ಅಮಿತ್ ಶಾ ಅವಹೇಳನ ಪ್ರಕರಣ: ರಾಹುಲ್ ಗಾಂಧಿಗೆ ಉತ್ತರ ಪ್ರದೇಶದ ನ್ಯಾಯಾಲಯ ಜಾಮೀನು

ತನ್ನ ರಾಜಕೀಯ ಶುದ್ಧ ಎಂದು ಬಿಜೆಪಿ ಹೇಳಿಕೊಂಡರೂ, ಪಕ್ಷದ ಅಧ್ಯಕ್ಷರೊಬ್ಬರು ಕೊಲೆ ಪ್ರಕರಣದ ಆರೋಪಿಯಾಗಿದ್ದಾರೆ ಎಂದು ರಾಹುಲ್ ಗಾಂಧಿ 2018ರಲ್ಲಿ ಹೇಳಿದ್ದರು ಎನ್ನಲಾಗಿತ್ತು. ಆಗ ಅಮಿತ್ ಶಾ ಬಿಜೆಪಿ ಅಧ್ಯಕ್ಷರಾಗಿದ್ದರು.
ರಾಹುಲ್ ಗಾಂಧಿ
ರಾಹುಲ್ ಗಾಂಧಿಫೇಸ್ ಬುಕ್
Published on

ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ 2018ರಲ್ಲಿ ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಯಲ್ಲಿ ಉತ್ತರಪ್ರದೇಶದ ಸುಲ್ತಾನ್‌ಪುರ ನ್ಯಾಯಾಲಯವು ಅವರಿಗೆ ಮಂಗಳವಾರ ಜಾಮೀನು ನೀಡಿದೆ. ಬಿಜೆಪಿ ನಾಯಕರೊಬ್ಬರು ಹೂಡಿರುವ ಪ್ರಕರಣ ಇದಾಗಿದೆ.

ಕರ್ನಾಟಕ ವಿಧಾನಸಭೆ ಚುನಾವಣೆಯ ಪ್ರಚಾರದ ವೇಳೆ ರಾಹುಲ್ ಗಾಂಧಿ ನೀಡಿದ ಕೆಲ ಹೇಳಿಕೆಗಳ ವಿರುದ್ಧ ಬಿಜೆಪಿ ನಾಯಕ ವಿಜಯ್ ಮಿಶ್ರಾ ಪ್ರಕರಣ ದಾಖಲಿಸಿದ್ದರು.

ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿ ನಾಯಕ ಅಮಿತ್ ಶಾ ಅವರನ್ನು 'ಕೊಲೆ ಆರೋಪಿ' ಎಂದು ರಾಹುಲ್‌ ಉಲ್ಲೇಖಿಸಿದ್ದರು. ತನ್ನ ರಾಜಕೀಯ ಶುದ್ಧ ಎಂದು ಬಿಜೆಪಿ ಹೇಳಿಕೊಂಡರೂ, ಪಕ್ಷದ ಅಧ್ಯಕ್ಷರೊಬ್ಬರು ಕೊಲೆ ಪ್ರಕರಣದ ಆರೋಪಿಯಾಗಿದ್ದಾರೆ ಎಂದು ರಾಹುಲ್ ಗಾಂಧಿ 2018ರಲ್ಲಿ ಹೇಳಿದ್ದರು. ಆಗ ಅಮಿತ್ ಶಾ ಬಿಜೆಪಿ ಅಧ್ಯಕ್ಷರಾಗಿದ್ದರು ಎಂಬುದಾಗಿ ಮಿಶ್ರಾ ದೂರಿನಲ್ಲಿ ತಿಳಿಸಿದ್ದರು.

ಸಿಬಿಐ ವಿಶೇಷ ನ್ಯಾಯಾಲಯ 2014ರಲ್ಲಿ ಅಮಿತ್ ಶಾ ಅವರನ್ನು ಖುಲಾಸೆಗೊಳಿಸಿದ್ದ ಸೊಹ್ರಾಬುದ್ದೀನ್ ಎನ್‌ಕೌಂಟರ್‌ ಪ್ರಕರಣವನ್ನು ರಾಹುಲ್ ಗಾಂಧಿ ಉಲ್ಲೇಖಿಸಿದ್ದರು. ಇಂತಹ ಆಕ್ಷೇಪಾರ್ಹ ಹೇಳಿಕೆಗಳು ಗೃಹ ಸಚಿವರ ವರ್ಚಸ್ಸಿಗೆ ಧಕ್ಕೆ ತಂದಿವೆ ಎಂದು ಮಿಶ್ರಾ ದೂರಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಳಿಗ್ಗೆ ವಿಚಾರಣಾ ನ್ಯಾಯಾಲಯದ ಎದುರು ಹಾಜರಾದ ರಾಹುಲ್‌ ತಾನು ನಿರಪರಾಧಿ ಎಂದರು ಎಂಬುದಾಗಿ ತಿಳಿದುಬಂದಿದೆ. ವಾದ ಆಲಿಸಿದ ವಿಚಾರಣಾ ನ್ಯಾಯಾಲಯ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು ಅನುಮತಿ ನೀಡಿತು.

ಆದೇಶದ ವಿವರಗಳು ಇನ್ನಷ್ಟೇ ದೊರೆಯಬೇಕಿದೆ.

Kannada Bar & Bench
kannada.barandbench.com