ಮುದ್ರಾಂಕ ರಹಿತ ಮಧ್ಯಸ್ಥಿಕೆ ಒಪ್ಪಂದ ಸ್ವೀಕಾರಾರ್ಹವಲ್ಲ ಆದರೆ ಅವು ಅನೂರ್ಜಿತವಲ್ಲ: ಸುಪ್ರೀಂ ಕೋರ್ಟ್‌

ಮುದ್ರಾಂಕ ರಹಿತ ಮಧ್ಯಸ್ಥಿಕೆ ಒಪ್ಪಂದಗಳಿಗೆ ಕಾನೂನು ಮಾನ್ಯತೆ ಇಲ್ಲ ಎಂದು ಎನ್‌ಎನ್‌ ಗ್ಲೋಬಲ್‌ ಮರ್ಕಂಟೈಲ್‌ ಪ್ರಕರಣದಲ್ಲಿ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ನೀಡಿದ್ದ ತೀರ್ಪನ್ನು ವಿಸ್ತೃತ ಪೀಠ ರದ್ದುಗೊಳಿಸಿದೆ.
ಭಾರತದ ಸರ್ವೋಚ್ಚ ನ್ಯಾಯಾಲಯ
ಭಾರತದ ಸರ್ವೋಚ್ಚ ನ್ಯಾಯಾಲಯ

ಮುದ್ರಾಂಕ ರಹಿತ ಮಧ್ಯಸ್ಥಿಕೆ ಒಪ್ಪಂದಗಳು ಸ್ವೀಕಾರಾರ್ಹವಲ್ಲವಾದರೂ ಮುದ್ರಾಂಕ ರಹಿತವಾದ ಕಾರಣಕ್ಕೆ ಅವುಗಳನ್ನು ಆರಂಭದಿಂದಲೂ ಅನೂರ್ಜಿತ ಎಂದು ಹೇಳಲಾಗದು ಎಂದು ಸುಪ್ರೀಂ ಕೋರ್ಟ್‌ನ ಏಳು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ಬುಧವಾರ ಅಭಿಪ್ರಾಯಪಟ್ಟಿದೆ.

ಮುದ್ರಾಂಕ ರಹಿತ ಮಧ್ಯಸ್ಥಿಕೆ ಒಪ್ಪಂದಗಳಿಗೆ ಕಾನೂನು ಮಾನ್ಯತೆ ಇಲ್ಲ ಎಂದು ಎನ್‌ಎನ್‌ ಗ್ಲೋಬಲ್‌ ಮರ್ಕಂಟೈಲ್‌ ಮತ್ತು ಇಂಡೋ ಯೂನಿಕ್‌ ಫ್ಲೇಮ್‌ ನಡುವಣ ಪ್ರಕರಣದಲ್ಲಿ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ನೀಡಿದ್ದ ತೀರ್ಪನ್ನು ರದ್ದುಗೊಳಿಸಿದ ನ್ಯಾಯಾಲಯ ಮುದ್ರಾಂಕ ಶುಲ್ಕ ಪಾವತಿಸದ ಪರಿಣಾಮ ಒಪ್ಪಂದ ಸ್ವೀಕಾರಾರ್ಹವಾಗುವುದಿಲ್ಲ ಆದರೆ ಹಾಗೆಂದು ಅದು ಅನೂರ್ಜಿತವಾಗದು ಮತ್ತು ಮುದ್ರಾಂಕ ಶುಲ್ಕ ಪಾವತಿಸದಿರುವುದಕ್ಕೆ ಕಾನೂನಾತ್ಮಕ ಪರಿಹಾರ ಕಂಡುಕೊಳ್ಳಬಹುದು ಎಂದು ಹೇಳಿದೆ.

ಮಧ್ಯಸ್ಥಿಕೆ ಒಪ್ಪಂದಕ್ಕೆ ಮುದ್ರಾಂಕಯುತವೇ ಅಥವಾ ಅಲ್ಲವೇ ಎಂಬ ಅಂಶದ ನಿರ್ಣಯವು ಮಧ್ಯಸ್ಥಿಕೆ ನ್ಯಾಯಮಂಡಳಿಗೆ ಬಿಟ್ಟಿದ್ದೇ ವಿನಾ ನ್ಯಾಯಾಲಯಗಳಿಗಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿತು.

