡಿಕೊಂಡು ₹50 ಸಾವಿರ ಮುಂಗಡ ಹಣವನ್ನು ಗುಪ್ತಾ ನೀಡಿದ್ದರು. ಉಳಿದ ಹಣವನ್ನು ಮೂರು ತಿಂಗಳ ನಂತರ ಪಾವತಿಸಲು ಇಬ್ಬರೂ ಸಹ ಒಪ್ಪಂದದಲ್ಲಿ ಒಪ್ಪಿಕೊಂಡಿದ್ದರು. ಆನಂತರ ಗುಪ್ತಾ ಪರವಾಗಿ ಮುನಾವರ್ ಕ್ರಯಪತ್ರ ಮಾಡಿಕೊಡುವುದಾಗಿ ಹೇಳಿದ್ದರು.

ಆದರೆ, ಒಪ್ಪಂದದಂತೆ ಮುನಾವರ್ ಕ್ರಯಪತ್ರ ಮಾಡಿಕೊಡಲು ನಿರಾಕರಿಸಿದರು. ಹೀಗಾಗಿ, ಗುಪ್ತಾ 2012ರಲ್ಲಿ ಕೋಲಾರ ನ್ಯಾಯಾಲಯದ ಮೊರೆ ಹೋಗಿ ತಮ್ಮ ಪರ ಆದೇಶ ನೀಡುವಂತೆ ಕೋರಿದ್ದರು. 2015ರ ನವೆಂಬರ್‌ 3ರಂದು ನ್ಯಾಯಾಲಯ ಗುಪ್ತಾ ಪರ ಆದೇಶ ನೀಡಿತ್ತು. ಆದರೆ, ಗುಪ್ತಾ 2013ರಲ್ಲಿ ನಿಧನರಾದ ಹಿನ್ನೆಲೆಯಲ್ಲಿ ಅವರ ಮಕ್ಕಳು ವ್ಯಾಜ್ಯ ಮುಂದುವರಿಸಿದರು.

Kannada Bar & Bench
kannada.barandbench.com