"ಮಧ್ಯಸ್ಥಿಕೆ ಒಪ್ಪಂದದ ಪಕ್ಷಕಾರರು ಮಧ್ಯಸ್ಥಿಕೆ ನ್ಯಾಯಮಂಡಳಿಗೆ ಅಧಿಕಾರ ವ್ಯಾಪ್ತಿಯನ್ನು ನೀಡುತ್ತಾರೆ, ಪಕ್ಷಕಾರರು ಮಧ್ಯಸ್ಥಿಕೆ ಒಪ್ಪಂದಕ್ಕೆ ತಮ್ಮ ಸಹಿ ಹಾಕಿದಾಗ ಅವರು ಮಧ್ಯಸ್ಥಿಕೆ ಒಪ್ಪಂದಕ್ಕೆ ಸ್ವತಂತ್ರವಾಗಿ ಸಹಿ ಹಾಕಿದ್ದಾರೆ ಎಂದು ಪರಿಗಣಿಸಲಾಗುತ್ತದೆ. ಇದು ರೆಫರಲ್ ಹಂತದಲ್ಲಿ ನ್ಯಾಯಾಲಯಗಳ ಹಸ್ತಕ್ಷೇಪವನ್ನು ಮಿತಿಗೊಳಿಸುತ್ತದೆ ಮತ್ತು ಮಧ್ಯಸ್ಥಿಕೆ ನ್ಯಾಯಮಂಡಳಿಗೆ ತಮ್ಮದೇ ಆದ ನ್ಯಾಯವ್ಯಾಪ್ತಿಯಲ್ಲಿ ತೀರ್ಪು ನೀಡಲು ಅವಕಾಶ ನೀಡುತ್ತದೆ" ಎಂದು ನ್ಯಾಯಾಲಯ ಹೇಳಿದೆ.

ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜೀವ್ ಖನ್ನಾ, ಬಿ ಆರ್‌ ಗವಾಯಿ, ಸೂರ್ಯಕಾಂತ್ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ಈ ತೀರ್ಪು ನೀಡಿದೆ.

ಮಧ್ಯಸ್ಥಿಕೆ, 7 ನ್ಯಾಯಮೂರ್ತಿಗಳ ಪೀಠ
ಮಧ್ಯಸ್ಥಿಕೆ, 7 ನ್ಯಾಯಮೂರ್ತಿಗಳ ಪೀಠ

ಸಿಜೆಐ ಸೇರಿದಂತೆ ನ್ಯಾಯಪೀಠದ ಆರು ನ್ಯಾಯಮೂರ್ತಿಗಳು ಮುಖ್ಯ ತೀರ್ಪನ್ನು ನೀಡಿದರೆ, ನ್ಯಾಯಮೂರ್ತಿ ಖನ್ನಾ ಭಿನ್ನವಾದರೂ ಸಹಮತದ ತೀರ್ಪು ಬರೆದರು. ಪೀಠ ಅಕ್ಟೋಬರ್ 12ರಂದು ತನ್ನ ತೀರ್ಪನ್ನು ಕಾಯ್ದಿರಿಸಿತ್ತು 

ಸೆಪ್ಟೆಂಬರ್‌ನಲ್ಲಿ, ಎನ್ಎನ್ ಗ್ಲೋಬಲ್ ಮರ್ಕಂಟೈಲ್ ಪ್ರೈವೇಟ್ ಲಿಮಿಟೆಡ್ ಮತ್ತು ಇಂಡೋ ಯುನಿಕ್ ಫ್ಲೇಮ್ ಲಿಮಿಟೆಡ್ ಇನ್ನಿತರರ ನಡುವಣ ಪ್ರಕರಣದಲ್ಲಿ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ನೀಡಿದ್ದ ತೀರ್ಪನ್ನು ಏಳು ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾಯಿಸಲಾಗಿತ್ತು.

ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ಏಪ್ರಿಲ್ 25ರಂದು 3:2ರಷ್ಟು ತೀರ್ಪಿನೊಂದಿಗೆ ಮುದ್ರೆ ಹಾಕದ ಮಧ್ಯಸ್ಥಿಕೆ ಒಪ್ಪಂದಗಳು ಕಾನೂನಿನಲ್ಲಿ ಮಾನ್ಯವಲ್ಲ ಎಂದು ಹೇಳಿತ್ತು. 

ಅದಾದ ಕೆಲ ದಿನಗಳಲ್ಲೇ, ಕೇಂದ್ರ ಕಾನೂನು ಸಚಿವಾಲಯ ಮಧ್ಯಸ್ಥಿಕೆ ಮತ್ತು ಸಂಧಾನ ಕಾಯಿದೆಗೆ ಸುಧಾರಣೆ ತರಲು ಮತ್ತು ದೇಶದಲ್ಲಿ ಮಧ್ಯಸ್ಥಿಕೆ ಕಾನೂನಿನ ಕಾರ್ಯನಿರ್ವಹಣೆ ಪರಿಶೀಲಿಸಲು ತಜ್ಞರ ಸಮಿತಿಯೊಂದನ್ನು ರಚಿಸಿತು.

ಕಾನೂನಿನ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಏಳು ನ್ಯಾಯಮೂರ್ತಿಗಳ ಪೀಠ ಇಂದು ಉತ್ತರಿಸಿದ್ದರೂ, ಕ್ಯುರೇಟಿವ್ ಅರ್ಜಿಯನ್ನು ವಾಸ್ತವಾಂಶಗಳ ಆಧಾರದಲ್ಲಿ ಇನ್ನೂ ನಿರ್ಧರಿಸಲಾಗಿಲ್ಲ ಎಂದು ತಿಳಿಸಿದೆ.

2014ರಲ್ಲಿ ಕರ್ನಾಟಕ ಹೈಕೋರ್ಟ್ ಹೊರಡಿಸಿದ ಆದೇಶಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಪಕ್ಷಕಾರರ ನಡುವೆ ಮಧ್ಯಸ್ಥಿಕೆ ಒಪ್ಪಂದ ಮಾಡಿಕೊಂಡ ಒಡಂಬಡಿಕೆ ಪತ್ರ ಮಾನ್ಯವೆಂದು ಪರಿಗಣಿಸಿ ಮಧ್ಯಸ್ಥಿಕೆದಾರನನ್ನು ಡಿಸೆಂಬರ್ 2014ರಲ್ಲಿ, ಹೈಕೋರ್ಟ್ ನೇಮಿಸಿತ್ತು. ಫೆಬ್ರವರಿ 2020ರಲ್ಲಿ, ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ಈ ಆದೇಶವನ್ನು ಬದಿಗೆ ಸರಿಸಿತ್ತು.

ಚಾರಿಟಬಲ್ ಟ್ರಸ್ಟ್ ಒಂದು (ಪ್ರತಿವಾದಿಗಳು) ಅಪೀಲುದಾರರೊಂದಿಗೆ ವಿವಿಧೋದ್ದೇಶ ಸಮುದಾಯ ಭವನ ಮತ್ತು ಕಚೇರಿ ಸಂಕೀರ್ಣ ನಿರ್ಮಿಸಲು ಜೊತೆಗೆ ಆ ಭೂಮಿಯಲ್ಲಿ ಕೆಲವು ಕಟ್ಟಡಗಳನ್ನು ನವೀಕರಿಸಲು ಗುತ್ತಿಗೆ ಒಪ್ಪಂದ ಮಾಡಿಕೊಂಡದ್ದಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. 38 ವರ್ಷಗಳ ಅವಧಿಯ ಈ ಒಪ್ಪಂದಕ್ಕೆ 1996ರಲ್ಲಿ ಸಹಿ ಹಾಕಲಾಗಿದ್ದು, 55 ಲಕ್ಷ ರೂ.ಗಳ ಭದ್ರತಾ ಠೇವಣಿ ಇಡುವಂತೆ ಷರತ್ತು ವಿಧಿಸಲಾಗಿತ್ತು.

ಆದರೆ ಮೇಲ್ಮನವಿದಾರರ ವಿರುದ್ಧ 2008 ರಲ್ಲಿ ಟ್ರಸ್ಟ್‌ ದಾವೆ ಹೂಡಿತು. ಕೇವಲ 25 ಲಕ್ಷ ರೂ.ಗಳನ್ನು ಮಾತ್ರ ಠೇವಣಿ ಇಡಲಾಗಿದ್ದು ಆಸ್ತಿಯಲ್ಲಿನ ಸಮಾಧಿಯನ್ನು ಅಪವಿತ್ರಗೊಳಿಸಲಾಗಿದೆ ಎಂದು ಅದು ಗಮನ ಸೆಳೆದಿತ್ತು. ಇದಲ್ಲದೆ, ಮೇಲ್ಮನವಿದಾರರು ಟ್ರಸ್ಟ್ನ ಕೆಲವು ಸದಸ್ಯರೊಂದಿಗೆ ಸೇರಿಕೊಂಡು ಹೊಸ ಕ್ರಯ ಪತ್ರ ಸಲ್ಲಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು.

ಬೆಂಗಳೂರು ಸಿಟಿ ಸಿವಿಲ್ ನ್ಯಾಯಾಲಯ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಮಧ್ಯಂತರ ಆದೇಶ ಹೊರಡಿಸಿತ್ತು. ದಾವೆ ಪ್ರಕ್ರಿಯೆಗಳು ಪ್ರಾರಂಭವಾದ ಎರಡು ವರ್ಷಗಳ ನಂತರ, ಮೇಲ್ಮನವಿದಾರರು 2013ರಲ್ಲಿ ಕರ್ನಾಟಕ ಹೈಕೋರ್ಟ್ ಮುಂದೆ ಮಧ್ಯಸ್ಥಿಕೆ ಷರತ್ತು ಅನ್ವಯಿಸಿದರು.

ವಿಶೇಷವೆಂದರೆ, ಏಕ ಸದಸ್ಯ ಪೀಠದ ಆದೇಶದ ನಂತರ, ಪ್ರಶ್ನಾರ್ಹ ದಾಖಲೆಯು ಗುತ್ತಿಗೆ ಪತ್ರವಾಗಿದ್ದು ಗುತ್ತಿಗೆ ಒಪ್ಪಂದವಲ್ಲ ಎಂದು ನ್ಯಾಯಾಂಗ ರಿಜಿಸ್ಟ್ರಾರ್ ತಿಳಿಸಿದರು. ಆದ್ದರಿಂದ, ಅಪೀಲುದಾರರಿಗೆ ಸುಂಕ ತೆರಿಗೆ ಮತ್ತು ಮತ್ತು ₹ 1,01,56,388 ದಂಡ ಪಾವತಿಸುವಂತೆ ರಿಜಿಸ್ಟ್ರಾರ್ ನಿರ್ದೇಶನ ನೀಡಿದ್ದರು.

ಆದರೂ, ಹೈಕೋರ್ಟ್ ನಂತರ ರಿಜಿಸ್ಟ್ರಾರ್ ಅವರ ಸಂಶೋಧನೆಗಳನ್ನು ತಿರಸ್ಕರಿಸಿ ಮಧ್ಯಸ್ಥಿಕೆದಾರರನ್ನು ನೇಮಿಸಿತು. ಆದರೆ ಹೈಕೋರ್ಟ್‌ನ ಈ ಆದೇಶವನ್ನು 2020ರಲ್ಲಿ ಸುಪ್ರೀಂ ಕೋರ್ಟ್ ತಳ್ಳಿಹಾಕಿತು.

ವಿಳಂಬದ ಆಧಾರದ ಮೇಲೆ ಜುಲೈ 2021ರಲ್ಲಿ ಸುಪ್ರೀಂ ಕೋರ್ಟ್ ಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿದ ನಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಯುರೇಟಿವ್ ಅರ್ಜಿ ಸಲ್ಲಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com